Mysore
24
clear sky

Social Media

ಶುಕ್ರವಾರ, 24 ಏಪ್ರಿಲ 2026
Light
Dark

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಕನ್ನಡಿಗರ ಕಣ್ಮಣಿ ಡಾ.ರಾಜಕುಮಾರ್ ನೆನಪಿನಂಗಳದಲ್ಲಿ ಗಾಜನೂರು

ವೈಡ್‌ ಆಂಗಲ್

ಬಾ.ನಾ.ಸುಬ್ರಹ್ಮಣ್ಯ 

ಏಪ್ರಿಲ್ ೧೨, ೨೦೦೬. ಶಿವರಾಜಕುಮಾರ್ ಅಭಿನಯದ ‘ಕುಮಾರ ರಾಮ; ಚಿತ್ರದ ಚಿತ್ರೀಕರಣ. ಭಾರ್ಗವ ನಿರ್ದೇಶಕರು. ಹಂಪಿಯಲ್ಲಿ ಚಿತ್ರೀಕರಣದ ವೇಳೆ, ಬೆಂಗಳೂರಿನಿಂದ ಪತ್ರಕರ್ತರನ್ನು ಕರೆಸಿದ್ದರು, ನಿರ್ಮಾಪಕ ಪಟ್ಟಾಭಿರಾಮ್. ಅದು ಕೂಡ ಕುಟುಂಬ ಸಮೇತ. ಮುಂಜಾನೆ ಚಿತ್ರೀಕರಣ ವೀಕ್ಷಿಸಿ, ನಂತರ ಪತ್ರಿಕಾಗೋಷ್ಠಿ. ನಂತರ ಊಟ. ಅಲ್ಲೇ ಪತ್ರಕರ್ತರು, ಚಿತ್ರತಂಡದವರು, ರಾಜ್ ಕುಟುಂಬದವರು ಊಟ ಮಾಡುತ್ತಿದ್ದರು.

ಪಟ್ಟಾಭಿರಾಮ್ ಅವರ ಫೋನ್ ರಿಂಗಿಸಿತು. ನಾವು ಕುಳಿತಲ್ಲಿಂದ ಸುಮಾರು ಇಪ್ಪತ್ತು ಅಡಿ ದೂರ, ರಾಜ್ ಕುಟುಂಬದವರ ಜೊತೆ ಅವರಿದ್ದರು. ಅವರಿಗೆ ಫೋನ್ ಕರೆ ವಿಷಯ ತಿಳಿಸಿರಬೇಕು. ಮಂಗಳಾ (ರಾಘವೇಂದ್ರ ರಾಜಕುಮಾರ್ ಪತ್ನಿ) ಅವರ ಕೈಲಿದ್ದ ಊಟದ ತಟ್ಟೆ ಕೆಳಗೆ ಬಿತ್ತು.ಅದು ಆಘಾತಕರ ಸುದ್ದಿಯಾಗಿತ್ತು ರಾಜ್ ನಿಧನದ ವಿಷಯ ಹೇಳಿದ ಕರೆಯಾಗಿತ್ತು. ಪಟ್ಟಾಭಿರಾಮ್ ಅವರಿಗೆ ಅವರ ಆಸ್ಪತ್ರೆಯಿಂದ ಬಂದ ಸುದ್ದಿ. ಅವರು ನಮ್ಮತ್ತ ಬಂದರು. ಬಂದವರೇ, ‘ರಾಜಕುಮಾರ್’ ಅಂದರು ಅಷ್ಟೇ! ಅತಿಗಣ್ಯ ವ್ಯಕ್ತಿಗಳು ನಿಧನರಾದಾಗ ಸಾಮಾನ್ಯವಾಗಿ ಆ ಸುದ್ದಿ ತಕ್ಷಣ ಹೊರಬರುವುದು ಕಡಿಮೆ. ಕೆಲವು ಅಗತ್ಯ ಪೂರ್ವಸಿದ್ಧತೆಗಳ ನಂತರ ಅದನ್ನು ಪ್ರಕಟಿಸಲಾಗುತ್ತದೆ.

ಆದರೆ ರಾಜಕುಮಾರ್ ನಿಧನದ ಸುದ್ದಿ ಅವರ ಮನೆಯವರಿಗೆ ತಿಳಿಯುವ ವೇಳೆ ಸುದ್ದಿಮನೆಯ ಮಂದಿಯೇ ಅಲ್ಲಿದ್ದರು. ಕ್ಷಣಾರ್ಧದಲ್ಲಿ ಸುದ್ದಿ ಹರಡಿತು. ಶಿವರಾಜಕುಮಾರ್ ಮತ್ತು ಅವರ ಕುಟುಂಬದ ಮಂದಿ ಐದಾರು ಕಾರುಗಳಲ್ಲಿ ಹೊರಟರು. ಪತ್ರಕರ್ತರಿದ್ದ ಬಸ್ಸುಗಳು ಬರುವ ವೇಳೆಗೆಲ್ಲ, ರಸ್ತೆಯುದ್ದಕ್ಕೂ ರಾಜ್ ಸಾವಿನ ಪ್ರತಿಕ್ರಿಯೆ!

ಈ ಅಂಕಣ ಆರಂಭವಾದ ದಿನದಿಂದ ಎಲ್ಲೂ ‘ನಾನು’ ಎಂದು ಬಳಸಿದ್ದು ಒಂದೋ ಎರಡೋ ಬಾರಿ. ಆದರೆ ಇಂದು ಬಳಸಬೇಕಾಗಿದೆ. ಚಲನಚಿತ್ರ ಪತ್ರಕರ್ತರ ಪೈಕಿ ರಾಜಕುಮಾರ್ ಜೊತೆ ನಿಕಟವಾಗುವ ಅವಕಾಶ ಪಡೆದ ಬೆರಳೆಣಿಕೆಯ ಮಂದಿಯಲ್ಲಿ ನಾನೂ ಒಬ್ಬ. ಚಿತ್ರಗಳ ಮುಹೂರ್ತ ಸದಾಶಿವನಗರದ ಅವರ ಮನೆಯಲ್ಲೇ ನಡೆದಾಗ, ಉದ್ಯಮದ ಗಣ್ಯರ ಜೊತೆ ಕೆಲವು ಮಂದಿ ಪತ್ರಕರ್ತರಿಗೂ ಆಹ್ವಾನ ಇರುತ್ತಿತ್ತು. ಆಹ್ವಾನಿತರೆಲ್ಲರಿಗೆ ಹಾರ ಹಾಕಿ, ಸಿಹಿ ತಿನ್ನಿಸುವುದು ಅಲ್ಲಿನ ಸಂಪ್ರದಾಯ. ಹಲವು ಬಾರಿ ಅವರನ್ನು ಪತ್ರಿಕೆಗಳಿಗಾಗಿ ಸಂದರ್ಶಿಸಿದ್ದಿದೆ. ಚಿತ್ರೋದ್ಯಮ, ಯುವಪ್ರತಿಭೆ, ಕೆಲವೊಮ್ಮೆ, ನೆನಪುಗಳನ್ನು ಅವರು ಮುಕ್ತವಾಗಿ ನನ್ನೊಂದಿಗೆ ಹಂಚಿಕೊಂಡಿದ್ದರು.

ತೊಂಬತ್ತರ ದಶಕದ ನಂತರ ಚಿತ್ರರಂಗ ಹಿಂಸೆ ಮತ್ತು ರೋಚಕತೆಗೆ ಮಾರುಹೋಗಿ, ಮೌಲ್ಯಗಳನ್ನು ಮರೆತದ್ದರ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಿದೆ. ಅವರಿಲ್ಲದ ಕಳೆದ ೨೦ ವರ್ಷಗಳಲ್ಲಿ ಕನ್ನಡ ಚಿತ್ರರಂಗದ ನಿರ್ವಾತದ ವಿಷಯಒತ್ತಟ್ಟಿಗಿರಲಿ, ಹೊಸದಾಗಿ ಅಣಬೆಗಳಂತೆ ತಲೆ ಎತ್ತಿದ ಯುಟ್ಯೂಬ್ ವಾಹಿನಿಗಳು, ಸಾಮಾಜಿಕ ತಾಣಗಳಲ್ಲಿ ರಾಜಕುಮಾರ್ ಅವರ ಕುರಿತಂತೆ ಬರುತ್ತಿರುವ ಸಂದರ್ಶನಗಳು, ವಿವರಣೆಗಳು! ಅವರ ಒಡನಾಡಿಗಳಾಗಿ, ಚಡ್ಡಿದೋಸ್ತ್‌ಗಳಾಗಿ ಇದ್ದರೇನೋ ಎಂದು ನಂಬಿಸುವಂತಹ ಮಂದಿಯ ಮಾತುಗಳು! ಒಂದೇ ಘಟನೆಯನ್ನು ಅವರವರ ಮೂಗಿನ ನೇರಕ್ಕೆ ಹೇಳುವ ಪರಿ. ಅದಕ್ಕೊಂದು ಉದಾಹರಣೆ ಎಂದರೆ, ಮಾರ್ಚ್ ೩, ೧೯೮೪ರಂದು ನಡೆದ ಘಟನೆಯ ವಿವರಣೆ. ಐದೋ ಆರೋ ವಾಹಿನಿಗಳಲ್ಲಿ ಬೇರೆಬೇರೆ ಮಂದಿ ಅದಕ್ಕೆ ತಾವು ಸಾಕ್ಷಿ ಆಗಿದ್ದೆವು ಎನ್ನುವಂತೆ ಹೇಳಿದ್ದರು. ಒಂದಕ್ಕೊಂದು ಸಂಬಂಧವೇ ಇರಲಿಲ್ಲ.

ರಾಜಕುಮಾರ್ ಅವರು ಅಭಿನಯಿಸುತ್ತಿದ್ದ ಚಿತ್ರದ ಹಾಡಿನ ಚಿತ್ರೀಕರಣಊಟಿಯ ತಟಾಕವೊಂದರಲ್ಲಿ ನಡೆದಿತ್ತು. ಒಂದಷ್ಟು ಮಂದಿ ತಮಿಳರು ಬಂದು ರಾಜಕುಮಾರ್ ಅವರ ಮೇಲೆ ದಾಳಿ ನಡೆಸಿದರು. ಅದು, ಗೋಕಾಕ್ ಚಳವಳಿಯ ನಂತರದ ದಿನಗಳು. ರಾಜ್ ಅವರನ್ನು ತಮಿಳು ವಿರೋಧಿ ಎಂದು ಯಾರೋ ಬಿಂಬಿಸಿದ್ದು ಇದಕ್ಕೆ ಕಾರಣವಿರಬೇಕು.

ಹ್ಞಾಂ, ರಾಜಕುಮಾರ್ ಕುರಿತಂತೆ, ಅವರ ಸಿನಿಮಾಗಳ ಕುರಿತಂತೆ ಸಾಕಷ್ಟು ಕೃತಿಗಳು ಬಂದಿವೆ. ಬಹುಶಃ ವಿಶ್ವದ ಯಾವುದೇ ನಟನ ಕುರಿತಂತೆ ಇಷ್ಟೊಂದು ಪುಸ್ತಕಗಳು ಬಂದಿಲ್ಲ; ಅಷ್ಟೇ ಅಲ್ಲ, ರಾಜಕುಮಾರ್ ಅಭಿನಯಿಸಿದಷ್ಟು ವೈವಿಧ್ಯಮಯ ಪಾತ್ರಗಳಲ್ಲಿ ಬೇರೆ ಯಾವ ನಟನೂ ನಟಿಸಿಲ್ಲ, ಅವರ ಕುರಿತಂತೆ ಸಂಶೋಧನೆ ಕೂಡ ಕಡಿಮೆ ಏನಲ್ಲ. ಪತ್ರಕರ್ತ ದೊಡ್ಡಹುಲ್ಲೂರು ರುಕ್ಕೋಜಿ ರಾಜಕುಮಾರ್ ಬದುಕು, ಸಾಧನೆಯ ಕುರಿತಂತೆ ವರ್ಷಗಳ ಕಾಲ ಸಂಶೋಧನೆ, ಸಂದರ್ಶನಗಳ ಮೂಲಕ ರಚಿಸಿ, ಎರಡು ಸಂಪುಟಗಳಲ್ಲಿ ಪ್ರಕಟಿಸಿದ ‘ಡಾ. ರಾಜಕುಮಾರ್ ಸಮಗ್ರ ಚರಿತ್ರೆ’, ೬೩ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಪುಸ್ತಕಕ್ಕಿರುವ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ಪಡೆದಿತ್ತು.

ಪತ್ರಿಕೋದ್ಯಮ, ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಅಲ್ಲಲ್ಲಿ ‘ಕತ್ತರಿಸು – ಅಂಟಿಸು’ ನೀತಿಯನ್ನು ಅನುಸರಿಸುವ ಮಂದಿ ಕಾಣಸಿಗುತ್ತಾರೆ. ಈ ಬಾರಿ ರಾಜ್ಯಪ್ರಶಸ್ತಿ ಪಡೆದ ಕೃತಿಯಲ್ಲಿ ತಮ್ಮ ಅನುಮತಿ ಇಲ್ಲದೆ ಸಾಲುಗಳನ್ನುಮತ್ತು ಚಿತ್ರಗಳನ್ನು ಬಳಸಿ ಕೃತಿ ಚೌರ್ಯ ನಡೆದಿದೆ ಎಂದು ರುಕ್ಕೋಜಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಬರೆದಿದ್ದರು. ಅದರ ಬೆಳವಣಿಗೆಯ ಮಾಹಿತಿ ಇನ್ನೂ ಬಹಿರಂಗ ಆಗಿಲ್ಲ. ರಾಜಕುಮಾರ್ ಜನ್ಮದಿನಾಚರಣೆಯ ಜೊತೆಯಲ್ಲೇ, ಪ್ರಶಸ್ತಿ ಪ್ರದಾನವೂ ಇಂದು ನಡೆದಿದ್ದರೆ, ಅದು ತಿಳಿಯುತ್ತಿತ್ತು.

ರಾಜಕುಮಾರ್ ಆಗಾಗ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದರು. ಬಾಲ್ಯ, ರಂಗಭೂಮಿಯ ದಿನಗಳು, ಬಡತನ..ಹೀಗೆ. ಮೂರನೇ ತರಗತಿ ಓದಿದ ತಮಗೆ ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಬಂದದ್ದು, ಹಂಪಿವಿವಿ ನೀಡಿದ ‘ನಾಡೋಜ’ ಗೌರವ ಪ್ರದಾನದ ವೇಳೆ ಸೇರಿದ ಜನಜಾತ್ರೆ, ಇಂತಹದೇ ಎಂದೇನಿಲ್ಲ. ಈ ಬಗ್ಗೆ ಅವರ ಕುರಿತು ಬರೆದ ಸಾಲುಗಳು ಹೀಗಿವೆ: ರಾಜಕುಮಾರ್ ಅವರಿಗೆ ತಮ್ಮ ಹುಟ್ಟೂರೆಂದರೆ ಅತ್ಯಂತ ಪ್ರಿಯ. ಗಾಜನೂರಿನ ಕುರಿತ ಮಾತು ಆರಂಭವಾಯಿತೆಂದರೆ ಅವರು ತಮ್ಮ ಬಾಲ್ಯದ ದಿನಗಳಿಗೆ ಜಾರಿಬಿಡುತ್ತಿದ್ದರು. ತಾವು ಹುಟ್ಟಿದ ಮನೆ, ಅಲ್ಲಿನ ಒಡನಾಡಿಗಳು, ಆಲದ ಮರ, ಅವರ ಪ್ರಿಯವಾದ ಬೀರೇದೇವರ ಗುಡಿ….

‘ನಾನು ಚಿಕ್ಕವನಿದ್ದಾಗ ಗದ್ದೆ ಉತ್ತಿದ್ದೇನೆ, ದನ ಮೇಯಿಸಿದ್ದೇನೆ, ಕುರಿ ಕಾದಿದ್ದೇನೆ.. ನಮ್ಮ ಅಪ್ಪಾಜಿ ಆಗ ಅಂತಹ ಕಷ್ಟದಲ್ಲೂ ಅಷ್ಟೋ ಇಷ್ಟೋ ಉಳಿಸಿ ಮೂರು ಎಕರೆ ಜಮೀನು ಕೊಂಡುಕೊಂಡಿದ್ದರು.. ಅರವತ್ತು ರೂಪಾಯಿಗೆ.. ಅದು ನನಗೆ ಬಹಳ ಪ್ರೀತಿಯ ಜಾಗ. ಈಗಲೂ ಅಷ್ಟೆ.. ಹಿಂದೆ ಓಡಾಡಿದ ಜಾಗಗಳಲ್ಲಿ ಒಬ್ಬನೇ ಹೋಗುತ್ತಿದ್ದರೆ ಗಾಳಿ ಸುಂಯ್ ಎಂದು ಬಂದು ಏನೋ ಗುಟ್ಟು ಹೇಳಿ ಹೋದ ಹಾಗೆ ಆಗುತ್ತದೆ.. ಹಳೆಯಗೆಳೆಯರೆಲ್ಲ ಎಲ್ಲೋ ಏನೋ ಹೇಳಿದ ಹಾಗೆ ಅನುಭವ.. ಅದೇನು ಕನಸೋ ನನಸೋ ಒಂದೂ ತಿಳೀದು.. ನನಗೆ ಊರಲ್ಲಿ ಹೋಗಿ ವ್ಯವಸಾಯ ಮಾಡಬೇಕು ಅನ್ನೋ ಆಸೆ…‘ ಇದು ಗಾಜನೂರಿನಲ್ಲಿ ಅವರನ್ನು ವೀರಪ್ಪನ್ ಅಪಹರಿಸುವ ಮುನ್ನಾದಿನಗಳ ಮಾತು.

ಉದಯಶಂಕರ್ ಬರೆದಿದ್ದಾರೆ ನೋಡ್ರಿ, ಕವಿರತ್ನ ಕಾಳಿದಾಸದಲ್ಲಿ ಅದೊಂದು ಹಾಡು.. ‘ಅಳ್ಬ್ಯಾಡ್ಕಣೇ ಸುಮ್ಕಿರೇ ..’ ಅದರಲ್ಲೊಂದು ಸಾಲು ಬೆಟ್ಟದ ಕೆಳಗೆ ಆಲದ ಮರವೊಂದೈತೆ, ಅಲ್ಲಿ ನಮ್ಮ ಬೀರಪ್ಪ ದ್ಯಾವರ ಗುಡಿವೊಂದೈತೆ …’ಅಂತಿದೆಯಲ್ಲ, ಅದು ನಮ್ಮೂರಿನಲ್ಲಿದೆ.. ಅದನ್ನು ಅಲ್ಲೇ ಚಿತ್ರಿಸಿದೆವು. ಆಗಬೀರದೇವರ ಗುಡಿಗೆ ಒಂದಿಷ್ಟು ಸುಣ್ಣಬಣ್ಣ ಹಾಕಿಸಿದ್ದೆವು.. ಎಂದು ತಮ್ಮ ಪ್ರೀತಿಯ ನೆಲದ ಬಗ್ಗೆ ಹೇಳುವಾಗ ಕೇಳುವವರನ್ನೂ ಅಲ್ಲಿಗೆ ಒಯ್ದುಬಿಡುತ್ತಾರೆ. ಕಾಳಿದಾಸ ಚಿತ್ರದ ಆ ಹಾಡಿನ ‘ಮುಂಜಾನೆ ಸೂರ್ಯ ಅಂದ, ಹಕ್ಕಿಗಳ ಚಿಲಿಪಿಲಿ ಚಂದ, ಬೀಸೋ ಗಾಳಿ, ತೂಗೋ ಮರವ, ಹರಿಯೋ ನದಿಯಾ ಕಾಣೋಣ’ ಅನ್ನೋ ಹಾಡಿನ ಭಾವ ಅವರದು; ಅದಕ್ಕೆ ಶಬ್ದರೂಪ ಚಿ. ಉದಯಶಂಕರ್ ಅವರದು ಎನ್ನುವಂತಿದೆ. ಕವಿರತ್ನ ಕಾಳಿದಾಸದಲ್ಲಿ ಅಕ್ಷರ ಬಾರದ ಕುರುಬನೊಬ್ಬ ಕವಿರತ್ನನಾಗಿ ನಾಡಿಗೇ ಹೆಸರು ಖ್ಯಾತಿ ತರುವ ಕಥೆ ಇದೆ. ‘ಇದ್ಯ ಬುದ್ಧಿ ಬಿಟ್ಟು ಬೇರೇನೂ ಬೇಡ’ ಎನ್ನುವ ವರ ಬೇಡಿದ ಅಮಾಯಕನ ಕಥೆಗೆ ಅವರು ತಾವು ಹುಟ್ಟಿ ಬೆಳೆದ ಊರನ್ನೇ ಆರಿಸಿದ್ದು ತಮ್ಮೂರಿನ ಪ್ರೀತಿಯಿಂದ. ಮೂರನೇ ತರಗತಿ ಓದಿದ ಮುತ್ತುರಾಜ್ ಕರ್ನಾಟಕ ರತ್ನ ಎನಿಸಿಕೊಂಡರು. ಇದು ಅವರು ಬಯಸಿ ಬಂದದ್ದಲ್ಲ. ಕಾಯಕವೇ ಕೈಲಾಸ ಎಂದು ನಂಬಿದ್ದ ಅವರಿಗೆ ಸಂದ ಗೌರವವಿದು. ಅವರು ಬೇಡಿದ್ದೂ ಒಂದೇ ಇರಬೇಕು- ‘ಒಳ್ಳೆಯ ಕಲಾವಿದನಾಗುವಂತೆ ಹರಸು’.

ಹರಸುವ ವಿಷಯ ಬಂದಾಗ ಅವರು ಮೊದಲು ಹೇಳುವ ಹೆಸರುಅಪ್ಪಾಜಿಯದು. ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು  ರಂಗಭೂಮಿಯಲ್ಲಿ ದೊಡ್ಡ ಹೆಸರು. ತಮ್ಮ ಮಗ ಬಹುದೊಡ್ಡ ಕಲಾವಿದನಾಗುತ್ತಾನೆ ಎಂದು ಮೊದಲೇ ಅವರು ಹೇಳಿದ್ದರು. ಅಷ್ಟೇ ಅಲ್ಲ,ಅದನ್ನು ನೋಡುವ ಭಾಗ್ಯ ನನಗೆ ಇರಲಾರದು, ಆಗ ನಿಮ್ಮಮ್ಮ ಇರುತ್ತಾಳೆ ಎಂದೂ ಹೇಳಿದ್ದರಂತೆ.. ಅಪ್ಪಾಜಿ ಅವರಿಗೆ ಇದನ್ನು ಹೇಳಿದ್ದು ತಮ್ಮ ಸಾವಿನ ಎರಡು ದಿನಗಳ ಹಿಂದೆ.. ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ…

ರಾಜಕೀಯದಿಂದ ಗಾವುದ ದೂರವಿದ್ದ, ಎಂದೂ ಅಧಿಕಾರದ ಗದ್ದುಗೆ ಬಯಸದ ರಾಜಕುಮಾರ್ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ರಾಜಕುಮಾರ ಆಗಿಯೇ ಉಳಿದದ್ದು ನಮ್ಮ ಕಣ್ಣಮುಂದಿನ ಇತಿಹಾಸ.

” ರಾಜಕುಮಾರ್ ಕುರಿತಂತೆ, ಅವರ ಸಿನಿಮಾಗಳ ಕುರಿತಂತೆ ಸಾಕಷ್ಟು ಕೃತಿಗಳು ಬಂದಿವೆ. ಬಹುಶಃ ವಿಶ್ವದ ಯಾವುದೇ ನಟನ ಕುರಿತಂತೆ ಇಷ್ಟೊಂದು ಪುಸ್ತಕಗಳು ಬಂದಿಲ್ಲ; ಅಷ್ಟೇ ಅಲ್ಲ, ರಾಜಕುಮಾರ್ ಅಭಿನಯಿಸಿದಷ್ಟು ವೈವಿಧ್ಯಮಯ ಪಾತ್ರಗಳಲ್ಲಿ ಬೇರೆ ಯಾವ ನಟನೂ ನಟಿಸಿಲ್ಲ, ಅವರ ಕುರಿತಂತೆ ಸಂಶೋಧನೆ ಕೂಡ ಕಡಿಮೆ ಏನಲ್ಲ.”

 

 

Tags:
error: Content is protected !!