ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ
ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ ದೂರುಗಳ ನಡುವೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತನ್ನ ತಪಾಸಣಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಬೆಂಗಳೂರು ಮಾತ್ರವಲ್ಲದೆ ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರೆಸಾರ್ಟ್‌ಗಳು, ಸರ್ಕಾರಿ ಕ್ಯಾಂಟೀನ್‌ಗಳು, ಇಂದಿರಾ ಕ್ಯಾಂಟೀನ್‌ಗಳು ಹಾಗೂ ಆಹಾರ ಸಂಗ್ರಹಣಾ ಕೇಂದ್ರಗಳಲ್ಲೂ ದಿಢೀರ್ ತಪಾಸಣೆ ನಡೆಸಲಾಗಿದೆ.
ಮೈಸೂರಿನಲ್ಲಿ ಅವಧಿ ಮೀರಿದ ಮಾಂಸ ಪತ್ತೆ
ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ನಡೆದ ತಪಾಸಣೆಯಲ್ಲಿ ಹಲವು ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಪತ್ತೆಯಾಗಿದೆ. ಐರಿಯೊ ಮೆರಿಡಿಯನ್ ಹೋಟೆಲ್‌ನಲ್ಲಿ ಬಳಕೆಯ ಅವಧಿ ಮುಗಿದ ಸುಮಾರು ೯ ಕೆಜಿ ಕೋಳಿ ಮಾಂಸವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ವಇದೇ ವೇಳೆ ಗ್ರಾಂಡ್ ಮರ್ಕ್ಯುರಿ ಹೋಟೆಲ್‌ನಿಂದ ೬೮ ಕೆಜಿ ಮಾಂಸ ಹಾಗೂ ಖಾನ್ ದರ್ಬಾರ್ ಹೋಟೆಲ್‌ನಿಂದ ೪ ಕೆಜಿ ಅಣಬೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರು ಮತ್ತು ನಂಜನಗೂಡು ತಾಲ್ಲೂಕುಗಳಲ್ಲಿ ನಡೆದ ಪ್ರತ್ಯೇಕ ತಪಾಸಣೆಯಲ್ಲಿ ಮೂರು ರೆಸಾರ್ಟ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ತಪಾಸಣೆಯ ವೇಳೆ ಅವಧಿ ಮೀರಿದ ಹಾಗೂ ಶೀಘ್ರ ಹಾಳಾಗುವ ಸುಮಾರು ೧೬ ಕೆಜಿ ಆಹಾರ ಪದಾರ್ಥಗಳನ್ನು ವಿಲೇವಾರಿ ಮಾಡಲಾಗಿದೆ.
ಮಂಗಳೂರಿನ ಕೆಎಫ್‌ಸಿ ಮೇಲೆ ದಾಳಿ
ಮಂಗಳೂರಿನ ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್‌ನಲ್ಲಿರುವ ಕೆಎಫ್‌ಸಿ ಮಳಿಗೆಯ ಮೇಲೂ ಆಹಾರ ಸುರಕ್ಷತಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ‘ಚಿಕನ್ ಪೆರಿ ಪೆರಿ ಲೆಗ್’ ಹಳಸಿದ ವಾಸನೆ ಮತ್ತು ರುಚಿ ಹೊಂದಿತ್ತು ಎಂದು ಗ್ರಾಹಕರು ದೂರು ನೀಡಿದ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆದಿದೆ.




