ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ
ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ ಸೇತುವೆಯ ಸೀಲಿಂಗ್ ಕಾಂಕ್ರೀಟ್ ಗಾರೆ ಮತ್ತೆ ಕಳಚಿ ಬಿದ್ದಿದೆ.
ಗುರುವಾರ ತಡ ರಾತ್ರಿಯಲ್ಲಿ ಈ ಸೇತುವೆಯ ಕೇಳ ಭಾಗದ ಸೀಲಿಂಗ್ ಕಾಂಕ್ರೀಟ್ ಪ್ಲಾಸ್ಟರ್ ಕಳಚಿ ಬಿದ್ದಿದ್ದು, ಶುಕ್ರವಾರದ ‘ಆಂದೋಲನ’ ದಿನಪತ್ರಿಕೆಯಲ್ಲಿ ಸಚಿತ್ರವಾಗಿ ಪ್ರಕಟವಾದರೂ ಮೈಸೂರು ವಿಭಾಗೀಯ ರೈಲ್ವೆ ಇಲಾಖೆ ಅಧಿಕಾರಿಗಳು ನಂಜನಗೂಡಿನತ್ತ ಮುಖ ಮಾಡಿಲ್ಲ.
ಪತ್ರಿಕೆಯಲ್ಲಿನ ಸುದ್ದಿ ನೋಡಿದ ನಂಜನಗೂಡು ನಗರಸಭಾ ಅಧಿಕಾರಿಗಳು ಶುಕ್ರವಾರವೇ ರೈಲ್ವೆ ಇಂಜಿನಿಯರ್‌ಗೆ ಈ ಅನಾಹುತದ ಕುರಿತು ಎಚ್ಚರಿಸಿ ಇದನ್ನು ತಕ್ಷಣ ದುರಸ್ತಿಪಡಿಸಿ ಹೆಚ್ಚಿನ ಅನಾಹುತವಾದಲ್ಲಿ ನೀವೇ ಜವಾಬ್ದಾರರು ಎಂದು ಲಿಖಿತವಾಗಿ ಪತ್ರ ಬರೆದು ಮೈಸೂರಿನತ್ತ ಬೊಟ್ಟು ತೋರಿದರೂ ರೈಲ್ವೆ ಅಧಿಕಾರಿಗಳು ಮಾತ್ರ ಇತ್ತ ತಲೆ ಹಾಕಿಲ್ಲ.
ಈ ಮಧ್ಯೆ ಶುಕ್ರವಾರ ರಾತ್ರಿಯೂ ಮತ್ತೆ ರೈಲ್ವೆ ಕೆಳ ಸೇತುವೆಯ ಸಿಲೀಂಗ್ ಕಾಂಕ್ರೀಟ್‌ನ ಮತ್ತಷ್ಟು ಭಾಗ ಕಳಚಿ ರಸ್ತೆಗೆ ಬಿದ್ದಿದೆ. ಯಾವ ಸಮಯದಲ್ಲಿ ಏನು ಅನಾಹುತ ಕಾದಿದೆಯೋ ಎಂಬ ಆತಂಕ ನಾಗರಿಕರದ್ದಾಗಿದೆ. ರಸ್ತೆ ನೋಡಿ ವಾಹನ ಚಾಲನೆ ಮಾಡಬೇಕಾದ ಸವಾರರು ಈಗ ಈ ಕೆಳ ಸೇತುವೆಯ ಕಳಚಿದ ಭಾಗವನ್ನು ದಿಟ್ಟಿಸುತ್ತಲೇ ಭಯದಿಂದ ವಾಹನ ಚಲಾಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.




