Mysore
23
overcast clouds

Social Media

ಭಾನುವಾರ, 21 ಜೂನ್ 2026
Light
Dark

ವಿಶ್ವ ಸಂಗೀತ ದಿನದಂದು ರಮ್ಮನಹಳ್ಳಿಯ ಜನಪದ ಗಾಯಕ ಅಂಕಪ್ಪನವರ ಕುರಿತು…

ಡಾ.ಮೈಸೂರು ಉಮೇಶ್

ಹತ್ತಾರು ಜನಪದ ಕಾವ್ಯ, ನೂರಾರು ತತ್ವಪದ ಮತ್ತು ಭಜನೆ ಪದಗಳನ್ನು ಹಾಡುವ ಅಂಕಪ್ಪ ಈ ನೆಲದ ಸಂಪತ್ತು 

ಸಂಗೀತ ಎಂದ ಕೂಡಲೆ ಕರ್ನಾಟಕ, ಹಿಂದೂಸ್ತಾನಿ ಮತ್ತು ಪಾಶ್ಚಾತ್ಯ ಸಂಗೀತಗಳು ಮಾತ್ರ ನೆನಪಿಗೆ ಬರುತ್ತವೆ. ಆದರೆ ಲಾಗಾಯ್ತಿನಿಂದ ಬಂದ ಜನಪದ ಸಂಗೀತ ಮುನ್ನೆಲೆಗೆ ಬರುವುದಿಲ್ಲ. ಹಾಗಂತ ಜನಪದರಿಗೆ ಸಂಗೀತ ಜ್ಞಾನವಿಲ್ಲವೆಂದು ಸಾರಾಸಗಟಾಗಿ ಹೇಳಲಾಗುವುದಿಲ್ಲ. ಇವರು ಹಾಡುವ ಗೀತೆಗಳಿಗೆ ಶ್ರುತಿ ಲಯವಿದ್ದೇ ಇರುತ್ತದೆ.

ಕೇಳುವುದಕ್ಕೂ ಸುಶ್ರಾವ್ಯವಾಗಿರುತ್ತದೆ. ಗಾಯನದ ಆರೋಹಣ ಮತ್ತು ಅವರೋಹಣದಲ್ಲಿ ಸಪ್ತಸ್ವರಗಳು ಬಂದರೆ ಸಂಪೂರ್ಣ ಜಾತಿಯೆಂತಲೂ, ಆರು ಸ್ವರಗಳು ಬಂದರೆ ಷಾಡವವೆಂತಲೂ, ಐದು ಸ್ವರಗಳು ಬಂದರೆ ಔಡವವೆಂದು ಸಂಗೀತಜ್ಞರು ಹೇಳುತ್ತಾರೆ. ಈ ಔಡವವನ್ನು ಸಂಗೀತ ನಿರ್ದೇಶಕ ಹಂಸಲೇಖ ಅವರು ಐದನಿ ಎಂದು ಕರೆದಿದ್ದಾರೆ. ಜನಪದ ಗಾಯಕ, ಗಾಯಕಿಯರಿಗೆ ಕಲಿಕೆಯಿಂದ ಕಲೆ ಬಂದದ್ದಲ್ಲ; ಕರುಳಿಂದ ಬಂದದ್ದು. ಕುರಿತೋದದೆ ಕಾವ್ಯಗಳನ್ನು ಕಟ್ಟುವ ಕೌಶಲ, ಕೇಳುಗ ಕಿವಿಗಳಿಗೆ ಗಾಯನ ರಸಾಯನವನ್ನು ಉಣಬಡಿಸುವ ಪರಿಣತಿಯನ್ನು ಜನಪದರು ಪಡೆದಿದ್ದಾರೆ.

ರಾಗಿ ಬೀಸುವಾಗ, ಕಳೆ ಕೀಳುವಾಗ,ನಾಟಿ ಹಾಕುವಾಗ, ದವಸ ಧಾನ್ಯಗಳನ್ನು ತೂರುವಾಗ, ಕೇರುವಾಗ, ಮಗು ತೂಗುವಾಗ, ಮದುವೆ- ಈ ಎಲ್ಲಾ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸಹಜವಾಗಿ ಸಂಗೀತ ಸೃಜನಶೀಲತ್ವವನ್ನು ಪಡೆದುಕೊಳ್ಳುತ್ತದೆ. ಗ್ರಾಮೀಣರ ಎದೆಯೊಳಗೆ ಇಂದಿಗೂ ಪದಗಳು ಉಸಿರಾಡುತ್ತಿವೆ. ಜನಪದ ಗಾಯಕಿಯರು ಅಕ್ಕಯೆಂದರೆ ಫಕ್ಕನೆ ಪದ ಬರಲಿ ಎಂದು ಸರಸ್ವತಿಯನ್ನು ನೆನೆದು ತಮ್ಮ ಹಾಡುಗಳನ್ನು ಪ್ರಾರಂಭಿಸುತ್ತಾರೆ. ತಾವು ನಂಬಿದ ದೈವಗಳನ್ನು ಹಾಡುವುದರ ಮೂಲಕ ಜೀವಂತವಾಗಿರಿಸಿಕೊಂಡಿದ್ದಾರೆ. ಮಾದಪ್ಪ, ಮಂಟೇಸ್ವಾಮಿ, ಬಿಳಿಗಿರಿ ರಂಗ, ಮುಡುಕುತೊರೆ ಮಲ್ಲಯ್ಯ, ಜುಂಜಪ್ಪ, ಮೈಲಾರ ಲಿಂಗ ಇವರೆಲ್ಲರೂ ದೇಸೀ ಸಂಗೀತದಲ್ಲಿ ನಿತ್ಯವೂ ಮಾರ್ದನಿಗೊಳ್ಳುತ್ತಿದ್ದಾರೆ.

ಜನರೊಡನೆ ಬಾಳಿ ಬದುಕಿ ಜನಸಮುದಾಯದ ಹಿತಕ್ಕೆ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಇಂಥ ಸಾಂಸ್ಕೃತಿಕ ನಾಯಕರನ್ನು ಮತ್ತಷ್ಟು ವರ್ತಮಾನಗೊಳಿಸುತ್ತಿರುವ ಬಹುದೊಡ್ಡ ಗಾಯನ ಪರಂಪರೆಯೇ ನಮ್ಮ ನಾಡನ್ನೆಲ್ಲಾ ಆವರಿಸಿಕೊಂಡಿದೆ. ಈ ಬೃಹತ್ ಗಾಯನ ಪರಂಪರೆಯಲ್ಲಿ ಮೈಸೂರು ತಾಲ್ಲೂಕು ರಮ್ಮನಹಳ್ಳಿಯ ಜನಪದ ಗಾಯಕ ಅಂಕಪ್ಪ ಅವರೂ ಒಬ್ಬರು. ತತ್ವಪದಗಳನ್ನು ಹಾಡುವುದರಲ್ಲೂ ಸಿದ್ಧಹಸ್ತರು. ಶ್ರುತಿಬದ್ಧ ಗಾಯನದಷ್ಟೇ ಶಿಸ್ತು ಮತ್ತು ಕ್ರಮಬದ್ಧ ಗಂಭೀರ ಮಾತುಗಾರಿಕೆ ಇವರದು. ‘ನಮ್ಮಪ್ಪ ನಮ್ಮವ್ವ ಕೂಲಿನಾಲಿ ಮಾಡ್ಕಂಡು ಬದುಕ್ತಾಯಿದ್ರು. ನನಗೆ ಹುಟ್ಟಿದ್ ಎರಡು ವರ್ಸದಲ್ಲೇ ಎರಡೂ ಕಣ್ಗಳು ಹೊಂಟೋದೊ. ಸೆಂದಾಗಿರೋ ನಮ್ಮ್ತ್ಯೈದನ್ ಕಣ್ ಕಿತ್ಕಂಡ್ಬುಟ್ನಲ್ಲಾ ಅಂತ ದೇವ್ತ್ಯ್ರುಗಳನ್ನೆಲ್ಲಾ ನಮ್ ಕುಟುಂಬ್ದವರೆಲ್ಲ ಬೈದ್ರಂತೆ. ಆಮ್ಯಾಕೆ ನಿಚ್ಚಾಯಿಸ್ಕಂಡು ಏನೋ ಅಣೇಲಿ ಬರ್ದಂಗೆ ಆಯ್ತದೆ ಅಂದ್ಕಂಡು ಸುಮ್ನಾದ್ರಂತೆ. ಕಣ್ ಕಾಣ್ದೆ ಇರೋ ಇವ್ನ ಯಾವ್ ಇಸ್ಕೂಲ್ಗೆ ಸೇರ್ಸದು ಅಂದ್ಕಡು, ಮೈಸೂರ್ ಪ್ಯಾಟೆಲಿರೋ ಕಿವುಡು ಮತ್ತು ಮೂಗರ ಇಸ್ಕೂಲ್ಗೆ ಸೇರ್ಸದು ಅಂತ ತೀರ್ಮಾನ ಮಾಡುದ್ರಂತೆ. ಆಗ ನಮ್ಮಮ್ಮ ಅಂದ್ರೆ ನಮ್ಮಜ್ಜಿ ಅಪ್ಪಾ ಬೇಡ ಕಣ್ರಪ್ಪಾ ನನ್ ಮಗೀನ ಆಪಾಟಿ ದೂರಕ್ಕೆ ಹಾಕ್ಬುಟ್ಟು ತಿಂಗ್ಳಾನ್‌ಗಟ್ಲೆ ನೋಡ್ದೆ ಇರಾಕೆ ನನ್ ಕೈಲಾಗದಿಲ್ಲ ಅಂತ ಅತ್ಲಂತೆ. ಆಮ್ಯಾಲೆ ನನ್ಗೆ ಯಾವ್ ಸ್ಕೂಲ್ಗು ಸೇರಿಸ್ನಿಲ್ಲ. ನಂಗೆ ಅನ್ನೆರ್ಡ್ ವರ್ಸ ತುಂಬ್ತು. ಇದ್ಯಾ ಇಲ್ದೆ ಇರೋ ನನ್ಗೆ ಇವ್ನ್ ಅನ್ನ ಇವ್ನೇ ಉಟ್ಟುಸ್ಕಳ್ಳಿ ಅಂದ್ಕಂಡು ಎಪ್ಪತ್ತೇಳು ಮಲೆಯೊಡೆಯ ಮಾಯ್ಕಾರ ಮಾದೇವ್ನ ಪಾದಕ್ಕೆ ಕರ್ಕಂಡು ಹೋಗಿ ಸಾಲೂರು ಮಠದಲ್ಲಿ ರುದ್ರಾಕ್ಷಿ ಮಣಿ ಹಾಕ್ಸಿ ಗುಡ್ಡನ್ನ ಬುಡುಸುದ್ರು. ಸ್ವಾಮ್ ಸ್ವಾಮ್ವಾರ ಉಪಾದಾನ ಅಂದ್ರೆ ಕ್ವಾರಣ್ಯಕ್ಕೆ ಹೋಗ್ಬೇಕು. ನನಗೆ ಮಾದಪ್ಪನ ಯಾವ ಪದನೂ ಬರ್ತಿರ್ನಿಲ್ಲ. ನಮ್ಮೂರಲ್ಲಿ ನಾಗಪ್ಪ ಅಂತ ಹಾಡುಗಾರರೊಬ್ಬರಿದ್ದರು. ಇವರು ಸುಮಾರಾಗಿ ಹಾಡೋರು. ಇವರ ಹತ್ರ ಹಾಡ್ ಕಲ್ತ್ತ್ರ್ಕೊ ಅಂತ ನಮ್ಮನೇಲಿ ಸೇರ್ಸುದ್ರು. ಒಸಿ ದಿನ ಹೋದಿ. ಅವ್ತ್ಯ್ರು ಸರಿಯಾಗೆ ಹೇಳ್ಕೊಡ್ನಿಲ್ಲ. ಅವ್ರ ಹತ್ರ ಹೋಗಾದು ಬುಟ್ಟಿ.

ರಂಗಪ್ಪ ಅಂತ ಇನ್ನೊಬ್ರು ಪದ ಹೇಳೋರಿದ್ರು. ನಮ್ಮಪ್ಪ ಅವ್ರ ಹತ್ರ ಸೇರುಸ್ದ್ರು. ರಂಗಪ್ಪ ಊರೂರ್ಗೆ ಕ್ವಾರಣ್ಯಕ್ಕೆ ಹ್ವಾದ್ರೆ ನನ್ನೂವೆ ಒಂದ್ಗೆ ಕರ್ಕಂಡು ಹೋಗರು. ಅವ್ರು ಮಾದಪ್ಪ ಮಂಟೇಸ್ವಾಮಿ ಪದಗಳನ್ನ ಚೆನ್ನಾಗಿ ಹಾಡರು. ನಾನು ನಿಗಾ ಇಟ್ಟು ಕೇಳ್ಕಂಡು ಮನೆಗ್ ಬಂದ್ ಮ್ಯಾಲೆ ಪ್ರಾಕ್ಟೀಸ ಮಾಡನಿ.

ಆಡ್ತಾ ಆಡ್ತಾ ರಾಗ ಅಂತಾರಲ್ಲ ಹಂಗೆ ನಾನೂವೆ ಸುಮಾರಾಗಿ ಹಾಡದ್ನ ಕಲ್ತ್ಕಂಡೆ. ಊರೂರ್ಗೆ ಹೋದ್ರೆ ಕತ್ಲಾದ್ರೆ ಅಲ್ಲೆ ಉಳ್ಕಂಡ್ ಬುಡಾವು. ಯಾರಾದ್ರು ಮನೇಲೆ ಸಿಲ್ವಾರ್ ಪಾತ್ರೆ ಈಸ್ಕಂಡು ಕಂತೆ ಬಿಕ್ಸೆ ಮಾಡ್ಕಂಡು ಹೊಟ್ಟೆ ತುಂಬುಸ್ಕಳವು. ಹೊತ್ತಾರೆ ಎದ್ದು ಈಬೂತಿಯ ಹಣೇಗೆ ಧರಿಸಿಕೊಂಡು ಯಥಾಪ್ರಕಾರ ಕ್ವಾರಣ್ಯ. ನಾನು ದೇವರ್ಗುಡ್ದ ಅಲ್ವಾ ಕಂಚಿನ ಬಟ್ಲು ಅಂದ್ರೆ ಕಂಸಾಳೆಯಾ ಕೈಯಲ್ಲಿಡ್ಕಂಡು ಮಾದಪ್ಪನ ಪದಗಳನ್ನ ಹಾಡ್ತಾ ಕ್ವಾರಣ್ಯ ಮಾಡ್ತಾಯಿದ್ದಿ. ಹಂಚೆ, ಹೆಬ್ಬಾಡಿ ಹುಂಡಿ, ಕಾಳೀಸಿದ್ಧನಹುಂಡಿ, ಹಂಪಾಪುರ, ತರೀಪುರ, ಬಿದರಳ್ಳಿಹುಂಡಿ, ಉರುಳಿಕ್ಯಾತನಹಳ್ಳಿ ಇಲ್ಲಿ ಜನ ನಾನ್ ಹಾಡದ ಕೇಳ್ಬುಟ್ಟು ನನ್ ಬೆನ್ತಟ್ಟುದ್ರು. ಹಾಡ್ತಾ ಊರೂರ್ ಸುತ್ಕಂಡು ಇರೋವಾಗ ಸುಮಾರ್ ಜನ ಪದ ಹೇಳೋರು ಪರ್ಚಯ ಆದ್ರು. ನಾನು ಮಾದಪ್ಪನ ಹಾಡೋ ದೇವರ್ಗುಡ್ದ, ನೀಲ್ಗಾರ್ರ ಹಾಡೊ ಮಂಟೇಸ್ವಾಮಿ ಸಿದ್ಧಪ್ಪಾಜಿ ಪದಗಳ್ನ ಕಲಿಬೇಕು ಅಂದ್ಕಂಡು ಒಂದು ತಂಬೂರ್ಯ ತಕ್ಕಂಡು ಅಬ್ಯಾಸ ಮಾಡ್ದಿ. ಮಂಟೇಸ್ವಾಮಿ ಕತೆನೂ ಮಾಡ್ತೀನಿ.

ಹೀಗಿರುವಾಗ ವಯಸ್ಸಿಗೆ ಬಂದ ಮಗನ್ಗೆ ಮದ್ವೆ ಮಾಡ್ಬೇಕಲ್ಲ ಅಂತ ನಮ್ಮಪ್ಪ ಅವ್ವ ಯೋಸ್ನೆ ಮಾಡ್ತಿದ್ರು. ಕಣ್ಣಿಲ್ದ ನಮ್ ಗಂಡ್ಗೆ ಯಾರ್ ಹೆಣ್ಕೊಟ್ಟರು ಅಂತ ಕೊರಗ್ತಾ ಇರ್ಬೇಕಾದ್ರೆ ನನ್ನ ಪದಗಳ್ನ ಕೇಳಿದ್ದ ಸೂಟಿಂಗ್ ಮಾದೇವ್ ಪುರ್ದವ್ತ್ಯ್ರು ನನ್ಗೆ ಹೆಣ್ ಕೊಟ್ಟು ಲಗ್ನ ಮಾಡುದ್ರು. ನಮ್ಮಪ್ಪ ಸಾಯಕಿಂತ ಮುಂಚೆ ಇರೋ ಮನೆನಾ ನಮ್ಮಣ್ಣ ತಮ್ದಿರ್ಗೆ ಭಾಗ ಮಾಡುದ್ರು. ನಮ್ಮನೆಯವಳು ಕೂಲಿ ಮಾಡೋಕೆ ಹೋಗೋಳು. ನಾನು ಕರ್ದ್ದಿಕ್ಕೆ ಹಾಡಕೆ ಹೋಗನಿ. ಹಿಂಗೆ ಜೀವ್ನ ನಡೀತಿತ್ತು. ಮಕ್ಳು ಮರಿಯಾದೊ. ಹಾಡೋದ್ರಿಂದ ಬಂದ ಒಂಚೂರು ಕಾಸು ಪಾಸು ಉಳ್ಸಿ ಅಪ್ಪಕೊಟ್ಟಿದ್ದ ಜಾಗದಲ್ಲಿ ಒಂದು ಮನೆ ಮಾಡ್ಕಂಡಿ. ನನ್ನ ಪದ ಕೇಳಿದ್ದವರೊಬ್ಬರು ನನ್ನ ಹಿರಿಮಗನಿಗೆ ಮೈಸೂರ್ನ ಒಂದು ಪ್ರವೀಟ್ ಆಸ್ಪೆಟ್ಲಲ್ಲಿ ಒಂದು ಸಣ್ಕೆಲ್ಸ ಕೊಡುಸುದ್ರು. ನಾನ್ ನಂಬಿದ ಮಾದಪ್ಪ ಮಂಟೇದಯ್ಯ ನನ್ನ ಕೈ ಬುಡ್ನಿಲ್ಲ ಅಂದ್ಕಂಡಿ. ನಂಗೆ ಈಗ ಅರ್ವತ್ಮೂರು ವರ್ಸ. ಈಗ್ಲೂವಿ ಭಜನೆ ಮಾಡ್ತೀನಿ, ಸತ್ಕೆಟ್ಟವರ್ಮನೆಗೆ ಹೋಗಿ ಬೆಳ್ಗಾನ ಸಾವಿನ್ಪದಗಳ್ನ ಹಾಡ್ತೀನಿ. ನಮ್ಮಪ್ಪನ ಬಿರ್ದು ತಂಬೂರಿ ಎದೆಯೇರ್ಬುಟ್ರೆ ಸಾಕು ನಾನು ನನ್ನನ್ನ ಮರ್ತ್ಬುಡ್ತೀನಿ.

ನಂಗೆ ಕಣ್ಣು ಕಾಣ್ದೆ ಇದ್ರೂ ನನ್ನೊಳಗೆ ಮಾದಯ್ಯ, ಮಂಟೇದಯ್ಯ ಕಾಣ್ತಿರ್ತಾರೆ. ಅವ್ರು ನನ್ನೊಳಗೆ ಕಾಣೋವರ್ಗು ಹಾಡ್ತಾನೇ ಇರ್ತೀನಿ. ಕರೆದವ್ರುಕೊಟ್ಟಷ್ಟು ಈಸ್ಕಂಡು ಜೀವ್ನ ನಡಿಸ್ತಾ ಇವ್ನಿ. ನಾನ್ ಕಲ್ತಿದ್ದು ನನ್ ಒನ್ದ್ಗಿಯೇ ಮುಗಿಬಾರ್ದು ಅಂತ ನಮ್ ರಮ್ನಳ್ಳಿಲಿರೋ ಕೆಲವರ್ಗೆ ಪದಗಳ್ನ ಹೇಳ್ಕೊಡ್ತಾ ಇದೀನಿ. ಎಳೆದ್ರಲ್ಲಿ ತುಂಬಾನೆ ಕಷ್ಟಪಟ್ಟಿವ್ನಿ. ಮಕ್ಳುಎದೆಮಟ್ಟಕ್ಕೆ ಬಂದ್ ಮ್ಯಾಲೆ ಜೀಮ ಒಸಿ ನಿರಾಳ ಆಗದೆ. ಇನ್ನೂವೆ ಹಾಡ್ಬೇಕು ಅಂತ ಆಸೆ ಜಾಸ್ತಿ ಆಗ್ತದೆ. ನಾನೂವಿ ಭದ್ರಾವತಿ, ಮಡ್ಕೇರಿ, ಜಾನ್ಪದ ಲೋಕ ಇಲ್ಲೆಲ್ಲಾ ಹಾಡಿವ್ನಿ.

ಮೈಸೂರು ಆಕಾಸ್ವೇಣಿಲೂ ಹಾಡ್ತಾ ಇವ್ನಿ. ಹೀಗೆ ಭೂತ ವರ್ತಮಾನದ ನೆನಹಿಕೆಗಳಲ್ಲಿ ಮುಳುಗಿಹೋಗಿದ್ದ ಅಂಕಪ್ಪ, ಮಾತು ಮತ್ತು ಗೀತೆಗೆ ಗಡಿಯಾರದ ಹಂಗಿಗೆ ಒಳಗಾಗದ ಅಪ್ಪಟ ಗ್ರಾಮೀಣ ಪ್ರತಿಭೆ. ಹಳ್ಳಿಯ ಸಹಜತೆ, ಮುಗ್ಧತೆ ಇವರ ಆಕರ್ಷಕ ವ್ಯಕ್ತಿತ್ವ. ಬದುಕನ್ನು ಕಟ್ಟಿಕೊಳ್ಳುವಲ್ಲಿ ಹಗಲಿರುಳು ಕಂಠವನ್ನು ದಣಿಸಿಕೊಂಡು ದುಡಿದ ಇವರು ಯಾರ ಬಳಿಗೂ ಹೋಗಿ ಪ್ರಶಸ್ತಿ ಪುರಸ್ಕಾರಗಳಿಗೆ ಕೈವೊಡ್ಡಿದವರಲ್ಲ.ಹತ್ತಾರು ಜನಪದ ಕಾವ್ಯ, ನೂರಾರು ತತ್ವಪದ ಮತ್ತು ಭಜನೆ ಪದಗಳನ್ನು ಹಾಡುವ ಅಂಕಪ್ಪ ಈ ನೆಲದ ಸಂಪತ್ತು.

(ಲೇಖಕರು ಮೈಸೂರು ಆಕಾಶವಾಣಿಯಲ್ಲಿ ಹಿರಿಯ ಉದ್ಘೋಷಕ ಹಾಗೂ ಜಾನಪದ ಅಕಾಡೆಮಿಯ ಸದಸ್ಯ)

Tags:
error: Content is protected !!