ಭಾರತಿ ಬಿ.ವಿ.
ನಾನು ಆಗ ನಾಕನೆಯ ಕ್ಲಾಸು. ಸರಕಾರಿ ಶಾಲೆಯ ವಿದ್ಯಾರ್ಥಿನಿ. ನಮ್ಮ ಕಬಿನಿ ಕಾಲೋನಿಯಲ್ಲಿ ಇದ್ದಿದ್ದೇ ಅದೊಂದು ಶಾಲೆ. ನಮ್ಮೂರಿನ ಸಕಲ ಮಕ್ಕಳೂ ಅಲ್ಲೇ ಓದುತ್ತಿದ್ದುದು. ಕಾಲೋನಿಯ ಮಕ್ಕಳನ್ನು ಕಂಡರೆ ಉಳಿದ ಮಕ್ಕಳಿಗೆ ಒಂಥರಾ ಅಂತರ.
ಅಪ್ಪ ಒಂದು ಸಲ ಮೈಸೂರಿನಿಂದ ನನಗೊಂದು ೩೦೦ ಪೇಜಿನ ನೋಟ್ ಬುಕ್ ತಂದುಕೊಟ್ಟರು. ಒಂದೇ ಪುಸ್ತಕವನ್ನು ವಿಭಾಗಿಸಿ, ಎಲ್ಲsubjects ಅದರಲ್ಲೇ ಬರೆದುಕೊಳ್ಳಲಿ ಅನ್ನುವುದು ಅವರ ಉದ್ದೇಶ. ದಪ್ಪ ರಟ್ಟಿನ ಪುಸ್ತಕ ಮುದ್ದಾಗಿತ್ತು. ಮೇಲೊಂದು ಆನೆಯ ಚಿತ್ರ. ಅದನ್ನು ನೋಡಿದ್ದೇ ನನಗೆ ಖುಷಿಯಾಗಿ ಹೋಯ್ತು. ಒಂಥರಾ ಹೆಮ್ಮೆ, ಒಂಥರಾ ಪುಳಕದಲ್ಲಿ ಅದನ್ನು ಶಾಲೆಗೆ ತೆಗೆದುಕೊಂಡು ಹೋದೆ. ಯಾರಲ್ಲೂ ಇಲ್ಲದ್ದು ನನ್ನಲ್ಲಿ ಅಂತ ಹೆಮ್ಮೆಯಿಂದ ಪ್ರದರ್ಶನ ಮಾಡಿದ್ದೂ ಆಯಿತು.
ಮೊದಲ ದಿನವೇ ನೋಟ್ಸ್ ಎಂಥದ್ದು ಬರೆಯಲು ಹೇಳಿದ್ದರೋ, ಬರೆದು ಕರೆಕ್ಷನ್‌ಗೆ ಇಟ್ಟೆ. ಮೇಷ್ಟ್ರು ಕರೆಕ್ಟ್ ಮಾಡಿದವರೇ ಒಬ್ಬೊಬ್ಬರನ್ನೇ ಕರೆದು ಕೊಡುತ್ತಿದ್ದರು. ಇದ್ದಕ್ಕಿದ್ದಂತೆ ಫಳಫಳ ಹೊಳೆವ ೩೦೦ ಪೇಜಿನ ನೋಟ್ ಬುಕ್ ಕಂಡವರೇ ‘ಯಾರದ್ದು ಈ ಆನೆ’ ಅಂದರಾ… ಇಡೀ ಕ್ಲಾಸ್ ಗೊಳ್ ಅಂತ ನಕ್ಕಿತು. ನಾನು ಯಾವಾಗಲೂ ಸ್ವಲ್ಪ ಗುಂಡು ಗುಂಡೇ. ಆಗ ಸ್ವಲ್ಪ ಜಾಸ್ತಿಯೇ ಗುಂಡಗಿದ್ದೆ. ಅದರ ಬಗ್ಗೆ ಆ ವಯಸ್ಸಿನಲ್ಲೂ ನನಗೆ ಅಪಾರವಾದ ಕೀಳರಿಮೆ ಇತ್ತು. ಆನೆ ಅಂದ ಕೂಡಲೇ ಸಂತೋಷವೆಲ್ಲ ಆವಿಯಾಗಿ ಕುಗ್ಗಿಹೋದೆ. ಮನಸ್ಸಿನ ತುಂಬ ದುಃಖ ಆವರಿಸಿತು.
‘ಥು ಇದನ್ನು ತರಬಾರದು ಇನ್ಮೇಲೆ ಸ್ಕೂಲಿಗೆ. ಆದರೆ ಅಪ್ಪ ಯಾಕೆ ತಗೊಂಡು ಹೋಗಲ್ಲ ಅಂತ ಕೇಳಿದರೆ..?’ ಅಂತೆಲ್ಲ ಯೋಚಿಸುತ್ತ ಸಂಜೆ ಕಾಲೆಳೆದುಕೊಂಡು ಮನೆಗೆ ಹೋಗುತ್ತಿರಬೇಕಾದರೆ ಎಲ್ಲಿಂದಲ್ಲೋ ಯಾರೋ ಕೂಗಿದರು ‘ಆನೆ…’
ಆನೆ!
ಸಿಡಿಲು ಬಡಿದ ಹಾಗಾಯ್ತು. ಯಾರೋ ಸುಮ್ಮನೆ ಕೂಗಿರಬಹುದು… ನನಗಲ್ಲವೇನೋ ಅಂತ ಸಮಾಧಾನ ತಾಳುವುದರಲ್ಲಿ ಮತ್ತೆ ಜೋರಾಗಿ ‘ಆನೆಏಏಏಏಏ…’ ನಾಲ್ಕೈದು ಹುಡುಗರ ಒಕ್ಕೊರಲಿನ ಕೂಗು. ಯಾರು ಅಂತ ನೋಡಿದರೆ ಒಬ್ಬರೂ ಕಾಣಿಸುತ್ತಿಲ್ಲ… ನಾಲ್ಕಾರು ಸಲ ಮರೆಯಲ್ಲಿ ನಿಂತು ಕೂಗೇ ಕೂಗಿದರು. ಕಣ್ಣಲ್ಲಿ ನೀರು ತುಂಬಿಕೊಂಡೇ ಮನೆಗೆ ಬಂದವಳು ಗೋಳೋ ಅಂತ ಅಳಲು ಶುರು ಮಾಡಿದೆ. ಏನಾಯ್ತೋ ಅಂತ ಮನೆಯವರೆಲ್ಲ ಗಾಬರಿಯಾದರು. ನನ್ನ ಕಾರಣ ಕೇಳಿದವರಿಗೆ ‘ಅಯ್ಯ ಇದೆಂಥ ಪುಟಗೋಸಿ ಕಾರಣ’ ಅನ್ನಿಸಿಬಿಟ್ಟಿತು. ನನ್ನ ಆತ್ಮವಿಶ್ವಾಸದ ಕೋಟೆಯನ್ನೇ ಒಡೆದ ಈ ವಿಷಯ ಇವರಿಗೆ ಪುಟಗೋಸಿಯಾ… ಕ್ರೂರಿ ಜಗತ್ತೇ ಅನ್ನಿಸಿ ಮತ್ತಿಷ್ಟು ಅತ್ತೆ. ಅಳುತ್ತಲೇ ನಾನಿನ್ನು ಆ ಪುಸ್ತಕ ತೆಗೆದುಕೊಂಡು ಹೋಗಲ್ಲ ಅಂತ ಧೈರ್ಯ ಮಾಡಿ ಹೇಳಿಯೇಬಿಟ್ಟೆ ನಮ್ಮ ಮನೆಯಲ್ಲಿ ಹಣವನ್ನು ವೇಸ್ಟ್ ಮಾಡುವ ಅಭ್ಯಾಸ ಉಹ್ಞುಂ, ಇಲ್ಲವೇ ಇಲ್ಲ. ಪುಸ್ತಕ ತಗೊಂಡು ಹೋಗಲ್ಲ ಅಂದರೆ ಬಿಡ್ತಾರಾ? ನಾನು ಮಾತ್ರ ಜಪ್ಪಯ್ಯ ಅಂದರೂ ತಗೊಂಡು ಹೋಗಲ್ಲ ಅಂತ ಪಟ್ಟು ಹಿಡಿದೆ. ಮನೆಯವರು ಸೋತು ಸುಮ್ಮನಾದರು. ಸದ್ಯ ಗಂಡಾಂತರದಿಂದ ಪಾರಾದೆ ಅನ್ನಿಸಿತು.
ಮಾರನೆಯ ದಿನ ಶಾಲೆಗೆ ನೆಮ್ಮದಿಯಿಂದ ಹೋದೆ. ಮುಗಿಸಿ ಬರುವಾಗ ಎಲ್ಲಿಂದಲೋ ಕೂಗು… ‘ಆನೆ…..’ ತತ್ತರಿಸಿಹೋದೆ. ಮತ್ತದೇ ಅಳುಮುಖದಲ್ಲಿ ವಾಪಸ್ ಆದವಳು ಅಪ್ಪ ಶಾಲೆಗೆ ಬಂದು ಮೇಷ್ಟ್ರ ಹತ್ತಿರ ಮಾತಾಡದಿದ್ದರೆ ನಾನು ಸ್ಕೂಲಿಗೇ ಹೋಗಲ್ಲ ಅಂತ ಶುರು ಮಾಡಿದೆ.
ಸರಿ ಮಾರನೆಯ ದಿನ ಅಪ್ಪ ಬಂದರು. ಮೇಷ್ಟ್ರು ಎಲ್ಲರನ್ನೂ ಗಟ್ಟಿಸಿ ಕೇಳಿದರೂ ಯಾರೂ ಒಪ್ಪಿಕೊಳ್ಳಲಿಲ್ಲ. ಮೇಷ್ಟ್ರು ಮಕ್ಕಳಿಗೆ ಎಚ್ಚರಿಕೆ ಕೊಟ್ಟು, ಅಪ್ಪನಿಗೆ ಇನ್ನುಮುಂದೆ ಹೀಗಾಗೋದಿಲ್ಲ ಅಂತ ಸಮಾಧಾನ ಕೊಟ್ಟು ಪ್ರಕರಣ ಮುಗಿಸಿದರು… ಉಹ್ಞುಂ, ನಾನು ಹಾಗಂತ ಭ್ರಮಿಸಿದ್ದೆ. ಆನೆ – ಕೂಗು ನಿಲ್ಲಲೇ ಇಲ್ಲ. ದಿನವೂ ಅಶರೀರವಾಣಿ ನನ್ನನ್ನು ಹಿಂಬಾಲಿಸುತ್ತಲೇ ಇತ್ತು. ಇಡೀ ಜಗತ್ತು ನನ್ನನ್ನು ಕಂಡು ನಗುತ್ತಿರುವ ಭ್ರಮೆಯಲ್ಲಿ ನಾನು ಮತ್ತಿಷ್ಟು ಕುಗ್ಗುತ್ತಾ ಹೋದೆ. ಪರೀಕ್ಷೆಗಳು ಬಂದವು. ಏನೋ ಒಂದಿಷ್ಟು ಬರೆದೆ. ಮುಗಿಸಿ ಬರುವಾಗ ಮತ್ತದೇ ಆನೆ ಕೂಗು. ಚಕ್ಕಂತ ತಲೆ ತಿರುಗಿಸಿ ನೋಡಿದರೆ ಕಾಣಿಸಿಯೇಬಿಟ್ಟಿತು ಒಬ್ಬನ ಮುಖ…
‘ಲಕ್ಷ್ಮಣ..!’ ನನ್ನ ಇಡೀ ವರ್ಷವನ್ನು, ಬದುಕಿನ ಸಂತೋಷವನ್ನು ಹಾಳು ಮಾಡಿದ್ದ ಶನಿ ಕೊನೆಗೂ ಸಿಕ್ಕಿದ್ದ! ಆದರೆ ಪರೀಕ್ಷೆ ಸಮಯ. ನಂತರ ರಜೆ. ನಂತರ ಶಾಲೆ ಶುರುವಾಗುವವರೆಗೆ ಮೇಷ್ಟ್ರ ಹತ್ತಿರ ಇವನೇ ಇವನೇ ಅಂತ ಚಾಡಿ ಹೇಳುವಂತಿಲ್ಲ… ಎಂಥ ದುರಂತ!
ಆದರೆ ಆ ದಿನ ಮತ್ತೆ ಯಾವತ್ತೂ ಬರಲೇ ಇಲ್ಲ… ಅಪ್ಪನಿಗೆ ಸರಗೂರಿಗೆ transfer ಆಗಿಬಿಟ್ಟಿತ್ತು! ೫ನೆಯ ಕ್ಲಾಸಿಗೆ ನಾನು ಆ ಶಾಲೆಯಲ್ಲಿ ಇರುವುದೇ ಇಲ್ಲ! ಅದು ಒಂದು ರೀತಿಯಲ್ಲಿ ನಿರಾಳವೆನ್ನಿಸಿದರೂ, ಮತ್ತೊಂದು ರೀತಿಯಲ್ಲಿ ಅವನಿಗೆ ಶಿಕ್ಷೆ ಕೊಡಿಸಲಾಗಲಿಲ್ಲವಲ್ಲ ಛೇ ಎನ್ನುವ ಸಂಕಟ. ನಾವು ಕಬಿನಿ ಕಾಲೋನಿಗೆ ಗುಡ್ ಬೈ ಹೇಳಿ ಸರಗೂರು ಸೇರಿದೆವು. ಮತ್ತದೇ ಹೊಸ ಪರಿಸರ, ಹೊಸ ಸ್ನೇಹ ಮಾಡಿಕೊಳ್ಳುವ ಅನಿವಾರ್ಯತೆ, ಹೊಸ ಶಾಲೆ, ಹೊಸ ಟೀಚರ್‌ಗಳು… ನಾನು ಮೊದಲಿನಿಂದಲೂ ಬಲು ಮಖೇಡಿ. ಹೊಸ ಸ್ನೇಹವೆಂದರೆ ಜೀವ ಬಾಯಿಗೆ ಬರುತ್ತಿತ್ತು. ನನ್ನದೇ ಬಾವಿಯಲ್ಲಿ ಜನ್ಮಪೂರಾ ಈಜಾಡು ಅಂದರೂ ನಾನು ರೆಡಿ. ಆದರೆ ಅಪ್ಪನ ಕೆಲಸ transferable ಆದ್ದರಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ಇದು ಅನಿವಾರ್ಯ. ಹೊಸ ಊರಿಗೆ ಹೊಂದಿಕೊಂಡೆ. ಬದುಕು ಮತ್ತೆ ಒಂಥರಾ ಸೆಟಲ್ ಆಯಿತು. ಇದು ಸರಕಾರಿ ಬಾಲಕಿಯರ ಪ್ರೌಢಶಾಲೆ. ಹಾಗಾಗಿ ಹುಡುಗರು ಇರಲಿಲ್ಲ! ಲಕ್ಷ್ಮಣನಂಥವರು ಯಾರೂ ಎದುರಾಗುವುದಿಲ್ಲ ಅನ್ನುವ ನೆಮ್ಮದಿ.
ವರ್ಷಕ್ಕೂ ಮೇಲಾಗಿರಬೇಕು. ಬೇಸಿಗೆ ರಜೆಯಲ್ಲಿ ಒಂದು ದಿನ ನಮ್ಮ ಮನೆ ಕೆಲಸ ಮಾಡುತ್ತಿದ್ದ ಗಾಯತ್ರಿ ಹಿತ್ತಲಲ್ಲಿ ಯಾರ ಜೊತೆಯೋ ಮಾತಾಡುವ ಸದ್ದು. ನನ್ನಷ್ಟೇ ಸಿಡುಕಿ ಗಾಯತ್ರಿ ಹಾಗೆಲ್ಲ ಮಾತುಕತೆಯಾಡುವವಳೇ ಅಲ್ಲ. ಯಾರ ಜೊತೆ ಮಾತಾಡ್ತಿದ್ದಾಳೆ ಅಂತ ಹಿತ್ತಲಿಗೆ ಹೋದವಳೇ ಸ್ತಂಭೀಭೂತಳಾಗಿ ನಿಂತುಬಿಟ್ಟೆ.!!
ಅಲ್ಲಿದ್ದ ಲಕ್ಷ್ಮಣ!
ಸಾಕ್ಷಾತ್ ಲಕ್ಷ್ಮಣ!!
ಕಣ್ಣುಗುಡ್ಡೆ ಸಿಕ್ಕಿಕೊಂಡ ಹಾಗಾಯಿತು. ಥು ಮರೆತಿದ್ದ ಆನೆ ಪ್ರಕರಣದ ಕಲ್ಲು ಬಿದ್ದು ಮನಸ್ಸೆಲ್ಲ ಬಗ್ಗಡ. ಅವನು ಗಾಯತ್ರಿಯ ಅಣ್ಣನ ಮಗನಂತೆ. ರಜೆಗೆ ಬಂದಿದ್ದವನನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾಳೆ… ಅದು ನೋಡಿದರೆ ನಮ್ಮ ಮನೆ! ಎಂಥ ವಿಚಿತ್ರ ಬದುಕು ನೋಡಿ… ನಾನಾದರೂ ಅವನನ್ನು ನೋಡಲು ಹೋದರೆ ಅವನು ಕಾಣಿಸುತ್ತಿದ್ದ. ಹಿತ್ತಲಿಗೆ ಹೋಗದೆ ಉಳಿಯುವ ಸ್ವಾತಂತ್ರ್ಯ ನನಗಿತ್ತು. ಆದರೆ ಲಕ್ಷ್ಮಣನ ಸ್ಥಿತಿ ನಿಜಕ್ಕೂ ಶೋಚನೀಯ. ಅವನು ನಮ್ಮ ಮನೆಗೆ ಬರಲೇಬೇಕು ಪಾಪ. ಅವರ ಮನೆಯಲ್ಲಿ ಯಾರಿಲ್ಲ. ಗಾಯತ್ರಿ ಮತ್ತು ಅವಳ ಅಕ್ಕ ಚೆಲುವಿ ಇಬ್ಬರೇ. ಗಟ್ಟಿಗಿತ್ತಿ ಅಕ್ಕ ತಂಗಿಯರಿಬ್ಬರೂ ಕಾಲೋನಿಯಲ್ಲಿ ಒಂದಿಷ್ಟು ಮನೆಗಳ ಕೆಲಸ ಮಾಡಿಕೊಂಡು ಇಬ್ಬರೇ ಬದುಕುತ್ತಿದ್ದರು. ಬೆಳಿಗ್ಗೆ ಬಂದರೆ ಅಲ್ಲೇ ಸಂಜೆಯವರೆಗೆ. ಅಲ್ಲೇ ಊಟ, ಅಲ್ಲೇ ತಿಂಡಿ.
ಹಾಗಾಗಿ ಅವನು ಮನೆಯಲ್ಲಿ ಉಳಿಯುವಂತಿಲ್ಲ. ಗಾಯತ್ರಿಯ ಜೊತೆ ನಮ್ಮ ಮನೆಗೆ ಬರಲೇಬೇಕು. ಚೆಲುವಿಯ ಜೊತೆ ಬೇರೆ ಮನೆಗೆ ಹೋದರೂ ಅದು ಪುಟ್ಟ ಕಾಲೋನಿಯಾದ್ದರಿಂದ ನಾನು ಎದುರಾಗುವುದು ಖಂಡಿತ. ನನ್ನನ್ನು ನೋಡಿದಾಗೆಲ್ಲ ಅವನ ಮುಖ ಬಣ್ಣಗೆಡುತ್ತಿತ್ತು. ಮರೆತ ಹಳೆ ಕತೆಯನ್ನು ನಾನು ಎತ್ತಿದರೆ ಎಂದು ಕ್ಷಣಕ್ಷಣಕ್ಕೂ ಆತಂಕದಲ್ಲಿಯೇ ಬದುಕುತ್ತಿದ್ದ.
ಆದರೆ ಆಶ್ಚರ್ಯವೆಂದರೆ ಯಾಕೋ ನನಗೆ ಈ ವಿಷಯವನ್ನು ಯಾರಲ್ಲಿಯೂ ಹೇಳಬೇಕು ಅಂತಲೇ ಅನ್ನಿಸಲಿಲ್ಲ. ಅಪ್ಪ ಅಮ್ಮ ಯಾರಲ್ಲಿಯೂ ಹೇಳದೆ ಸುಮ್ಮನಿದ್ದುಬಿಟ್ಟೆ. ಆದರೆ ಆಗೀಗ ದಿಢೀರನೆ ಹಿತ್ತಲಿಗೆ ತಟ್ಟೆ ತೊಳೆಯಲು ಹಾಕುವ, ಹೂ ಕೀಳುವ ನೆಪದಲ್ಲಿ ಹೋಗಿ ಅವನ ಮುಖ ಬಣ್ಣಗೆಡುವುದನ್ನು ನೋಡಿ ಒಳಗೊಳಗೆ ಮುಸಿಮುಸಿ ನಗುತ್ತಿದ್ದೆನಷ್ಟೇ. ಒಂದು ದಿನ ಹಿತ್ತಲಿಗೆ ಹೋದರೆ ಅವನು ಇರಲಿಲ್ಲ. ‘ಹೊರಟೋದ್ನಾ’ ಅಂದೆ. ‘ಅಯ್ಯ ಪ್ರತಿ ಸಲ ದಬ್ಬಿದರೂ ಹೋಗದವ್ನು ನಿನ್ನೆ ಅಣ್ಣ ಬಂದಾಗ ಹೋಗ್ತೀನಿ ಅಂತ ಬಡ್ಕೊಂಡ. ಹೋಗತ್ಲಾಗೆ ಅಂತ ಕಳಿಸಿದೆ’ ಅಂದಳು ಗಾಯತ್ರಿ. ಬಹುಶಃ ನನಗೆ ಅವನ ‘ಆನೆಏಏಏಏ’ ಕೂಗು ದುಃಸ್ವಪ್ನವಾಗಿದ್ದ ಹಾಗೆ, ಅವನಿಗೂ ಆ ಬೇಸಿಗೆ ರಜೆ ಜೀವನಪರ್ಯಂತ trauma ಆಗಿ ಉಳಿದುಬಿಟ್ಟಿತೇನೋ! ಆಗೆಲ್ಲ ಗಣೇಶ ಸ್ವಲ್ಪ ಕಡಿಮೆ ಗಡಿಬಿಡಿಯಲ್ಲಿ ಇರುತ್ತಿದ್ದನೇನೋ ಹಾಗಾಗಿ ಬಹಳ ಬೇಗನೇ ನನಗೆ ನ್ಯಾಯ ಕೊಡಿಸಿದ್ದ!





