ಪಂಜುಗಂಗೊಳ್ಳಿ
ಅವಳ ಗೊಂಬೆಗಳು ದೇಶ ದೇಶಗಳಿಗೆ ಹಾರುತ್ತವೆ!
ಕೊಯಂಬತ್ತೂರಿನ ಜೆ.ಎ.ರಾಧಿಕಾ ಐದು ವರ್ಷದವಳಾಗಿದ್ದಾಗ ಕಾಲ ಮೂಳೆ ಮುರಿದು, ಶಸ್ತ್ರಚಿಕಿತ್ಸೆ ನಡೆದು ಅವಳು ಮೂರು ತಿಂಗಳುಗಳ ಕಾಲ ಹಾಸಿಗೆಯಲ್ಲಿರಬೇಕಾಯಿತು. ಅದಾಗಿ ಒಂಬತ್ತು ತಿಂಗಳ ನಂತರ ಮತ್ತೊಮ್ಮೆ ಅದೇ ಕಾಲ ಮೂಳೆ ಮುರಿಯಿತು. ಆಗಲೂ ಶಸ್ತ್ರಚಿಕಿತ್ಸೆ ನಡೆಸಿ, ಮೂರು ತಿಂಗಳು ವಿಶ್ರಾಂತಿ ಪಡೆಯಬೇಕಾಯಿತು. ನಂತರ, ಮತ್ತೊಂದು ವರ್ಷ ಕಳೆದ ಮೇಲೆ ಮತ್ತೊಮ್ಮೆ ಮೂಳೆ ಮುರಿದು ಅದೇ ಪುನರಾವರ್ತನೆಯಾಯಿತು. ಹೀಗೆ ಮೂಳೆ ಮುರಿಯುವುದು ಸಾಮಾನ್ಯವಾಗಿ ಅವಳು ಹನ್ನೆರಡು ವರ್ಷದವಳಾಗುವ ಹೊತ್ತಿಗೆ ಹನ್ನೆರಡು ಬಾರಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು. ಒಂದು ಶಸ್ತ್ರಚಿಕಿತ್ಸೆಗೆ ಕನಿಷ್ಠ ೩೫ ಸಾವಿರ ರೂಪಾಯಿ ಖರ್ಚು. ಒಂದು ಬಟ್ಟೆ ಕಾರ್ಖಾನೆಯಲ್ಲಿ ಮೇಲ್ವಿಚಾರಕ ಕೆಲಸ ಮಾಡುವ ಅವಳ ತಂದೆಗೆ ಅದು ಕೆಲವು ತಿಂಗಳ ಸಂಬಳಕ್ಕೆ ಸಮಾನವಾದ ಹೊರೆ.
ಜೆ.ಎ.ರಾಧಿಕಾಗೆ ಇರುವುದು ಅಪರೂಪಗಳಲ್ಲಿ ಅಪರೂಪದ ಕಾಯಿಲೆ ಗಳಲ್ಲೊಂದಾದ ‘ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ’ ಎಂಬ ಮೂಳೆ ಕಾಯಿಲೆ.
ಇದು ೨೦ ಸಾವಿರ ಜನರಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ಇದ್ದವರ ದೇಹದ ಮೂಳೆಗಳು ಎಷ್ಟು ದುರ್ಬಲವಾಗಿರುತ್ತವೆಂದರೆ, ತುಸು ಅಸಮತೋಲವಾದರೂ ಅವರ ಮೂಳೆ ಲಟಕ್ಕೆಂದು ಮುರಿಯುತ್ತದೆ. ನಡೆಯುವಾಗ, ಓಡುವಾಗ ಬಿಡಿ, ಮಲಗಿದಲ್ಲಿ ಅಥವಾ ಕುಳಿತಲ್ಲಿ ತುಸು ಏರು ಪೇರಾದರೂ ಅವರ ಮೈಯ ಯಾವುದಾದರೂ ಮೂಳೆ ತುಂಡಾಗಬಹುದು.
ಈ ಕಾಯಿಲೆಯ ಕಾರಣ ರಾಧಿಕಾ ಶಾಲೆಗೆ ಹೋಗುವುದನ್ನು ನಿಲ್ಲಿಸಬೇಕಾಯಿತು. ಮನೆ ಒಳಗೆ ನಡೆದರೂ ಎಲ್ಲಿ ತನ್ನ ಮೂಳೆ ಮುರಿಯುವುದೋ ಎಂಬ ಹೆದರಿಕೆಯಿಂದಾಗಿ ಅವಳು ನಡೆಯುವುದನ್ನು ನಿಲ್ಲಿಸಿ ಹಾಸಿಗೆಯಲ್ಲಿ ಕುಳಿತೇ ಇರುತ್ತಿದ್ದಳು. ದಿನವೆಲ್ಲ ಸುಮ್ಮನೆ ಕುಳಿತು ಬೇಸರವಾಗಿ ಮಾತಾಡುವ ಎಂದರೂ ಅವಳಿಗೆ ಗೆಳತಿಯರೇ ಇರಲಿಲ್ಲ. ತನ್ನ ಕೋಣೆಯ ಕಿಟಕಿಯಿಂದ ತನ್ನ ಪ್ರಾಯದ ಮಕ್ಕಳು ಬೆಳಗ್ಗೆ ಶಾಲೆಗೆ ಹೋಗುವುದು, ಸಂಜೆ ಟ್ಯೂಷನ್ನಿಗೆ ಹೋಗುವುದು, ದಾರಿಯಲ್ಲಿ ಖುಷಿಯಿಂದ ಓಡುವುದು, ಆಡುವುದು ನೋಡುತ್ತ ನಿಟ್ಟುಸಿರು ಬಿಡುತ್ತಿದ್ದಳು. ಅವಳ ಪಾಲಿಗೆ ಹೊರಗೆ ಹೋಗುವುದೆಂದರೆ ವೈದ್ಯಕೀಯ ಆರೈಕೆಗಾಗಿ ಆಗಾಗ್ಗೆ ಆಸ್ಪತ್ರೆಗೆ ಹೋಗುವುದು. ದೀರ್ಘ ಕಾಲ ಕುಳಿತೇ ಇದ್ದುದರಿಂದ ಅವಳ ಬೆನ್ನು ಮೂಳೆ ಸೊಟ್ಟಗಾಗಿ ಅದಕ್ಕೂ ಶಸಚಿಕಿತ್ಸೆ ಮಾಡಬೇಕಾಯಿತು. ೧೨ ಶಸಚಿಕಿತ್ಸೆಗಳಲ್ಲದೆ ಅವಳ ಕಾಲುಗಳಿಗೆ ನಾಲ್ಕು ಸ್ಟೀಲ್ ಪ್ಲೇಟುಗಳನ್ನು ಲಗತ್ತಿಸಲಾಗಿದೆ. ನಡೆಯಲು ಅವಳು ಊರುಗೋಲು ಹಿಡಿಯಬೇಕಾಗುತ್ತದೆ.
ದಿನವಿಡೀ ಏನೂ ಮಾಡದೆ ಕುಳಿತಿರುವುದೆಂದರೆ ಸಹಜವಾಗಿಯೇ ತೀರಾ ಬೇಸರದ ಕೆಲಸ. ಆ ಬೇಸರ ಕಳೆಯಲು ರಾಧಿಕಾ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಳು. ತನ್ನ ೧೪ನೇ ವರ್ಷದ ಪ್ರಾಯದಲ್ಲಿ ಅವಳು ಚೆನ್ನಾಗಿ ಚಿತ್ರಗಳನ್ನು ಬರೆಯಲು ಕಲಿತಳು. ‘ಮ್ಯಾಡ್’ ಎಂಬ ಮಕ್ಕಳ ಕಾರ್ಯಕ್ರಮದಲ್ಲಿ ಬರುವ ‘ಕ್ರಾಫ್ಟ್’ಗಳನ್ನು ನಕಲು ಮಾಡುವ ಅಭ್ಯಾಸ ಮಾಡತೊಡಗಿದಳು.
ಮುಂದೆ ಈ ಅಭ್ಯಾಸ ರಾಧಿಕಾಳ ಬದುಕಿನ ದಾರಿಯನ್ನು ಬದಲಾಯಿಸಿತು. ಅದು ಅವಳನ್ನು ಒಬ್ಬ ಉದ್ಯಮಶೀಲೆಯನ್ನಾಗಿ ರೂಪಿಸಿತು. ಈಗ ೨೩ ವರ್ಷ ಪ್ರಾಯದವಳಾಗಿರುವ ರಾಧಿಕಾ ಇಂದು ಬಿಡುವಿಲ್ಲದಷ್ಟು ಬ್ಯುಸಿಯಾಗಿದ್ದಾಳೆ. ಕ್ರಾಫ್ಟ್ನಲ್ಲಿ ರಾಧಿಕಾಳ ಆಸಕ್ತಿಯನ್ನು ಗಮನಿಸಿದ ಅವಳ ಅಣ್ಣ ರಾಜ್ ಮೋಹನ್ ಹಳೇ ದಿನಪತ್ರಿಕೆ, ಕಾಗದಗಳಿಂದ ಗೊಂಬೆಗಳನ್ನು ಮಾಡುವ ಒಂದು ಯೂಟ್ಯೂಬ್ ವಿಡಿಯೋವನ್ನು ಅವಳಿಗೆ ತೋರಿಸಿದನು. ಅದರಂತೆ ರಾಧಿಕಾ ಹಳೇ ದಿನಪತ್ರಿಕೆ, ಸರಿಗೆ ಮತ್ತು ರಾಜ್‌ಮೋಹನ್ ಬಳಸಿ ಉಳಿಸಿದ ಒಂದಷ್ಟು ಬಣ್ಣಗಳನ್ನು ತೆಗೆದುಕೊಂಡು ಕೆಲವು ಗೊಂಬೆಗಳನ್ನು ತಯಾರಿಸಿದಳು.
ಅವಳ ನೆರೆಮನೆಯವರೊಬ್ಬರು ೨೦೦ ರೂಪಾಯಿ ಕೊಟ್ಟು ಒಂದು ಗೊಂಬೆಯನ್ನು ಖರೀದಿಸಿದರು. ಅದು ರಾಧಿಕಾಳ ಮೊದಲ ಗೊಂಬೆ ಮಾರಾಟ. ಆ ಇನ್ನೂರು ರೂಪಾಯಿಂದ ಅವಳು ಇನ್ನಷ್ಟು ಹೊಸ ಬಣ್ಣಗಳನ್ನು ಖರೀದಿಸಿ, ಮತ್ತಷ್ಟು ಗೊಂಬೆಗಳನ್ನು ತಯಾರಿಸಿದಳು. ಅದರಲ್ಲಿ ಐದು ಗೊಂಬೆಗಳನ್ನು ರಾಜ್‌ಮೋಹನ್‌ನ ಒಬ್ಬ ಅಂಗಡಿ ಗೆಳೆಯನಿಗೆ ಕೊಟ್ಟಳು. ಆ ಐದೂ ಗೊಂಬೆಗಳು ಒಂದೇ ದಿನದಲ್ಲಿ ಮಾರಾಟವಾದವು. ಮರುದಿನ ಮತ್ತೈದು ಗೊಂಬೆಗಳನ್ನು ಕೊಟ್ಟಳು. ಅವೂ ಮಾರಾಟವಾದವು. ಹೀಗೆ ಒಂದು ವಾರದಲ್ಲಿ ತಲಾ ೧೫೦ ರೂಪಾಯಿಗೆ ೨೫ ಗೊಂಬೆಗಳು ಮಾರಾಟವಾದವು.
ಅದರ ನಂತರ ರಾಧಿಕಾ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ೨೦೧೮ರಲ್ಲಿ ಅವಳು ತನ್ನ ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಲಿಂಕ್ಡ್‌ಇನ್ ಖಾತೆಗಳ ಮೂಲಕ ಆನ್‌ಲೈನ್‌ನಲ್ಲಿ ತನ್ನ ಗೊಂಬೆಗಳನ್ನು ಮಾರಲು ಶುರು ಮಾಡಿದಳು. ಊಟಿಯ ಒಬ್ಬ ಹೋಟೆಲ್ ಮಾಲೀಕರಿಂದ ಅವಳಿಗೆ ಮೂರೂವರೆ ಅಡಿ ಎತ್ತರದ ೨೫ ಗೊಂಬೆಗಳಿಗೆ ದೊಡ್ಡ ಬೇಡಿಕೆ ಬಂದಿತು. ರಾಧಿಕಾ ಹೆಚ್ಚು ಗೊಂಬೆಗಳನ್ನು ಮಾರಿದಂತೆಲ್ಲ ಹೆಚ್ಚು ಹೆಚ್ಚು ಬೇಡಿಕೆಗಳು ಬರಲು ಶುರುವಾದವು. ಹೆಚ್ಚು ಹೆಚ್ಚು ಬೇಡಿಕೆಗಳು ಬಂದಂತೆ ಹೆಚ್ಚು ಹೆಚ್ಚು ನಮೂನೆಯ ಗೊಂಬೆಗಳನ್ನು ಮಾಡುವುದನ್ನು ಕಲಿತಳು. ಈಗ ರಾಧಿಕಾ ಆಫ್ರಿಕನ್ ಗೊಂಬೆ, ಭಾರತೀಯ ಗೊಂಬೆಗಳನ್ನು ಮಾಡುತ್ತಾಳೆ.
ಪ್ರತಿ ತಿಂಗಳು ಅವಳಿಗೆ ೩೦-೫೦ ಗೊಂಬೆಗಳಿಗೆ ಬೇಡಿಕೆ ಬರುತ್ತದೆ. ತಿಂಗಳಿಗೆ ಸುಮಾರು ೧೫ ಸಾವಿರ ರೂ.ಗಳಿಸುತ್ತಾಳೆ. ಒಂದು ಗೊಂಬೆಯನ್ನು ಮಾಡಲು ೩-೪ ದಿನಗಳು ತಗಲುತ್ತವೆ. ಹಿಂದೆ ಮನೆಯೊಳಗೇ ಕುಳಿತು ಸಮಯ ಕಳೆಯುವುದು ಹೇಗೆ ಎಂದು ಚಿಂತಿಸುತ್ತಿದ್ದ ರಾಧಿಕಾಳಿಗೆ ಈಗ ಒಂದು ನಿಮಿಷವೂ ಬಿಡುವಿಲ್ಲ.
ಭಾರತ ಮಾತ್ರವಲ್ಲದೆ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಶ್ರೀಲಂಕಾ ಹಾಗೂ ಯೂಎಇ ಮೊದಲಾದ ಹೊರ ದೇಶಗಳಿಂದಲೂ ಆರ್ಡರ್‌ಗಳು ಬರುತ್ತವೆ. ಇನ್ನೊಬ್ಬರ ಸಹಾಯಲ್ಲದೆ ರಾಧಿಕಾಳಿಗೆ ಮನೆಯಿಂದ ಹೊರಕ್ಕೆಲ್ಲೂ ಹೋಗಲಾಗದಿದ್ದರೂ, ಅವಳ ಗೊಂಬೆಗಳು ದೇಶ,ದೇಶಗಳಿಗೆ ಹಾರುತ್ತವೆ! ತನ್ನ ದೈಹಿಕ ನ್ಯೂನತೆಯ ಕಾರಣ ಶಾಲೆ ಬಿಡಬೇಕಾಗಿ ಬಂದ ರಾಧಿಕಾಳಿಗೆ ಇಂದು ಅದೇ ಶಾಲೆ, ಕಾಲೇಜುಗಳಿಂದ ಸೂರ್ತಿ ಭಾಷಣಗಳನ್ನು ಮಾಡಲು ಆಮಂತ್ರಣಗಳು ಬರುತ್ತವೆ!
ಗೆಳತಿಯರೇ ಇರಲಿಲ್ಲ…:
ಮನೆ ಒಳಗೆ ನಡೆದರೂ ಎಲ್ಲಿ ತನ್ನ ಮೂಳೆ ಮುರಿಯುವುದೋ ಎಂಬ ಹೆದರಿಕೆಯಿಂದಾಗಿ ಅವಳು ನಡೆಯುವುದನ್ನು ನಿಲ್ಲಿಸಿ ಹಾಸಿಗೆಯಲ್ಲಿ ಕುಳಿತೇ ಇರುತ್ತಿದ್ದಳು. ದಿನವೆಲ್ಲ ಸುಮ್ಮನೆ ಕುಳಿತು ಬೇಸರವಾಗಿ ಮಾತಾಡುವ ಎಂದರೂ ಅವಳಿಗೆ ಗೆಳತಿಯರೇ ಇರಲಿಲ್ಲ. ತನ್ನ ಕೋಣೆಯ ಕಿಟಕಿಯಿಂದ ತನ್ನ ಪ್ರಾಯದ ಮಕ್ಕಳು ಬೆಳಿಗ್ಗೆ ಶಾಲೆಗೆ ಹೋಗುವುದು, ಸಂಜೆ ಟ್ಯೂಷನ್ನಿಗೆ ಹೋಗುವುದು, ದಾರಿಯಲ್ಲಿ ಖುಷಿಯಿಂದ ಓಡುವುದು, ಆಡುವುದು ನೋಡುತ್ತ ನಿಟ್ಟುಸಿರು ಬಿಡುತ್ತಿದ್ದಳು.




