Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸಾವಯವ ಕೃಷಿ ಸಾಕಾರಕ್ಕೆ ಜಾನುವಾರು ಸಾಕಿ

ಸಾವಯವ ಕೃಷಿಗೆ ಈಗ ಎಲ್ಲಿಲ್ಲದ ಮನ್ನಣೆ ದೊರೆತಿದ್ದು, ಅವಶ್ಯಕತೆ ಕೂಡ. ಸಗಣಿಯಿಲ್ಲದೇ ಸಾವಯವ ಕೃಷಿ ಇಲ್ಲವೇ  ಇಲ್ಲ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಸಾಮಗ್ರಿ ಒದಗಿಸಲು ರಾಸಾಯನಿಕ ಗೊಬ್ಬರ ಬಳಸುವುದು ಅನಿವಾರ್ಯವಾದ ಕಾಲದಲ್ಲಿ ಸಗಣಿ ಗೊಬ್ಬರ ಜಾಸ್ತಿ ಮಾಡುವ ಮೂಲಕ ಈ ಕೊರತೆ ನೀಗಿಸಬಹುದು. ಸಗಣಿ ಗೊಬ್ಬರ ಜಾಸ್ತಿಯಾಗಬೇಕಾದಲ್ಲಿ ಗೋವುಗಳ ಸಂಖ್ಯೆ ವೃದ್ಧಿಯಾಗಲೇಬೇಕು. ಸಾವಯವ ಕೃಷಿಯ ಕನಸು ನನಸಾಗಲು ಗೋ ಸಾಕಣೆ ಜಾಸ್ತಿಯಾಗಿ ಜಾಸ್ತಿ ಸಗಣಿ ಗೊಬ್ಬರ ಉತ್ಪಾದನೆಯಾಗಬೇಕು.

ಮೊದಲು ಹಾಲು ಹಿಂಡುವ ನಾಟಿ ಹಸುಗಳು ಬೆಟ್ಟದಲ್ಲಿ ಹೇರಳವಾಗಿ ಸಿಗುವ ಹಸಿರು ಹುಲ್ಲನ್ನು ಮೇಯ್ದು ಅವುಗಳ ಸಾಮರ್ಥ್ಯಕ್ಕೆ ತಕ್ಕಂತೆ ಹಾಲು ಕೊಡುತ್ತಿದ್ದವು. ಸದ್ಯ ಜಾನುವಾರುಗಳು ಮೇಯಲು ಗೋಮಾಳಗಳು ಇಲ್ಲದೇ ಹಸಿರು ಹುಲ್ಲಿನ ಅಭಾವದಿಂದ ನಮ್ಮ ಜಾನುವಾರುಗಳು ಕೇವಲ ಪಶುಅಹಾರದ ಮೇಲೆಯೇ ಅವಲಂಬಿತವಾಗುವ ಕಾಲ ಬಂದಿದೆ.

ಕರು ಹುಟ್ಟಿದ ಕೂಡಲೇ ಅದಕ್ಕೆ ಸಾಕಷ್ಟು ಗಿಣ್ಣದ ಹಾಲು ನೀಡಿ ಅದರ ಬೆಳವಣಿಗೆ ಚೆನ್ನಾಗಿ ಆಗಿ ಬೇಗ ಫಲಕ್ಕೆ ಬಂದು ಹಾಲು ನೀಡತೊಡಗುತ್ತದೆ. ಇಲ್ಲದಿದ್ದರೆ ಹೊಟ್ಟೆ ಡುಮ್ಮಣ್ಣ, ಕೈಕಾಲು ಸಣ್ಣ ಆಗಿ ತಂಬೂರಿ ಗಡಿಗೆ ಹೊಟ್ಟೆಯಾಗಿ ಬಿಡುತ್ತದೆ. ಇದಕ್ಕೆಲ್ಲ ಮೂಲ ಕಾರಣ ಸಮತೋಲಿತ ಪಶು ಆಹಾರ ನೀಡುವುದು. ಸಮತೋಲಿತ ಪಶು ಆಹಾರವೆಂದರೆ ಒಂದು ನಿಗದಿತ ಪ್ರಮಾಣದಲ್ಲಿ ಶರ್ಕರ ಪಿಷ್ಟ, ಪ್ರೊಟೀನ್, ಕೊಬ್ಬಿನ ಅಂಶ ನಾರಿನಂಶ ಇತ್ಯಾದಿಗಳನ್ನು ಒದಗಿಸುವ ಜೋಳದ ಹುಡಿ,ರಾಗಿ ಹಿಟ್ಟು, ಅಕ್ಕಿ ನುಚ್ಚು, ಗೋಧಿ ಬೂಸಾ, ನೆಲಗಡಲೆ ಹಿಂಡಿ, ಹತ್ತಿಕಾಳು ಹಿಂಡಿ, ಸಾಸಿವೆ ಹಿಂಡಿ, ಸೂರ್ಯಕಾಂತಿ ಹಿಂಡಿ, ಯೂರಿಯಾ, ಉಪ್ಪು, ಖನಿಜ ಮಿಶ್ರಣ, ಕಾಕಂಬಿ ಇತ್ಯಾದಿಗಳನ್ನು ಬಳಸಿ ತಯಾರಿಸುವ ಒಂದು ಮಿಶ್ರಣ. ಇವುಗಳನ್ನು ವೈಜ್ಞಾನಿಕವಾಗಿ ಮಿಶ್ರಣ ಮಾಡಿದಾಗ ಮಾತ್ರ ಸಮತೋಲಿತ ಪಶು ಅಹಾರ ತಯಾರಿಸಲು ಸಾಧ್ಯ.

ನೂರು ಕಿಲೋ ಪಶು ಆಹಾರ ತಯಾರಿಸಲು ಗೋವಿನ ಜೋಳದ ಹುಡಿ (ಶರ್ಕರ ಪಿಷ್ಟ ಒದಗಿಸಲು) ೪೫ ಕಿಲೋ, ಎಣ್ಣೆ ಇರುವ/ ಎಣ್ಣೆ ತೆಗೆದ ಅಕ್ಕಿ ತವಡು ಇದರ ೨೦ ಕಿಲೋ, ಸೂರ್ಯಕಾಂತಿ ಹಿಂಡಿ; ಹತ್ತಿಕಾಳು ಹಿಂಡಿ ಅಥವಾ ಎಳ್ಳು ಹಿಂಡಿ/ನೆಲಗಡಲೆ ಹಿಂಡಿ ಇದನ್ನು ೧೦ ಕಿಲೋ, ಬೂಸಾ ೨೦ ಕಿಲೋ, ಖನಿಜ ಮಿಶ್ರಣ ೧ ಕಿಲೋ, ಉಪ್ಪು ೧ ಕಿಲೋ ಹಾಕಿ ಮಿಶ್ರಣ ಮಾಡಿ ಇದನ್ನು ಪ್ರತಿ ಲೀಟರ್ ಹಾಲಿಗೆ ಅರ್ಧ ಕಿಲೋ ಮತ್ತು ಶರೀರ ನಿರ್ವಹಣೆಗೆ ೧.೫ ಕಿಲೋ ನೀಡಿದರೆ ಮಾತ್ರ ಉತ್ತಮ ಪೋಷಣೆ ಸಾಧ್ಯ. ಆದರೆ ಈ ಕಚ್ಚಾ ವಸ್ತುಗಳ ಬೆಲೆ ಗಗನಕ್ಕೆ ಏರಿದಾಗ ಗೋಮಾತೆಯ ಪೋಷಣೆ ಬಹಳ ಕಷ್ಟ.

ಒಂದು ಸಣ್ಣ ಅಂಕಿ ಅಂಶವನ್ನೇ ಗಮನಿಸೋಣ. ಭಾರತ ಸರ್ಕಾರವು ಪ್ರತಿ ವರ್ಷ ಮಳೆಗಾಲಕ್ಕಿಂತ ಮೊದಲು ೮೦,೦೦೦ ಕೋಟಿ ರೂ.ಗಳಷ್ಟು ರಾಸಾಯನಿಕ ಗೊಬ್ಬರಗಳಾದ ಡಿಎಪಿ, ಪೊಟ್ಯಾಷ್ ಇತ್ಯಾದಿಗಳಿಗೆ ಸಬ್ಸಿಡಿ ನೀಡುತ್ತದೆ. ಇದಾದ ಮೇಲೆ ಮತ್ತೊಂದು ಬೆಳೆಗೆ ರಾಸಾಯನಿಕ ಗೊಬ್ಬರ ಪೂರೈಸಲು ೧೫,೦೦೦ ಕೋಟಿ ರೂ.ಗಳಷ್ಟು ಸಬ್ಸಿಡಿ ನೀಡುತ್ತದೆ. ಇನ್ನು ಯೂರಿಯಾ ಗೊಬ್ಬರಕ್ಕೆ ನೀಡುವ ಸಬ್ಸಿಡಿ ಪ್ರತಿ ಸೀಸನ್ನಿಗೆ ೨೫,೦೦೦ಕೋಟಿ ರೂ. ಗಳು ಎಂದರೆ ಆಶ್ಚರ್ಯವಾಗದೇ ಇರುತ್ತದೆಯೇ? ಎರಡೂ ಸೇರಿ ಒಟ್ಟು ೧,೫೦,೦೦೦ ಕೋಟಿ ರೂ.ಗಳಷ್ಟು ಸಬ್ಸಿಡಿಗೇ ಹೋದರೆ, ಇಷ್ಟು ಬೃಹತ್ ಮೊತ್ತದ ಸಾರ್ವಜನಿಕರ ತೆರಿಗೆಯ ಹಣ ರಾಸಾಯನಿಕ ಗೊಬ್ಬರ ರೂಪದಲ್ಲಿ ರೈತನ ಹೊಲ ಸೇರಿ ಫಲವತ್ತಾದ ಮಣ್ಣನ್ನು ಹಾಳು ಮಾಡುತ್ತದೆ.

ಹಾಗಿದ್ದರೆ ಇಷ್ಟು ಬೃಹತ್ ಮೊತ್ತವನ್ನು ಪಶು ಆಹಾರಕ್ಕೆ ನೀಡಿದರೆ ಅಗಾಧ ಪ್ರಮಾಣದಲ್ಲಿ ಸಾವಯವ ಗೊಬ್ಬರ ದೊರಕಿ ಭೂಮಿಯ ಆರೋಗ್ಯವೂ ವೃದ್ಧಿಯಾಗುತ್ತದೆ ಅಲ್ಲವೇ? ಅಲ್ಲದೇ ರಾಸಾಯನಿಕ ಗೊಬ್ಬರದ ಬೆಲೆ ಸಬ್ಸಿಡಿ ಇಲ್ಲದಿದ್ದರೆ ಜಾಸ್ತಿಯಾಗಿ ಅದನ್ನು ಕೊಳ್ಳುವವರ ಸಂಖ್ಯೆಯೂ ಸಹ ಗಣನೀಯವಾಗಿ ಕಡಿಮೆಯಾಗುತ್ತದೆ. ಹೀಗಿದ್ದಾಗ ಬೇಡ ಬೇಡವೆಂದರೂ ಸಾವಯವ ಕೃಷಿಯತ್ತ ಜನ ಸಾಗಿಯೇ ಸಾಗುತ್ತಾರೆ ಅಲ್ಲವೇ? ಮತ್ತೊಂದು ವಿಷಯವೆಂದರೆ ವಿದೇಶಗಳಿಂದ ರಾಸಾಯನಿಕ ಗೊಬ್ಬರದ ತಯಾರಿಕೆಗೆ ಅವಶ್ಯವಿರುವ ಕಚ್ಚಾವಸ್ತುಗಳನ್ನು ತರಿಸಲು ನೀಡುವ ಅಗಾಧ ಪ್ರಮಾಣದ ವಿದೇಶಿ ವಿನಿಮಯ ಹಣವೂ ನಮಗೇ ಉಳಿಯುತ್ತದೆ. ಭಾರತ ದೇಶದಲ್ಲಿ ಸುಮಾರು ೩೦ ಲಕ್ಷ ರೈತರು ಭೂರಹಿತ ಕಾರ್ಮಿಕರಾ ಗಿದ್ದು ಜೀವನಕ್ಕೆ ಪಶುಪಾಲನೆಯನ್ನೇ ಅವಲಂಬಿಸಿ ದ್ದಾರೆ. ಇವರ ಖಾತೆಗೆ ನೇರವಾಗಿ ಹಣ ಹೋಗುವು ದರಿಂದ ಅವರು ಸ್ವಾವಲಂಬಿಗಳಾಗಿ ಆರೋಗ್ಯಭರಿತ ಭಾರತವಾಗುವುದರಲ್ಲಿ ಸಂದೇಹವೇ ಇಲ್ಲ.

– ಡಾ.ಎನ್.ಬಿ. ಶ್ರೀಧರ 
(ಲೇಖಕರು: ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ)

Tags:
error: Content is protected !!