ಜಿ.ಕೃಷ್ಣ ಪ್ರಸಾದ್
ಈ ಬಾರಿ ವಾಡಿಕೆಗಿಂತ ಮೊದಲೇ ಮುಂಗಾರು ಕಾಲಿಟ್ಟಿದೆ. ವರುಣನ ಅಬ್ಬರ ನೋಡಿದರೆ ಈ ಬಾರಿಯೂ ಮಳೆಗಾಲಕ್ಕೆ ಬರವಿಲ್ಲ. ಕಾವೇರಿ ಮತ್ತು ಕಬಿನಿ ಅಚ್ಚುಕಟ್ಟು ಪ್ರದೇಶಗಳ ರೈತರು ಲಗಾಯ್ತಿನಿಂದಲೂ ಅಧಿಕ ಇಳುವರಿ ತಳಿಗಳನ್ನೇ ಬೆಳೆಸುತ್ತಾ ಬಂದಿದ್ದಾರೆ. ಇವಕ್ಕೋ ಜಾಸ್ತಿದಾರೆ ಉಷ್ಣ ; ಕಡಿಮೆಯಾದರೆ ಶೀತ ಎಂಬಂಥ ಸ್ಥಿತಿ. ರಾಸಾಯನಿಕಗಳನ್ನು ಸುರಿದು, ಕಳೆನಾಶಕ ಬಳಸಿ, ನೆಲ ಹಾಳು ಮಾಡಿಕೊಂಡು ಬೆಳೆಸಿದರೂ ಸಿಗುವ ಲಾಭ ಅಷ್ಟಕ್ಷಷ್ಟೇ. ‘ಭತ್ತ ಬೆಳೆದು ಎಲ್ಲಿ ಉದ್ಧಾರ ಆಗ್ತದೆ ಬಿಡಿ ಸ್ವಾಮೇ. ಏನೋ ಬೆಳಿಬೇಕು ಅಷ್ಟೇ’ ಎನ್ನುವುದು ಭತ್ತ ಬೆಳೆಗಾರರ ಅಳಲು.
ಗ್ರಾಹಕರ ವಲಯದ ಪಡಿಪಾಟಲು ಇನ್ನೊಂದು ಬಗೆಯದು. ಮಾರುಕಟ್ಟೆಯಲ್ಲಿ ಸಿಗುವ ಪಾಲಿಷ್ ಅಕ್ಕಿಗೆ ರುಚಿಯೂ ಇಲ್ಲ; ಸ್ವಾದವೂ ಇಲ್ಲ. ನಿರಂತರವಾಗಿ ಮೂರು ಹೊತ್ತೂ ಪಾಲಿಷ್ ಮಾಡಿದ ಅಕ್ಕಿ ತಿನ್ನುವುದರಿಂದ ಬೊಜ್ಜು, ಮಧುಮೇಹ ಬರುವ ಅಪಾಯವಿದೆ ‘ಮಗು ಅನ್ನ ತಿನ್ನೋಕೆ ಇಷ್ಟನೇ ಪಡಲ್ಲ. ರಾಜಮುಡಿ ಅಕ್ಕಿ ಅನ್ನ ಮಾತ್ರ ಇಷ್ಟಪಟ್ಟು ತಿನ್ತದೆ’ ಎಂದು ತಾಯಿಯೊಬ್ಬರು ಹೇಳುತ್ತಾರೆ.
ಗ್ರಾಹಕರಲ್ಲಿ ಸಾವಯವ ಮತ್ತು ದೇಸಿ ಅಕ್ಕಿಗಳ ಬಗ್ಗೆ ಒಲವು ಮೂಡುತ್ತಿದೆ. ‘ಸಿದ್ದಸಣ್ಣ, ಹೆಚ್‌ಎಂಟಿ, ರಾಜಮುಡಿ, ಕೆಂಪಕ್ಕಿಗೆ ಬಹಳ ಬೇಡಿಕೆ ಇದೆ. ಆದರೆ ಬೇಡಿಕೆಗೆ ತಕ್ಕಷ್ಟು ಸರಬರಾಜು ಇಲ್ಲ’ ಎಂದು ಗೋಕುಲಂನ ನಮ್ಮ ಮಾರುಕಟ್ಟೆಯ ಕವಿತಾ ಹೇಳುತ್ತಾರೆ. ಸಾವಯವ ಅಕ್ಕಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಕೇವಲ ಬೆರಳೆಣಿಕೆಯಷ್ಟು ರೈತರು ಮಾತ್ರ ದೇಸಿ ತಳಿಯ ಭತ್ತವನ್ನು ಬೆಳೆಯುತ್ತಿದ್ದಾರೆ.
ಗುಣಮಟ್ಟ ,ಇಳುವರಿ ಮತ್ತು ಬೇಡಿಕೆಯ ದೃಷ್ಟಿಯಿಂದ ಹಳೇ ಮೈಸೂರು ಭಾಗಕ್ಕೆ ಸೂಕ್ತವಾದ ದೇಸಿ ಭತ್ತದ ತಳಿಗಳ ಪರಿಚಯ ಇಲ್ಲಿದೆ.
ರಾಜಮುಡಿ: ಹಳೇ ಮೈಸೂರು ಭಾಗದ ಜನಪ್ರಿಯ ತಳಿ. ಅಕ್ಕಿಯ ರುಚಿ ಸಿಹಿ. ರೋಗನಿರೋಧಕ ಶಕ್ತಿ ಹೊಂದಿರುವ ‘ರಾಜಮುಡಿ’, ಎಕರೆಗೆ ಸುಮಾರು ೧೭ ಕ್ವಿಂಟಾಲ್ ಇಳುವರಿ ಕೊಡುತ್ತದೆ. ೫ ತಿಂಗಳುಗಳಿಗೆ ಕೊಯ್ಲಿಗೆ ಸಿದ್ಧ.
ಸಿದ್ಧಸಣ್ಣ: ಮಂಡ್ಯದ ಶಿವಳ್ಳಿಯ ಬೋರೇಗೌಡರು ಅಭಿವೃದ್ಧಿಪಡಿಸಿದ ತಳಿ. ಸೋನಾ ಮಸೂರಿಯ ಅಕ್ಕಿಯನ್ನು ಹೋಲುವ, ಗುಣಮಟ್ಟದ ಅಕ್ಕಿಯ ತಳಿ. ೪.೫ ತಿಂಗಳ ಈ ತಳಿ, ೧೭-೨೦ ಕ್ವಿಂಟಾಲ್ ಇಳುವರಿ ಕೊಡುತ್ತದೆ.
ರತ್ನಚೂಡಿ: ಯಳಂದೂರು ಮೂಲದ ಆಕರ್ಷಕ ಬಂಗಾರದ ಬಣ್ಣದ ಕಾಳಿನ ತಳಿ. ದನಗಳಿಗೆ ಉತ್ತಮ ಮೇವು. ೪ ತಿಂಗಳುಗಳ ಈ ತಳಿ ಎಕರೆಗೆ ೧೫ ಕ್ವಿಂಟಾಲ್ ಇಳುವರಿ ನೀಡುತ್ತದೆ.
ಗಂಧಸಾಲೆ: ಪರಿಮಳದ ಅಕ್ಕಿ ತಳಿ. ಭತ್ತ ಹೂ ಬರುವಾಗ ಒಂದು ಕಿ.ಮೀ. ದೂರಕ್ಕೆ ವಾಸನೆ ಬರುತ್ತದೆ. ಪಲಾವ್, ಬಿರಿಯಾನಿ, ಪಾಯಸ ಮಾಡಲು ಸೂಕ್ತ. ೪ ತಿಂಗಳುಗಳ ಈ ತಳಿ ಎಕರೆಗೆ ೧೫ ಕ್ವಿಂಟಾಲ್ ಇಳುವರಿ ನೀಡುತ್ತದೆ.
ದೊಡ್ಡ ಬೈರ ನೆಲ್ಲು: ಒಣಭೂಮಿಯ ಭತ್ತದ ತಳಿ. ಎತ್ತರಕ್ಕೆ ಬೆಳೆಯುತ್ತದೆ. ಕೆಂಪು ಅಕ್ಕಿಯ, ೪ ತಿಂಗಳುಗಳ ಅವಧಿಯ ಈ ತಳಿ ಎಕರೆಗೆ ೧೨ ಕ್ವಿಂಟಾಲ್ ಇಳುವರಿ ನೀಡುತ್ತದೆ.
ಚಿನ್ನಪೊನ್ನಿ : ಅಧಿಕ ಇಳುವರಿಗೆ ಹೆಸರುವಾಸಿ. ೩.೫ ತಿಂಗಳುಗಳಿಗೆ ಕೊಯ್ಲಿಗೆ ಬರುತ್ತದೆ. ಎಕರೆಗೆ ೨೫-೩೦ ಕ್ವಿಂಟಾಲ್ ಇಳುವರಿಯನ್ನು ನಿರೀಕ್ಷಿಸಬಹುದು.
ನವರ: ಕೇರಳ ಮೂಲದ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಔಷಧಿಯ ಭತ್ತದ ತಳಿ. ನರ ದೌಬರ್ಲ್ಯ , ಲಕ್ವ, ನಪುಂಸಕತೆ ನಿವಾರಣೆಗೆ ಅನ್ನವೇ ಔಷಧಿಯಾಗುತ್ತದೆ. ಮೂರು ತಿಂಗಳುಗಳ ಈ ತಳಿ, ಎಕರೆಗೆ ೧೦ ಕ್ವಿಂಟಾಲ್ ಇಳುವರಿ ನೀಡುತ್ತದೆ.
ಸೇಲಂ ಸಣ್ಣ: ದಿನನಿತ್ಯದ ಬಳಕೆಗೆ ಸೂಕ್ತವಾದ ತಳಿ. ಆಕರ್ಷಕ ಕೆಂಪು ಬಣ್ಣದ ತೆನೆಯ ಈ ತಳಿ, ಗುಣಮಟ್ಟದ ಹುಲ್ಲು ನೀಡುತ್ತದೆ. ೪ ತಿಂಗಳುಗಳ ಈ ತಳಿ ಎಕರೆಗೆ ೧೭ ಕ್ವಿಂಟಾಲ್ ಇಳುವರಿ ನೀಡುತ್ತದೆ.
ಹೆಚ್‌ಎಂಟಿ: ಮಹಾರಾಷ್ಟ್ರದ ರೈತ ವಿಜ್ಞಾನಿ ದಾದಾಜಿ ರಾಂಜಿ ಕೋಬ್ರಾಗಾಡೆ ಅಭಿವೃದ್ಧಿಪಡಿಸಿದ, ಭಾಸುಮತಿಯನ್ನು ಹೋಲುವ ತಳಿ. ಪಲಾವ್, ಬಿರಿಯಾನಿ ಮಾಡಲು ಸೂಕ್ತವಾದದ್ದು. ಭತ್ತ ಹಳೆಯದಾದಷ್ಟೂ ಅಕ್ಕಿಯ ಗುಣಮಟ್ಟ ಹೆಚ್ಚುತ್ತದೆ. ೪.೫ ತಿಂಗಳುಗಳ ಈ ತಳಿ ಎಕರೆಗೆ ೧೫-೧೭ ಕ್ವಿಂಟಾಲ್ ಇಳುವರಿ ನೀಡುತ್ತದೆ.
ಸಿಂಧೂರ ಮಧುಸಾಲೆ : ಹರಿಹರದ ಆಂಜನೇಯರವರು ಅಭಿವೃದ್ಧಿಪಡಿಸಿದ ಕೆಂಪು ಅಕ್ಕಿಯ ನೀಳ ತಳಿ. ಈ ತಳಿ ರಾಷ್ಟ್ರಮಟ್ಟದಲ್ಲಿ ಜನಪ್ರಿಯವಾಗಿದೆ. ೪ ತಿಂಗಳುಗಳಿಗೆ ಕೊಯ್ಲಿಗೆ ಬರುವ ಈ ತಳಿ ೨೫ ಕ್ವಿಂಟಾಲ್ ಇಳುವರಿ ನೀಡುತ್ತದೆ.
ಬರ್ಮಾ ಬ್ಲಾಕ್ : ಕಪ್ಪಕ್ಕಿಯ ತಳಿ. ಪಾಯಸ ಮತ್ತು ಸಿಹಿ ಪದಾರ್ಥ ಮಾಡಲು ಸೂಕ್ತ. ೫ ತಿಂಗಳುಗಳ ದೀರ್ಘಾವಧಿ ತಳಿ. ಎಕರೆಗೆ ೧೨-೧೫ ಕ್ವಿಂಟಾಲ್ ಇಳುವರಿ ಸಿಗುತ್ತದೆ. ಹೆಚ್ಚಿನ ಆರೈಕೆ ಮತ್ತು ಖರ್ಚು ಕೇಳದ ದೇಸಿ ತಳಿಗಳ ಭತ್ತವನ್ನು ಬೆಳೆಸುವ ಮೂಲಕ ರೈತರು ಹೊಸ ಮಾರುಕಟ್ಟೆಯನ್ನು ಕಂಡುಕೊಳ್ಳಬಹುದಾಗಿದೆ. ದೇಸಿ ಭತ್ತದ ತಳಿಗಳನ್ನು ಬೆಳೆಯಲು ಆಸಕ್ತಿಯುಳ್ಳವರು ಮೈಸೂರಿನ ಸಹಜ ಸೀಡ್ಸ್ – ೭೦೯೦೦ ೦೯೯೧೧ಅನ್ನು ಸಂಪರ್ಕಿಸಬಹುದು.
ಜುಲೈ ೫ ಮತ್ತು ೬ರಂದು ಮೈಸೂರು ಬೀಜೋತ್ಸವ:
ಬೀಜ ಎಂಬುದು ಬರೀ ಬಿತ್ತನೆ ವಸ್ತುವಲ್ಲ; ಕೃಷಿಯ ಜೀವನಾಡಿ. ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ತಳಿ ವೈವಿಧ್ಯವನ್ನು ಅಭಿವೃದ್ಧಿಗೊಳಿಸಿ, ಕಾಪಾಡಿ, ಪೀಳಿಗೆಯಿಂದ ಪೀಳಿಗೆಗೆ ಸಾಗಿಸಿ ತಂದಿದ್ದಾರೆ. ಅಕ್ಕಡಿ, ನವಧಾನ್ಯದಂಥ ಹತ್ತು ಹಲವು ವಿಶೇಷ ಪದ್ಧತಿಗಳ ಮೂಲಕ ಬೀಜ ವೈವಿಧ್ಯವನ್ನು ಜೀವಂತವಾಗಿ ಇರಿಸಿದ್ದಾರೆ. ರೈತರು ಮತ್ತು ಗ್ರಾಹಕರಿಗೆ ದೇಸಿ ಬೀಜಗಳ ಬಗ್ಗೆ ಅರಿವು ಮೂಡಿಸಲು , ಸಹಜ ಸಮೃದ್ಧ ಮತ್ತು ಸಹಜ ಸೀಡ್ಸ್ ಆಶ್ರಯದಲ್ಲಿ ಜುಲೈ ೫ ಮತ್ತು ೬ ರಂದು ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ ‘ದೇಸಿ ಬೀಜೋತ್ಸವ’ ಏರ್ಪಡಿಸಲಾಗಿದೆ. ಎರಡು ದಿನಗಳ ಬೀಜ ಮೇಳದಲ್ಲಿ ಕರ್ನಾಟಕದ ಬೀಜ ಸಂರಕ್ಷಕರು ಹಾಗೂ ರೈತ ಗುಂಪುಗಳು ಭಾಗವಹಿಸಲಿದ್ದಾರೆ. ೧೦೦ ಕ್ಕೂ ಹೆಚ್ಚಿನ ದೇಸಿ ಭತ್ತ, ರಾಗಿ, ಬೇಳೆಕಾಳು, ಸಿರಿಧಾನ್ಯ ಮತ್ತು ತರಕಾರಿ ತಳಿಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಸಾವಯವ ಉತ್ಪನ್ನಗಳು, ಹಣ್ಣಿನ ಗಿಡಗಳು, ಮತ್ತು ಮೌಲ್ಯವರ್ಧಿತ ಪದಾರ್ಥಗಳು ಲಭ್ಯವಿರುತ್ತವೆ. ಮಕ್ಕಳಿಗಾಗಿ ಭಾನುವಾರ ಚಿತ್ರಕಲಾ ಸ್ಪರ್ಧೆ ಮತ್ತು ಧಾನ್ಯ ಗುರುತಿಸುವ ಸ್ಪರ್ಧೆಗಳು ಇರಲಿವೆ.