Mysore
27
broken clouds

Social Media

ಗುರುವಾರ, 07 ಮೇ 2026
Light
Dark

ಅರ್ಜುನ ಆನೆ ಸ್ಮಾರಕ ಲೋಕರ್ಪಣೆ

ಹಾಸನ : ಯಸಳೂರಿನ ದಬ್ಬಳಿಕಟ್ಟೆ ನೆಡುತೋಪಿನಲ್ಲಿ ನಿರ್ಮಿಸಿರುವ ಹುತಾತ್ಮ ಅರ್ಜುನ ಆನೆಯ 650 ಕೆ.ಜಿ. ತೂಕದ ಸುಂದರ ಪ್ರತಿಮೆಯ ಸ್ಮಾರಕವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಬುಧವಾರ ಲೋಕಾರ್ಪಣೆ ಮಾಡಿದರು.

ಉದ್ಘಾಟನೆ ನೆರವೇರಿಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಮಾರಕ ಪ್ರದೇಶ ಆನೆ ಸಂಚರಿಸುವ ಸ್ಥಳವಾಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರ ಸುರಕ್ಷತೆಯೂ ನಮಗೆ ಪ್ರಥಮ ಆದ್ಯತೆಯಾಗಿದೆ ಎಂದರು.

ಅರ್ಜುನನ ಸ್ಮಾರಕ ಸ್ಥಳಕ್ಕೆ ಹೋಗಲು ಈಗ ನಿರ್ಮಿಸಿರುವ ಕಚ್ಚಾ ರಸ್ತೆಯಲ್ಲಿ ಪಕ್ಕಾ ರಸ್ತೆ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಅರ್ಜುನ ಆನೆಯ ಗುಣಗಾನ
8 ಬಾರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆಹಾಕಿದ್ದ ಅರ್ಜುನ, ಅರಣ್ಯ ಇಲಾಖೆಯ ನೆಚ್ಚಿನ ಆನೆಯಾಗಿತ್ತು. ಯಾವುದೇ ಪುಂಡಾನೆ ಸೆರೆ ಕಾರ್ಯಾಚರಣೆ ಅಥವಾ ಹುಲಿ ಸೆರೆ ಕಾರ್ಯಾಚರಣೆ ಎಂದೊಡನೆ ಮೊದಲು ನೆನಪಿಗೆ ಬರುತ್ತಿದ್ದುದೇ ಆರ್ಜುನ ಎಂದರು.

ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಇದೇ ಯಸಳೂರು ಬಳಿ ತನ್ನ ಪ್ರಾಣವನ್ನು ಬಲಿಕೊಟ್ಟು, ವೈದ್ಯರು ಮತ್ತು ಅರಣ್ಯ ಸಿಬ್ಬಂದಿಯ ಜೀವ ಉಳಿಸಿ ಹುತಾತ್ಮನಾಗಿದ್ದಾನೆ. ಅರ್ಜುನನ ಸಾಧನೆ, ಕೊಡುಗೆ ಅನುಪಮವಾದ್ದು, ಹೀಗಾಗಿ ಮುಂದಿನ ಪೀಳಿಗೆಗೆ ಅರ್ಜುನನ ಯಶೋಗಾಥೆಯನ್ನು ಪರಿಚಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಅರ್ಜುನ ಆನೆ ಚಿನ್ನದ ಅಂಬಾರಿ ಹೊತ್ತು ಸಾಗುತ್ತಿದ್ದ ಚಿತ್ರಗಳು, ಹುಲಿ, ಆನೆ ಸೆರೆ ಕಾರ್ಯಾಚರಣೆಯ ಅಪರೂಪದ ಚಿತ್ರಗಳನ್ನು ಫಲಕಗಳಲ್ಲಿ ಹಾಕುವ ಮೂಲಕ ಅರ್ಜುನನ ಸಾಹಸ ಅಭಿಮಾನಿಗಳಿಗೆ ತಿಳಿಯುವಂತೆ ಮಾಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಾಗತಿಕ ತಾಪಮಾನ ಏರಿಕೆಯಿಂದ ಋತುಮಾನ ಬದಲಾವಣೆ
ಜಾಗತಿಕ ತಾಪಮಾನ ಏರಿಕೆಯಿಂದ ಇಂದು ಋತುಮಾನಗಳೇ ಬದಲಾಗಿವೆ. ಒಂದು ತಿಂಗಳಲ್ಲಿ ಬೀಳುವ ಮಳೆ ಒಂದು ವಾರದಲ್ಲಿ ಬೀಳುತ್ತಿದೆ. ಒಂದು ವಾರದ ಮಳೆ ಒಂದು ದಿನದಲ್ಲಿ, ಒಂದು ದಿನವಿಡೀ ಬೀಳುವ ಮಳೆ ಒಂದು ಗಂಟೆಯಲ್ಲಿ ಬೀಳುತ್ತಿದ್ದು, ಇದರಿಂದ ಅನಾಹುತಗಳು ಸಂಭವಿಸುತ್ತಿವೆ. ಹೀಗಾಗಿ ಪ್ರಕೃತಿ ಪರಿಸರ ಉಳಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು ಎಂದರು.

ಹಾಸನ, ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ನೂರಾರು ಆನೆಗಳು ಅರಣ್ಯದ ಹೊರಗೆ ಇದ್ದು, ತೋಟದ ಆನೆಗಳಾಗಿವೆ. ಈ ಆನೆಗಳು ತೆನೆ ಒಡೆಯುವ ಸಮಯದಲ್ಲಿ ಹೆಚ್ಚಾಗಿ ನಾಡಿಗೆ ಬರುತ್ತವೆ. ಆಗ ಸಂಘರ್ಷ ಹೆಚ್ಚುತ್ತದೆ ಎಂದು ತಜ್ಞರು ಹೇಳುತ್ತಾರೆ ಎಂದರು.

ವನ್ಯಜೀವಿ ಸಂಖ್ಯೆಯಲ್ಲಿ ಹೆಚ್ಚಳ
1972ರಲ್ಲಿ ಬಂಡೀಪುರದಲ್ಲಿ ಕೇವಲ 110 ಆನೆ ಇತ್ತು. ಇಂದು 1,100 ಆನೆ ಇದೆ. ರಾಜ್ಯದಲ್ಲಿ 6,395 ಆನೆಗಳಿವೆ. ಹೀಗಾಗಿ 1970ರ ದಶಕದಲ್ಲಿ ಕುಟುಂಬಯೋಜನೆ ಜಾರಿಗೆ ತಂದು ನಾವಿಬ್ಬರು, ನಮಗಿಬ್ಬರು ಎಂಬ ಸಂದೇಶವನ್ನು ಜನರಿಗೆ ತಲುಪಿಸಿದ ರೀತಿಯಲ್ಲೇ ಕೆಲವು ಆಯ್ದ ಪ್ರದೇಶದಲ್ಲಿ, ಆಯ್ದ ವನ್ಯಜೀವಿಗಳಿಗೆ ಸಂತಾನ ನಿಯಂತ್ರಣ ಮಾಡುವ ಅಗತ್ಯವಿದೆ, ಈ ಬಗ್ಗೆ ಚರ್ಚೆ ಆಗಬೇಕು ಎಂಬ ಹೇಳಿಕೆ ನೀಡಿದ್ದೇನೆ, ಈ ಬಗ್ಗೆ ಜನಾಭಿಪ್ರಾಯ ಮೂಡಬೇಕು ಎಂದರು.

ವನ್ಯಜೀವಿಗಳಿಂದ ಆಗುವ ಬೆಳೆ ಹಾನಿ ಪರಿಹಾರವನ್ನೂ ವಿಳಂಬವಿಲ್ಲದೆ ಪಾವತಿಸಲಾಗುತ್ತಿದೆ. ರೈತರ ಪರವಾಗಿ ಸರ್ಕಾರವಿದ್ದು, ಪರಿಹಾರದ ಮೊತ್ತ ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಸಫಾರಿಯಿಂದ ನಮ್ಮ ಇಲಾಖೆಯ ವಿವಿಧ ಪ್ರತಿಷ್ಠಾನಕ್ಕೆ ಬರುವ ಆದಾಯದಲ್ಲಿ ಶೇ.33ರಷ್ಟು ಹಣವನ್ನು ಕಾಡಿನಂಚಿನ ಜನರ ಜೀವನಮಟ್ಟ ಉತ್ತಮಪಡಿಸಲು ವಿನಿಯೋಗಿಸಲು ಸೂಚಿಸಲಾಗಿದ್ದು, ಇಂದು ಕೊಡಗಿನಲ್ಲಿ ಫಲಾನುಭವಿಗಳಿಗೆ ಹೊಲಿಗೆಯಂತ್ರ, ಜೇನುಪೆಟ್ಟಿಗೆಗಳನ್ನು ನೀಡಿದ್ದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸತ್ ಸದಸ್ಯ ಶ್ರೇಯಸ್ ಪಟೇಲ್, ಶಾಸಕ ಸಿಮೆಂಟ್ ಮಂಜು, ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಮುರಳಿ ಮೋಹನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಳುಕುಂಡಲು ಮೊದಲಾದವರು ಪಾಲ್ಗೊಂಡಿದ್ದರು.

 

Tags:
error: Content is protected !!