ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಅಕ್ಕಿ ಬೆಲೆ ಸಾಮಾನ್ಯ ಜನರ ನಿದ್ದೆಗೆಡಿಸಿದೆ. ತುಂಗಭದ್ರಾ ಜಲಾಶಯದ ಗೇಟ್ ರಿಪೇರಿಯಿಂದಾಗಿ ಸುಮಾರು ೭ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯದಿರುವುದು ಹವಾಮಾನ ವೈಪರೀತ್ಯದಿಂದ ಹಾಗೂ ಹೊರರಾಜ್ಯಗಳಿಗೆ ಭತ್ತ ಸಾಗಣೆಯಾಗುತ್ತಿರುವುದು ಈ ಅಭಾವಕ್ಕೆ ಪ್ರಮುಖ ಕಾರಣ. ಮಾರುಕಟ್ಟೆಯಲ್ಲಿ ಜೀರಾ ಅಕ್ಕಿ ದರ ಕೆ.ಜಿ.ಗೆ ೧೦೦ರೂ. ಹಾಗೂ ಸೋನಾ ಮಸೂರಿ ೯೫ರೂ.ಗೆ ಏರಿರುವುದು ಆತಂಕಕಾರಿ ಬೆಳವಣಿಗೆ.
ಭತ್ತ ಸಿಗದೆ ಹಲವು ರೈಸ್ ಮಿಲ್‌ಗಳು ಬಂದ್ ಆಗುವ ಹಂತ ತಲುಪಿದ್ದು, ಚಿಲ್ಲರೆ ವ್ಯಾಪಾರಿಗಳು ಮತ್ತು ಗ್ರಾಹಕರು ತೀವ್ರ ಆರ್ಥಿಕ ಹೊರೆ ಅನುಭವಿಸುತ್ತಿದ್ದಾರೆ. ಸರ್ಕಾರವು ತಕ್ಷಣವೇ ಹೊರರಾಜ್ಯಗಳ ಭತ್ತದ ಸಾಗಣೆಗೆ ಕಟ್ಟುನಿಟ್ಟಿನ ನಿಯಂತ್ರಣ ಹೇರಿ ದಾಸ್ತಾನಿನಿಂದ ಮುಕ್ತ ಮಾರುಕಟ್ಟೆಗೆ ಅಕ್ಕಿ ಬಿಡುಗಡೆ ಮಾಡುವ ಮೂಲಕ ದರ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.
-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು



