Mysore
27
overcast clouds

Social Media

ಬುಧವಾರ, 23 ಸೆಪ್ಟೆಂಬರ್ 2026
Light
Dark

ನಿರೋಡಿ ನಿಧನ; ಸಂಗೀತ ಕ್ಷೇತ್ರಕ್ಕೆ ದೊಡ್ಡ ನಷ್ಟ

ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮಾಂತ್ರಿಕ ಗಾಯಕ ಪಂಡಿತ್ ಇಂದೂಧರ ನಿರೋಡಿ ಮಂಗಳವಾರ ಮಹಾರಾಷ್ಟ್ರದ ಪನವೇಲ್‌ನಲ್ಲಿ ನಿಧನರಾದರು. ಅವರು ಕೆಲ ವರ್ಷಗಳ ಕಾಲ ಮೈಸೂರಿನಲ್ಲಿ ನೆಲೆಸಿದ್ದರು. ಆ ವೇಳೆ ಮೈಸೂರಿನಲ್ಲಿ ಅನೇಕರಿಗೆ ಸಂಗೀತವನ್ನು ಕಲಿಸಿದ್ದರು. ಪಂಡಿತ್ ಇಂದೂಧರ ನಿರೋಡಿ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಅನೇಕ ಶಿಷ್ಯರು ಕಂಬನಿ ಮಿಡಿದಿದ್ದಾರೆ.

” ಪಂಡಿತ ಇಂದೂಧರ ನಿರೋಡಿ ಅವರು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಬಹಳ ಎತ್ತರದ ಶಿಖರ. ಅವರು ಮೈಸೂರಿನಲ್ಲಿ ಕೆಲವು ವರ್ಷಗಳ ಕಾಲ ಇದ್ದದ್ದು ಮೈಸೂರಿನ ಸಂಗೀತಗಾರರಿಗೆ ಬಹು ದೊಡ್ಡ ವರವಾಗಿತ್ತು. ಅವರು ತುಂಬಾ ಸರಳವಾಗಿ ಜೀವಿಸುತ್ತಾ ಉನ್ನತ ಸಂಗೀತ ಪಾಠಗಳನ್ನು ಹಲವು ಮಂದಿಗೆ ತಿಳಿಸಿಕೊಡುತ್ತಿದ್ದರು. ಬೆಂಗಳೂರು, ಮೈಸೂರಿನಲ್ಲಿ ಇರುವ ಅನೇಕ ಸಂಗೀತಾಭ್ಯಾಸಿಗಳು ಅವರಿಂದ ಉತ್ತಮ ಸಂಗೀತವನ್ನು ಪಡೆದುಕೊಂಡರು. ಮೈಸೂರಿನಲ್ಲಿ ಡಾ. ಭಾಸ್ಕರ್, ಪಂಡಿತ ವೀರಭದ್ರಯ್ಯ ಹಿರೇಮಠ(ಯರಗಲ್), ಬೆಂಗಳೂರಿನ ವ್ಯಾಸಮೂರ್ತಿ ಕಟ್ಟಿ, ನಾಗರಾಜ ಹವಾಲ್ದಾರ್ ಅವರ ಮಕ್ಕಳು ಹೀಗೆ ಮುಖ್ಯ ಸಂಗೀತಗಾರರು ಪಂಡಿತ ಇಂದೂಧರ ನಿರೋಡಿ ಅವರ ಶಿಷ್ಯರಾಗಿ ಪ್ರಯೋಜನ ಪಡೆದಿದ್ದಾರೆ. ಅವರ ನಿಧನ ಸಂಗೀತ ಕ್ಷೇತ್ರಕ್ಕೆ ವಿಶೇಷವಾಗಿ ಮೈಸೂರಿನ ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಬಹಳ ದೊಡ್ಡ ನಷ್ಟ.”

ಜಿ.ಪಿ.ಬಸವರಾಜು, ಹಿರಿಯ ಪತ್ರಕರ್ತರು, ಮೈಸೂರು

” ಪಂಡಿತ ಇಂದೂಧರ ನಿರೋಡಿ ಅವರು ಹಿಂದೂಸ್ತಾನಿ ಸಂಗೀತದ ಬಹು ದೊಡ್ಡ ವಿದ್ವಾಂಸರು. ಅವರಿಂದ ಸಂಗೀತ ಕಲಿತವರು ಅನೇಕರಿದ್ದಾರೆ. ಹಿಂದೂಸ್ತಾನಿ ಸಂಗೀತದ ಶಾಸ ಅಧ್ಯಯನಕ್ಕೆ ಉಪಯುಕ್ತವಾದ ಬಾತ್ಕಂಡೆ ಎಂಬ ದೊಡ್ಡ ಪುಸ್ತಕವನ್ನು ಅವರು ರಚಿಸಿದ್ದರು. ಅವರ ನಿಧನದಿಂದ ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಬಹಳ ದೊಡ್ಡ ನಷ್ಟವಾಗಿದೆ. ಅವರ ನಿಧನ ಅತ್ಯಂತ ದುಃಖಕರ ಸಂಗತಿ. ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ.”

ಹಿಮಾಂಶು ಸಿ.ಆರ್., ಮೈಸೂರು

” ಪಂಡಿತ ಇಂದೂಧರ ನಿರೋಡಿ ಅವರ ನಿಧನ ಆಘಾತ ತಂದಿದೆ. ಅವರು ಬರೀ ಸಂಗೀತಗಾರರಷ್ಟೇ ಆಗಿರಲಿಲ್ಲ, ಶ್ರೇಷ್ಠ ಸಂಗೀತಜ್ಞರೂ ಆಗಿದ್ದರು. ರಾಗದ ನಿಖರತೆ, ಆಳವಾದ ಜ್ಞಾನ ಅವರಲ್ಲಿತ್ತು. ಆಗ್ರಾ ಘರಾಣೆ ಸಂಹೀತ ಪ್ರಕಾರವನ್ನು ಅವರು ಅಭ್ಯಾಸ ಮಾಡಿದ್ದರು. ಪಂಡಿತ ಇಂದೂಧರ ನಿರೋಡಿ ಅವರು ಅತಿರಥ, ಮಹಾರಥ ಗುರುಗಳ ಹತ್ತಿರ ಸಂಗೀತ ಅಭ್ಯಾಸ ಮಾಡಿದ್ದರು. ಬೆರಳೆಣಿಕೆಯಷ್ಟು ಶ್ರೇಷ್ಠ ಹಿಂದೂಸ್ತಾನಿ ಗಾಯಕರಲ್ಲಿ ಅವರೂ ಒಬ್ಬರಾಗಿದ್ದರು. ಸಂಗೀತ ಕಲಿಸಲು ಅವರು ಯಾರಿಂದಲೂ ಹಣದ ಅಪೇಕ್ಷೆ ಮಾಡುತ್ತಿರಲಿಲ್ಲ. ಅಂತಹ ಗುರುಗಳು ವಿರಳ, ದೇಶದಲ್ಲಿ ಹುಡುಕಿದರೂ ಸಿಗಲಾರರು. ನನಗಂತೂ ಅವರು ಮನೆಗೇ ಬಂದು ಸಂಗೀತ ಕಲಿಸುತ್ತಿದ್ದರು. ಎಷ್ಟೋ ಬಾರಿ ಅವರು ಫೋನ್‌ನಲ್ಲಿ ಹಾಡಿ ತೋರಿಸುತ್ತಿದ್ದರು. ಅವರ ವ್ಯಕ್ತಿತ್ವ, ಗುಣ ಅತಿ ಎತ್ತರದ್ದು, ಇದು ಉತ್ಪ್ರೇಕ್ಷೆ ಅಲ್ಲ. ಅವರ ಹತ್ತಿರ ಅಭ್ಯಾಸ ಮಾಡಿರುವುದು ನನ್ನ ಪುಣ್ಯ.”

ಶಾರದಾ ಭಟ್, ಮೈಸೂರು

” ಪಂಡಿತ ಇಂದೂಧರ ನಿರೋಡಿ ಅವರು ಆಗ್ರಾ ಘರಾನಾದ ದೊಡ್ಡ ಸಂಗೀತಗಾರರು. ತುಂಬಾ ಜನ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದರು. ಬಹಳ ಘನವಾದ ಸಂಗೀತ ಅವರದು. ವಿಷ್ಣು ನಾರಾಯಣ ಭಾತ್ಕಂಡೆ ಹಿಂದೂಸ್ತಾನಿ ಸಂಗೀತದ ಪಿತಾಮಹ. ರಾಗಗಳ ಕಲಿಕೆ ಸುಲಭವಾಗಲಿ ಎಂಬ ಉದ್ದೇಶದಿಂದ ಅವರು ಸಣ್ಣ ಸಣ್ಣ ಗೀತೆಗಳನ್ನು ಮಾಡಿದರು. ವರ್ಷಗಟ್ಟಲೇ ಸ್ಟುಡಿಯೋಗೆ ಹೋಗಿ ರೆಕಾರ್ಡ್ ಮಾಡಿದರು. ಇದು ಹಿಂದೂಸ್ತಾನಿ ಸಂಗೀತ ಕಲಿಯುವವರಿಗೆ ಲಭ್ಯವಿದೆ. ಇದು ಬಹಳ ದೊಡ್ಡ ಕೊಡುಗೆ. ಪಂಡಿತ ಇಂದೂಧರ ನಿರೋಡಿ ಅವರ ನಿಧನದಿಂದ ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಬಹಳ ದೊಡ್ಡ ನಷ್ಟವಾಗಿದೆ.”

ಶೈಲಜ, ಮೈಸೂರು

ಘರಾನಾ ಶೈಲಿಯ ಸೂಕ್ಷ್ಮತೆ ಹೇಳಿಕೊಟ್ಟ ಗುರು:  ಪಂಡಿತ್ ಇಂಧೂಧರ ನಿರೋಡಿಯವರು ಮೈಸೂರಿಗೆ ಬಂದದ್ದು ೨೦೦೨ರಲ್ಲಿ. ನಾನು ಮೈಸೂರಿನ ಸಪ್ತಸ್ವರ ಸಂಗೀತ ಶಾಲೆಗೆ ಸಂಗೀತ ಶಿಕ್ಷಕನಾಗಿ ೧೯೯೩ರಲ್ಲಿ ಬಂದೆ. ಮೊದಲು ನಾನು ಗದುಗಿನ ಪಂಡಿತ್ ಪುಟ್ಟರಾಜ ಗವಾಯಿಯವರ ಶಿಷ್ಯ. ನಮ್ಮ ಗುರುಗಳ ಹತ್ತಿರ ಗ್ವಾಲಿಯರ್ ಮತ್ತು ಕಿರಾನಾ ಘರಾನೆಯ ಶೈಲಿಯಲ್ಲಿ ಸಂಗೀತದ ಅಭ್ಯಾಸವಾಗಿತ್ತು. ನಿರೋಡಿ ಗುರುಗಳು ಮೈಸೂರಿಗೆ ಬಂದ ಮೇಲೆ ನನಗೆ ಆಗ್ರಾ ಘರಾನಾ ಶೈಲಿಯ ಸೂಕ್ಷ್ಮತೆಗಳನ್ನು ಕಲಿಯಬೇಕೆಂಬ ಆಸೆಯಾಯಿತು. ಹೀಗಾಗಿ, ನಾನು ಅವರನ್ನು ಭೇಟಿಯಾಗಲು ಅವರ ಮನೆಗೆ ಹೋದೆ. ತುಂಬಾ ಪ್ರೀತಿಯಿಂದ ಮಾತನಾಡಿಸಿದರು. ಎರಡನೇ ಭೇಟಿಯಲ್ಲಿ ‘ನನ್ನ ಸಂಗೀತ ಕಲಿಕೆಯನ್ನು ನಿಮ್ಮ ಹತ್ತಿರ ಮುಂದುವರಿಸಬೇ ಕೆಂದುಕೊಂಡಿದ್ದೇನೆ, ನನ್ನನ್ನು ನಿಮ್ಮ ಶಿಷ್ಯನಾಗಿ ಸ್ವೀಕರಿಸಿ’ ಎಂದು ವಿನಂತಿಸಿಕೊಂಡೆ. ಅವರು ಸಂತೋಷದಿಂದ ಒಪ್ಪಿಕೊಂಡರು. ಅಲ್ಲಿಂದ ಇಲ್ಲಿಯವರೆಗೆ ನನ್ನ ಸಂಗೀತ ಕಲಿಕೆ ಮುಂದುವರಿಯಿತು. ಆಗ್ರಾ ಘರಾನಾ ಶೈಲಿಯ ಧ್ವನಿ ಬಳಕೆ, ಲಯಕಾರಿತನ, ಬೋಲ್ ಆಲಾಪ್, ಬಂದಿಶ್ ವಿಸ್ತರಣೆ ಹೀಗೆ ಅದರ ಸೂಕ್ಷ್ಮತೆಗಳನ್ನು ತುಂಬಾ ಪ್ರೀತಿಯಿಂದ ಕಲಿಸಿದರು. ಇದರ ಜತೆ ಅವರಿಂದ ಸಂಗೀತ ಕಲಿಯುವ ವಿದ್ಯಾರ್ಥಿಗಳಿಗಾಗಿ ಹಿಂದೂಸ್ತಾನಿ ಸಂಗೀತ ಪದ್ಧತಿಯ ೧೦ ಥಾಟ್‌ಗಳ ಪ್ರಾತ್ಯಕ್ಷಿಕೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ವೀಡಿಯೋ ರೆಕಾರ್ಡಿಂಗ್ ಮಾಡಿಸಿದೆವು. ಇನ್ನೊಂದು ಅವರಿಂದ ಮಹತ್ತರ ಕಾರ್ಯ ಆಗಿದ್ದು ಪಂಡಿತ್ ವಿ.ಎನ್. ಭಾತಖಂಡೆಯವರ ಸಂಗ್ರಹಿತ ೧೮೯೬ ಬಂದಿಶ್‌ಗಳ ಧ್ವನಿಮುದ್ರಣ ರೆಕಾರ್ಡಿಂಗ್. ಸುಮಾರು ಆರು ವರ್ಷಗಳ ಕಾಲ ಈ ರೆಕಾರ್ಡಿಂಗ್ ನಡೆಯಿತು. ಈ ಎಲ್ಲ ಬಂದಿಶ್ಗಳಿಗೆ ಅವರ ಜತೆ ನನಗೆ ಹಾರ್ಮೋನಿಯಂ ನುಡಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಅವರ ನಿಧನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ.

ವೀರಭದ್ರಯ್ಯ ಹಿರೇಮಠ, ಹಿಂದೂಸ್ತಾನಿ ಸಂಗೀತಗಾರ, ನಿರೋಡಿಯವರ ಶಿಷ್ಯ

 

ಸಂಗೀತಕ್ಕಾಗಿ ಸಂಗೀತ ಎನ್ನುವಂತಿದ್ದ ಗಾನಯೋಗಿ ಪಂಡಿತ್ ಇಂದೂಧರ ನಿರೋಡಿ:  ಪಂಡಿತ್ ಇಂದೂಧರ ನಿರೋಡಿಯವರ ಬಗ್ಗೆ ಮಾತನಾಡೋಕೆ ನಾವು ಚಿಕ್ಕವರೆನಿಸುತ್ತೇವೆ. ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಹಿರಿದು. ಆಗ್ರಾ ಘರಾನಾ ಶೈಲಿಯ ಸಂಗೀತಗಾರರಾಗಿದ್ದ ನಿರೋಡಿಯವರಿಗೆ ಬಹು ದೊಡ್ಡ ವಿದ್ಯೆಯ ಪರಂಪರೆ ಜತೆಗಿತ್ತು. ಪಂಡಿತ್ ಎಸ್.ಸಿ.ಆರ್. ಭಟ, ಪಂಡಿತ್ ಕೆ.ಜಿ. ಗಿಂಡೆ, ಪಂಡಿತ್. ದಿನಕರ್ ಕಾಯ್ಕಿಣಿ, ಪಂಡಿತ್ ಚಿದಾನಂದ ನಗಕರರ್ ಮುಂತಾದ ಉದ್ಧಾಮ ಪಂಡಿತರ ಬಳಿ ಸಂಗೀತಾಭ್ಯಾಸ ಮಾಡಿದವರು. ನಿರೋಡಿಯವರು ಹೆಸರು, ಪ್ರಚಾರಕ್ಕಾಗಿ ಸಂಗೀತದಲ್ಲಿ ತೊಡಗಿ ಸಿಕೊಂಡವರಲ್ಲ. ಪೂರ್ತಿ ಸಮರ್ಪಣಾ ಭಾವದಿಂದ ಸಂಗೀತಕ್ಕಾಗಿ ಸಂಗೀತ ಎನ್ನುವ ಹಾಗೆ ಬದುಕಿದ್ದ ಗಾನಯೋಗಿ. ಕಲಿತ ವಿದ್ಯೆಯನ್ನು ಉದಾರ ಮನಸ್ಸಿನಿಂದ ಸಮಾಜಕ್ಕೆ ಕೊಡುವಂತಹ ನಿಷ್ಠೆ, ಛಲ, ಶ್ರದ್ಧೆಯ ಮೂರ್ತರೂಪದಂತೆ ನಮ್ಮ ಕಣ್ಣ ಮುಂದೆ ಇದ್ದವರು.

ಸಂಗೀತ ಪರಂಪರೆ ಮೌಖಿಕ ರೂಪದಲ್ಲಿದ್ದ ಕಾಲದಲ್ಲಿ ಆಧುನಿಕ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಹೊಸ ಸೈದ್ಧಾಂತಿಕತೆಯನ್ನು ಕೊಟ್ಟ ಪಂಡಿತ್ ವಿಷ್ಣು ನಾರಾಯಣ ಭಾತಖಂಡೆಯವರು ಆರು ಕೃತಿಗಳಲ್ಲಿ ಸಂಗ್ರಹಿಸಿದ್ದ ೧,೮೦೦ಕ್ಕೂ ಹೆಚ್ಚು ಬಂದಿಶ್‌ಗಳಿಗೆ ಸ್ವರ ಸಂಯೋಜಿಸಿ ಧ್ವನಿ ಮುದ್ರಿಸಿ ದಾಖಲೀಕರಣ ಮಾಡಿದ ನಿರೋಡಿಯವರದ್ದು ಬಹಳ ದೀರ್ಘ ಕಾಲದ ತಪಸ್ಸು. ಎಷ್ಟು ಪೀಳಿಗೆ ಕಳೆದರೂ ನಿರೋಡಿಯವರ ಬಂದಿಶ್ ಧ್ವನಿ ಸಂಗ್ರಹ ಎ ಹಿಂದೂಸ್ತಾನಿ ಸಂಗೀತಗಾರರಿಗೆ ಆಕರ ಗ್ರಂಥ ಇದ್ದಂತೆ! ಅವರ ಋಣ ಮುಂದಿನ ಪೀಳಿಗೆಯ ಹಿಂದೂಸ್ತಾನಿ ಸಂಗೀತಗಾರರ ಮೇಲೂ ಇರಲಿದೆ.

ಮೂಲತಃ ದಕ್ಷಿಣ ಕನ್ನಡದವರಾಗಿದ್ದರೂ ಉದ್ಯೋಗ ನಿಮಿತ್ತ ಮುಂಬೈಗೆ ಹೋದರು. ಮೈಸೂರನ್ನು ಬಹಳ ಪ್ರೀತಿಸುತ್ತಿದ್ದ ಕಾರಣ ತುಂಬಾ ವರ್ಷ ಮೈಸೂರಿನ ನೆಲೆಸಿದರು. ಮೈಸೂರಿನಲ್ಲಿಭದ್ರವಾದ ಸಂಗೀತ ವಾತಾವರಣ ಕಟ್ಟಿಕೊಟ್ಟ ನಿರೋಡಿಯವರು ಮೈಸೂರಿನ ಹಿಂದೂಸ್ತಾನಿ ಸಂಗೀತದ ಅಸ್ತಿತ್ವ.ನಿರೋಡಿಯವರ ಪ್ರೀತಿಯ ಶಿಷ್ಯರಾಗಿದ್ದ ವ್ಯಾಸಮೂರ್ತಿ ಕಟ್ಟಿ ಅವರು ನನ್ನ ಗುರುಗಳು. ಅವರ ಮೂಲಕ ನಿರೋಡಿಯವರ ಬಗ್ಗೆ ಬಹಳ ತಿಳಿದುಕೊಂಡೆ.

ಆ ನಂತರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನಿರೋಡಿಯವರಿಗೆ ಬಂದಾಗ ಗುರುಗಳ ಆದೇಶದಂತೆ ಅವರನ್ನು ಸಂದರ್ಶಿಸಿದ್ದೆ. ಅದನ್ನವರು ಬಹಳ ಮೆಚ್ಚಿಕೊಂಡಿದ್ದರು ಕೂಡಾ. ಮೈಸೂರು ಬಿಟ್ಟು ಬಾಂಬೆಗೆ ಹೋಗುವ ಸಂದರ್ಭದಲ್ಲಿ ಬಂದಿಶ್ ಕುರಿತಾದ ಬಹಳಷ್ಟು ಪುಸ್ತಕಗಳನ್ನು, ಸಿಡಿಗಳನ್ನು ನನಗೆ ಕೊಟ್ಟಿದ್ದರು.ಇವತ್ತಿಗೂ ಅವುಗಳು ನನ್ನ ಬಳಿ ಜೋಪಾನವಾಗಿವೆ. ನಿರೋಡಿಯವರ ಜೀವನಪ್ರೀತಿ ಅನುಕರಣೀಯ. ಒಂದು ಪರಂಪರೆಯ ಕೊಂಡಿ ಕಳಚಿಕೊಂಡ ನೋವನ್ನು ತಡೆದುಕೊಳ್ಳುವುದು ತುಂಬಾ ಕಷ್ಟ.

ಶ್ರೀಮತಿ ದೇವಿ, ಸಂಗೀತ ವಿದುಷಿ, ಮೈಸೂರು

 

 

Tags:
error: Content is protected !!