ಅಮೃತ್‌ಸರ : ಪಂಜಾಬ್‌ನ ಅಮೃತ್‌ಸರ್ ಮತ್ತು ಜಲಂಧರ್‌ನ ಹೈ ಸೆಕ್ಯೂರಿಟಿ ವಲಯಗಳ ಬಳಿ ಮಂಗಳವಾರ ಕೆಲವೇ ಗಂಟೆಗಳ ಅಂತರದಲ್ಲಿ ಸ್ಛೋಟ ಸಂಭವಿಸಿದ್ದು, ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಮೊದಲ ಬಾಂಬ್ ಸ್ಛೋಟಜಲಂಧರ್‌ನ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ಮುಖ್ಯ ಕ್ವಾರ್ಟರ್ಸ್ ಬಳಿ ರಾತ್ರಿ 8ಕ್ಕೆ ನಡೆದಿದೆ. ಇದಾದ ಮೂರು ಗಂಟೆಗಳ ಬಳಿಕ ಅಮೃತಸರದ ಖಾಸಾದಲ್ಲಿರುವ ಸೇನಾ ಕಂಟೋನ್ಮೆಂಟ್ ಪ್ರದೇಶದ ಬಳಿ ಸ್ಛೋಟ ಸಂಭವಿಸಿದೆ.
ಅಮೃತಸರದಲ್ಲಿ ಮಧ್ಯರಾತ್ರಿಯ ಸುಮಾರಿಗೆ ಸ್ಛೋಟ ಸಂಭವಿಸಿದ್ದು, ಭಯಭೀತರಾದ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿದ್ದಾರೆ. ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಅಮೃತಸರ ಗ್ರಾಮೀಣ ಪೊಲೀಸರು, ನಗರ ಪೊಲೀಸರು, ಸೇನೆ, ಬಾಂಬ್ ನಿಷ್ಕ್ರಿಯ ದಳ ಮತ್ತು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ ತಂಡಗಳು ಸ್ಥಳಕ್ಕೆ ಧಾವಿಸಿವೆ.
ಎರಡೂ ಸೋಟಗಳಲ್ಲಿ ಯಾವುದೇ ಸಾವು-ನೋವುಗಳು ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಸ್ಪೋಟ ಜಲಂಧರ್ ನಲ್ಲಿ ಬಿಎಸ್‌ಎಫ್ ಚೌಕದಲ್ಲಿ ಸಂಭವಿಸಿದ್ದು, ಸ್ಕೂಟರ್ ಬೆಂಕಿ ಹೊತ್ತಿಕೊಂಡು ಸ್ಛೋಟಿಸಿದೆ. ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿವೆ.
ಈ ಸ್ಕೂಟರ್ ಮಾಲೀಕ ಕೊರಿಯರ್ ಕಂಪೆನಿಯಲ್ಲಿ ಕೆಲಸ ಮಾಡುವ ಗುರುಪ್ರೀತ್ ಸಿಂಗ್ ಎಂದು ಪೊಲೀಸರು ಪತ್ತೆ ಹಚ್ಚಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಘಟನೆ ಅಪಘಾತವೋ ಅಥವಾ ದೊಡ್ಡ ಭದ್ರತಾ ಬೆದರಿಕೆ ಉಂಟುಮಾಡುವ ಪ್ರಯತ್ನವೋ ಎಂಬ ಕುರಿತು ತನಿಖೆ ನಡೆಯುತ್ತಿದೆ.
ಅಮೃತ್‌ಸರ ಘಟನೆ
ಅಮೃತ್‌ಸರ ಸೋಟ ಪ್ರಕರಣ ಕುರಿತು ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಸುಹೇಲ್ ಖಾಸಿಂ ಮಿರ್, ಪ್ರಾಥಮಿಕ ತನಿಖೆಯ ಪ್ರಕಾರ ರಾತ್ರಿ 11 ಅಥವಾ 11.15ರ ಸುಮಾರಿಗೆ ಖಾಸಾ ಕಡೆಗೆ ಹೋಗುವ ರಸ್ತೆಯಿಂದ ದೊಡ್ಡ ಶಬ್ದ ಕೇಳಿಬಂದ ಮಾಹಿತಿ ಸಿಕ್ಕಿತು. ಕಂಟೋನ್ಮೆಂಟ್ ಗೋಡೆಯ ಮೇಲೆ ವಸ್ತುವೊಂದನ್ನು ಎಸೆದಿದ್ದು, ಕಡಿಮೆ ತೀವ್ರತೆಯ ಸ್ಛೋಟ ಸಂಭವಿಸಿದೆ ಎಂದು ಹೇಳಿದರು.





