ನಿನ್ನೆ ಕನ್ನಡದ ರೋಸಿ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆಯಾಗಿದೆ. ಲೂಸ್ ಮಾದ ಯೋಗಿ ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ತಮಿಳಿನ ಕೊರಿಯೋಗ್ರಫರ್ ಸ್ಯಾಂಡಿ ಮಾಸ್ಟರ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೆಡ್ ಬುಷ್ ಖ್ಯಾತಿಯ ನಿರ್ದೇಶಕ ಶೂನ್ಯ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಚಿತ್ರದ ಸ್ಯಾಂಡಿ ಮಾಸ್ಟರ್‌ರ ಪಾತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಿನ್ನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಚಿತ್ರದ ನಟ ಲೂಸ್ ಮಾದ ಯೋಗಿ ಸಹ ಭಾಗವಹಿಸಿದ್ದರು. ಹೀಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ತಮಿಳಿನಲ್ಲಿ ಭಾಷಣವನ್ನು ಮಾಡಿದ್ದಾರೆ ಎಂಬ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನು ಹಂಚಿಕೊಳ್ಳಲಾರಂಭಿಸಿದ ಕನ್ನಡಿಗರು ಯೋಗಿ ವಿರುದ್ಧ ಬರಹಗಳನ್ನು ಬರೆದುಕೊಂಡು ಆಕ್ರೋಶ ಹೊರಹಾಕಿದರು, ಯೋಗಿ ನಟನೆಯ ಚಿತ್ರಗಳನ್ನು ನೋಡಬೇಡಿ ಎಂದು ಕರೆಯನ್ನು ನೀಡಿದರು. ಹೀಗೆ ವಿಡಿಯೊ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಲೂಸ್ ಮಾದ ಯೋಗಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಳ್ಳುವ ಮೂಲಕ ವಿವಾದದ ಬಗ್ಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.
“ನಿನ್ನೆ ರೋಸಿ ಸಿನಿಮಾದ ಒಂದು ಪೋಸ್ಟರ್ ಲಾಂಚ್ ಮಾಡಿದೆ. ಆ ಒಂದು ಜಾಗದಲ್ಲಿ ತಮಿಳು ಮಾತಾಡಿದ್ದೀನಿ ಅಂತ ಸಾಕಷ್ಟು ಜನರಿಗೆ ಬೇಜಾರಾಗಿದೆ. ನಿಜ ಏನು ಅಂದರೆ, ನಾನು ಕನ್ನಡದಲ್ಲಿ ಶುರು ಮಾಡಿ, ತಮಿಳಿನಲ್ಲಿ ಮಾತಾಡಿ ಕನ್ನಡದಲ್ಲಿಯೇ ಮುಗಿಸಿದ್ದೇನೆ” ಎಂದು ಹೇಳಿಕೆಯನ್ನು ನೀಡಿದ್ದಾರೆ.
“ಆದರೂ ಕೂಡ ತುಂಬಾ ಜನಕ್ಕೆ ನೋವಾಗಿದ್ದರೆ ದಯವಿಟ್ಟು ಕ್ಷಮೆ ಇರಲಿ. ನಾನು ಯಾರಿಗೂ ಅವಮಾನ ಮಾಡಬೇಕು ಅಂತ ಆಗಲಿ. ಬೇಜಾರು ಮಾಡಬೇಕು ಅಂತಾಗಲಿ ಅಂತ ನಾನು ತಮಿಳನ್ನು ಉಪಯೋಗಿಸಲಿಲ್ಲ. ಅಲ್ಲಿ ಸಾಕಷ್ಟು ಜನ ತಮಿಳಿನವರು ಇದ್ದರು. ಹಾಗಾಗಿ ತಮಿಳು ಮಾತಾಡಿದೆ” ಎಂದು ಕ್ಷಮೆಯಾಚಿಸಿದ್ದಾರೆ.