ಚಿರಂಜೀವಿ ಸಿ.ಹುಲ್ಲಹಳ್ಳಿ
೩,೭೫೦ ರೂ., ಶೇ.೧೮ರಷ್ಟು ಜಿಎಸ್‌ಟಿ ಸೇರಿ ಒಟ್ಟು ೪,೭೫೦ ರೂ.ಶುಲ್ಕ ಪ್ರತಿ ಶಿಬಿರಾರ್ಥಿಗೆ ನಿಗದಿ
ಮೈಸೂರು: ಮಲ್ಲಿಗೆ ನಗರಿ ಮೈಸೂರಿನಲ್ಲಿ ಈ ಬಾರಿ ಬೇಸಿಗೆಯ ಬಿಸಿಲು ತನ್ನ ತೀವ್ರತೆಯನ್ನು ಹೆಚ್ಚಿಸಿಕೊಂಡಿದ್ದು, ನಗರವಾಸಿಗಳು ಉಷ್ಣತೆಯ ತಾಪದಿಂದ ಕಂಗೆಟ್ಟಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಳೆಯ ಲಕ್ಷಣವೇ ಕಾಣಿಸದೆ, ಬೆಳಗಿನ ನಂತರ ಸೂರ್ಯನ ಕಿರಣಗಳು ನೇರವಾಗಿ ಕುಕ್ಕು ವಂತಿದೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆ ಯಾಗುತ್ತಿದ್ದು, ಬಿರು ಬಿಸಿನಿಲಿಂದ ತಪ್ಪಿಸಿಕೊಳ್ಳಲು ಹಲ ವರು ಅದರಲ್ಲೂ ಯುವ ಜನಾಂಗ ಇದೀಗ ಈಜುಕೊಳದ ಮೊರೆ ಹೋಗಿದೆ.
ಬೆಳಿಗ್ಗೆ ೮-೯ ಗಂಟೆ ನಂತರ ಸೂರ್ಯನ ಕಿರಣಗಳು ತೀವ್ರವಾಗುತ್ತಿದ್ದು, ಮಧ್ಯಾಹ್ನ ವೇಳೆಗೆ ಬಿಸಿಲಿನ ತಾಪ ತಾಳಲಾರದ ಮಟ್ಟಕ್ಕೆ ಏರುತ್ತಿದೆ. ಹೊರಗೆ ಹೆಜ್ಜೆ ಇಡುವುದೇ ಕಷ್ಟವಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಣ್ಣುಗಳ ರಸ, ಎಳನೀರು, ತಂಪು ಪಾನೀಯಗಳನ್ನು ಸೇವಿಸಿದರೂ ದೇಹದ ಉಷ್ಣತೆಯನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನರು ಬೇರೆ ಪರ್ಯಾಯಗಳನ್ನು ಹುಡುಕುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಯುವಕರು, ಮಕ್ಕಳು ಹಾಗೂ ಕುಟುಂಬಸ್ಥರು ಈಜುಕೊಳಗಳನ್ನು ಆರಾಮದ ತಾಣಗಳಾಗಿ ಪರಿಗಣಿಸುತ್ತಿದ್ದಾರೆ. ನಗರದ ಸರಸ್ವತಿಪುರಂ ನಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದ ಈಜುಕೊಳ, ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈಜುಕೊಳ, ಜೆ.ಪಿ. ನಗರದ ಈಜುಕೊಳ ಸೇರಿದಂತೆ ಹಲವು ಕೇಂದ್ರಗಳಲ್ಲಿ ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಬೆಳಿಗ್ಗೆಯಿಂದಲೇ ಆರಂಭವಾಗುವ ಬ್ಯಾಚ್‌ಗಳಲ್ಲಿ ಜನರು ಈಜಾಡಲು ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಬೆಳಿಗ್ಗೆ ೬.೩೦ರಿಂದ ಆರಂಭವಾಗಿ ರಾತ್ರಿ ವೇಳೆಯವರೆಗೆ ವಿವಿಧ ಬ್ಯಾಚ್‌ಗಳಲ್ಲಿ ಸಾರ್ವ ಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದೂ ಬ್ಯಾಚ್‌ನಲ್ಲಿ ೬೦ರಿಂದ ೭೦ಜನರು ಈಜಾಡಲು ಅವಕಾಶವಿದ್ದು, ದಿನದ ಒಟ್ಟು ಸಂಖ್ಯೆಯು ಸಾವಿರ ಮೀರುತ್ತಿದೆ.
ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಹೆಚ್ಚುವರಿ ಬ್ಯಾಚ್‌ಗಳನ್ನು ಪ್ರಾರಂಭಿಸಲಾಗಿದೆ. ಬೆಳಿಗ್ಗೆ ೮.೩೦, ೯.೩೦ ಮತ್ತು ಸಂಜೆ ೫ ಮತ್ತು ೬ರ ಸಮಯದಲ್ಲಿ ಪ್ರತ್ಯೇಕ ಬ್ಯಾಚ್‌ಗಳಲ್ಲಿ ಶಿಬಿರ ನಡೆಸಲಾಗುತ್ತಿದೆ. ಪ್ರತಿ ಬ್ಯಾಚ್‌ನಲ್ಲಿ ನಿಯಂತ್ರಿತ ಸಂಖ್ಯೆಯವರನ್ನು ಮಾತ್ರ ಒಳಗೆ ಬಿಡಲಾಗುತ್ತಿದೆ. ೬೦-೭೦ ಮಂದಿ ಮಾತ್ರ ಒಂದು ಬ್ಯಾಚ್ನಲ್ಲಿ ಕಲಿಯುತ್ತಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಕಳೆದ ವರ್ಷ ೨೨೦ ಮಂದಿ ನೋಂದಣಿ ಮಾಡಿಕೊಂಡಿದ್ದರು. ಆದರೆ, ಈ ಬಾರಿ ೩೦೦ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ೩,೭೫೦ ರೂ. ಶುಲ್ಕ ಶೇ.೧೮ರಷ್ಟು ಜಿಎಸ್‌ಟಿ ದರ ಸೇರಿಸಿ ಒಟ್ಟು ೪,೭೫೦ ರೂ.ಗಳು ಪ್ರತಿ ಶಿಬಿರಾರ್ಥಿಗೆ ನಿಗದಿಪಡಿಸಲಾಗಿದೆ. ಮಕ್ಕಳಲ್ಲಿ ಈಜಿನ ಮೇಲಿನ ಆಸಕ್ತಿ ಹೆಚ್ಚುತ್ತಿರುವುದು ಗಮನಾರ್ಹ. ಪೋಷಕರು ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಈಜು ಕಲಿಯಲು ಈಜುಕೊಳಗಳಿಗೆ ಕರೆತರುತ್ತಿದ್ದಾರೆ.
ಜತೆಗೆ ಈಜು ತರಬೇತಿ ಶಿಬಿರಗಳನ್ನೂ ಆಯೋಜಿಸಲಾಗುತ್ತಿದ್ದು, ತರಬೇತುದಾರರ ಮಾರ್ಗದರ್ಶನದಲ್ಲಿ ಮಕ್ಕಳು ಈಜಿನ ಕೌಶಲಗಳನ್ನು ಕಲಿಯುತ್ತಿದ್ದಾರೆ. ಮಹಿಳೆಯರಿಗೂ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಒಂದು ಬ್ಯಾಚ್‌ನಲ್ಲಿ ಮಹಿಳೆಯರಿಗೆ ಮೀಸಲಿಡಲಾಗಿದ್ದು, ಈ ಬ್ಯಾಚ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ ಬೇಸಿಗೆಯ ತಾಪ ಹೆಚ್ಚಿರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈಜುಕೊಳಗಳಿಗೆ ಬರುತ್ತಿದ್ದಾರೆ. ಸುರಕ್ಷತೆ ಮತ್ತು ಶಿಸ್ತು ಕಾಪಾಡುತ್ತಾ ಎಲ್ಲರಿಗೂ ಅವಕಾಶ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಜತೆಗೆ ಈಜು ತರಬೇತಿ ಶಿಬಿರಗಳಿಗೂ ಉತ್ತಮ ಸ್ಪಂದನೆ ದೊರಕುತ್ತಿದೆ ಎಂದು ತರಬೇತುದಾರರು ತಿಳಿಸಿದ್ದಾರೆ.
” ಮಾರ್ಚ್ ತಿಂಗಳಿನಲ್ಲಿ ನಡೆದ ಶಿಬಿರದಲ್ಲಿ ನಿರೀಕ್ಷೆಯಷ್ಟು ಮಂದಿ ಪಾಲ್ಗೊಳ್ಳಲಿಲ್ಲ. ಆದರೆ, ಏಪ್ರಿಲ್ ತಿಂಗಳಲ್ಲಿ ಮಕ್ಕಳು ಮತ್ತು ಹಿರಿಯರ ಸಂಖ್ಯೆ ನಿರೀಕ್ಷೆ ಮೀರಿದೆ. ಪ್ರತಿ ಬ್ಯಾಚ್‌ನಲ್ಲಿ ಕೇವಲ ೬೦-೭೦ ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಈಜು ಕೌಶಲಗಳನ್ನು ಕಲಿಯಲು ಅನುಕೂಲವಾಗಿದೆ.”
-ಕೆ. ಜಯರಾಮ್, ಸಿಬ್ಬಂದಿ, ಮೈಸೂರು ವಿವಿ ಈಜುಕೊಳ




