Mysore
25
moderate rain

Social Media

ಶುಕ್ರವಾರ, 06 ನವೆಂಬರ್ 2026
Light
Dark

ಬೆಂಗಳೂರು ಏರ್‌ಪೋರ್ಟ್‌ ರಸ್ತೆ | ಇಂದಿನಿಂದ 18 ತಿಂಗಳು ಬಸ್‌, ಸರಕು ವಾಹನ ಸಂಚಾರಕ್ಕೆ ನಿರ್ಬಂಧ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲಿ ನವೆಂಬರ್ 6ರಿಂದ 18 ತಿಂಗಳ ಕಾಲ ಕೆಎಸ್‌ಆರ್‌ಟಿಸಿ ಬಸ್‌ಗಳು, ಖಾಸಗಿ ಬಸ್‌ಗಳು ಹಾಗೂ ಎಲ್ಲ ಮಾದರಿಯ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಬಳ್ಳಾರಿ ರಸ್ತೆಯ ಯುಎಎಸ್ ಸ್ಟಾಫ್ ಕ್ವಾರ್ಟರ್ಸ್‌ನಿಂದ ಮೆಖ್ರಿ ಸರ್ಕಲ್‌ವರೆಗೆ ನಾಲ್ಕು ಪಥದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.

ನಗರದ ಕೇಂದ್ರ ಭಾಗದಿಂದ ಹೆಬ್ಬಾಳ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳುವವರು ಓಲ್ಡ್ ಹೈ ಗ್ರೌಂಡ್ಸ್ ಜಂಕ್ಷನ್, ಕಲ್ಪನಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್ ಮತ್ತು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಮೂಲಕ ಟ್ಯಾನರಿ ರಸ್ತೆ ಹಾಗೂ ನಾಗವಾರ ರಸ್ತೆ ಬಳಸಬಹುದು.

ಯಶವಂತಪುರದಿಂದ ವಿಮಾನ ನಿಲ್ದಾಣಕ್ಕೆ ತೆರಳುವವರು ಮತ್ತಿಕೆರೆ ರಸ್ತೆ ಮೂಲಕ ಬಿಇಎಲ್ ವೃತ್ತ ತಲುಪಿ, ಅಲ್ಲಿ ಬಲಕ್ಕೆ ತಿರುಗಿ ರಿಂಗ್ ರೋಡ್ ಮೂಲಕ ಸಾಗಬಹುದು.

ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಭಾಗಕ್ಕೆ ಬರುವವರಿಗೆ ಎರಡು ಪರ್ಯಾಯ ಮಾರ್ಗಗಳಿವೆ. ಹೆಬ್ಬಾಳದಲ್ಲಿ ಎಡಕ್ಕೆ ತಿರುಗಿ ನಾಗವಾರ ಜಂಕ್ಷನ್ ತಲುಪಬೇಕು. ಅಲ್ಲಿಂದ ಬಲಕ್ಕೆ ತಿರುಗಿ ಬಾಂಬೂ ಬಜಾರ್ ಮೂಲಕ ಕ್ವೀನ್ಸ್ ರಸ್ತೆ ತಲುಪಬಹುದು.

ಇನ್ನೊಂದು ಮಾರ್ಗದಲ್ಲಿ ಹೆಬ್ಬಾಳದಲ್ಲಿ ಬಲಕ್ಕೆ ತಿರುಗಿ, ಹೆಬ್ಬಾಳ ರಿಂಗ್ ರಸ್ತೆ, ಕುವೆಂಪು ವೃತ್ತ ಮತ್ತು ಗೊರಗುಂಟೆಪಾಳ್ಯ ಜಂಕ್ಷನ್ ಮೂಲಕ ಡಾ. ರಾಜ್‌ಕುಮಾರ್ ರಸ್ತೆ ಸೇರಬಹುದು.

Tags:
error: Content is protected !!