ಪ್ರೊ.ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ, ಮೈಸೂರು
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಎಸ್.ಎಂ.ಕೃಷ್ಣ ಪ್ರಶಸ್ತಿ ಪುರಸ್ಕಾರ
ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಎಚ್.ಕೆ.ವೀರಣ್ಣಗೌಡ, ಸಾಹುಕಾರ್ ಚನ್ನಯ್ಯನವರ ನಂತರ ಬರುವ ಎರಡು ಪ್ರಮುಖವಾದ ಹೆಸರುಗಳೆಂದರೆ ಒಂದು ಕೆ.ವಿ.ಶಂಕರ ಗೌಡ ಮತ್ತೊಂದು ಎಸ್.ಎಂ.ಕೃಷ್ಣ ಅವರದು. ಕೆ.ವಿ.ಶಂಕರ ಗೌಡರು ಬಹಳ ವರ್ಷಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದರೂ ಅಧಿಕಾರದಲ್ಲಿದ್ದುದು ಬಹಳ ಕಡಿಮೆ ಅವಧಿ.
ಆದರೆ ಕೃಷ್ಣ ಅವರು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅಧಿಕಾರದ ದಂಡ ಹಿಡಿದು ಬಹಳ ಕಾಲದವರೆಗೆ ಹೆಜ್ಜೆ ಹಾಕಿದ್ದಾರೆ. ಶಂಕರಗೌಡರದು ರಚನಾತ್ಮಕ ಚಟುವಟಿಕೆ ಯಿಂದ ಕೂಡಿದ ಅಭಿವೃದ್ಧಿ ಕಾರ್ಯವಾದರೆ, ಕೃಷ್ಣ ಅವರದ್ದು ನವಿರಾದ ವ್ಯಕ್ತಿತ್ವ, ಬುದ್ಧಿಮತ್ತೆಯ ರಾಜಕಾರಣಿಯಾಗಿ ಯುವಜನಾಂಗವನ್ನು ಪ್ರೇರೇಪಿಸಿದವರು. ತಮ್ಮ ನಡೆನುಡಿಯ ಮೂಲಕ ಬಹುಜನರ ಮನಸ್ಸು ಗೆದ್ದವರು. ಯಾರನ್ನೂ ಎಂದಿಗೂ ನೋಯಿಸದ, ಮೃದು ವ್ಯಕ್ತಿತ್ವದಿಂದ ಹೆಸರಾಗಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಕಂಗೊಳಿಸಿದವರು.
ಕೆಲವು ಕಾಲ ಸಕ್ರಿಯ ರಾಜಕಾರಣದಿಂದ ದೂರಾಗಿದ್ದರು. ಅಜಾತಶತ್ರುವಾಗಿದ್ದ ಅವರು ಇಹಲೋಕವನ್ನು ತ್ಯಜಿಸಿದಾಗ ಪಕ್ಷಾತೀತವಾಗಿ ಎಲ್ಲರೂ ಕಂಬನಿ ಮಿಡಿದಿದ್ದು ಅವರ ಜನ ಪ್ರಿಯತೆಗೆ ಸಾಕ್ಷಿಯಾಗಿತ್ತು.
ಎಸ್.ಎಂ.ಕೃಷ್ಣ ಅವರು ಸರಳ, ಸಜ್ಜನ ಸ್ವಭಾವಕ್ಕೆ ಪ್ರೇರಣೆಯಾಗಿದ್ದು ಮೈಸೂರಿನ ರಾಮಕೃಷ್ಣ ಆಶ್ರಮ. ಪ್ರೌಢಶಾಲಾ ವ್ಯಾಸಂಗಕ್ಕೆ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮವನ್ನು ಪ್ರವೇಶಿಸಿದ ಕೃಷ್ಣ ಅವರ ಮೇಲೆ ರಾಮಕೃಷ್ಣ ಪರಮಹಂಸರು ಹಾಗೂ ವಿವೇಕಾನಂದರ ವ್ಯಕ್ತಿತ್ವದ ಗಾಢವಾದ ಪರಿಣಾಮ ಬೀರಿತು. ಮೃದು ಮಾತು, ಸೌಜನ್ಯದ ನಡವಳಿಕೆ, ಪ್ರತಿಯೊಬ್ಬರ ಬಗ್ಗೆಯೂ ಗೌರವ, ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವನೆಯನ್ನು ಸಹಜವಾ ಗಿಯೇ ಮೈಗೂಡಿಸಿಕೊಂಡಿದ್ದರು. ಬಿ.ಎ. ಪದವಿ ಪಡೆದ ನಂತರದ ಅಮೆರಿಕಕ್ಕೆ ಹೋಗಿ ವಕೀಲ ಪದವಿಯನ್ನು ಪಡೆದರು.
ಎಸ್.ಎಂ.ಕೃಷ್ಣ ಅವರ ಕುಟುಂಬಕ್ಕೂ ರಾಜಕಾರಣದ ನಂಟು ಇದೆ. ತಂದೆ ಎಸ್.ಸಿ.ಮಲ್ಲಯ್ಯ ಅವರು ಮೈಸೂರಿನ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ರಾಜಮನೆತನಕ್ಕೆ ಹತ್ತಿರವಾಗಿ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರೊಡನೆ ನಿಕಟ ಸಂಪರ್ಕವನ್ನಿರಿಸಿಕೊಂಡಿದ್ದವರು. ಈ ಹಿನ್ನೆಲೆಯೇ ಕೃಷ್ಣ ಅವರು ರಾಜಕಾರಣವನ್ನು ಪ್ರವೇಶಿಸಲು ಕಾರಣವಾಯಿತು.
೧೯೬೨ರಲ್ಲಿ ಅಮೆರಿಕಾದಿಂದ ಹಿಂದಿರುಗಿದ ಎಸ್.ಎಂ.ಕೃಷ್ಣ ಅವರು ೬೨ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ನೇರ ನಡೆನುಡಿಯಿಂದ ಖ್ಯಾತರಾಗಿದ್ದ ಎಚ್.ಕೆ.ವೀರಣ್ಣಗೌಡರ ಎದುರು ಸ್ಪರ್ಧಿಸಿ ಜಯಗಳಿಸಿದರು.
ವಿಧಾನಸಭೆಯಲ್ಲಿ ಅವರು ‘ಉತ್ತಮ ಸಂಸದೀಯ ಪಟು’ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಆಳುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗದೆ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ (ಪಿಎಸ್‌ಪಿ) ಪಕ್ಷದ ಅಭ್ಯರ್ಥಿ ಯಾಗಿದ್ದ ಕೃಷ್ಣ ಅವರು ೧೯೬೭ರ ಚುನಾವಣೆಯಲ್ಲಿ ಕ್ರಿಯಾಶೀಲ ರಾಜಕಾರಣಿಯೊಬ್ಬರ ಎದುರು ಸೋಲನುಭವಿಸಿದರು. ಅಂದಿನ ಲೋಕಸಭಾ ಸದಸ್ಯರಾಗಿದ್ದ ಎಂ.ಕೆ.ಶಿವನಂಜಪ್ಪ ಅವರ ನಿಧನದಿಂದ ತೆರವಾದ ಲೋಕಸಭಾ ಸದಸ್ಯ ಸ್ಥಾನಕ್ಕೆ ಸ್ಪಽಸಿದ ಕೃಷ್ಣ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಚೌಡಯ್ಯ ಅವರನ್ನು ಸೋಲಿಸಿದರು.
ಅಂದು ಇಂದಿರಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ದೇವರಾಜ ಅರಸು ಅವರ ಸರ್ಕಾರ ೧೯೭೨ರಲ್ಲಿ ಭಾರಿ ಕೈಗಾರಿಕೆಗಳ ಸಚಿವರಾದ ನಂತರ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸಂಸದರಾಗಿ, ಕೇಂದ್ರದಲ್ಲಿ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದರು. ಮತ್ತೊಮ್ಮೆ ರಾಜ್ಯ ರಾಜಕಾರಣವನ್ನು ಪ್ರವೇಶಿಸಿ ಮುಖ್ಯಮಂತ್ರಿಯಾಗಿ ಬರ ಪರಿಸ್ಥಿತಿ, ಕಾವೇರಿ ನೀರಿನ ಹೋರಾಟ, ವರನಟ ಡಾ.ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದಾಗ ಅವರನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬರುವುದೂ ಸೇರಿದಂತೆ ಆಡಳಿತದಲ್ಲಿ ಕಠಿಣ ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಎಸ್.ಎಂ.ಕೃಷ್ಣ ಅವರಿಗೆ ಸಲ್ಲುತ್ತದೆ. ಅವರು ಶಿಕ್ಷಣ ಕ್ಷೇತ್ರದಲ್ಲಿ ತಂದ ಸುಧಾರಣೆ ವೃತ್ತಿ ಶಿಕ್ಷಣ ಪ್ರವೇಶಕ್ಕೆ ಜಾರಿಗೊಳಿಸಿದ ಕರ್ನಾಟಕ ಪರೀಕ್ಷಾ ಘಟಕ (ಸಿಇಟಿ), ಅಕ್ಷರ ದಾಸೋಹ, ಮಹಿಳಾ ಸಬಲೀಕರಣದತ್ತ ಹೆಜ್ಜೆಯಿಟ್ಟ ಕಾರಣದಿಂದಾಗಿ ಪ್ರಾರಂಭಿಸಿದ ಸ್ತ್ರೀಶಕ್ತಿ ಸಂಘಗಳು, ಕರ್ನಾಟಕದಲ್ಲಿ ಐಟಿ ಕ್ಷೇತ್ರದ ಅಭಿವೃದ್ಧಿ, ಕೆಂಗಲ್ ಹನುಮಂತಯ್ಯನವರು ನಿರ್ಮಿಸಿದ ವಿಧಾನಸೌಧದ ಪಕ್ಕದಲ್ಲಿ ಅದೇ ಮಾದರಿಯಲ್ಲಿ ವಿಕಾಸಸೌಧವನ್ನು ನಿರ್ಮಿಸಿದ್ದು ಅವರ ಹೆಗ್ಗಳಿಕೆ.
ಮುಖ್ಯಮಂತ್ರಿಯ ಅವಧಿಯನ್ನು ಪೂರೈಸಿದ ನಂತರ ೨೦೦೪ರಿಂದ ೨೦೦೮ರವರೆಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದರು. ೨೦೦೯ರಿಂದ ೨೦೧೨ರವರೆಗೆ ವಿದೇಶಾಂಗ ಸಚಿವ ರಾಗಿಯೂ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿದರು. ನಂತರ ರಾಜಕಾರಣದಲ್ಲಿ ವಿರಾಮ ಪಡೆದ ಕೃಷ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಎಸ್.ಎಂ.ಕೃಷ್ಣ ಅವರು ಕೇವಲ ರಾಜಕಾರಣಿಯಷ್ಟೇ ಆಗಿರಲಿಲ್ಲ. ಅವರೊಬ್ಬ ಸಾಹಿತ್ಯ, ಸಂಗೀತ ಪ್ರಿಯರಾಗಿದ್ದರು. ಮದ್ರಾಸ್‌ನಲ್ಲಿ ಜರುಗುತ್ತಿದ್ದ ಸಂಗೀತ ಸಮ್ಮೇಳನ ಹಾಗೂ ಬೆಂಗಳೂರಿನ ಕೋಟೆ ಪ್ರೌಢಶಾಲೆ ಆವರಣದಲ್ಲಿ ಪ್ರತಿವರ್ಷ ಜರುಗುವ ಪ್ರಸಿದ್ಧ ರಾಮೋತ್ಸವದಲ್ಲೂ ಸಚಿವರಾಗಿದ್ದ ಸಂದರ್ಭದಲ್ಲೂ ತಪ್ಪದೇ ಹಾಜರಾಗುತ್ತಿದ್ದರು.
ಟೆನ್ನಿಸ್ ಆಟಗಾರರಾಗಿದ್ದ ಕೃಷ್ಣ ಅವರು ವಿಂಬಲ್ಡನ್ ಟೆನ್ನಿಸ್ ಸ್ಪರ್ಧೆಗಳನ್ನು ಆ ಸಕ್ತಿಯಿಂದ ವೀಕ್ಷಿಸುತ್ತಿದ್ದರು. ನಾಡು ಕಂಡ ಶೇಷ್ಠ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ಮಂಡ್ಯದ ಕರ್ನಾಟಕ ಸಂಘದಲ್ಲಿ ಪ್ರತಿಷ್ಠಾಪಿಸ ಲಾಗಿರುವ ದತ್ತಿನಿಧಿ ‘ಎಸ್.ಎಂ.ಕೃಷ್ಣ ಪ್ರಶಸ್ತಿ’ಯನ್ನು ಓರ್ವ ಉತ್ತಮ ರಾಜಕಾರಣಿ, ಸಂಗೀತಗಾರರಿಗೆ ಹಾಗೂ ಕ್ರೀಡಾಪಟುವಿಗೆ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು ಪ್ರಥಮಬಾರಿಗೆ ತೀರ್ಥಹಳ್ಳಿಯ ಸುಸಂಸ್ಕ ತ ರಾಜಕಾರಣಿ ಕಿಮ್ಮನೆ ರತ್ನಾಕರ್ ಅವರಿಗೆ ಮೇ ೫ರಂದು ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿ ೫೦ ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಇಂದು ಪ್ರಶಸ್ತಿ ಪ್ರದಾನ: ಎಸ್.ಎಂ.ಕೃಷ್ಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮೇ ೫ರಂದು ಸಂಜೆ ೪.೩೦ಕ್ಕೆ ಮಂಡ್ಯ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉಪಸ್ಥಿತರಿರುವ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕ ರವಿಕುಮಾರ್ ಗಣಿಗ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್.ಎಂ. ಕೃಷ್ಣ ಅವರ ಕುರಿತು ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಪ್ರೊ.ಬಿ.ಕೆ.ಚಂದ್ರಶೇಖರ್, ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ, ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ, ವಕೀಲರಾದ ಜೀರಹಳ್ಳಿ ರಮೇಶ್‌ಗೌಡ ಮಾತನಾಡಲಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಕಾಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.




