ರಾಜ್ಯ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರಬಲ ವಿರೋಧ ಪಕ್ಷವಾಗಿರುವ ಬಿಜೆಪಿಯ ಆಂತರಿಕ ಬೆಳವಣಿಗೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರವರ ವಿರುದ್ಧ ಸಮರ ಸಾರಿರುವ ಯತ್ನಾಳ್ ಬಣ, ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ.
ಇತ್ತ ಕಾಂಗ್ರೆಸ್‌ನಲ್ಲಿಯೂ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಗಳು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಗಳ ಕುರಿತ ಮಾತುಕತೆಗಳು ಜೋರಾಗಿವೆ.
ಕಾಂಗ್ರೆಸ್‌ನಲ್ಲಿಯೂ ಬಣ ರಾಜಕೀಯ ಹೆಚ್ಚಾಗುತ್ತಿದ್ದು, ಡಿ.ಕೆ. ಶಿವಕುಮಾರ್ ಬಣ, ಡಾ.ಜಿ.ಪರಮೇಶ್ವರ್ ಬಣ, ಸತೀಶ್ ಜಾರಕಿಹೊಳಿ ಬಣ ಅಧಿಕಾರ ಬದಲಾವಣೆಯ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಿವೆ. ಇವರ ಈ ವರ್ತನೆ ರಾಜ್ಯದ ಆಡಳಿತ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ರಾಜ್ಯ ಕಾಂಗ್ರೆಸ್‌ನಲ್ಲಿನ ಈ ಬೆಳವಣಿಗೆಗಳನ್ನು ಗಮನಿಸಿ ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಒಡಕುಮೂಡಬಹುದು ಎಂಬ ಆತಂಕದಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ರಾಜ್ಯಕ್ಕೆ ಭೇಟಿ ನೀಡಿ ಯಾರೂ ಅಧಿಕಾರ ಬದಲಾವಣೆಯ ಕುರಿತು ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದ್ದರೂ ಕಾಂಗ್ರೆಸ್‌ನ ಬಣ ರಾಜಕೀಯಕ್ಕೆ ತೆರೆಬಿದ್ದಿಲ್ಲ.
ಹೀಗೆ ರಾಜಕೀಯ ಪಕ್ಷಗಳು ತಮ್ಮ ಜವಾಬ್ದಾರಿಯನ್ನು ಮರೆತು ಆತಂರಿಕ ಕಲಹಗಳನ್ನು ಸೃಷ್ಟಿಸಿಕೊಂಡು ಜಗಳವಾಡುವ ಬದಲು ಎಲ್ಲ ಪಕ್ಷಗಳೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ರಾಜ್ಯದ ಹಿತಕ್ಕಾಗಿ ಶ್ರಮಿಸಲಿ.
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು.