Mysore
28
scattered clouds

Social Media

ಗುರುವಾರ, 08 ಅಕ್ಟೋಬರ್ 2026
Light
Dark

ಸಿಹಿ ಗೆಣಸಿಗೆ ಉತ್ತಮ ಬೆಲೆ; ರೈತರಲ್ಲಿ ಸಂತಸ

ದಾ.ರಾ.ಮಹೇಶ್

ವೀರನಹೊಸಹಳ್ಳಿ: ಸಿಹಿ ಗೆಣಸು ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಹನಗೂಡು ಸಮೀಪದ ಕಿರಂಗೂರು ಗ್ರಾಮದ ರೈತ ಸಿದ್ದಲಿಂಗ ಅವರು ತಮ್ಮ ಜಮೀನಿನಲ್ಲಿ ಸಿಹಿ ಗೆಣಸು ಬೆಳೆದು ಉತ್ತಮ ಆದಾಯ ಗಳಿಸುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ರೈತ ಸಿದ್ದಲಿಂಗ ಅವರು ೨ ಎಕರೆಯಲ್ಲಿ ಸಿಹಿ ಗೆಣಸು ಬೆಳೆದಿದ್ದು, ಸುಮಾರು ೧೦ಟನ್ ಇಳುವರಿ ಪಡೆದಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಸಿಹಿ ಗೆಣಸಿಗೆ ಕೆ.ಜಿ.ಗೆ ೨೦ ರೂ. ಅಥವಾ ಕ್ವಿಂಟಾಲ್‌ಗೆ ೨,೫೦೦ ರೂ.ವರೆಗೆ ಬೆಲೆ ದೊರೆಯುತ್ತಿದ್ದು, ಇದರಿಂದ ಒಂದು ಎಕರೆಯಿಂದ ಸುಮಾರು ೨,೫೦,೦೦೦ ರೂ.ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಬೆಳೆ ಬೆಳೆಯಲು ಬೀಜ, ಗೊಬ್ಬರ, ಔಷಧಿ, ಕೂಲಿ ಹಾಗೂ ನೀರಾವರಿ ಸೇರಿದಂತೆ ಸುಮಾರು ೭೫,೦೦೦ ರೂ. ವೆಚ್ಚವಾಗಿದ್ದು, ಖರ್ಚು ಕಳೆದು ೧,೫೦,೦೦೦ ರೂ. ನಿವ್ವಳ ಲಾಭ ಉಳಿಯಲಿದೆ ಎಂದು ರೈತರು ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವಿವಿಧ ಬೆಳೆಗಳ ಬೆಲೆ ಏರಿಳಿತದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು, ಈ ಬಾರಿ ಸಿಹಿ ಗೆಣಸಿಗೆ ಉತ್ತಮ ಬೆಲೆ ದೊರೆತಿರುವುದು ಸಂತಸ ತಂದಿದೆ. ಉತ್ತಮ ಗುಣಮಟ್ಟದ ಗೆಣಸಿಗೆ ವ್ಯಾಪಾರಿಗಳು ಹೊಲದಲ್ಲಿಯೇ ಖರೀದಿಸಲು ಮುಂದಾಗುತ್ತಿರುವುದು ರೈತರಿಗೆ ಮತ್ತಷ್ಟು ಅನುಕೂಲವಾಗಿದೆ.

ಸಿಹಿ ಗೆಣಸು ಬೆಳೆಯಲು ಸಾಕಷ್ಟು ಶ್ರಮ ವಹಿಸಿದ್ದೇವೆ. ಈ ಬಾರಿ ಉತ್ತಮ ಇಳುವರಿ ಬಂದಿದ್ದು, ಮಾರುಕಟ್ಟೆಯಲ್ಲೂ ನಿರೀಕ್ಷೆಗಿಂತ ಉತ್ತಮ ಬೆಲೆ ಸಿಗುತ್ತಿದೆ. ಇದರಿಂದ ಬೆಳೆಗಾಗಿ ಮಾಡಿದ ಖರ್ಚು ಕಳೆದು ಉತ್ತಮ ಲಾಭ ದೊರೆಯುವ ವಿಶ್ವಾಸವಿದೆ. ರೈತರಿಗೆ ಇದೇ ರೀತಿ ನ್ಯಾಯಯುತ ಬೆಲೆ ಸಿಕ್ಕರೆ ಕೃಷಿಯಲ್ಲಿ ಮತ್ತಷ್ಟು ಆಸಕ್ತಿ ಮೂಡುತ್ತದೆ ಎಂದು ರೈತ ಸಿದ್ದಲಿಂಗ ಸಂತಸ ವ್ಯಕ್ತಪಡಿಸಿದ್ದಾರೆ.

ಸಿಹಿ ಗೆಣಸಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ಬೆಲೆ ಸ್ಥಿರವಾಗಿರಬೇಕು ಎಂಬುದು ರೈತರ ಆಶಯವಾಗಿದೆ. ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿದರೆ ಬೆಳೆಗಾರರಿಗೆ ಇನ್ನಷ್ಟು ಲಾಭ ದೊರೆಯಲಿದೆ. ಉತ್ತಮ ಇಳುವರಿ, ಉತ್ತಮ ಬೆಲೆ ಹಾಗೂ ನಿರೀಕ್ಷಿತ ಆದಾಯದಿಂದ ಸಿಹಿ ಗೆಣಸು ಬೆಳೆಗಾರ ಸಣ್ಣತಮ್ಮೇಗೌಡ ನೇರಳಕುಪ್ಪೆ ಅವರೂ ಸಂತಸ ಹಂಚಿ ಕೊಂಡಿದ್ದಾರೆ.

Tags:
error: Content is protected !!