ಪ್ರೊ.ಎಂ.ಕೃಷ್ಣೇಗೌಡ
ಪ್ರಸಂಗ-01
ಈ ಕತೆಯ ನೀತಿಯೇನೆಂದರೆ…
ಮಹಾಮಹೋಪಾಧ್ಯಾಯರ ಸಂಗೀತ ಕಚೇರಿ ಅಂದರೆ ಕೇಳಬೇಕೆ? ಮತ್ತಿನ್ನೇನು? ಕೇಳಲೇಬೇಕು. ನಗರದಲ್ಲೆಲ್ಲ ಆರಾರು ತಿಂಗಳು ಮೊದಲಿಂದಲೇ ಭಾರೀ ಪ್ರಚಾರ. ಊರಿನ ದೊಡ್ಡ ಕುಳಗಳೆಲ್ಲಾ ಕಛೇರಿಗೆಂದು ಲಕ್ಷ ಲಕ್ಷಗಳಲ್ಲಿ ಧಾರಾಳ ಧನಸಹಾಯ ಮಾಡಿದ್ದರು. ಅವರಲ್ಲಿ ಒಬ್ಬರಿಗೂ ಸಂಗೀತದ ಸಾ ಪಾ ಗೊತ್ತಿರಲಿಲ್ಲ. ಆ ಮಾತು ಬೇರೆ! ಆದರೂ ಅವರನ್ನೆಲ್ಲಾ ಕಚೇರಿ ನಡೆಯುವಾಗ ಮುಂದಿನ ಸೀಟುಗಳಲ್ಲೇ ಕೂರಿಸಲಾಗಿತ್ತು. ದುಡ್ಡಿನ ಋಣವೇನು ಸಾಮಾನ್ಯದ್ದೆ?
ಸರಿ, ಮಹಾಮಹೋಪಾಧ್ಯಾಯರು ವೇದಿಕೆಯನ್ನೇರಿದರು. ಆಹಾ! ಅವರ ಮುಖದಲ್ಲಿ ಅದೆಂಥಾ ದೈವಕಳೆ! ಹಣೆಯ ಮೇಲೆ ಢಾಳವಾದ ಪಟ್ಟೆ ವಿಭೂತಿ, ಅದರ ಮಧ್ಯದಲ್ಲಿ ಕಾಸಿನಗಲದ ಕುಂಕುಮ, ಅದರ ಕೆಳಗೆ ಗಂಧದ ಬೊಟ್ಟು, ಅದರ ನಡೂ ಮಧ್ಯಕ್ಕೆ ಸರಿಯಾಗಿ ಕಡು ಕಪ್ಪಿನ ಅಂಗಾರ, ವಿರಳ ತಲೆಗೂದಲ ಮಧ್ಯೆ ಮಂತ್ರಾಕ್ಷತೆ. ಕಿವಿಯಲ್ಲಿ ವಜ್ರ ಮೆಟ್ಟಿದ ಬಂಗಾರದ ಹತ್ತಕಡಕು, ಮಧ್ಯಾಹ್ನದ ಭೋಜನಾನಂತರ ಯಥೇಚ್ಛ ತಾಂಬೂಲ ಚರ್ವಣವಾಗಿದೆ ಎಂದು ಸಾಕ್ಷಿ ನುಡಿಯುತ್ತಿರುವ ಅವರ ತುಟಿ, ನಾಲಿಗೆ, ಹಲ್ಲುಗಳು. ಅವರು ಧರಿಸಿದ್ದ ರೇಷ್ಮೆಯ ಜುಬ್ಬಾ ಮತ್ತು ಪಂಚೆ ಇನ್ನಿದಕ್ಕಿಂತ ಬೆಳ್ಳಗಿರಲು ಸಾಧ್ಯವೇ ಇಲ್ಲ ಅನ್ನುವಷ್ಟು ಬೆಳ್ಳಗಿವೆ. ಅವರ ಮುಖದ ಮೇಲಂತೂ ಸಾಕ್ಷಾತ್ ಸರಸ್ವತಿಯೇ ಬಂದು ಕುರ್ಚಿ ಹಾಕಿಕೊಂಡು ಕೂತ ಹಾಗಿತ್ತು. ಅವರ ವಿದ್ವತ್ತಿಗೆ ತಕ್ಕ ಪಕ್ಕ ವಾದ್ಯದವರು ತಮ್ಮ ವಾದ್ಯಗಳನ್ನು ಶ್ರುತಿ ಮಾಡಿಕೊಂಡು ಕುಳಿತಿದ್ದರು. ಸ್ವಾಗತೇತ್ಯಾದಿಗಳು ಮುಗಿದವು. ಮಹಾಮಹೋಪಾಧ್ಯಾಯರ ಹೆಗಲಿಗೆ ಜೋಡಿ ಶಾಲು, ಕೈಗೆ ಬಂಗಾರದ ತೋಡ, ಬುಟ್ಟಿ ತುಂಬಾ ಬಾದಾಮಿ, ದ್ರಾಕ್ಷಿ, ಗೋಡಂಬಿ, ಕಲ್ಲುಸಕ್ಕರೆ ಮುಂತಾದುವುಗಳೆಲ್ಲಾ ಸಮರ್ಪಣೆಯಾದವು. ಇದೀಗ ಸಂಗೀತ ಕಛೇರಿ ಶುರು. ಮಹಾಮಹೋಪಾಧ್ಯಾಯರ ಹಂಸಧ್ವನಿ ಅಂದರೆ ಕೇಳುವ ಕಿವಿಗಳ ಪುಣ್ಯ! ಆಲಾಪ ಆರಂಭವಾಯಿತು. ಮಂದ್ರದಿಂದ ಆರಂಭವಾದ ಆಲಾಪ ಮಧ್ಯಮದಲ್ಲಿ ಮುಂದುವರಿದು ತಾರಕಕ್ಕೇರಿತು. ಆಗ – ಥತ್! ಒಂದು ದೊಡ್ಡ ಸೊಳ್ಳೆ, ಹ್ಞೂ, ದೊಡ್ಡದೇ ಸೊಳ್ಳೆ, ಆಡಾಡುತ್ತಾ ಬಂದು ಮಹಾಮಹೋಪಾಧ್ಯಾಯರ ಪಂಚೆಯೊಳಕ್ಕೆ ಹೋಗಿಬಿಡೋದೇ? ಸಂಗೀತ ರಸಾನಂದದ ಉತ್ಕರ್ಷವನ್ನು ತಲುಪಿದಾಗ ಆ ಕ್ಷುದ್ರ ಸೊಳ್ಳೆ ಛೇ, ಮಹಾಮಹೋಪಾಧ್ಯಾಯರ ಒಳದೊಡೆಯನ್ನ ಚೀಂಯ್ ಅಂತಾ ಕಚ್ಚಿಬಿಡೋದಾ? ಕತೆ ಇಷ್ಟೇ. ಈ ಕತೆಯ ನೀತಿ ಏನೆಂದರೆ… ನಮಗೆ ಗೊತ್ತಿಲ್ಲ. ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಅಂದರೆ ತಪ್ಪಿಲ್ಲ.
ಪ್ರಸಂಗ-02
ಹದಿನೈದರ ನೋಟು:
ಹುಚ್ಚೀರನಿಗೆ ಒಂದು ಮುಸ್ಸಂಜೆಯಲ್ಲಿ ಎಲ್ಲೋ ಒಂದು ಕಡೆ ರೂಪಾಯಿ ನೋಟೊಂದು ಸಿಕ್ಕಿಬಿಡ್ತು. ಅದೃಷ್ಟ ! ಅಂತೀರಾ? ಮುಂದೆ ಕೇಳಿ. ಸಿಕ್ಕಿದ ನೋಟನ್ನು ಮೆಲ್ಲಗೆ ಮಡಚಿ ಜೇಬಿಗಿಟ್ಟುಕೊಂಡ ಹುಚ್ಚೀರ, ಮನೆಗೆ ಬಂದು ನೋಟು ಬಿಡಿಸಿ ನೋಡಿದ – ಖರ್ಮ!! ಅದು ಹದಿನೈದು ರೂಪಾಯಿಯ ನೋಟು. ಯಾರೋ ಅಡ್ಡಕಸಬಿ ಖೋಟಾ ನೋಟು ಮಾಡೋನು ಈ ಎಡವಟ್ಟು ಮಾಡಿದ್ದ ಅಂತ ಕಾಣ್ಸುತ್ತೆ – ಹದಿನೈದು ರೂಪಾಯಿ ನೋಟು. ಏನು ಮಾಡೋದಿದನ್ನ? ಮೂಲೆ ಅಂಗಡಿ ಶೆಟ್ಟರಿಗೆ ಬುದ್ಧಿ ಸ್ವಲ್ಪ ನಿಧಾನ. ಅಲ್ಲಿ ಹೋಗಿ ಅವರಿಗೆ ಟೋಪಿ ಹಾಕಿ ಬಿಡಬೇಕೆಂದು ಯೋಚಿಸಿದ. ರಾತ್ರಿ ಬಾಗಿಲು ಹಾಕೋ ಸಮಯಕ್ಕೆ ಅಂಗಡಿಗೆ ಹೋದ. “ಶೆಟ್ರೆ, ಒಂದು ಬೆಂಕಿಪೊಟ್ಟಣ ಕೊಡಿ” ಅಂದ. “ಒಂದು ರುಪಾಯಿ” ಅಂದ್ರು ಶೆಟ್ರು.
“ತಗೊಳ್ಳಿ ಶೆಟ್ರೇ”, ಅಂತ ಹದಿನೈದರ ನೋಟು ಕೊಟ್ಟ ಹುಚ್ಚೀರ. “ಹದಿನೈದು ರುಪಾಯಿ ನೋಟಾ?” ಅಂದ್ರು ಶೆಟ್ರು. “ನಿಮಗ್ಗೊತ್ತಿಲ್ವಾ ಶೆಟ್ರೇ, ಹೊಸ ನೋಟು ಬಂದು ಒಂದು ವಾರ ಆಯ್ತಲ್ಲ” ಅಂದ ಹುಚ್ಚೀರ. “ಹಂಗಾ? ಗೊತ್ತಿರ್ಲಿಲ್ಲ, ತೊಗೊ,” ಅಂತ ಹೇಳಿ ಶೆಟ್ಟರು ಒಂದು ಕಡ್ಡಿಪೆಟ್ಟಿಗೆ ಮತ್ತು ಚಿಲ್ಲರೆ ಕೊಟ್ಟರು. ಬಕ್ರ ಬಿತ್ತು ಬಲೆಗೆ ಅಂದುಕೊಂಡು, ಶೆಟ್ಟರು ಕೊಟ್ಟ ಹದಿನಾಲ್ಕು ರುಪಾಯಿ ಚಿಲ್ಲರೆಯನ್ನು ಎಣಿಸಿ ಕೂಡ ನೋಡದೆ ಮನೆಗೆ ಬಂದ ಹುಚ್ಚೀರ. ಜೇಬಿನಿಂದ ಚಿಲ್ಲರೆ ತೆಗೆದು ನೋಡ್ತಾನೆ… ಒಂದು ಎಂಟು ರೂಪಾಯಿ ನೋಟು, ಇನ್ನೊಂದು ಆರು ರೂಪಾಯಿ!! ಹುಚ್ಚೀರನಂತೋರ್ನ ಎಷ್ಟ್ ಜನ ನೋಡಿಲ್ಲ ಶೆಟ್ರು! ಇನ್ನು ಕಡ್ಡಿಪೆಟ್ಟಿಗೆ ಒಂದೇ ಲಾಭ ಅಂತ ತೆರೆದ. ಎಲ್ಲಾ ಗೀಚಿದ ಕಡ್ಡಿಗಳು!!
ಪ್ರಸಂಗ-03
ಭಾಷಣಕೇ – ಸರಿ
ಮಾನ್ಯ ಪ್ರೊಫೆಸರ್ ಪರ್ವತಪ್ಪನವರ ಪರಿಚಯ ವಿರಬೇಕು ನಿಮಗೆ. ಏನಂದ್ರಿ? ಇಲ್ಲ ಅಂದ್ರಾ? ಹಂಗಾದ್ರೆ ನಮ್ಮ ಸಾಹಿತ್ಯ ಸಂಸ್ಕ ತಿಯ ಜನರಲ್ ನಾಲೆಡ್ಜೇ ಇಲ್ಲ ಬಿಡಿ ನಿಮಗೆ. ಪರ್ವತಪ್ಪನೋರು ಅಂದ್ರೆ ನಮ್ಮೂರಿನ ಜನರಿಗೆ ಮಾತ್ರವಲ್ಲ, ಪಶು ಪಕ್ಷಿ ಕ್ರಿಮಿ ಕೀಟಗಳಿಗೆಲ್ಲ ಗೊತ್ತು. ವ್ಯಕ್ತಿತ್ವ ಏನು? ಸಾಧನೆ ಏನು? ವಿದ್ವತ್ ಏನು?ಅದನ್ನೆಲ್ಲ ನೀವು ಅವರಿವರ ಬಾಯಲ್ಲಿ ಕೇಳೋದಲ್ಲ, ಪರ್ವತಪ್ಪನವರ ಬಾಯಲ್ಲೇ ಕೇಳಬೇಕು. ಅವರು ಭಾಷಣಕ್ಕೆ ನಿಂತರೆಂದರೆ ಎಂಥಾ ಸಭೆಯಾದ್ರೂ ಅದುರಿ ಅಲ್ಲಾಡಿ ಬೆದರಿ ಬೆಬ್ಬಳಿಸಿ ಬಿಡೋದು. ಭಾಷಣವಾ ಅದು? ಮುಂಗಾರಿನ ಮಳೆ! ಮಧ್ಯ ಮಧ್ಯ ಅದೆಷ್ಟು ಗುಡುಗು, ಮಿಂಚು, ಸಿಡಿಲು! ಅವರ ಭಾಷಣಕ್ಕೆ ಇಷ್ಟೇ ಟೈಮು ಅಂತಿಲ್ಲ. ಅಷ್ಟಕ್ಕೂ ಅವರ ಭಾಷಣಕ್ಕೆ ಟೈಮ್ ನಿಗದಿಮಾಡುವ ಗಂಡು ನಮ್ಮೂರಿನಲ್ಲಂತೂ ಹುಟ್ಟಿಲ್ಲ. ‘ಪರ್ವತಪ್ಪನವರೆ ನಿಮ್ಮ ಭಾಷಣಕ್ಕೆ ಇಷ್ಟೇ ಟೈಮ್’ ಅಂತ ಯಾರಾದರೂ ಹೇಳಿದರೆ ಅವರ ಟೈಮ್ ಸರಿಯಿಲ್ಲ ಅಷ್ಟೇ. ಯಾರೇ ಆಗಲಿ ಅವರ ಭಾಷಣವನ್ನು ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳುವುದಕ್ಕೇ ಭಯಪಡೋರು. ಅವರಿಗೆ ಯಾವುದೋ ಒಂದು ಸಂಸ್ಥೆಯವರು ಭಾಷಣ ಕೇಸರಿ ಅನ್ನುವ ಬಿರುದನ್ನೂ ಕೊಟ್ಟಿದ್ದರಂತೆ, ಅದೆಲ್ಲೋ ಉತ್ತರ ಭಾರತದಲ್ಲಿ. ಇಲ್ಲಿಂದ ಯಾರೂ ಹೋಗಿರಲಿಲ್ಲ. ಪತ್ರಿಕೆಯಲ್ಲೂ ನೋಡಿರಲಿಲ್ಲ. ಪರ್ವತಪ್ಪನವರೇ ಎಲ್ಲರಿಗೂ ಟಾಮ್ ಟಾಮ್ ಮಾಡಲಾಗಿ ನಮ್ಮ ಕಡೆಗೆಲ್ಲಾ ವಿಷಯ ತಿಳಿದಿತ್ತು. ಆಗಿನಿಂದ ಯಾವುದೇ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಮುದ್ರಣವಾಗಬೇಕಾದರೆ ಹೆಸರಿನ ಹಿಂದೆ ಭಾಷಣ ಕೇಸರಿ ಪ್ರೊಫೆಸರ್ ಪರ್ವತಪ್ಪನವರು ಎಂದೇ ಮುದ್ರಿಸಬೇಕಾಗಿತ್ತು. ಒಂದು ಸಲ ಯಾವುದೋ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರಿನ ಹಿಂದೆ ಭಾಷಣಕೇ – ಸರಿ ಎಂದು ಮುದ್ರಿಸಿ ಬಿಟ್ಟಿದ್ದರು. ಆಗ ಪರ್ವತಪ್ಪನವರು ಸಂಬಂಧಿಸಿದವರನ್ನು ಕರೆದು ಗಾಳಿ ಗ್ರಹಚಾರ ಎಲ್ಲಾ ಬಿಡಿಸಿದ್ದರು. ಒಮ್ಮೆ ನಾನು ಅಚಾನಕ್ಕಾಗಿ ಪರ್ವತಪ್ಪನವರ ಕೈಗೆ, ಅಲ್ಲಲ್ಲ, ಬಾಯಿಗೆ ಸಿಕ್ಕಿ ಹಾಕೊಂಡಿದ್ದೆ. ಆಗಪರ್ವತಪ್ಪನವರು ಸುಮಾರು ಒಂದು ಗಂಟೆ ಕಾಲ ತಮ್ಮ ಪ್ರವರ ಪರಾಕ್ರಮಗಳನ್ನು ಕೊಚ್ಚಿಕೊಂಡರು. “ನಮ್ಮ ರಾಜ್ಯದಲ್ಲಿ ನನ್ನಂಥ ವಿದ್ವಾಂಸ ಯಾವನಿದ್ದಾನಯ್ಯಾ? ನಾನು ಭಾಷಣಕ್ಕೆ ನಿಂತರೆ ಎಂಥ ಜಗಜಟ್ಟಿಗಳು ನಡುಗಿ ಹೋಗ್ತಾರೆ. ನನ್ನೆದುರು ನಿಂತು ಮಾತಾಡುವ ಧೈರ್ಯ ಯಾವ ನಾಯಿಗಿದೆ? ನನ್ನ ವಿದ್ವತ್ತಿನ ಆಳ ಅಗಲ ಎತ್ತರ ಬಿತ್ತರಗಳು ಗೊತ್ತಿಲ್ಲದ ಅವಿವೇಕಿಗಳು ಏನು ಬೇಕಾದರೂಹೇಳಬಹುದು. ಅಂಥವರು ನನ್ನ ಕೈಗೆ ಸಿಕ್ಕಿದರೆ ಕಬ್ಬಿನ ಜಲ್ಲೆ ಥರಾ ಅಗಿದು ಉಗಿದು ಬಿಡ್ತೀನಿ. ನಾಳೆ ಟೌನ್ ಹಾಲ್‌ನಲ್ಲಿ ನನ್ನ ಭಾಷಣ ಇದೆ. ನೀನೂ ಬಾರಯ್ಯ. ಬರದೇ ಹೋದ್ರೆ ನಿನಗೆ ಲಾಸು ಅರ್ಥವಾಯಿತೆ? ತಿಳಕೋ. ನಾನು ಇಲ್ಲಿ ಯಾವ ನಾಯಿಗೂ ಕೇರ್ ಮಾಡಲ್ಲ.” ಅಂದ್ರು. ನಾನು ಕೇಳಿದೆ. “ನಾಳೆ ತಾವು ಯಾವ ವಿಷಯದ ಮೇಲೆ ಭಾಷಣ ಮಾಡುತ್ತೀರಿ ಸರ್?” ಪರ್ವತಪ್ಪನವರು ಹೇಳಿದರು ಭಾಷಣದ ವಿಷಯವೇ ಬಸವಣ್ಣನವರ ವಚನದ ಒಂದು ಸಾಲು ಅಷ್ಟೇ. ನೀನು ಬಂದು ಕೇಳು. ನನ್ನ ಹಾಗೆ ಆ ವಿಷಯವನ್ನು ಮಾತಾಡಬಲ್ಲ ನಾಯಿ ಯಾವುದಿದೆ ನಮ್ಮ ದೇಶದಲ್ಲಿ? ನಿನಗೇ ಅರ್ಥವಾಗುತ್ತೆ.ಮಾರನೇ ದಿನ ಪರ್ವತಪ್ಪನವರ ಭಾಷಣ ಕೇಳಲು ನಾನು ಟೌನ್ ಹಾಲ್‌ಗೆ ಹೋಗಿದ್ದೆ. ಅವರ ಅಂದಿನ ಭಾಷಣದ ವಿಷಯವೇನು ಗೊತ್ತೇ? “ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ”
ಪ್ರಸಂಗ-04
ಬ್ಯಾಟರಿ ಶ್ರೀನಿವಾಸಯ್ಯ ಎಂಬ ಹರಿಶ್ಚಂದ್ರ
ನಿಮಗೆ ಬ್ಯಾಟರಿ ಶ್ರೀನಿವಾಸಯ್ಯ ಗೊತ್ತೋ ಇಲ್ಲವೋ. ಆದರೆ ತಾನು ಎಲ್ಲರಿಗೂ ಗೊತ್ತು ಅಂತ ಅವರು ಅಂದುಕೊಂಡಿದ್ದಾರೆ. ಊರಲ್ಲಿ ದಿನಾ ಬೆಳಗಾಗ್ತಾ ಇದೆಯಲ್ಲ, ಕಾಲಕಾಲಕ್ಕೆ ಮಳೆಯಾಗ್ತಾ ಇದೆಯಲ್ಲ, ಅದು ತಮ್ಮಂಥ ಪುಣ್ಯಾತ್ಮರು ಇರೋದರಿಂದಲೇ ಅಂತ ಅವರೇ ಹೇಳುತ್ತಾರೆ. ಹೇಳಲಿ ಬಿಡಿ. ಅವರಿಗೂ ವಾಕ್ ಸ್ವಾತಂತ್ರ್ಯ ಇದೆ ಅಲ್ವಾ? ಬ್ಯಾಟರಿ ಶ್ರೀನಿವಾಸಯ್ಯನವರು ರಾಜಕೀಯಕ್ಕೆ ಬಂದದ್ದು ಜನರನ್ನು ಉದ್ಧಾರ ಮಾಡುವುದಕ್ಕೇ ಪರಂತು ತಮ್ಮ ಸ್ವಾರ್ಥಕ್ಕಲ್ಲ. ಹಾಗಂತ ಅವರು ಹಲವಾರು ಭಾಷಣಗಳಲ್ಲಿ ಘಂಟಾಘೋಷವಾಗಿ ಹೇಳಿದ್ದಾರೆ. ಅವರ ಮಾತನ್ನು ನಾವು ನಂಬಬೇಕು. ಯಾಕೆಂದರೆ ಹಾಗೆ ಹೇಳುವ ಎಷ್ಟೋ ಜನನಾಯಕರ ಮಾತುಗಳನ್ನು ನಾವು ನಂಬುತ್ತೇವಲ್ಲ, ಅಷ್ಟು ಜನರನ್ನೇ ನಂಬಿರುವ ನಮಗೆ ಇನ್ನೊಬ್ಬರನ್ನು ನಂಬಿದರೆ ಜಾಸ್ತಿ ಆಗಿಬಿಡುತ್ತಾ? ಶ್ರೀನಿವಾಸಯ್ಯ ಬಹಳ ಸಲ ಎಮ್ಮೆಲ್ಲೆ ಚುನಾವಣೆಗೆ ನಿಂತು ಸೋತಿದ್ದಾರೆ. ಸೋತಾಗೆಲ್ಲ ಅವರು ಹೇಳುವುದು ಒಂದೇ ಮಾತು- “ಒಳ್ಳೆಯವರಿಗೆ ಇದು ಕಾಲವಲ್ಲ”. ಆದರೂ ಶ್ರೀನಿವಾಸಯ್ಯ ಚುನಾವಣೆಗೆ ನಿಲ್ಲುತ್ತಲೇ ಇರುತ್ತಾರೆ. ಒಳ್ಳೆಯವರಿಗೆ ಕಾಲ ಬರುತ್ತದೆ ಎಂಬ ಒಂದೇ ವಿಶ್ವಾಸದಿಂದ.
ವಾಚಕರೇ, ನನಗೆ ಗೊತ್ತು ಬಹಳ ಹೊತ್ತಿನಿಂದ ನೀವು ಒಂದು ಪ್ರಶ್ನೆ ಕೇಳಬೇಕೆಂದು ಕೊಂಡಿದ್ದೀರಿ. ಅದೇನೆಂದರೆ ಈ ಶ್ರೀನಿವಾಸಯ್ಯ ಎಂಬ ಹೆಸರಿನ ಹಿಂದೆ ಬ್ಯಾಟರಿ ಅನ್ನುವುದು ಯಾಕೆ ಬಂತು? ಅಂತ. ಏನಿಲ್ಲ,ಈಗ ಬ್ಯಾಟರಿ ಶ್ರೀನಿವಾಸಯ್ಯ ಅಂತ ಕರೆಸಿಕೊಳ್ಳುತ್ತಿರುವ ಈ ವ್ಯಕ್ತಿ ೪೦ ವರ್ಷಗಳ ಹಿಂದೆ ಬ್ಯಾಟರಿ ಸೀನ ಆಗಿದ್ದ. ಆಗ ಕಾರುಗಳಲ್ಲಿ ಬ್ಯಾಟರಿ ಕದ್ದು ಮಾರುವುದು ಇವನ ಉದ್ಯೋಗ. ಆದರೆ ಕಳ್ಳ ಸಂತನಾಗಬಾರದೆಂದು ನಿಯಮ ಇದೆಯೇ? ಎಳೆಗರು ಎತ್ತಾಗುವುದಿಲ್ಲವೇ? ಈ ಬ್ಯಾಟರಿ ಸೀನನೇ ಕಾಲಾಂತರದಲ್ಲಿ ಅದು ಹೇಗೋ ದುಡ್ಡು ಮಾಡಿ ಬ್ಯಾಟರಿ ಶ್ರೀನಿವಾಸಯ್ಯನೋರು ಆಗ್ಬಿಟ್ಟರು. ಇರ್ಲಿ ಬಿಡಿ, ಮಾಡಿದವರ ಪಾಪ ಆಡಿದವರ ಬಾಯಲ್ಲಿ. ಅದೆಲ್ಲ ನಮಗ್ಯಾಕೆ? ನಮಗ್ಯಾಕೆ ಅಂತ ನಾವೇನೋ ಸುಮ್ಮನಾಗ್ತೀವಿ. ಆದರೆ ಮಾಧ್ಯಮದವರು ಸುಮ್ಮನಿರುತ್ತಾರಾ? ಯಾಕಂದ್ರೆ ಅವರ ಯಾಪಾರ ನಡೀಬಾರದಾ?
ಇನ್ನೊಂದು ಚುನಾವಣೆ ಹತ್ತಿರ ಬಂತು. ಆಗ ಒಂದು ಪತ್ರಿಕೆ ಶ್ರೀನಿವಾಸಯ್ಯನ ಬಗ್ಗೆ ಏನೇನೋ ಬರೆಯೋದಕ್ಕೆ ಶುರು ಮಾಡಿತು.ಆಗ ಶ್ರೀನಿವಾಸಯ್ಯನ ಚೇಲ ಒಬ್ಬ ಹೇಳಿದ, “ಅಣ್ಣೋ, ಆ ಪೇಪರ್ ನವರು ನಿನ್ನ ಬಗ್ಗೆ ಏನೇನೋ ಸುಳ್ಳು ಸುಳ್ಳು ಬರಿತಾ ಅವರೆ. ನೀನು ಸುಮ್ಕೆ ಕುಂತ್ರೆ ಯಂಗೆ ನಿನ್ನ ಲಾಯರ್ಗೆ ಹೇಳಿ ಒಂದು ನೋಟಿಸೋ ಪಾಟೀಸೋ ಕೊಡ್ಸ್ ಬಾರದ ?” ಚೇಲ ಹಾಗಂದಾಗ ಶ್ರೀನಿವಾಸಯ್ಯ ಹೇಳಿದ, “ಲೇಯ್, ಸುಮ್ಕಿರೋ, ಅವರು ನನ್ನ ಬಗ್ಗೆ ಸುಳ್ಳು ಎಷ್ಟಾನ ಬರ್ಕಳ್ಳಿ. ಸತ್ಯ ಬರದ್ರೆ ತಾನೇ ಕಷ್ಟ?’