ರಾಜಕಾರಣಿಗಳು ಕೊನೆಗೂ ಕೇಳಿಕೊಳ್ಳಬೇಕಿರುವುದು ನೀವು ಯಾರೋ ಒಬ್ಬರ ಬದುಕು ಚಂದವಾಗಲು ಕಾರಣವಾದಿರಾ ಎಂಬ ಪ್ರಶ್ನೆ ಮಾತ್ರವೇ. ಅದೊಂದೇ ಸತ್ಯ. ಉಳಿದದ್ದೆಲ್ಲ ಬರೀ ಗೌಜು ಗದ್ದಲ. ಮತದಾನ ಯಂತ್ರ. ವಿವಿ ಪ್ಯಾಟ್ ಚೀಟಿಗಳು, ವೋಟಿಂಗ್ ಬೂತು, ಏಜೆಂಟರು, ನೀತಿ ಸಂಹಿತೆ ಇತ್ಯಾದಿಗಳು ಕೇವಲ ಇತ್ಯಾದಿಗಳು ಅಷ್ಟೇ.
ಗೆದ್ದು ಸೋಲುವ ಆಟಕ್ಕೆ ಚುನಾವಣೆ ಎಂಬ ನಾಮಧೇಯ!
- ಪ್ರೀತಿ ನಾಗರಾಜ
ಹಬ್ಬಗಳು, ಮದುವೆಗಳು, ಚುನಾವಣೆಗಳು, ಭ್ರಷ್ಟಾಚಾರ, ಹಳ್ಳಿಗಳ ನಗರೀಕರಣ ಮತ್ತು ನಗರಗಳ ಹಳ್ಳೀಕರಣ, ಜೊತೆಗೆ ವಿನಾಕಾರಣ ಏರುವ ಜನಸಂಖ್ಯೆ. ಭಾರತದಂತಹ ದೇಶದಲ್ಲಿ ತಲೆಯ ಮೇಲೆ ತಲೆ ಬಿದ್ದರೂ ಈ ಮೇಲಿನ ಯಾವ ಪ್ರಕ್ರಿಯೆಗಳೂ ನಿಲ್ಲುವುದೇ ಇಲ್ಲ. ಉಸಿರು ತೆಗೆದುಕೊಳ್ಳಲೂ ಬಿಡದೆ ಸಾಯಿಸಿದ ಕೋವಿಡ್‌ನಂತಹ ದುರ್ಬರ ಕಾಲದಲ್ಲೂ ದೇಶ ಹೀಗೆ ಇರುವುದನ್ನು ಕಂಡಿದ್ದೇವೆ. ಮೊನ್ನೆ ನಡೆದ ಪಂಚ ರಾಜ್ಯಗಳ ಚುನಾವಣೆ ಹಾಗೂ ಅವುಗಳ ಫಲಿತಾಂಶಗಳು – ನಮ್ಮ ಮುಂದಿವೆ, ಈ ಲೇಖನ ಬರೆ ಯುವ ಕಾಲಕ್ಕೆ ಕಾಂಗ್ರೆಸ್ ತನ್ನದೇ ನೇತೃತ್ವದ ಯುಡಿಎಫ್ ಅನ್ನು ಕೇರಳದಲ್ಲಿ ಗೆಲ್ಲಿಸಿಕೊಂಡು, ದೇಶದಲ್ಲಿ ಇದ್ದ ಕೊನೆಯ ಎಡರಂಗದ ಸರ್ಕಾರವನ್ನು ಅಧಿಕಾರದಿಂದ ಇಳಿಸಿ ಇತ್ತ ತಮಿಳುನಾಡಿನಲ್ಲಿ ನಾಯಕ ನಟ ವಿಜಯ್ ನೇತೃತ್ವದ ಟಿವಿಕೆ ಪಾರ್ಟಿಯನ್ನು ಬೆಂಬಲಿಸಿ ಸರಕಾರದ ಭಾಗವಾಗಲು ತಯಾರಾಗಿದೆ ಎಂಬ ಸುದ್ದಿ ಇದೆ. ಇದರ ಸತ್ಯಾಸತ್ಯತೆ ಮತ್ತು ಸಾಧ್ಯತೆಗಳ ಪರಿಣಾಮ ಮುಂದೆ ಏನಾ ಗುತ್ತದೋ ತಿಳಿಯದು. ಅತ್ತ ‘ಭದ್ರಲೋಕ’ (ಘನ ಚಿಂತಕ ರಿಗೆ ಈ ಪದ ಅಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತದೆ) ಬಂಗಾಳದಲ್ಲಿ ಮಮತಾ ದೀದಿ ಮನೆಯ ಹಾದಿ ಹಿಡಿದಿದ್ದಾರೆ.
ಈ ಸ್ಥಿತ್ಯಂತರಗಳಿಗೆ ಕಾರಣಗಳೇನೇ ಇರಲಿ, ರಾಜಕೀಯ ಮಗ್ಗುಲು ಬದಲಾಯಿಸುತ್ತಿರುವುದು ನಮ್ಮ ದೇಶಕ್ಕೆ ಮಾತ್ರ ಸೀಮಿತವಲ್ಲ. ಎಲ್ಲಾ ಕಾಲಘಟ್ಟಗಳಲ್ಲಿ ಸಿದ್ಧಾಂತಗಳನ್ನು ಮೀರಿ, ಹಲವು ದೇಶಗಳಲ್ಲಿ ರಾಜಕೀಯ ಧೋರಣೆಗಳು ಹಾಗೂ ನಂಬಿಕೆಗಳು ವೇಗವಾಗಿ ಬದಲಾಗುತ್ತಿವೆ. ನಮ್ಮ ಮನದೊಳಗಿನ ಮಾತುಗಳನ್ನು ವೇಗವಾಗಿ ವಿಕಸನಗೊಳ್ಳುತ್ತಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಸಮರ್ಥವಾಗಿ ಹಿಡಿದುಬಿಡುತ್ತಿರುವಾಗ ‘ನಮ್ಮದು’ ಎನ್ನುವ ಆಲೋಚನೆಗಳು ಒಂದು ಡೇಟಾ ಸೆಟ್ ಮಾತ್ರ ಎನ್ನಿಸಿಕೊಂಡುಬಿಡುತ್ತಿವೆ.
ಮೊನ್ನೆ ನಮ್ಮ ರಾಜ್ಯದ ಉಪಚುನಾವಣೆಯ ಫಲಿತಾಂಶ ಹಾಗೂ ಅತ್ತ ಐದು ರಾಜ್ಯಗಳಲ್ಲಿ ನಡೆದ ಚುನಾವಣೆಗಳ ಫಲಿತಾಂಶಗಳನ್ನು ಸೇರಿಸಿ ಇದು ‘ರಾಷ್ಟ್ರೀಯ ಟ್ರೆಂಡ್’ ಎಂದು ನಿರ್ದಿಷ್ಟವಾಗಿ ತೋರಲು ಯಾವ ವಿಶ್ಲೇಷಕರಿಂದಲೂ ಆಗಲಿಲ್ಲ – ಎಲ್ಲರೂ ಪ್ರಯತ್ನಪಟ್ಟರು, ಆದರೆ ಕೆಲವೇ ಕೆಲವರು ಮಾತ್ರ ಸರಿಯಾದ ವಿಶ್ಲೇಷಣೆ ಮಾಡಿದರು.
ಒಂದು – ಫೆಡರಲ್ ವ್ಯವಸ್ಥೆಯೊಳಗೆ ಪ್ರಾದೇಶಿಕ ಆಶೋತ್ತರಗಳನ್ನು ಹತ್ತಿಕ್ಕುವ ಯಾವ ಪ್ರಯತ್ನವೂ ತಿರುಗು ಬಾಣ ಆಗುತ್ತದೆ. ದಕ್ಷಿಣದ ರಾಜ್ಯಗಳು ಇದನ್ನು ಬಿಜೆಪಿಗೆ ಮತ್ತೆ ಮತ್ತೆ ತೋರಿಸಿಕೊಡುತ್ತಿವೆ. ಎರಡು – ಕಾಂಗ್ರೆಸ್ ಹೈಕಮಾಂಡ್ ತನ್ನ ಐತಿಹಾಸಿಕ ಹಿತ್ತಾಳೆ ಕಿವಿಯ ತಪ್ಪನ್ನು ಮತ್ತೆ ಮತ್ತೆ ಎಸಗುತ್ತಿದೆ. ನೆಲಕ್ಕೆ ಕಿವಿಯಿಟ್ಟು ಬೇರಿನ ದನಿ ಕೇಳುವ ಸಾಮರ್ಥ್ಯ ಬೆಳೆಸಿಕೊಳ್ಳದಿದ್ದರೆ, ಗೆಲುವು ಕೇವಲ ‘ಆಕಸ್ಮಿಕ’ ಎನ್ನಿಸಿಕೊಂಡೇ ಉಳಿಯುತ್ತದೆ. ಮೂರು – ಸಾಂಪ್ರದಾಯಿಕ ಪಕ್ಷಗಳು ಎಳೆಯ ಮತದಾರರ ಆಶೋತ್ತರಗಳಿಗೆ ಅಪ್ರಸ್ತುತವಾಗತೊಡಗಿದಾಗ, ವಿಜಯ್ ರಂತಹ ಪರ್ಯಾಯಗಳು ಹುಟ್ಟಿಕೊಳ್ಳುತ್ತವೆ.
ಭಾರತದ ಮತದಾರರು ರಾಜ್ಯವಾರು ಲೆಕ್ಕ ಹಾಕುತ್ತಾರೆ. ಅವರ ತರ್ಕ ತೀರಾ ಸರಳ – “ನೀವು ನನಗೇನು ಕೊಟ್ಟಿರಿ? ” ಉತ್ತರ ಕೊಟ್ಟವರು ಗೆದ್ದರು, ಭಾಷಣ ಕೊಟ್ಟವರು ಸೋತರು. ಪ್ರಜಾಪ್ರಭುತ್ವ ಎಂದರೆ ಐದು ವರ್ಷಕ್ಕೊಮ್ಮೆ ಮತದಾರರು ರಾಜಕೀಯ ಪ್ರತಿನಿಧಿಗಳಿಗೆ ಕನ್ನಡಿ ಹಿಡಿಯುತ್ತಾರೆ – ತಮ್ಮ ಮುಖ ನೋಡಿಕೊಳ್ಳಲಾಗದ ರಾಜಕಾರಣಿಗಳಿಗೆ ಆ ಕನ್ನಡಿಯೇ ಭಯ ತರಿಸುತ್ತದೆ. ಆ ಭಯ ಉಳಿದಿರುವವರೆಗೆ, ಪ್ರಜಾಪ್ರಭುತ್ವ ಉಳಿದಿದೆ ಎಂದು ತಿಳಿಯಬೇಕಿದೆ.
ಹೆಚ್ಚಿನಂಶ ಜನ ಕೇವಲ ಸಿದ್ಧಾಂತಕ್ಕಾಗಿ ಮತ ಹಾಕುವುದಿಲ್ಲ. ರಾಜಕೀಯ ವ್ಯವಸ್ಥೆ ಎನ್ನುವ ಆ ದೊಡ್ಡ ಬಂಗಲೆಯಲ್ಲಿ ಇರುವ ಯಾರೋ ಒಬ್ಬರಿಗೆ ಅಥವಾ ಆ ಒಬ್ಬರ ದೂರದ ಪರಿಚಯದವರಿಗೆ ತನ್ನ ಹೆಸರು ಗೊತ್ತಿದೆ ಎಂಬ ಭಾವನೆಗಾಗಿ ಮತ ಹಾಕುತ್ತಾರೆ. ಅದರಲ್ಲಿ ಒಂದು ಬಗೆಯ ಆಪ್ತತೆ ಅಥವಾ ತನ್ನ ಸಾಮಾನ್ಯ ಇರವನ್ನು ಮೀರುವ ‘ಪವರ್’ ಕಾಣುತ್ತಾರೆ.
ಇದು ಸದಾ ಹೀಗೆ ಇರಬೇಕು ಅಂತೇನಿಲ್ಲ. ಆದರೆ ರಾಜಕೀಯ ಎನ್ನುವುದು ‘ಪರಿಚಿತ’ ಭಾವದ ಮೇಲೆ ನಡೆಯುವ ವ್ಯವಹಾರ ಎನ್ನುವುದು ಸರ್ವವಿದಿತ ಸತ್ಯ. ಇಲ್ಲಿಯವರೆಗೆ ಸಂಭವಿಸಿದ ಪ್ರತಿಯೊಂದು ರಾಜಕೀಯ ಬದಲಾವಣೆಯ ಬೇರು ಹುಡುಕಿದರೆ – ಉರುಳಿದ ಸರ್ಕಾರ, ಮೇಲೆದ್ದ ಹೊಸ ಮುಖ, ವಿಶ್ಲೇಷಕರು ವಾರಗಟ್ಟಲೇ ವಿವರಿಸುವ ಅಲೆ – ಎಲ್ಲದರ ತಳದಲ್ಲಿ ಒಂದೇ ಒಂದು ಸರಳ ಮಾನವೀಯ ಅನುಭವ ಕಾಣಿಸುತ್ತದೆ: ಕಾಣದೇ ಹೋದ ನೋವು. ದೊಡ್ಡ ದೌರ್ಜನ್ಯ ಅಲ್ಲ, ಐತಿಹಾಸಿಕ ಅನ್ಯಾಯ ಅಲ್ಲ – ತೀರಾ ಮೆಲ್ಲಗೆ ನಡೆದ ಅನ್ಯಾಯ ಇದು. ಅವರಿಗೆ ನಿರಂತರವಾಗಿ ಕತ್ತಲಿನಲ್ಲಿ ನಿಂತು ಅಗೋಚರರಾಗಿಯೇ ಉಳಿದ ಸಂಕಟ. ಕೈಗೆ ಬಾರದ ರೇಶನ್ ಕಾರ್ಡು, ಸರ್ಕಾರಿ ಕಚೇರಿಯಲ್ಲಿ ಆಗದ ಕೆಲಸಗಳು, ಬಾರದ ನೀರು, ಕರೆಂಟು. ಊರಿಗೆ ಮೂರು ಕಿಲೋಮೀಟರ್ ಆಚೆಯೇ ನಿಂತ ಕೆಟ್ಟ ರಸ್ತೆ. ಫಲಕ ಇದ್ದು ವೈದ್ಯರಿಲ್ಲದ ಆಸ್ಪತ್ರೆ. ಬರೀ ಹೆಸರು ಚೆನ್ನಾಗಿದ್ದು ಮನೆಯ ತನಕ ತಲುಪದ ಯೋಜನೆ.
ನೆನಪಿಡಿ. ಸಾಮಾನ್ಯವಾಗಿ ಜನ ಮತಗಟ್ಟೆಗೆ ಹೋಗುವುದು ತೀರಾ ಕೋಪದಿಂದ ಅಲ್ಲ. ಬಹುತೇಕ ಸುಸ್ತಿನಿಂದಲೇ ಅಲ್ಲಿಯ ತನಕ ನಡೆಯುತ್ತಾರೆ. ಇದರಲ್ಲಿ ಸಾಮಾನ್ಯ ವ್ಯತ್ಯಾಸ ಒಂದಿದೆ. ಕೋಪಕ್ಕೆ ಗಟ್ಟಿ ಧ್ವನಿ ಇದೆ. ಅದು ಮಾತಾಡುತ್ತದೆ, ಬೇಡಿಕೆ ಇಡುತ್ತದೆ. ಆದರೆ ಸುಸ್ತು ಹಾಗಲ್ಲ. ಅದು ಸುಮ್ಮನೆ ಸಾಕು ಎನ್ನಿಸಿಬಿಡುತ್ತದೆ.
ರಾಜಕೀಯ ಪಕ್ಷಗಳಿಗೆ ಎಂದಿಗೂ ಸರಿಯಾಗಿ ಅರ್ಥವಾಗದ ಸಂಗತಿ ಒಂದಿದೆ – ಮತದಾರರು ನೀತಿಗಳನ್ನು ಅಳೆಯುವುದಿಲ್ಲ. ತಮ್ಮ ಪ್ರತಿನಿಧಿಗಳ ಒಟ್ಟಾರೆ ಗಮನ ವನ್ನು ಅಳೆಯುತ್ತಾರೆ. ಅಂದರೆ ಅವರು ನನ್ನನ್ನು ನೋಡಿ ದರಾ? ಚುನಾವಣೆ ಇಲ್ಲದ ದಿನ ಬಂದರಾ? ಕಂಡು ಕೇಳಿದರಾ? ನಾನು ಕಚೇರಿಗೆ ಹೋದರೆ ನನ್ನ ಕೆಲಸ ಆಗಬಹುದಾ? ಅಥವಾ ನನ್ನನ್ನು ನಿಕೃಷ್ಟವಾಗಿ ಕಂಡರಾ? ದೊಡ್ಡವರ ಜನ ನನ್ನ ಮನೆಯಲ್ಲಿ ಕೂತು ನೀರು ಕುಡಿದು, ಅದಕ್ಕೆ ಪ್ರತಿಯಾಗಿ ಹೆಚ್ಚು ಏನನ್ನೂ ಡಿಮಾಂಡ್ ಮಾಡದೆ ಹೇಗಿದ್ದೀರಿ ಎಂದು ಭುಜ ಮುಟ್ಟಿ ಕೇಳಿದ್ದಾರಾ? ಹಾಗೆ ಮಾಡಿದ ನಾಯಕ/ರು – ಯಾವ ಪಕ್ಷವಾದರೂ, ಯಾವ ಸಿದ್ಧಾಂತವಾದರೂ ಸರಿಯೇ ಗೆಲ್ಲುತ್ತಾರೆ. ಡೋಲು ಬಡಿದಾಗ ಮಾತ್ರ ಬರುವವನು ಕೊನೆಗೆ ಸೋಲುತ್ತಾನೆ. ಮತ್ತೆ ಅವರಿಗೆ ಮತದಾರರು ತನ್ನ ಸ್ವಾಟೆಗೆ ಯಾಕೆ ತಿವಿದರು ಎನ್ನುವುದು ಕೂಡ ಅರ್ಥ ಆಗದೇ ಹೋಗುತ್ತದೆ.
ರಾಜಕೀಯ ಬದಲಾವಣೆಗಳು ಜನ ಆಡಳಿತ ತತ್ವ ಶಾಸ್ತ್ರದ ಬಗ್ಗೆ ಅಭಿಪ್ರಾಯ ಬದಲಿಸಿದ್ದರಿಂದ ಆಗುವುದಿಲ್ಲ. ಕಟ್ಟಿಕೊಂಡ ವಿಶ್ವಾಸ ನಿಧಾನವಾಗಿ ಇಷ್ಟಿಷ್ಟೇ ಮುರಿಯು ವುದರಿಂದ ಆಗುತ್ತವೆ. ಹದಿನೈದು ವರ್ಷಗಳ ನಂಬಿಕೆ ಒಂದು ಕೆಟ್ಟ ಮಳೆಗಾಲದಲ್ಲಿ ಕೊಚ್ಚಿ ಹೋಗುತ್ತದೆ. ಮನೆ ಕುಸಿದಾಗ, ಒಂದು ಭರವಸೆ ತುಂಡಾದಾಗ ಉಂಟಾಗುವ ಅಸಹಾಯಕತೆಗೆ ಬಹು ದೊಡ್ಡ ಶಕ್ತಿ ಇದೆ. ಅಂತೆಯೇ ಅಧಿಕಾರದಲ್ಲಿರುವ ವ್ಯಕ್ತಿ ಒಂದೇ ಒಂದು ಕ್ಷಣ ಮಾತಿಲ್ಲದೆ ಬಂದು ನಿಂತು ಕೆಲಸ ಮಾಡಿ ತನ್ನ ಜನರ ಕಷ್ಟ ತನ್ನದೂ ಹೌದು ಎಂದು ತೋರಿಸಿದಾಗ ಆ ಸಿಟ್ಟು ತಕ್ಷಣ ಕರಗಿಹೋಗಬಲ್ಲದು.
ನೆನಪಿರಲಿ. ಮತದಾರರ ಕೈಲಿ ಪತ್ರಿಕಾಗೋಷ್ಠಿ ನಡೆಸುವ ತಾಕತ್ತು ಇಲ್ಲ. ಅವರ ಬಳಿ ಮೈಕ್ ಇಲ್ಲ. ಯಾವುದೇ ವೇದಿಕೆ ಇಲ್ಲ. ಆದರೆ ಸಾಮಾಜಿಕ ಜಾಲತಾಣ ಇದೆ. ಜೊತೆಗೆ ಒಂದೇ ಒಂದು ಉತ್ತರದ ದೊಡ್ಡ ಅಸ್ತ್ರ ಇದೆ. ಅವರು ಕಾಯುತ್ತಾರೆ. ನೆನಪಿಟ್ಟುಕೊಳ್ಳುತ್ತಾರೆ. ಮತ್ತೆ ಸಂದರ್ಭ ಬಂದಾಗ ಆ ಅಸ್ತ್ರವನ್ನು ಸಮರ್ಥವಾಗಿ ಬಳಸುತ್ತಾರೆ.
ಇಲ್ಲಿ ನಾವು ಕಾಣಲೇಬೇಕಾದ ಒಂದು ಆಳವಾದ ಮಾನವೀಯ ಸತ್ಯ ಇದೆ – ಹೊಸ ಸರ್ಕಾರ ಸಾಮಾನ್ಯ ವಾಗಿ ಹಳೆಯದಕ್ಕಿಂತ ಹೆಚ್ಚು ಉತ್ತಮವಾಗಿರುವುದಿಲ್ಲ. ಆದರೆ ಹೊಸ ಸರ್ಕಾರ ಹೊಸ ಭರವಸೆ ಹೊತ್ತು ಬರು ತ್ತದೆ, ಆದರೆ ಹಳೆಯ ಸ್ವಭಾವ ಹಿಡಿದೇ ಬರುತ್ತದೆ. ಅಧಿಕಾರದ ಯಂತ್ರಕ್ಕೆ ತನ್ನದೇ ಗುರುತ್ವ ಇದೆ. ಎಲ್ಲರನ್ನೂ ಅದೇ ಅಭ್ಯಾಸ, ಅದೇ ಅಂತರ, ಅದೇ ಆರಾಮದ ಅಗೋಚರತೆಯೆಡೆಗೆ ಎಳೆಯುತ್ತದೆ. ಮತ್ತೆ ಆ ಚಕ್ರ ತಿರುಗತೊಡಗುತ್ತದೆ. ಇದು ಜನ ಮುಗ್ಧರಾಗಿದ್ದಾರೆ ಎಂಬ ಕಾರಣಕ್ಕಲ್ಲ, ಬದಲಿಗೆ ನಿರೀಕ್ಷೆ ಮಾಡುವುದು ಬಿಟ್ಟರೆ ಪರ್ಯಾಯ ಇಲ್ಲ. ನಿರೀಕ್ಷೆ ಇರಲೇಬೇಕು. ಚುನಾವಣೆ ಗಳ ನಡುವಿನ ಐದು ವರ್ಷದ ಕಾಯುವಿಕೆಯಲ್ಲಿ ಮುಂದಕ್ಕೆ ನಡೆಸುವುದು ಅದೇ ಆಸರೆಯ ಭರವಸೆ.
ರಾಜಕೀಯ ಬದಲಾವಣೆಗಳಲ್ಲಿ ಯಾರೂ ಹೆಚ್ಚು ಚರ್ಚಿಸದ ಒಂದು ದುಃಖ ಇದೆ. ನಾಯಕರಲ್ಲಿ ನಿಜವಾಗಿ ನಂಬಿಕೆ ಇಟ್ಟ ಜನರಿಗೆ ಅಂದರೆ ಒಬ್ಬ ನಾಯಕರಲ್ಲಿ ಪ್ರಾಮಾಣಿಕವಾಗಿ ನಂಬಿಕೆ ಇಟ್ಟವರಿಗೆ ಸೋಲು ಕೇವಲ ಚುನಾವಣಾ ಅಂಕಿಸಂಖ್ಯೆಯಲ್ಲ. ಅದು ತೀರಾ ವೈಯಕ್ತಿಕ ಆಘಾತವಾಗಿ ಪರಿಣಮಿಸುತ್ತದೆ. ಅದು ನಂಬಿಕೆ ದ್ರೋಹ. ಅಥವಾ ತಾವು ಹೂಡಿದ್ದು ಲಾಸ್ ಆಯಿತು ಅಥವಾ ಹೆಚ್ಚು ಬೆಳೆಯದೇ ಹೋಯ್ತು ಅಥವಾ ತಿರಸ್ಕ ತ ವಾಯಿತು ಎಂಬ ನೋವು ಸಣ್ಣದಲ್ಲ.
ಗೆದ್ದ ಕಡೆ ಒಂದು ಅಪಾಯಕಾರಿ ಉತ್ಸಾಹ ಇರುತ್ತದೆ, ಇದು ರಾಜರ ಕಾಲದಿಂದ ಹಿಡಿದು ಇಲ್ಲಿಯವರೆಗೂ ಕಾಣುತ್ತಿರುವ ಅತೀ ‘ಸಾಮಾನ್ಯ’ ಟ್ರೆಂಡ್. ಮತದಾರರು ತಮ್ಮ ಪರವಾಗಿ ನೀಡಿದ ಆದೇಶ ತಮ್ಮ ಸದ್ಗುಣದ ಪ್ರಮಾಣಪತ್ರ ಎಂಬ ಭ್ರಮೆ ರಾಜಕಾರಣಿಗಳಿಗೆ ಇರುತ್ತದೆ. ಆದರೆ ಇಲ್ಲಿರುವುದು ಸದ್ಗುಣ ಅಥವಾ ದುರ್ಗುಣದ ಪ್ರಶ್ನೆಯೇ ಅಲ್ಲ. ಅದು ಮನುಷ್ಯ ಮಾತ್ರರಿಗೆ ಅಪ್ರಸ್ತುತ.
n.preethi@gmail.com
ಬಂಗಾಳದ ದಿಗ್ವಿಜಯ – ಮೂಲವನ್ನು ಮತ್ತೆ ಜೈಸಿದ ಹಿಂದುತ್ವ
- ಸುರೇಶ್ ಕಂಜರ್ಪಣೆ
ಪಶ್ಚಿಮ ಬಂಗಾಳದಲ್ಲಿ ಭಾಜಪ ಗೆದ್ದಿದೆ. ದೀದಿ ಸೋತಿದ್ದಾರೆ. ಭಾಜಪ ಈ ಚುನಾವಣೆಯಲ್ಲಿ ಗೆಲ್ಲಲು ಬಳಸಿದ ಅಸಾಂವಿಧಾನಿಕ ತಂತ್ರಗಳ ಬಗ್ಗೆ ಪ್ರಾಜ್ಞರ ನಿಲುವು ಬಹುತೇಕ ಏಕರೂಪದ್ದಾಗಿದೆ. ಎಸ್. ಐ. ಆರ್ ಎಂಬ ಅಸಾಂವಿಧಾನಿಕ ನಡೆಯ ಮೂಲಕ ಆಯ್ದ ಕ್ಷೇತ್ರಗಳ ಮತದಾರರನ್ನು ಅಳಿಸಿ ಚುನಾವಣೆ ಗೆದ್ದಿದೆ. ಇರಲಿ.
ಬಂಗಾಳ ವಸಾಹತುಶಾಹಿ ಆಡಳಿತದಲ್ಲಿ ಕೀಳರಿಮೆಯಿಂದ ಒದ್ದಾಡುತ್ತಿದ್ದಾಗ ದೇಬೇಂದ್ರನಾಥ ಟಾಗೋರ್ ಅವರು ಹಿಂದೂ ನೆಲೆಗಟ್ಟು ಶಿಥಿಲವಾಗುತ್ತಿದೆ ಎಂದು ೧೮೬೭ರಲ್ಲಿ ಹಿಂದೂ ಮೇಳ ಸಂಘಟಿಸಿದರು. ಇದೇ ವೇಳೆಗೆ ಬಂಕಿಮಚಂದ್ರ ಅವರು ಆನಂದಮಠ ಕಾದಂಬರಿ ಬರೆದರು. ಇದರ ಮೊದಲ ಆವೃತ್ತಿಯಲ್ಲಿ ಶತ್ರು “ಗೋರಾ” ಅಂದರೆ ಬ್ರಿಟಿಷ್ ಆಗಿದ್ದರೆ ತದನಂತರದ ಆವೃತ್ತಿಗಳಲ್ಲಿ ಅದು ತಣ್ಣಗೆ “ನೇರೆ” ಮತ್ತು “ಜಬೋನ್”( ಯವನ) ಎಂದು ಬದಲಾಯಿತು. ಈ ನೇರೆ ಮತ್ತು ಜಬೋನ್ ಎಂಬ ಪದಗಳು ಬಂಗಾಲದ ಹಿಂದೂಗಳು ಮುಸ್ಲಿಮರನ್ನು ಗುರುತಿಸುತ್ತಿದ್ದ ಪದಗಳು. ಬ್ರಿಟಿಷ್ ಕೆಂಗಣ್ಣಿಗೆ ಬೀಳುವುದನ್ನು ತಪ್ಪಿಸಲು ಬಂಕಿಮ್ ಈ ಬದಲಾವಣೆ ಮಾಡಿದರು ಎನ್ನುತ್ತಾರೆ ಇತಿಹಾಸಕಾರರು. ಇದರೊಂದಿಗೆ ಕಾದಂಬರಿ ಪ್ರಕಾರ ನೀಡುವ ಸ್ವೇಚ್ಛಾ ಕಲ್ಪನೆಯನ್ನು ಬಳಸಿ ಬಂಕಿಮ್ ಅವರು ತಮ್ಮ ಪಾತ್ರವೊಂದರ ಬಾಯಿಯಲ್ಲಿ, “ಈ ಮುಸ್ಲಿಂ ದುರುಳರಿಂದಾಗಿ ನಮ್ಮ ಮನೆ ಮಠ ಮಾತ್ರವಲ್ಲ ನಮ್ಮ ಧರ್ಮವೂ ಅಪಾಯದಲ್ಲಿದೆ. ಈ ದುರುಳರನ್ನು ಓಡಿಸದೇ ನಾವು ನಮ್ಮ ಧರ್ಮವನ್ನು ಉಳಿಸಿಕೊಳ್ಳುವುದು ಹೇಗೆ ಸಾಧ್ಯ? ” ಎಂದು ಹೇಳಿಸುತ್ತಾರೆ.
“ಬರಗಾಲವೆಂಬುದು ನೆಪ ಮಾತ್ರ. ಉದ್ದೇಶ ಮುಸ್ಲಿಮರನ್ನು ಸಂಹಾರ ಮಾಡುವುದು. ನಮಗೇ ಅಧಿಕಾರ ಬೇಕಿಲ್ಲ. ಆದರೆ ಈ ನೆಲದ ಎಲ್ಲ ಮುಸ್ಲಿಮರನ್ನೂ ನಾವು ನಿರ್ನಾಮ ಮಾಡಬೇಕಿದೆ. ” ಎಂಬುದನ್ನು ಸತ್ಯಾನಂದ ಹೇಳುತ್ತಾನೆ.
ಇವರ ಸಮಕಾಲೀನ ಶಶಧರ ತಾರಕ ಚೂಡಾಮಣೀ ಎಂಬಾತ ಆರ್ಯ ಧರ್ಮ ಪ್ರಚಾರಿಣಿ ಸಭಾ ಎಂಬ ಹಿಂದೂ ಪುನರುತ್ಥಾನದ ಸಂಘಟನೆಯನ್ನು ಆರಂಭಿಸಿದನು. ಹಿಂದೂ ಧರ್ಮದ ಆಚರಣೆಗಳಿಗೆ ವೈಜ್ಞಾನಿಕ ವಿವರಣೆ ನೀಡತೊಡಗಿದ್ದು ಈತನ ಸಾಧನೆ. ಈತನ ಬಗ್ಗೆ ಅದೆಷ್ಟು ಆದರ ಇತ್ತೆಂದರೆ ಹಲವಾರು ಮಂದಿ ಆತನನ್ನು ಎರಡನೇ ಶಂಕರಾಚಾರ್ಯ ಎಂದು ತಾರೀಫು ಮಾಡಿದ್ದರು.
ಈತನ ಪ್ರಭಾವದಿಂದ ಚಂದ್ರನಾಥ ಬಸು ಹಿಂದುತ್ವ ಎಂಬ ಕೃತಿ ರಚಿಸಿದರು. ಹಿಂದುತ್ವ ಪದ ಹುಟ್ಟಿದ್ದು ಆಗ. ೧೯೦೯ರಲ್ಲಿ ಲೆ. ಕ. ಯು. ಎನ್. ಮುಖರ್ಜಿ ಎಂಬ ಮಹಾನುಭಾವ “ಹಿಂದೂ ವಿನಾಶದತ್ತ ಸಾಗುತ್ತಿರುವ ಜನಾಂಗ” ಎಂಬ ಲೇಖನವನ್ನು ‘ಬೆಂಗಾಲಿ’ ಎಂಬ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟಿಸಿದನು. “ಎಷ್ಟೋ ಜನಾಂಗಗಳು ನಶಿಸುತ್ತಾ ಕೊನೆಗೆ ತಮ್ಮದೇ ದೇಶದಿಂದ ಕಾಣೆಯಾಗಿದ್ದಾರೆ. ನಮ್ಮ ವಿಧಿಯೂ ಅದೇ ಹಾದಿಯಲ್ಲಿದೆ. ನಮ್ಮದೂ ನಶಿಸಿಹೋಗುತ್ತಿರುವ ಜನಾಂಗ. ಪ್ರತೀ ವರ್ಷ ಹಿಂದೂಗಳು ಅಂಚಿಗೆ ಸರಿಸಲ್ಪಡುತ್ತಿದ್ದಾರೆ. ಅವರಲ್ಲಿದ್ದ ಭೂಮಿ ಎಲ್ಲಾ ಮೊಹಮ್ಮಡನರ ವಶವಾಗುತ್ತಿದೆ. ದೇಶದ ಜನಸಂಖ್ಯೆಯಲ್ಲಿ ಅವರ ಪ್ರಮಾಣ ದಿನೇದಿನೇ ಕಡಿಮೆಯಾಗುತ್ತಿದೆ. ” ಎಂದು ಈತ ಗೋಳಾಡಿ, ನ್ಯೂಜಿಲ್ಯಾಂಡಿನ ಮಾವೋರಿಗಳು, ಅಮೆರಿಕದ ಮೂಲನಿವಾಸಿಗಳು ಹೇಗೆ ನಾಶವಾದರು ಎಂದು ಈತ ಬರೆಯುತ್ತಾನೆ.
ಇದು ಎಂಥಾ ಅಬದ್ಧ ವಾದವೆಂದರೆ ನ್ಯೂಜಿಲಾಂಡಿನ ಮೂಲನಿವಾಸಿಗಳನ್ನು ನಾಶ ಮಾಡಿದ್ದು ಬಿಳಿಯರು! ಇಲ್ಲಿನ ಮುಸ್ಲಿಮರು ಸೂಫಿ ಪ್ರಭಾವದಿಂದ ಮತಾಂತರ ಗೊಂಡವರು! !
ಹೀಗೆ ಒಂದು ಸೈದ್ಧಾಂತಿಕ ನೆಲೆಗಟ್ಟನ್ನು ಬಂಗಾಳದ ಆಢ್ಯ ಹಿಂದೂಗಳು ರೂಪಿಸಿದರೆ, ೧೯ನೇ ಶತಮಾನದ ಕೊನೆಗೆ ಬಂಗಾಳ ಅಪಾರ ಬೌದ್ಧಿಕ ಪ್ರೌಢಿಮೆಯಲ್ಲಿ ಈ ವಿತಂಡವಾದವನ್ನು ಮೀರಿ ಬೆಳೆಯಿತು. ವಿವೇಕಾನಂದ ಈ ತಲೆಮಾರಿನ ಪ್ರತಿನಿಧಿ. ಬಳಿಕ ೨೦ನೇ ಶತಮಾನದ ಎರಡನೇ ದಶಕದ ವೇಳೆಗೆ ಬಂಗಾಳದ ಕ್ರಾಂತಿಕಾರಿಗಳು ವೈಚಾರಿಕವಾಗಿ ಈ ಧರ್ಮದ ಹಲುಬುವಿಕೆಯನ್ನು ಪಕ್ಕಕ್ಕಿಟ್ಟು ವರ್ಗ ಸ್ಥಿತಿ, ಬಡತನ , ವಸಾಹತುಶಾಹಿ ದಮನಗಳ ಬಗ್ಗೆ ಸ್ಪಷ್ಟವಾಗಿ ಮಾತಾಡಿದರು.
ಈ ಪರಂಪರೆ ಅಂದಾಜು ಒಂದು ಶತಮಾನ ಬಂಗಾಳವನ್ನು ರೂಪಿಸಿತು. ಈ ದೇಶ ಕಂಡ ಅಪ್ರತಿಮ ಕಲಾವಿದರು, ಕಲಾಕಾರರು, ಸಾಹಿತಿಗಳು, ಬಂಗಾಲದಿಂದ ಹೊಮ್ಮಿದರು. ದೇಶ ಪಡೆದ ನೊಬೆಲ್ ಪ್ರಶಸ್ತಿಗಳಲ್ಲಿ ನಾಲ್ಕು ಬಂಗಾಲದಿಂದ ಬಂದಿದ್ದು!
ಈ ಬೌದ್ಧಿಕ, ಸಾಂಸ್ಕೃತಿಕ ಪರಂಪರೆ ಕಳೆದ ಎರಡು ದಶಕಗಳಲ್ಲಿ ದಾಳಿಗೊಳಗಾಗಿ ಈಗ ಇಡೀ ಕೋಟೆ ಭಾವನಾತ್ಮಕ ವಿತಂಡವಾದದ ಹಿಂದುತ್ವದ ಕೈ ವಶವಾಗಿದೆ. ಮುಂದೇನಾಗಬಹುದು ಎಂಬುದಕ್ಕೆ ಬಲು ದೊಡ್ಡ ವಿಶ್ಲೇಷಣೆ ಬೇಕಿಲ್ಲ. ಈಗಿರುವ ಕೇಂದ್ರ ಸರಕಾರವೇ ಉದಾರವಾದಿ ನಿಲುವಿನ ಎಲ್ಲರನ್ನೂ ದಮನಿಸತೊಡಗಿದೆ. ಅಮರ್ತ್ಯ ಸೆನ್ ಅವರಿಗೆ ಕಾಟ ಕೊಟ್ಟಿದೆ. ಇನ್ನೀಗ ಇಡೀ ಬಂಗಾಳದ ಉದಾರವಾದಿ ವೈಚಾರಿಕರನ್ನೂ , ವೈಚಾರಿಕ ಕೇಂದ್ರಗಳನ್ನೂ ಒರೆಸಿ ಹಾಕುವ ಕೆಲಸ ಮಾಡಲಿದೆ. ಗೋವು, ಗಂಜಳಗಳ ವಿಜೃಂಭಣೆ ನಡೆಯಲಿದೆ. ಹಾಗೆಯೇ ಬಂಗಾಳದಲ್ಲಿ ಚಾರಿತ್ರಿಕ ಕಾರಣಗಳಿಂದ ಅಪಾರ ಸಂಖ್ಯೆಯಲ್ಲಿರುವ ಮುಸ್ಲಿಮರನ್ನು ಅಂಚಿಗೆ ಸರಿಸಿ ಶತ್ರುವಾಗಿ ರೂಪಿಸುವ ಅಜೆಂಡಾ ಕಾರ್ಯರೂಪಕ್ಕಿಳಿಯಲಿದೆ.
“ಬಂಗಾಲ ಇಂದು ಯೋಚಿಸುವುದನ್ನು ಭಾರತ ನಾಳೆ ಯೋಚಿಸುತ್ತದೆ” ಎಂಬ ಮಾತು ಹಿಂದೆ ಚಾಲ್ತಿಯಲ್ಲಿತ್ತು. ಪ್ರಾಯಶಃ ಬಂಗಾಳದಲ್ಲಿ ನಡೆಯಲಿರುವ ಶುದ್ಧೀಕರಣ ನಾಳೆ ದೇಶದಾದ್ಯಂತ ನಡೆಯಲಿದೆ. ಇದು ಕೇವಲ ಚುನಾವಣಾ ಪ್ರಕ್ರಿಯೆಯ ಚರ್ಚೆಯಲ್ಲ, ಇದು ಸಂವಿಧಾನವು ಅದುಮಿಟ್ಟಿದ್ದ ಅತೃಪ್ತ ಹಿಂದೂ ಸಂಪ್ರದಾಯಸ್ಥ ಸಿದ್ಧಾಂತದ ಮರುದಾಳಿ, ದಿಗ್ವಿಜಯ.
kpsuresha@gmail.com




