Mysore
24
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಕೊಡಗಿನಲ್ಲಿ ಜಾನುವಾರುಗಳ ಸಂಖ್ಯೆ ಕ್ಷೀಣ 

ಜಿಲ್ಲೆಯಲ್ಲಿ 5ವರ್ಷಗಳಲ್ಲಿ ಜಾನುವಾರುಗಳ ಸಂಖ್ಯೆ ೨೨ ಸಾವಿರದಷ್ಟು ಇಳಿಕೆ; ಹೈನುಗಾರಿಕೆ ಆಸಕ್ತಿ ಕಳೆದುಕೊಳ್ಳುತ್ತಿರುವ ರೈತರು

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹೈನುಗಾರಿಕೆಯ ಆಸಕ್ತಿ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಕಳೆದ ೫ ವರ್ಷಗಳಲ್ಲಿ ಜಾನುವಾರುಗಳ ಸಂಖ್ಯೆ ೨೨ ಸಾವಿರದಷ್ಟು ಕಡಿಮೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

6ನೇ ಸುತ್ತಿನ ಲಸಿಕಾ ಕಾರ್ಯಕ್ರಮದ ಸಂದರ್ಭದಲ್ಲಿ ೨೦ನೇ ರಾಷ್ಟ್ರೀಯ ಜಾನುವಾರು ಗಣತಿಯ ಆಧಾರದಲ್ಲಿ ಜಿಲ್ಲೆಯಲ್ಲಿ ಒಟ್ಟು 76,920 ಜಾನುವಾರುಗಳಿವೆ ಎಂಬ ಮಾಹಿತಿ ಇತ್ತು. ಇತ್ತೀಚೆಗೆ ನಡೆದ ೨೧ನೇ ರಾಷ್ಟ್ರೀಯ ಜಾನುವಾರು ಗಣತಿ ಆಧಾರದ ಮೇಲೆ ಈ ಬಾರಿ ೮ನೇ ಸುತ್ತಿನ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಜಿಲ್ಲೆಯಲ್ಲಿ ಒಟ್ಟು ೫೪,೮೮೩ ಜಾನುವಾರುಗಳಿವೆ ಎಂಬ ಅಂಶ ತಿಳಿದು ಬಂದಿದೆ. ಸದ್ಯ ಈ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯ ಚುರುಕುಗೊಂಡಿದೆ. ಇದರಿಂದ ಜಿಲ್ಲೆಯಲ್ಲಿ ೨೦ ಮತ್ತು ೨೧ನೇ ರಾಷ್ಟ್ರೀಯ ಜಾನುವಾರು ಗಣತಿ ಪ್ರಕ್ರಿಯೆಯ ನಡುವೆ ಒಟ್ಟು 22,037ಜಾನುವಾರುಗಳು ಇಲ್ಲದಾಗಿರುವುದು ತಿಳಿದುಬಂದಿದೆ.

ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಲು ಮುಖ್ಯವಾಗಿ ಕೃಷಿ ಪ್ರದೇಶಗಳು ಕಡಿಮೆಯಾಗುತ್ತಿರುವುದು ಕಾರಣವಾಗಿದೆ. ಭತ್ತದ ಗದ್ದೆಗಳು ವಾಣಿಜ್ಯ ಬೆಳೆಗಳ ತೋಟಗಳಾಗಿ ಪರಿವರ್ತನೆಯಾಗುತ್ತಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಇದರೊಂದಿಗೆ ಯುವಜನರಲ್ಲಿ ಹೈನುಗಾರಿಕೆಯಲ್ಲಿ ಆಸಕ್ತಿ ಇಲ್ಲದಿರುವುದು, ಕೃಷಿ ಕಾರ್ಮಿಕರ ಅಲಭ್ಯತೆಯೂ ಇದಕ್ಕೆ ಕಾರಣವಾಗಿದೆ.

ಇದನ್ನು ಓದಿ: ದಾನಿಗಳು ನೀಡಿದ ಉತ್ಸವಮೂರ್ತಿಗಳಿಗೆ ದಿಗ್ಬಂಧನ!

ಜಿಲ್ಲೆಯಲ್ಲಿ ಹೈನುಗಾರಿಕೆಗೆ ಪೂರಕವಾಗಿ ಹಾಲು ಉತ್ಪಾದನಾ ಕೇಂದ್ರಗಳು ಇಲ್ಲದಿರುವುದೂ ಆಸಕ್ತಿ ಕಡಿಮೆಯಾಗಲು ಕಾರಣವಾಗಿದೆ. ಸದ್ಯ ಕುಶಾಲನಗರದಲ್ಲಿ ೧೩, ಸೋಮವಾರಪೇಟೆಯಲ್ಲಿ ೨೪, ಮಡಿಕೇರಿಯಲ್ಲಿ ೧ ಮತ್ತು ವಿರಾಜಪೇಟೆಯಲ್ಲಿ ೨ ಹಾಲಿನ ಕೇಂದ್ರಗಳಿದ್ದು, ಪೊನ್ನಂಪೇಟೆಯಲ್ಲಿ ಇಲ್ಲ.

ಸದ್ಯ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ರೋಗ ನಿಯಂತ್ರಣದ ೮ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ನಡೆಯುತ್ತಿದ್ದು, ಡಿ.೩ರವರೆಗೆ ನಡೆಯಲಿದೆ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ಜಾನುವಾರುಗಳಿಗೆ ಲಸಿಕೆ ನೀಡುತ್ತಿದ್ದಾರೆ.

ಕಾಲುಬಾಯಿ ರೋಗ ನಿಯಂತ್ರಿಸಲು ಜಾನುವಾರುಗಳಿಗೆ ಲಸಿಕೆ ನೀಡುವುದು ಅತ್ಯಗತ್ಯವಾಗಿದ್ದು, ಈ ರೋಗದ ವಿರುದ್ಧ ಪ್ರತಿ ೬ ತಿಂಗಳಿಗೊಮ್ಮೆ ಜಾನುವಾರುಗಳಿಗೆ ಲಸಿಕೆ ಕೊಡಿಸಿ ರೋಗ ಬಾರದಂತೆ ತಡೆಯಬಹುದಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಪಶು ವೈದ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ನೀಡುತ್ತಿದ್ದು, ರೈತರು, ಜಾನುವಾರು ಮಾಲೀಕರು ಜಾನುವಾರುಗಳಿಗೆ ಲಸಿಕೆ ನೀಡಲು ಸಹಕರಿಸಬೇಕೆಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಲಿಂಗರಾಜು ದೊಡ್ಡಮನಿ ಮನವಿ ಮಾಡಿದ್ದಾರೆ.

” ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಾಲುಬಾಯಿ ಜ್ವರ ರೋಗ ಕಾಣಿಸಿ ಕೊಂಡಿಲ್ಲ. ಸರ್ಕಾರ ಕಾಲಕಾಲಕ್ಕೆ ಲಸಿಕೆ ನೀಡುತ್ತಲೇ ಬರುತ್ತಿದ್ದು, 2030ರ ವೇಳೆಗೆ ಕಾಲು ಬಾಯಿ ರೋಗ ಸಂಪೂರ್ಣ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಪ್ರತಿ ೬ ತಿಂಗಳಿಗೊಮ್ಮೆ ಲಸಿಕೆ ಹಾಕುವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗಿದೆ.”

-ಡಾ.ಲಿಂಗರಾಜು ದೊಡ್ಡಮನಿ, ಪಶುಪಾಲನಾ ಇಲಾಖೆ ಉಪನಿರ್ದೇಶಕರು

೫೭ ಸಾವಿರ ಲಸಿಕೆ…:

ರಾಷ್ಟ್ರೀಯ ಕಾಲುಬಾಯಿ ಜ್ವರ ನಿಯಂತ್ರಣ ಕಾರ್ಯಕ್ರಮದ ಅಭಿಯಾನದಲ್ಲಿ ೮ನೇ ಸುತ್ತಿನಲ್ಲಿ ಲಸಿಕೆ ವಿತರಣೆಗಾಗಿ ಆರಂಭದಲ್ಲೇ ೫೭ ಸಾವಿರ ಲಸಿಕೆ ದಾಸ್ತಾನು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಅಂದಾಜು ೫೫ ಸಾವಿರ ಜಾನುವಾರುಗಳಿದ್ದು, ಪ್ರತಿ ಜಾನುವಾರುಗಳಿಗೂ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಲಿಂಗರಾಜು ದೊಡ್ಡಮನಿ ಮಾಹಿತಿ ನೀಡಿದ್ದಾರೆ.

ನವೀನ್ ಡಿಸೋಜ

Tags:
error: Content is protected !!