ಅಡ್ಡ ಮತದಾನ ಮಾಡಿ ‘ಆತ್ಮ ಸಾಕ್ಷಿ’ಯೆಂಬ ತಡೆಗೋಡೆಯ ರಕ್ಷಣೆ ಪಡೆದಿರುವ ಶಾಸಕರ ಪತ್ತೆಗೆ ‘ಸತ್ಯಶೋಧನೆ’, ‘ಆಣೆ-ಪ್ರಮಾಣ’ಗಳೆಲ್ಲವೂ ಗುಡ್ಡ ಅಗೆದು ಇಲಿ ಹಿಡಿಯುವ ವ್ಯರ್ಥ ಪ್ರಯತ್ನವಷ್ಟೇ. ಅದು ರಾಜ್ಯಸಭೆ ಚುನಾವಣೆ ಇರಲಿ, ವಿಧಾನಪರಿಷತ್ ಚುನಾವಣೆ ಇರಲಿ ಎಲ್ಲ ಕಾಲದಲ್ಲೂ ಆಳುವ ಪಕ್ಷ ವಿರೋಧಪಕ್ಷಗಳ ಶಾಸಕರಿಗೆ ಆಸೆ-ಆಮಿಷಗಳನ್ನು ಒಡ್ಡಿ ರಾಜಕೀಯ ಲಾಭ ಪಡೆಯುತ್ತಲೇ ಇವೆ. ಇದಕ್ಕೆ ಕಾಂಗ್ರೆಸ್, ಬಿಜೆಪಿ,ಜಾ.ದಳ ಸೇರಿದಂತೆ ಯಾವುದೇ ಪಕ್ಷಗಳೂ ಹೊರತಾಗಿಲ್ಲ.
ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ಜೂ.೧೮ರಂದು ನಡೆದ ಚುನಾವಣೆಯಲ್ಲಿ ನಡೆದ ‘ಅಡ್ಡ ಮತದಾನ’ ರಾಜಕೀಯ ಪಕ್ಷಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಸಂಖ್ಯಾಬಲದ ಕೊರತೆ ನಡುವೆಯೂ ಆಡಳಿತಾರೂಢ ಕಾಂಗ್ರೆಸ್ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಗೆಲ್ಲಿಸಿಕೊಂಡು ಬೀಗಿದರೆ, ಎನ್‌ಡಿಎ ಮೈತ್ರಿಪಕ್ಷವಾದ ಜಾ.ದಳ ತನ್ನ ಅಭ್ಯರ್ಥಿಗೆ ಬಿಜೆಪಿಯ ಪ್ರಾಶಸ್ತ್ಯದ ಮತಗಳನ್ನು ಪಡೆಯಲಾಗದೆ ಮುಖಭಂಗ ಅನುಭವಿಸಿರುವುದಲ್ಲದೇ, ತನ್ನದೇ ಪಕ್ಷದ ಏಳು ಮಂದಿ ಶಾಸಕರು ಅಡ್ಡ ಮತದಾನ ಮಾಡಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದ್ದರೆ, ಇತ್ತ ಬಿಜೆಪಿಯ ಸ್ಥಿತಿಯೂ ಅದಕ್ಕಿಂತ ಹೊರತಾಗಿಲ್ಲ. ಬಿಜೆಪಿಯ ೬೨ ಶಾಸಕರ ಪೈಕಿ ಮೂವರು ಶಾಸಕರು ಅಡ್ಡಮತದಾನ ಮಾಡಿರುವುದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರ ತಲೆನೋವಿಗೆ ಕಾರಣವಾಗಿದೆ.
ಪರಿಷತ್ ಚುನಾವಣೆಯ ಫಲಿತಾಂಶ ಹೊರಬಿದ್ದ ಕೂಡಲೇ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡು, ಅಡ್ಡಮತದಾನ ಮಾಡಿದ ಶಾಸಕರ ಪತ್ತೆಗೆ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿದೆ. ಇತ್ತ ದಳಪತಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅಭ್ಯರ್ಥಿ ಗೆಲ್ಲುವುದಿಲ್ಲ ಎಂಬುದು ತಮಗೆ ಮೊದಲೇ ಗೊತ್ತಿತ್ತು. ಆದರೂ ನಮ್ಮ ಶಾಸಕರ ಪಕ್ಷನಿಷ್ಠೆ ತಿಳಿದುಕೊಳ್ಳಲು ಅಭ್ಯರ್ಥಿಯನ್ನು ಹಾಕಿದ್ದಾಗಿ ತಿಪ್ಪೆ ಸಾರಿಸುತ್ತಿದ್ದರೂ ರಾಜ್ಯದ ಬಿಜೆಪಿ ನಾಯಕರು ಜಾ.ದಳದ ವಿಷಯದಲ್ಲಿ ಮೈತ್ರಿಧರ್ಮ ಪಾಲಿಸುತ್ತಿಲ್ಲ ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್‌ಗೆ ರವಾನಿಸಿದೆ.
ಆಣೆ-ಪ್ರಮಾಣ ರಾಜಕೀಯ
ಎರಡು ದಶಕಗಳ ಹಿಂದೆ ಟ್ವೆಂಟಿ-೨೦ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ೨೦ ತಿಂಗಳ ನಂತರ ಅಧಿಕಾರ ಹಸ್ತಾಂತರ ಮಾಡದೆ ‘ವಚನ ಭ್ರಷ್ಟ’ರಾಗಿದ್ದಾರೆ. ೨೦ ತಿಂಗಳ ಬಳಿಕ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡುವುದಾಗಿ ವಚನ ನೀಡಿಲ್ಲವೇ ಎಂಬುದಕ್ಕೆ ಧರ್ಮಸ್ಥಳಕ್ಕೆ ಬಂದು ಆಣೆ-ಪ್ರಮಾಣ ಮಾಡುವಂತೆ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದು, ಆಗ ನಡೆದ ಹೈಡ್ರಾಮಾಗಳೆಲ್ಲ ಈಗ ಇತಿಹಾಸ. ಈಗ ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಅಡ್ಡಮತದಾನ ಮಾಡಿರುವವರ ಪತ್ತೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನೇ ಧರ್ಮಸ್ಥಳದಲ್ಲಿ ಕರೆಯುವಂತೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ಅವರೊಂದಿಗೆ ಮಾತುಕತೆ ನಡೆಸಿ, ಮಂಜುನಾಥನ ಸನ್ನಿಧಿಯಲ್ಲಿ ಆಣೆ-ಪ್ರಮಾಣ ನಡೆಯಲಿ ಎಂದಿರುವುದು ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.
ಸುರೇಶ್ ಕುಮಾರ್ ವಿರೋಧ
ವಿಜಯೇಂದ್ರ ಅವರ ಆಣೆ-ಪ್ರಮಾಣದ ಹೇಳಿಕೆಗೆ ಬಿಜೆಪಿಯ ಹಿರಿಯ ಶಾಸಕ ಎಸ್.ಸುರೇಶ್ ಕುಮಾರ್ ವಿರೋಧ ವ್ಯಕ್ತಪಡಿಸಿ ಫೆಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ದಿಗ್ಭ್ರಮೆ ವ್ಯಕ್ತಪಡಿಸಿ, ರಾಜಕಾರಣದಲ್ಲಿ ನಡೆದುಬಿಟ್ಟಿರುವ ಅಡ್ಡಮತದ ಅಪಚಾರಕ್ಕೆ ಧರ್ಮಸ್ಥಳವನ್ನು ಎಳೆಯುವುದು ದಯವಿಟ್ಟು ಬೇಡ ಎಂದಿದ್ದಾರೆ. ಆದರೆ, ಇಲ್ಲಿಗೆ ನಿಲ್ಲುವ ಲಕ್ಷಣಗಳಂತೂ ಕಾಣುತ್ತಿಲ್ಲ. ಅಡ್ಡ ಮತದಾನ ಯಾರ‍್ಯಾರ ತಲೆದಂಡ ಪಡೆಯುತ್ತದೋ ಕಾದು ನೋಡಬೇಕಿದೆ.




