Mysore
21
overcast clouds

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಕೆಆರ್‌ಎಸ್‌ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ: ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ

krs

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್ಸ್‌ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನತೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದ್ದು, ಪ್ರವಾಸಿಗರ ಪ್ರವೇಶಕ್ಕೂ ಸಹ ನಿರ್ಬಂಧ ವಿಧಿಸಲಾಗಿದೆ.

ನದಿ ಪ್ರವಾಹದಿಂದ ಶ್ರೀರಂಗಪಟ್ಟಣದ ಕಾವೇರಿ ನದಿ ತಟದ ಪಶ್ಚಿಮವಾಹಿನಿ, ಸ್ನಾನಘಟ್ಟ, ಸಂಗಮ ಸೇರಿ ಹಲವು ಪ್ರದೇಶ ಜಲಾವೃತವಾಗಿದ್ದು, ಕಾವೇರಿ ನದಿ ತಟದಲ್ಲಿರುವ ನಿಮಿಷಾಂಭ ದೇಗುಲದ ಬಳಿ ನದಿ ಬಳಿಗೆ ತೆರಳಲು ಜನರಿಗೆ ನಿರ್ಬಂಧ ವಿಧಿಸಲಾಗಿದೆ.

ನಿಮಿಷಾಂಭ ದೇಗುಲದ ಬಳಿ ಭಕ್ತರ ಸ್ನಾನಘಟ್ಟ ಹಾಗೂ ಸ್ನಾನಗೃಹ ಜಲಾವೃತವಾಗಿದ್ದು, ಪಶ್ಚಿಮ ವಾಹಿನಿ ಹಾಗೂ ಸ್ನಾನಘಟ್ಟ ಶ್ರದ್ಧಾ ಕೇಂದ್ರ ಬಹುತೇಕ ಮುಳುಗಡೆಯಾಗಿದೆ.

ಚೆಕ್‌ಪೋಸ್ಟ್ ಬಳಿಯ ಸಾಯಿಮಂದಿರಕ್ಕೂ ಕಾವೇರಿ ನದಿ ಪ್ರವಾಹದ ನೀರು ನುಗ್ಗಿದ್ದು, ನದಿ ಪಾತ್ರದ ರೈತರ ಜಮೀನು ಪ್ರವಾಹದಿಂದ ಮುಳುಗಡೆಯಾಗಿವೆ.

ಶ್ರೀರಂಗಪಟ್ಟಣದ ಬಳಿಯ ವೆಲ್ಲೆಸ್ಲಿ ಸೇತುವೆ ಮುಳುಗಡೆ ಹಂತದಲ್ಲಿ ತಲುಪಿದ್ದು, ಈ ಸೇತುವೆ ಮೇಲೆ ಜನ ಮತ್ತು ವಾಹನ ಸಂಚಾರವನ್ನು ನಿರ್ಬಂಧಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.

ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಸಕಲ ಸಿದ್ಧತೆ ನಡೆಸಿದೆ.

Tags:
error: Content is protected !!