ಪ್ರತಿಯೊಬ್ಬರೂ ಈಗ ಸ್ಮಾರ್ಟ್ ಫೋನ್‌ಗಳಿಗೆ ಅಡಿಕ್ಟ್ ಆಗಿ ಹೋಗಿದ್ದಾರೆ. ಪ್ರಯಾಣದಲ್ಲಿರುವಾಗ, ಸುಮ್ಮನೆ ಕುಳಿತಿರುವಾಗ, ಕೆಲಸದ ವೇಳೆ, ಊಟದ ಸಮಯದಲ್ಲೂ ಸ್ಮಾರ್ಟ್ ಫೋನ್ ಬೇಕೇ ಬೇಕು. ಹೀಗೆ ದಿನದ ಬಹುತೇಕ ಸಮಯ ಸ್ಮಾರ್ಟ್ ಫೋನ್ ನೋಡುತ್ತಿದ್ದರೆ, ಅದರ ಬ್ಯಾಟರಿ ಬಾಳಿಕೆ ಬರುವುದಾದರೂ ಹೇಗೆ?
ಎಷ್ಟೇ ಸಂಶೋಧನೆಗಳು ನಡೆದರೂ ಹೆಚ್ಚು ಸಾಮರ್ಥ್ಯದ ಬ್ಯಾಟರಿಗಳಿಗಾಗಿ ಫೋನ್ ಗಾತ್ರವನ್ನೇ ಹಿಗ್ಗಿಸಬೇಕಾದ ಅನಿವಾರ್ಯತೆ ಇದೆ. ಫೋನ್‌ಗಳ ಬ್ಯಾಟರಿ ಬೇಗ ಚಾರ್ಚ್ ಮುಗಿದುಹೋಗಲು ಸಾಕಷ್ಟು ಕಾರಣಗಳಿವೆ. ಸಾಧನಗಳ ಗಾತ್ರ, ತೀಕ್ಷ್ಣ ಪ್ರಖರತೆಯಿರುವ ಸ್ಕ್ರೀನ್, ವೇಗದ ಪ್ರೊಸೆಸರ್‌ಗಳು, ಹಿನ್ನೆಲೆಯಲ್ಲಿ ಕೆಲಸ ಮಾಡುವ ಸಾಫ್ಟ್‌ವೇರ್‌ಗಳು, ವೇಗದ ಇಂಟರ್ ನೆಟ್, ಹೆಚ್ಚಿನ ಪ್ರಮಾಣದ ಗೇಮಿಂಗ್ ಹೀಗೆ ವಿವಿಧ ಕಾರಣಗಳಿಂದ ಚಾರ್ಚ್ ಬೇಗ ಕಡಿಮೆಯಾಗುತ್ತದೆ. ಬ್ಯಾಟರಿ ಚಾರ್ಜ್ ಹೆಚ್ಚು ಕಾಲ ಉಳಿಯುವಂತೆ ಮಾಡುವ ಕುರಿತು ವಿಜ್ಞಾನಿಗಳು ಸಂಶೋಧನೆಗಳನ್ನು ಮುಂದುವರಿಸುತ್ತಲೇ ಇದ್ದಾರೆ.
ಸ್ಮಾರ್ಟ್ ಫೋನ್ ಅಥವಾ ಯಾವುದೇ ಗ್ಯಾಜೆಟ್ಟನ್ನು ರಾತ್ರಿಯಿಡೀ ಚಾರ್ಜ್ ಇಡಬಹುದೇ? ಶೇ. ೧೦೦ರಷ್ಟು ಚಾರ್ಜ್ ಮಾಡಬಾರದೇ? ಎಂಬೆಲ್ಲ ಪ್ರಶ್ನೆಗಳು ಜನರಲ್ಲಿವೆ. ಈ ಹಿಂದೆ ಚಾರ್ಜ್‌ಗೆ ಇಟ್ಟ ಫೋನ್‌ಗಳು ಓವರ್ ಚಾರ್ಜ್ ಆಗಿ ಸ್ಛೋಟಗೊಂಡಿರುವ ಉದಾಹರಣೆ ಗಳಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಕಡಿಮೆಯಾಗಿದೆ. ಮೊಬೈಲ್ ಬ್ಯಾಟರಿಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈಗ ರಾತ್ರಿಯಿಡೀ ಚಾರ್ಚ್ ಮಾಡಿದರೂ ಏನೂ ಆಗದಂತಹ ತಂತ್ರಜ್ಞಾನವನ್ನು ಬಹುತೇಕ ಮೊಬೈಲ್ ಫೋನ್ ತಯಾರಿಕಾ ಸಂಸ್ಥೆಗಳು ಅಳವಡಿಸಿಕೊಂಡಿವೆ. ಅಂದರೆ ಶೇ. ೧೦೦ರಷ್ಟು ಚಾರ್ಜ್ ಆದ ಬಳಿಕ ವಿದ್ಯುತ್ ಪ್ರವಾಹವು ಕಡಿತವಾಗುವ ತಂತ್ರಜ್ಞಾನ ಬಂದಿದೆ.
ಚಾರ್ಜ್ ಮಾಡುವಾಗ ಈ ಅಂಶಗಳು ನೆನಪಿರಲಿ
೧. ಚಾರ್ಜ್ ಮಾಡುವಾಗ ಫೋನ್‌ಗೆ ಗಾಳಿಯಾಡುವಂತೆ ನೋಡಿಕೊಳ್ಳಿ. ಗಾಳಿಯಾಡದಿದ್ದರೆ ಫೋನ್ ಬಿಸಿಯಾಗಿ ಬ್ಯಾಟರಿ ಮೇಲೆ ಪರಿಣಾಮ ಬೀರಬಹುದು.
೨. ಶೇ. ೧೦೦ರಷ್ಟು ಚಾರ್ಜ್ ಬದಲು ಶೇ. ೮೦- ಶೇ. ೯೦ರಷ್ಟು ಚಾರ್ಜ್ ಮಾಡಿಕೊಳ್ಳಿ. ಶೇ. ೦ ಆಗದಂತೆ
ನೋಡಿಕೊಳ್ಳಬೇಕು.
೩. ಫೋನ್ ಸ್ಕ್ರೀನ್ ಪ್ರಖರತೆ ಕಡಿಮೆ ಮಾಡಿದಷ್ಟು ಕಣ್ಣಿಗೂ ಹಿತ, ಬ್ಯಾಟರಿಯೂ ಹೆಚ್ಚು ಬಾಳಿಕೆ ಬರಲಿದೆ.
೪. ಕೆಲಸ ಮಾಡುವಾಗ ಅಥವಾ ಮೊಬೈಲ್ ಬಳಸದಿದ್ದಾಗ ಸ್ಕ್ರೀನ್ ಆಫ್ ಆಗುವಂತೆ ಟೈಮ್ ಸೆಟ್ ಮಾಡಿಕೊಳ್ಳಬೇಕು.
೫. ಲೊಕೇಶನ್, ವೈರ್‌ಲೆಸ್, ಬ್ಲೂಟೂತ್ ಸೇವೆಗಳು ಮತ್ತು ಇಂಟರ್‌ನೆಟ್, ವೈಫೈ ಕೂಡ ಸದಾ ಕಾಲ ಆನ್‌ನಲ್ಲಿ ಇದ್ದರೆ ಬ್ಯಾಟರಿ ಚಾರ್ಜ್ ಖರ್ಚಾಗುತ್ತದೆ. ಇದಕ್ಕಾಗಿ ಅಗತ್ಯವಿದ್ದಾಗಲಷ್ಟೇ ಅವುಗಳನ್ನು ಆನ್ ಮಾಡಿಕೊಳ್ಳಿ.
೬. ಬಳಕೆಯಾಗದಿರುವ ಆಪ್‌ಗಳನ್ನು ಸ್ಲೀಪ್ ಮೋಡ್‌ನಲ್ಲಿ ಇರಿಸಬೇಕು.
೭. ಪವರ್ ಸೇವಿಂಗ್ ಅಥವಾ ಬ್ಯಾಟರಿ ಸೇವರ್ ಮೋಡ್ ಆನ್ ಮಾಡಿಕೊಳ್ಳುವುದು ಉತ್ತಮ.