ಬೆಂಗಳೂರು: ವಸತಿ ಇಲಾಖೆಯಲ್ಲಿ ಹಣ ಪಡೆದು ಮನೆ ಹಂಚಿಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದು, ಬಿ.ಆರ್.ಪಾಟೀಲ್ ಆರೋಪದ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದು ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಣ ಪಡೆದು ಮನೆ ಕೊಟ್ಟರೆ ನನ್ನ ಕುಟುಂಬಕ್ಕೆ ಒಳ್ಳೆಯದಾಗುತ್ತಾ? ಬಡವರ ಬಳಿ ಹಣ ತೆಗೆದುಕೊಂಡರೆ ಹುಳ ಬಿದ್ದು ಸಾಯ್ತಾರೆ. ಬಿ.ಆರ್.ಪಾಟೀಲ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 14 ಲಕ್ಷ ಮನೆ ಹಂಚಿಕೆ ಮಾಡಲಾಗಿತ್ತು. ನಂತರ ಬಂದ ಸರ್ಕಾರ 5.8 ಲಕ್ಷ ಮನೆಗಳನ್ನು ನೀಡಿತ್ತು. ಮೂರು ಹಂತದಲ್ಲಿ ನಾವು ಮನೆಗಳನ್ನು ಹಂಚಿಕೆ ಮಾಡುತ್ತೇವೆ. ಈಗ ನಾವು ಯಾವುದೇ ಹೊಸ ಟಾರ್ಗೆಟ್ ನೀಡಿಲ್ಲ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಬಿ.ಆರ್.ಪಾಟೀಲ್ ಅವರು ಸಚಿವರು ಹಣ ಪಡೆದಿದ್ದಾರೆ ಎಂದಿದ್ದಾರಾ.? ಬಿ.ಆರ್.ಪಾಟೀಲ್ ಹೇಳಿಕೆ ಬಗ್ಗೆ ತನಿಖೆ ಆಗಲಿ. ಬೇಕಾದರೆ ಸಿಬಿಐ ತನಿಖೆಗೆ ಕೊಡಲಿ ಎಂದರು.





