ಬೆಂಗಳೂರು: ಲಾರಿ ಮಾಲೀಕರ ಸಂಘದೊಂದಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಡೆಸಿದ ಎರಡನೇ ಸಭೆ ಯಶಸ್ವಿಯಾಗಿದ್ದು, ಲಾರಿ ಮಾಲೀಕರು ಮುಷ್ಕರವನ್ನು ವಾಪಸ್ ಪಡೆದಿದ್ದಾರೆ (Truckers call off strike). ಈ ಹಿನ್ನೆಲೆ 3 ದಿನಗಳ ಲಾರಿ ಮಾಲೀಕರ ಮುಷ್ಕರ ಅಂತ್ಯಗೊಂಡಿದೆ.
ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ವಾಪಸ್ ತೆಗೆದುಕೊಳ್ಳುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಘೋಷಣೆ ಮಾಡಿದ್ದಾರೆ.
ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಷ್ಕರವನ್ನು ತಕ್ಷಣದಿಂದ ವಾಪಸ್ ಪಡೆಯುತ್ತೇವೆ. ಸಚಿವರು ಬಹುತೇಕ ಬೇಡಿಕೆ ಈಡೇರಿಸಿದ್ದಾರೆ. ಸಚಿವರಿಗೆ ಧನ್ಯವಾದ ತಿಳಿಸುತ್ತೇವೆ ಎಂದರು.
ಇನ್ನೂ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಲಾರಿ ಮಾಲೀಕರ ಸಂಘದವರು ಪ್ರಮುಖವಾಗಿ 6 ಬೇಡಿಕೆ ಇಟ್ಟಿದ್ದರು. ಗಡಿ ಭಾಗದಲ್ಲಿ ಟೋಲ್ ತೆಗೆಯಲು ಸಭೆಯಲ್ಲಿ ಮನವಿ ಮಾಡಿದರು. ಈ ಬಗ್ಗೆ ಮೂರು ದಿನಗಳ ಬಳಿಕ ವರದಿ ತರಿಸಿಕೊಳ್ಳುತ್ತೇನೆ. ನೋ ಎಂಟ್ರಿ ಬೋರ್ಡ್ ಬದಲಾವಣೆ ಕುರಿತು ಚರ್ಚೆ ಮಾಡುತ್ತೇನೆ. ಇದೆಲ್ಲಾ ಸಿಎಂ ಗಮನಕ್ಕೆ ತರಲಿದ್ದೇನೆ ಎಂದು ಹೇಳಿದರು.





