Mysore
35
clear sky

Social Media

ಮಂಗಳವಾರ, 14 ಏಪ್ರಿಲ 2026
Light
Dark

ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರ ಭರವಸೆ ಈಡೇರಿಕೆಗೆ ಆಗ್ರಹ: ತಹಶಿಲ್ದಾರ್‌ ಮುಖಾಂತರ ಸರ್ಕಾರಕ್ಕೆ ಮನವಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಮಾರ್ಚ್ 2026ರ ರಾಜ್ಯ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ನೀಡಲಾಗಿದ್ದ ಹಿಂದಿನ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹನೂರು ಪಟ್ಟಣದಲ್ಲಿ ತಹಸೀಲ್ದಾರ್ ಚೈತ್ರರವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಂಘದ ಅಧ್ಯಕ್ಷೆ ಸುಜಾತ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಠ ರೂ.10 ಸಾವಿರ ಗ್ಯಾರಂಟಿ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದ್ದರೂ ಇದುವರೆಗೆ ಅಧಿಕೃತ ಆದೇಶ ಹೊರಬಂದಿಲ್ಲ.

2025ರ ಮಾರ್ಚ್ ಬಜೆಟ್‌ನಲ್ಲಿ ರಾಜ್ಯದ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರೊಂದಿಗೆ ಆಶಾ ಕಾರ್ಯಕರ್ತೆಯರಿಗೂ ರೂ.1,000 ಹೆಚ್ಚಳ ಮಾಡುವುದಾಗಿ ತಿಳಿಸಲಾಗಿತ್ತು. ಆ ಭರವಸೆಯ ಹಿನ್ನೆಲೆಯಲ್ಲಿ ಹೋರಾಟ ಕೈಬಿಡಲಾಗಿತ್ತು. ಆದರೆ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಳ ಜಾರಿಯಾದರೂ ಆಶಾ ಕಾರ್ಯಕರ್ತೆಯರಿಗೆ ಮಾತ್ರ ಯಾವುದೇ ಹೆಚ್ಚಳ ಮಾಡಿಲ್ಲ ಎಂದು ತಿಳಿಸಿದರು.

ಅದೇ ರೀತಿ, ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತುತ ಇರುವ ರೂ.5 ಸಾವಿರ ಗೌರವಧನವನ್ನು ರೂ.8,000ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ 14 ತಿಂಗಳು ಕಳೆದರೂ ಆ ಕುರಿತು ಯಾವುದೇ ಆದೇಶ ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರೋಗ್ಯ ಸಚಿವರು ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳು ಹಲವಾರು ಸಭೆಗಳು ನಡೆಸಿದರೂ ಸ್ಪಷ್ಟ ಫಲಿತಾಂಶ ಕಂಡುಬಂದಿಲ್ಲ. ಬದಲಾಗಿ ಇಲಾಖೆಯಿಂದ ಆಶಾ ಕಾರ್ಯಕರ್ತೆಯರ ವಿರುದ್ಧ ಏಕಪಕ್ಷೀಯ ಆದೇಶಗಳನ್ನು ಹೊರಡಿಸಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ತರ್ಕಬದ್ಧಗೊಳಿಸುವಿಕೆ ಎಂಬ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಕಡಿತಗೊಳಿಸುವ ಆದೇಶ ಹೊರಡಿಸಿರುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೂ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕೈಬಿಡಲಾಗುವ ಆಶಾಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ‘ಗ್ರೂಪ್-ಡಿ’ ನೌಕರಿ ನೀಡುವುದಾಗಿ ಹೇಳುತ್ತಿರುವುದು, ಹೆಚ್ಚಿನ ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಹುನ್ನಾರವೆಂದು ಆರೋಪಿಸಿದರು.

ಈ ವೇಳೆ ಅಧ್ಯಕ್ಷರಾದ ಸುಜಾತ, ಕಾರ್ಯದರ್ಶಿ ಶಶಿಕಲಾ, ಪ್ರಿಯಾಂಕ, ಸರೋಜ, ಸುನೀತ, ಗೌರಮ್ಮ ಹಾಗೂ ಇನ್ನಿತರರು ಇದ್ದರು.

 

Tags:
error: Content is protected !!