ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ ಎಂದು ಸುಳ್ಳು ಸುದ್ದಿ ಹಬ್ಬಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾವಾಗ ದೂರು ದಾಖಲಿಸುತ್ತೀರಿ ಎಂದು ಸಚಿವ ಪ್ರಿಯಾಂಕ ಖರ್ಗೆ ಅವರನ್ನು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯಭರಿತವಾಗಿ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸುಳ್ಳು ಸುದ್ದಿ ಹರಡುವ ಸಿಎಂ ಸಿದ್ದರಾಮಯ್ಯ ಸರ್ಕಾರ ಸುಳ್ಳು ಸುದ್ದಿ ತಡೆಗೆ ಕಾನೂನು ರೂಪಿಸಲು ಹೊರಟಿರುವುದು ಈ ಶತಮಾನದ ಅತ್ಯಂತ ದೊಡ್ಡ ವಿಪರ್ಯಾಸ ಎಂದು ಕುಹುಕವಾಡಿದ್ದಾರೆ.
ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರೇ, ರಾಜ್ಯದಲ್ಲಿ ಸಂಭವಿಸುತ್ತಿರುವ ಹೃದಯಘಾತಗಳಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ತಜ್ಞರ ವರದಿ ಸ್ಪಷ್ಟಪಡಿಸಿದೆ ಎಂದಿರುವುದನ್ನು ಉಲ್ಲೇಖಿಸಿದ್ದಾರೆ.
ಕೋವಿಡ್ ಲಸಿಕೆಗೆ ತರಾತುರಿಯಲ್ಲಿ ಅನುಮೋದನೆ ನೀಡಿ ಲಸಿಕೆ ಕೊಟ್ಟಿದ್ದೇ ಹೃದಯಘಾತಗಳಿಗೆ ಕಾರಣ ಎಂದು ಸುಳ್ಳು ಸುದ್ದಿ ಹರಡಿದ ಸಿಎಂ ಸಿದ್ದರಾಮಯ್ಯನವರ ಮೇಲೆ ಸುಳ್ಳು ಸುದ್ದಿ ಕೇಸು ಹಾಕ್ತೀರಾ? ಬೇಕಾದರೆ ನಿಮ್ಮ ಸಿಎಂ ಸಿದ್ದರಾಮಯ್ಯ ಅವರ ಕೈಯಲ್ಲಿ ಫ್ಯಾಕ್ಟ್ ಚೆಕ್ ಮಾಡಿಸಿ ಆಮೇಲೆ ದೂರು ಹಾಕಿ. ರಾಜ್ಯದ ಮುಖ್ಯಮಂತ್ರಿಗಳೇ ಸುಳ್ಳು ಸುದ್ದಿ ಹರಡುವ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ಕರ್ನಾಟಕದ ದುರಂತ ಎಂದು ತಿರುಗೇಟು ನೀಡಿದ್ದಾರೆ.