ಬೆಂಗಳೂರು: ರಾಜ್ಯದಲ್ಲಿ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಬೇಸಿಗೆ ಆರಂಭಕ್ಕೂ ಮುನ್ನವೇ ಜನತೆ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.
ವಾತಾವರಣದಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ ಹೆಚ್ಚಿದ್ದು, ಮುಂದಿನ ಒಂದು ವಾರದ ಅವಧಿಯಲ್ಲಿ ಗರಿಷ್ಠ ತಾಪಮಾನವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾತಾವರಣದಲ್ಲಿ ಒಣಹವೆ ಇರುವುದರಿಂದ ತಾಪಮಾನ ದಿಢೀರ್ ಏರಿಕೆ ಕಂಡಿದೆ. ಇದೇ ವಾತಾವರಣ ಒಂದು ವಾರಗಳ ಕಾಲ ಮುಂದುವರೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಕಲಬುರ್ಗಿ ಹಾಗೂ ಹಾವೇರಿಯಲ್ಲಿ ಅತ್ಯಧಿಕ ಅಂದರೆ 37.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.