ಲಕ್ಷ್ಮೀಕಾಂತ್ ಕೊಮಾರಪ್ಪ
ಸೋಮವಾರಪೇಟೆ: ಹಲವು ಅಡೆತಡೆಗಳ ನಡುವೆಯೂ ೩ ವರ್ಷಗಳ ಬಳಿಕ ಕೊಡಗು- ಹಾಸನ ಜಿಲ್ಲೆಗಳ ಗಡಿಭಾಗದ ಯಸಳೂರು ಸಮೀಪ ನಿರ್ಮಾಣಗೊಂಡಿರುವ ಮೈಸೂರು ದಸರಾ ಖ್ಯಾತಿಯ ಅರ್ಜುನ ಸ್ಮಾರಕ ಇಂದು ಉದ್ಘಾಟನೆಗೊಳ್ಳಲಿದೆ.
೨೦೨೩ರ ಡಿ.೪ರಂದು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಸಮೀಪ ಮೀಸಲು ಅರಣ್ಯ ದಬ್ಬಳೆಕಟ್ಟೆ ಪ್ರದೇಶದಲ್ಲಿ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಅರ್ಜುನ ಆನೆ ಮರಣ ಹೊಂದಿತ್ತು. ಆ ಸ್ಥಳದಲ್ಲೇ ಅದರ ಅಂತ್ಯಕ್ರಿಯೆ ಮಾಡಲಾಗಿತ್ತು. ಅಭಿಮಾನಿಗಳ ಒತ್ತಾಸೆ ಮೇರೆಗೆ ಆ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು.ಆದರೆ ಎರಡು ವರ್ಷಗಳು ಕಳೆದರೂ ಕಾಮಗಾರಿ ಕುಂಟುತ್ತಾ ಸಾಗಿತ್ತು.
ಈ ಬಗ್ಗೆ ಆಂದೋಲನ ದಿನಪತ್ರಿಕೆ ೨೦೨೫ರ ಡಿ.೨೫ರಂದು ‘ಉದ್ಘಾಟನೆಯಾಗದ ಅಂಬಾರಿ ಖ್ಯಾತಿಯ ಅರ್ಜುನನ ಸ್ಮಾರಕ’ ಎಂಬ ವಿಶೇಷ ವರದಿ ಪ್ರಕಟಿಸಿತ್ತು. ಕೊನೆಗೂ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಮೇ ೬ರಂದು ಅರ್ಜುನ ಆನೆ ಸ್ಮಾರಕ ಉದ್ಘಾಟನೆ ಮಾಡುವುದಾಗಿ ತಿಳಿಸಿದ್ದು, ಕಾರ್ಯಕ್ರಮ ಸಂಬಂಧ ಅರಣ್ಯ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಸಾಕಾನೆ ಅರ್ಜುನನ ಅಭಿಮಾನಿಗಳು ಸ್ಮಾರಕಕ್ಕೆ ಭೇಟಿ ನೀಡಲು ಅರಣ್ಯ ಇಲಾಖೆ ಸಮಯ ನಿಗದಿಪಡಿಸಿದೆ. ಬೆಳಿಗ್ಗೆ ೯ರಿಂದ ಮಧ್ಯಾಹ್ನ ೩ರವರೆಗೆ ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಬಹುದಾಗಿದೆ. ಸ್ಮಾರಕವು ದಟ್ಟ ಅರಣ್ಯದಲ್ಲಿ ಇರುವುದರಿಂದ ಮಧ್ಯಾಹ್ನ ೩ರ ನಂತರ ಪ್ರವೇಶಾವಕಾಶ ಇರುವುದಿಲ್ಲ. ಆನೆ ಪ್ರತಿಮೆಯನ್ನು ಕಾಡಾನೆಗಳು ನಾಶಪಡಿಸುವ ಸಾಧ್ಯತೆ ಇರುವುದರಿಂದ ಸ್ಮಾರಕದ ಸುತ್ತ ಬೃಹತ್ ಕಂದಕಗಳನ್ನು ಅರಣ್ಯ ಇಲಾಖೆ ನಿರ್ಮಿಸಿದೆ. ಕಾಡುಪ್ರಾಣಿಗಳು ಬಾರದಂತೆ ಸುತ್ತ ೨೦೦ ಮೀಟರ್ ಸೋಲಾರ್ ಬೇಲಿ ನಿರ್ಮಿಸಲಾಗಿದೆ. ಪ್ರವಾಸಿಗರಿಗೆ ಕುಳಿತು ಕೊಳ್ಳಲು ಗ್ರಾನೈಟ್ ಬೆಂಚುಗಳು, ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗಿದೆ. ಸದ್ಯ ಪ್ರತಿ ದಿನ ಸ್ಮಾರಕದ ಬಳಿ ಇಬ್ಬರು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವ ಸಾಧ್ಯತೆ ಇದೆ.
” ಅರ್ಜುನ ಆನೆಯ ಸ್ಮಾರಕ ಕಾಮಗಾರಿ ಪೂರ್ಣಗೊಂಡಿದ್ದು, ಮೇ ೬ರಂದು ಅರಣ್ಯ ಸಚಿವರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ೫೦೦ಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಅರಣ್ಯ ಇಲಾಖೆ ವತಿಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.”
-ರೇವಣ್ಣಸಿದ್ದಯ್ಯ ಹಿರೇಮಠ, ಆರ್‌ಎಫ್‌ಒ, ಯಸಳೂರು ಅರಣ್ಯ ವಿಭಾಗ
” ದಸರಾ ಮಹೋತ್ಸವದಲ್ಲಿ ೮ ಬಾರಿ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆಹಾಕಿ, ಜನರ ಪ್ರೀತಿಗೆ ಪಾತ್ರನಾಗಿದ್ದ ಅರ್ಜುನ ಆನೆಯ ಸಾವು ಇಲಾಖೆಗೆ ದೊಡ್ಡ ನಷ್ಟವಾಗಿದೆ. ಸಮಾಧಿ ಸ್ಥಳದಲ್ಲಿ ಮತ್ತು ನಾಗರಹೊಳೆಯ ಬಳ್ಳೆಯಲ್ಲಿ ಸ್ಮಾರಕ ನಿರ್ಮಿಸುವುದಾಗಿ ಸರ್ಕಾರ ತಿಳಿಸಿತ್ತು. ಅದರಂತೆ ಈಗಾಗಲೇ ಬಳ್ಳೆ ಶಿಬಿರದಲ್ಲಿ ಅರ್ಜುನನ ಹಿರಿಮೆ, ಸಾಹಸ ಗಾಥೆಗಳನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೂ ತಿಳಿಸುವ ರೀತಿಯಲ್ಲಿ ಸ್ಮಾರಕ ಅನಾವರಣ ಮಾಡಲಾಗಿದೆ. ಈ ಎರಡೂ ಸ್ಥಳಗಳಲ್ಲಿ ಅರ್ಜುನ ಆನೆಯ ಪ್ರತಿರೂಪದಂತಿರುವ ಪ್ರತಿಮೆಗಳನ್ನು ನಿರ್ಮಿಸಲಾಗಿದ್ದು, ಅರ್ಜುನ ವಿವಿಧ ಆನೆಗಳ ಸೆರೆ ಕಾರ್ಯಾಚರಣೆ, ಹುಲಿ ಮತ್ತು ಚಿರತೆ ಸೆರೆ ಕಾರ್ಯಾಚರಣೆ ಮತ್ತು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಚಿತ್ರಗಳನ್ನು ಹಾಕುವಂತೆ ಸೂಚಿಸಲಾಗಿದೆ. ಯಸಳೂರಿನಲ್ಲಿ ಸ್ಮಾರಕ ಸಿದ್ಧವಾಗಿ ಹಲವು ತಿಂಗಳುಗಳೇ ಕಳೆದಿವೆ. ಆದರೆ ಕಾರಣಾಂತರದಿಂದ ಸ್ಮಾರಕ ಉದ್ಘಾಟನೆ ವಿಳಂಬವಾಗಿತ್ತು.”
-ಈಶ್ವರ ಬಿ. ಖಂಡ್ರೆ, ಅರಣ್ಯ ಸಚಿವ




