Mysore
26
scattered clouds

Social Media

ಶನಿವಾರ, 23 ಮೇ 2026
Light
Dark

ಪಿ.ಜಿ.ಪಾಳ್ಯ ಸಫಾರಿ ಕೇಂದ್ರಕ್ಕೆ ಪ್ರವಾಸಿಗರ ಲಗ್ಗೆ

ಮಹಾದೇಶ್ ಎಂ.ಗೌಡ

ಹನೂರು: ಚಾಮರಾಜನಗರ ಜಿಲ್ಲೆಯಲ್ಲಿ ಸಫಾರಿ ಎಂದರೆ ನೆನಪಾಗುವುದು ಬಂಡೀಪುರ, ಕೆ.ಗುಡಿ ಮಾತ್ರ. ಇತ್ತೀಚಿನ ದಿನಗಳಲ್ಲಿ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಪಿ.ಜಿ.ಪಾಳ್ಯ ಸಫಾರಿ ಕೇಂದ್ರದಲ್ಲಿ ವನ್ಯಪ್ರಾಣಿಗಳು ಕಾಣಿಸಿಕೊಳ್ಳುತ್ತಿರುವುದರಿಂದ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.

೨೦೨೩ರ ಡಿಸೆಂಬರ್‌ನಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ.ಪಾಳ್ಯ ಸಫಾರಿ ಕೇಂದ್ರ ಪ್ರಾರಂಭವಾಯಿತು. ಪ್ರಾರಂಭದ ದಿನದಿಂದಲೂ ಇಲ್ಲಿಯವರೆಗೆ ಪ್ರವಾಸಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಆನೆ, ಕಾಟಿ, ಜಿಂಕೆ, ನರಿ, ಹುಲಿ, ಚಿರತೆ, ಕಪ್ಪು ಚಿರತೆ, ಬಿಳಿ ಜಿಂಕೆ, ರಣಹದ್ದುಗಳು ಸೇರಿದಂತೆ ವಿವಿಧ ಪ್ರಭೇದದ ಪ್ರಾಣಿಗಳು,ಪಕ್ಷಿಗಳು ಕಂಡುಬರುತ್ತಿವೆ.

ಒಂದು ವಾರದ ಅವಧಿಯಲ್ಲಿ ಕಪ್ಪು ಚಿರತೆ, ಬಿಳಿ ಜಿಂಕೆ ಕಾಣಿಸಿಕೊಂಡಿವೆ. ಶನಿವಾರ ಸಂಜೆ ತಾಯಿ ಮತ್ತು ಮೂರು ಹುಲಿಗಳು ಪ್ರವಾಸಿಗರಿಗೆ ದರ್ಶನ ನೀಡಿದು, ಪ್ರವಾಸಿಗರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಕಾಡಾನೆಗಳು, ಜಿಂಕೆಗಳ ಹಿಂಡು, ಕಾಡೆಮ್ಮೆಗಳು ನಿರಂತರವಾಗಿ ಪ್ರವಾಸಿಗರಿಗೆ ಕಾಣಸಿಗುತ್ತಿವೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಮ.ಬೆಟ್ಟ, ಹೊಗೇನಕಲ್ ಫಾಲ್ಸ್, ಗೋಪಿನಾಥಂ ಸಫಾರಿ ಕೇಂದ್ರ, ಲೊಕ್ಕನಹಳ್ಳಿಸಫಾರಿ ಕೇಂದ್ರ, ಅಜ್ಜೀಪುರ ಸಫಾರಿ ಕೇಂದ್ರ, ಗುಂಡಾಲ್ ಜಲಾಶಯ, ಉಡುತೊರೆ ಜಲಾಶಯ, ಟಿಬೇಟಿಯನ್ ಕ್ಯಾಂಪ್, ಟಾಟಾ ಎಸ್ಟೇಟ್‌ಗಳಿದ್ದು ಇವುಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಪಡಿಸಿದರೆ ಉತ್ತಮ ಪ್ರವಾಸಿ ತಾಣವಾಗಿಸಿ, ಇಲಾಖೆಗೂ ಉತ್ತಮ ಆದಾಯ ಬರಲಿದೆ. ಈ ನಿಟ್ಟಿನಲ್ಲಿ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಹೆಚ್ಚಿನ ಗಮನಹರಿಸಬೇಕಿದೆ.

ಲೊಕ್ಕನಹಳ್ಳಿ ಸಫಾರಿ ಕೇಂದ್ರ: ತಾಲ್ಲೂಕು ವ್ಯಾಪ್ತಿಯ ಮಲೆ ಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ೨೦೨೩ರ ಡಿಸೆಂಬರ್‌ನಲ್ಲಿ ಪ್ರಾರಂಭವಾದ ಲೊಕ್ಕನಹಳ್ಳಿ ಸಫಾರಿ ಕೇಂದ್ರ ಹಾಗೂ ೨೦೨೪ರಲ್ಲಿ ಪ್ರಾರಂಭವಾದ ಅಜ್ಜೀಪುರ ಸಫಾರಿ ಕೇಂದ್ರದಲ್ಲಿಯೂ ಉತ್ತಮವಾದ ಸ್ಪಂದನೆ ಸಿಗುತ್ತಿದೆ. ಬರುವಂತಹ ಪ್ರವಾಸಿಗರಿಗೆ ಹೋಟೆಲ್, ವಾಸ್ತವ್ಯಕ್ಕೆ ಕೊಠಡಿ, ಮಾಹಿತಿ ಕೇಂದ್ರ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಮೂಲಸೌಲಭ್ಯಗಳನ್ನು ದೊರಕಿಸಿಕೊಟ್ಟರೆ ಮತ್ತಷ್ಟು ಅಭಿವೃದ್ಧಿಯಾಗಲಿದೆ.

ಹತ್ತು ಸಾವಿರಕ್ಕೂ ಹೆಚ್ಚು ಪ್ರವಾಸಿಗರ ಭೇಟಿ: ೨೦೨೩ರ ಡಿಸೆಂಬರ್‌ನಿಂದ ೨೦೨೬ರ ಏಪ್ರಿಲ್‌ವರೆಗೆ ೧,೦೧೦ ವಿದ್ಯಾರ್ಥಿಗಳು ಮತ್ತು ೯,೫೦೩ ಪ್ರವಾಸಿಗರು ಸೇರಿ ಒಟ್ಟಾರೆ ೧೦,೫೧೩ ಪ್ರವಾಸಿಗರು ಭೇಟಿ ನೀಡಿ ಪ್ರಕೃತಿಯ ಸೊಬಗನ್ನು ಸವಿದಿದ್ದಾರೆ. ಇದರಿಂದ ೩೫ ಲಕ್ಷ ರೂ. ಆದಾಯ ಬಂದಿದೆ.

ರೈತರಿಗೆ ಸಂಕಷ್ಟ: ಮಲೆ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ.ಪಾಳ್ಯ ಸಫಾರಿ ಕೇಂದ್ರಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ ಇದೇ ಕಾಡುಪ್ರಾಣಿಗಳು ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ರೈತರು ಬೆಳೆದಿರುವ ಬೆಳೆಗಳನ್ನು ನಾಶಪಡಿಸುತ್ತಿವೆ. ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಬೇಸತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೂ ತೊಂದರೆಯಾಗದಂತೆ ವನ್ಯಪ್ರಿಯರಿಗೂ ಯಾವುದೇ ತೊಂದರೆಯಾಗದಂತೆ ಸಫಾರಿ ನಡೆಸುವಂತೆ ಪ್ರಜ್ಞಾವಂತ ನಾಗರಿಕರು ಹಾಗೂ ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ.

” ಇತ್ತೀಚಿನ ದಿನಗಳಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ.ಪಾಳ್ಯ ಸಫಾರಿ ಕೇಂದ್ರದಲ್ಲಿ ವನ್ಯಪ್ರಾಣಿಗಳು ಹೆಚ್ಚಾಗಿ ಪ್ರವಾಸಿಗರಿಗೆ ಕಾಣ ಸಿಗುತ್ತಿವೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರ ವಾಸ್ತವ್ಯಕ್ಕೆ ೨ ಕೊಠಡಿಗಳು, ಶೌಚಾಲಯ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ಮಾಹಿತಿ ಕೇಂದ್ರ, ಟಿಕೆಟ್ ಕೌಂಟರ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು.”

ಭಾಸ್ಕರ್, ಡಿಸಿಎಫ್, ಮಲೆ ಮಹದೇಶ್ವರ ವನ್ಯಜೀವಿಧಾಮ

 

 

Tags:
error: Content is protected !!