Mysore
35
scattered clouds

Social Media

ಸೋಮವಾರ, 11 ಮೇ 2026
Light
Dark

ಪಂಜು ಗಂಗೊಳ್ಳಿ ಅವರ ವಾರದ ಅಂಕಣ: ಗಾಲಿ ಕುರ್ಚಿಯಿಂದ ಚಿಮ್ಮಿದ ಮೈಂಡ್‌ಸೆಟ್ ಕೋಚ್ ಜೈಕಿಶನ್!  

ಲಕ್ಷಾಂತರ ಜನರಿಗೆ ಮೈಂಡ್ ಸೆಟ್ ಕೋಚ್ ಆಗಿ ಮಾರ್ಗದರ್ಶ

ಗುಜರಾತಿನ ಅಹ್ಮದ್‌ನಗರದ ೩೮ ವರ್ಷ ಪ್ರಾಯದ ಜೈಕಿಶನ್ ಶರ್ಮಾ ಒಬ್ಬ ‘ಮೈಂಡ್ ಸೆಟ್ ಕೋಚ್’ ಹಾಗೂ ಅಂತರರಾಷ್ಟ್ರೀಯ ಭಾಷಣಕಾರ. ಏನೇನೋ ದುರಂತಗಳು ಘಟಿಸಿ, ಬದುಕು ಭಾರವಾದವರಿಗೆ ಸ್ಛೂರ್ತಿ ನೀಡುವ ಸಲುವಾಗಿಯೇ ಅವರು ‘ಡ್ರೀಮ್ ಚೇರ್ ಕ್ಲಬ್’ ಎಂಬ ಒಂದು ಫೌಂಡೇಶನನ್ನು ನಡೆಸುತ್ತಿದ್ದಾರೆ. ‘ಮನುಷ್ಯನ ಬದುಕು ಹೀಗೆಯೇ ನಡೆಯುತ್ತದೆ ಎಂದು ಹೇಳಲಾಗುವುದಿಲ್ಲ. ಅದು ಬಹಳ ಅನಿಶ್ಚಿತ’ ಎಂದು ಹೇಳುವ ಅವರ ಸ್ವಂತದ ಬದುಕೇ ಅವರ ‘ಡ್ರೀಮ್ ಚೇರ್ ಕ್ಲಬ್’ ಫೌಂಡೇಶನ್‌ನ ಹುಟ್ಟಿಗೆ ಕಾರಣ.

ಜೈಕಿಶನ್ ಶರ್ಮಾರ ತಂದೆಗೆ ಮಾಸ್ಟರ‍್ಸ್ ಮಾಡಬೇಕೆಂಬ ಕನಸಿತ್ತು. ಆದರೆ ಅದು ನನಸಾಗಲಿಲ್ಲ. ತನ್ನ ಆ ಕನಸನ್ನು ಮಗನ ಮೂಲಕವಾದರೂ ನೆರವೇರಿಸಿಕೊಳ್ಳುತ್ತೇನೆ ಎಂದು ಅವರು ಜೈಕಿಶನ್‌ರನ್ನು ೨೦೦೭ರಲ್ಲಿ ಆಸ್ಟ್ರೇಲಿಯಾದ ಒಂದು ಬ್ಯುಸಿನೆಸ್ ಸ್ಕೂಲಿಗೆ ಕಳಿಸಿದರು. ಆದರೆ, ಜೈಕಿಶನ್ಆಸ್ಟ್ರೇಲಿಯಾ ಸೇರುತ್ತಲೇ ಇತ್ತ ಅವರ ತಂದೆ ತೀರಿಕೊಂಡರು. ಜೈಕಿಶನ್ ವಾಪಸ್ ಮನೆಗೆ ಬಂದರು. ತಂದೆಯ ಅಕಾಲಿಕ ಮರಣದಿಂದ ಕುಗ್ಗಿ ಹೋದ ಜೈಕಿಶನ್ ಆಸ್ಟ್ರೇಲಿಯಾಕ್ಕೆ ಹೋಗಲು ಬಯಸಲಿಲ್ಲ. ಆದರೆ, ಅವರ ತಾಯಿ ‘ತಂದೆಯ ಕನಸನ್ನು ನೀನು ನನಸು ಮಾಡಲೇಬೇಕು’ ಎಂದು ಹೇಳಿ ಅವರನ್ನು ಪುನಃ ಆಸ್ಟ್ರೇಲಿಯಾಕ್ಕೆ ಕಳಿಸಿದರು.

ಎರಡು ವರ್ಷಗಳ ಮಾಸ್ಟರ‍್ಸ್ ಪದವಿ ಮುಗಿಸಿದ ಮೇಲೆ ಜೈಕಿಶನ್‌ಗೆ ಒಂದು ‘ಎನರ್ಜಿ ಮತ್ತು ಗ್ಯಾಸ್ ರಿಟೈಲರ್’ ಕಂಪೆನಿಯಲ್ಲಿ ಕೈತುಂಬಾ ಸಂಬಳದ ಉದ್ಯೋಗ ಸಿಕ್ಕಿ, ಕೆಲವೇ ಸಮಯದಲ್ಲಿ ತನ್ನ ಶಿಕ್ಷಣ ಸಾಲವನ್ನು ತೀರಿಸಿದರು. ೨೦೧೦ರಲ್ಲಿ ಮದುವೆಯಾದರು. ೨೦೧೪ರಲ್ಲಿ ಮೆಲ್ಬೋರ್ನ್‌ನಲ್ಲಿ ಹೊಸ ಮನೆ ಖರೀದಿಸಿದರು. ಅದೇ ವರ್ಷ ಅವರಿಗೆ ಒಂದು ಹೆಣ್ಣು ಮಗು ಜನಿಸಿತು. ಹೀಗೆಯೇ ಜೈಕಿಶನ್‌ರ ಬದುಕು ನಿರಾಳವಾಗಿ ನಡೆಯುತ್ತಿತ್ತು.

೨೦೧೫ರ ಅಕ್ಟೋಬರ್ ೧೧ ರಂದು ಎಂದಿನಂತೆ ತನ್ನ ಆಫೀಸಿಗೆ ಹೋದಾಗ ಜೈಕಿಶನ್‌ಗೆ ಬರ ಸಿಡಿಲಿನಂತೆ ಅಪ್ಪಳಿಸಿತು ಅವರನ್ನು ಕೆಲಸದಿಂದ ತೆಗೆದು ಹಾಕಿದ ಸುದ್ದಿ! ತಾನು ನಿಂತಲ್ಲಿಯೇ ತನ್ನ ಕಾಲಡಿಯ ನೆಲ ಬಾಯಿ ತೆರೆದು ನುಂಗಿದಂತಹ ಅನುಭವ! ಹೆಂಡತಿ ಇದ್ದಾಳೆ. ಒಂದು ಮಗುವಿದೆ. ಮನೆ ಸಾಲ ಇದೆ. ಏನು ಮಾಡಲಿ, ಎಲ್ಲಿಗೆ ಹೋಗಲಿ ಎಂದು ತಿಳಿಯದ ಜೈಕಿಶನ್ ತನ್ನ ಕೆಲವು ಸ್ನೇಹಿತರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಅವರಲ್ಲೊಬ್ಬರು ಮರುದಿನ ಬೆಳಿಗ್ಗೆ ತನ್ನ ಆಫೀಸಿಗೆ ಬಂದು ಸಿಗಲು ಹೇಳಿದರು. ಅದರಂತೆ ಮರುದಿನ ಜೈಕಿಶನ್ ಕಾರಲ್ಲಿ ಆ ಸ್ನೇಹಿತನ ಆಫೀಸಿಗೆ ಹೊರಟರು. ಅವರಿಗೆ ನೆನಪಿದ್ದುದು ಅದಷ್ಟೇ. ನಂತರ ಏನಾಯಿತೆಂಬುದು ಅವರಿಗೆ ತಿಳಿಯದು…

ಜೈಕಿಶನ್ ಕಣ್ಣು ತೆರೆದು ನೋಡಿದಾಗ ಎದುರಲ್ಲಿ ಹೆಂಡತಿ ಮಗುವನ್ನು ಹಿಡಿದುಕೊಂಡು ಅಳುತ್ತ ನಿಂತಿದ್ದಳು. ತಾನೆಲ್ಲಿದ್ದೇನೆ ಎಂದು ಆಚೀಚೆ ನೋಡಿದಾಗ ಆಸ್ಪತ್ರೆಯ ಹಾಸಿಗೆಯಲ್ಲಿರುವುದು ತಿಳಿಯಿತು. ಕಾಲೆತ್ತಲು ನೋಡಿದರೆ ತನ್ನ ಸೊಂಟದ ಕೆಳಗೆ ಏನೂ ಅನುಭವವಾಗುತ್ತಿಲ್ಲ. ಆಗ ವೈದ್ಯರು, ಕಾರು ಅಪಘಾತವಾಗಿ ಬೆನ್ನು ಮೂಳೆಗೆ ಗಂಭೀರ ಪೆಟ್ಟಾಗಿ ಸೊಂಟದ ಕೆಳಗಿನ ಭಾಗ ನಿಶ್ಚೇತನವಾಗಿದೆ. ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಬೇಕು. ಆದರೂ, ಮುಂದೆ ನಡೆಯುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಿದರು. ಅಂತೆಯೇ, ಹತ್ತು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಡೆದು, ಎಂಟು ತಿಂಗಳು ವೈದ್ಯಕೀಯ ಆರೈಕೆಯ ನಂತರವೂ ಅವರ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬರಲಿಲ್ಲ.

ಮನೆ ಸಾಲದ ಕಂತು ಕಟ್ಟಲಾಗದ ಕಾರಣ ಸಾಲ ನೀಡಿದ ಬ್ಯಾಂಕು ಯಾವತ್ತೂ ಮನೆ ಬಾಗಿಲಿಗೆ ಬಂದು ಬೀಗ ಜಡಿದು ಹೋಗುತ್ತದೆ ಎಂಬ ಆತಂಕ ಅವರನ್ನು ಕೊರೆಯುತ್ತಿತ್ತು. ಆದರೆ, ಹಲವು ತಿಂಗಳು ಕಳೆದರೂ ಹಾಗಾಗಲಿಲ್ಲ. ಏಕೆಂದು ವಿಚಾರಿಸಿದಾಗ ಅವರ ತಾಯಿ ಭಾರತದಿಂದಲೇ ಮನೆ ಸಾಲದ ಕಂತನ್ನು ಕಟ್ಟುತ್ತಿದ್ದುದು ತಿಳಿಯಿತು. ಜೈಕಿಶನ್‌ಗೆ ಆಗ ತಾನೊಬ್ಬ ನಿಷ್ಪ್ರಯೋಜಕನಾಗಿ ಕುಟುಂಬಕ್ಕೆ ಭಾರವಾಗಿ ಬದುಕುತ್ತಿದ್ದೇನೆ ಅಂತ ಅನ್ನಿಸಿ, ೨೦೧೬ರಲ್ಲಿ ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದರು. ಆದರೆ, ಮೂರು ಬಾರಿಯೂ ವಿಫಲರಾದರು. ಜೈಕಿಶನ್ ಖಿನ್ನತೆಗೆ ಜಾರಿದುದು ಗೊತ್ತಾಗಿ ಅವರ ಹೆಂಡತಿ ಅವರನ್ನು ಮತ್ತೆ ವೈದ್ಯಕೀಯ ಆರೈಕೆಗೆ ಒಳಪಡಿಸಬೇಕಾಯಿತು.

ಒಂದು ದಿನ ಹೀಗೆಯೇ ಜೈಕಿಶನ್ ಗಾಲಿ ಕುರ್ಚಿಯಲ್ಲಿ ಕುಳಿತು ಹಳಿ ತಪ್ಪಿದ ತನ್ನ ಬದುಕಿನ ಬಗ್ಗೆ ಚಿಂತಿಸುತ್ತಿದ್ದರು. ಆಗ ಅಲ್ಲಿಯೇ ಆಟವಾಡುತ್ತಿದ್ದ ಅವರ ಮಗಳು ಅವರತ್ತ ತಿರುಗಿ ಕಿರು ನಗೆಯೊಂದನ್ನು ಬೀರಿದಳು. ಅವಳ ಆ ನಗೆಯನ್ನು ನೋಡಿ ಅವರಲ್ಲಿ ಏನೋ ಹೊಸ ಶಕ್ತಿಯೊಂದು ಪ್ರವಹಿಸಿದಂತಾಯಿತು. ಆ ಕ್ಷಣವೇ ಜೈಕಿಶನ್ ತನ್ನೆಲ್ಲ ಋಣಾತ್ಮಕ ಭಾವನೆಗಳನ್ನು ತೊಡೆದು ಹಾಕಿ, ಬದುಕನ್ನು ಬೇರೆಯೇ ದೃಷ್ಟಿಯಲ್ಲಿ ನೋಡತೊಡಗಿದರು. ಅಂದಿನಿಂದ ಅವರು ಚಿಕ್ಕ ಪುಟ್ಟ ಘಟನೆ, ವಿಚಾರಗಳಲ್ಲೂ ಜೀವಶಕ್ತಿಯನ್ನು ಅನುಭವಿಸ ತೊಡಗಿದರು. ತನ್ನಂತೆಯೇ ಬದುಕು ಕಳೆದುಕೊಂಡು ನಂತರ ಪುನಃ ಅದನ್ನು ಕಟ್ಟಿಕೊಂಡವರ ಸ್ಛೂರ್ತಿದಾಯಕ ಆನ್‌ಲೈನ್ ವೀಡಿಯೋಗಳನ್ನು ವೀಕ್ಷಿಸತೊಡಗಿದರು. ತನ್ನಲ್ಲಿ ಇನ್ನೂ ಉಳಿದಿರುವುದನ್ನು ಧನಾತ್ಮಕವಾಗಿ ಅನುಭವಿಸಲು ಪ್ರಯತ್ನಿಸತೊಡಗಿದರು. ಅವರ ಹೆಂಡತಿ ಮತ್ತು ಭಾರತದಲ್ಲಿದ್ದ ಅವರ ತಾಯಿ ಮತ್ತು ಸಹೋದರಿ ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ಅವರಿಗೆ ನಿತ್ಯ ಬೆಂಬಲಿಗರಾಗಿ ನಿಂತರು.

ಇದೆಲ್ಲದರ ಪರಿಣಾಮವಾಗಿ, ೨೦೧೯ರ ಡಿಸೆಂಬರ್ ತಿಂಗಳ ಒಂದು ದಿನ ಬೆಳಿಗ್ಗೆ ಎಂದಿನಂತೆ ಎದ್ದಾಗ ಅವರಿಗೆ ತನ್ನ ಕಾಲಿನ ಒಂದು ಬೆರಳನ್ನು ತುಸು ಅಲುಗಾಡಿಸಲು ಸಾಧ್ಯವಾಗುವುದು ಅನುಭವಕ್ಕೆ ಬಂತು. ಅದು ಅವರಿಗೆ ಎಂತಹ ಸಂತೋಷ ನೀಡಿತೆಂದರೆ, ಕೂಗಿ ಹೆಂಡತಿಯನ್ನು ಕರೆದರು. ನಂತರ, ತಕ್ಷಣವೇ ಒಬ್ಬ ನ್ಯೂರೋ ಸರ್ಜನ್‌ರನ್ನು ಭೇಟಿಯಾದರು. ಅವರಿಗೂ ಅದು ಆಶ್ಚರ್ಯದ ಬೆಳವಣಿಗೆಯಾಗಿತ್ತು. ೨೦೨೦ರ ಫೆಬ್ರವರಿಯಲ್ಲಿ ಜೈಕಿಶನ್ ಮೊತ್ತ ಮೊದಲ ಬಾರಿಗೆ ಗಾಲಿ ಕುರ್ಚಿಯಿಂದ ಇಳಿದು ಒಂದು ಹೆಜ್ಜೆಯನ್ನು ಎತ್ತಿ ಇಡುವಲ್ಲಿ ಯಶಸ್ವಿಯಾದರು. ಮುಂದಿನ ತಿಂಗಳಲ್ಲಿ ಅವರು ಗಾಲಿ ಕುರ್ಚಿಯನ್ನು ಬಿಟ್ಟು ಸ್ವತಂತ್ರವಾಗಿ ನಡೆಯಲು ಶಕ್ಯರಾದರು. ಅಲ್ಲಿಂದ ಅವರ ಬದುಕು ಹಳಿಗೆ ಬರತೊಡಗಿ, ಮನೆಯಿಂದಲೇ ಕೆಲವು ಕೆಲಸಗಳನ್ನು ಮಾಡಲು ಶುರು ಮಾಡಿದರು. ನಂತರದ ಒಂದು ವರ್ಷದಲ್ಲಿ ತನ್ನ ೭೫,೦೦೦ ಡಾಲರ್ ಮನೆ ಸಾಲವನ್ನು ತೀರಿಸಲು ಶಕ್ಯರಾದರು.

ಜೈಕಿಶನ್ ತನ್ನ ಬದುಕಿನ ಕತೆ ಕೇವಲ ನನ್ನಲ್ಲೇ ಇರುವುದರ ಬದಲು ಅದನ್ನು ಇತರರೊಂದಿಗೆ ಹಂಚಿಕೊಂಡರೆ ತನ್ನಂತೆಯೇ ಬದುಕು ಕಳೆದುಕೊಂಡ ಅದೆಷ್ಟೋ ಜನರಿಗೆ ಸಹಾಯವಾಗಬಹುದೆಂದು ಭಾವಿಸಿ, ೨೦೨೧ರಲ್ಲಿ ‘ಡ್ರೀಮ್ ಚೇರ್ ಕ್ಲಬ್’ ಫೌಂಡೇಶನ್ ಹುಟ್ಟು ಹಾಕಿದರು. ಇಂದು ಜೈಕಿಶನ್ ಕೇವಲ ಭಾರತವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಬದುಕನ್ನು ಉದಾಹರಣೆಯಾಗಿ ನೀಡಿ ಲಕ್ಷಾಂತರ ಜನರಿಗೆ ಮೈಂಡ್ ಸೆಟ್ ಕೋಚ್ ಆಗಿ ದಾರಿ ತೋರಿಸುತ್ತಿದ್ದಾರೆ. ‘ನಿಮ್ಮ ತಾತ್ಕಾಲಿಕ ಭಾವನೆಗಳು ನಿಮ್ಮ ಭವಿಷ್ಯವನ್ನು ರೂಪಿಸಲು ಬಿಡಬೇಡಿ’ ಎನ್ನುವುದು ಜೈಕಿಶನ್ ಶರ್ಮಾ ಎಲ್ಲರಿಗೂ ಹೇಳುವ ಕಿವಿ ಮಾತು.

” ಜೈಕಿಶನ್ ತನ್ನ ಬದುಕಿನ ಕತೆ ಕೇವಲ ನನ್ನಲ್ಲೇ ಇರುವುದರ ಬದಲು ಅದನ್ನು ಇತರರೊಂದಿಗೆ ಹಂಚಿಕೊಂಡರೆ ತನ್ನಂತೆಯೇ ಬದುಕು ಕಳೆದುಕೊಂಡ ಅದೆಷ್ಟೋ ಜನರಿಗೆ ಸಹಾಯವಾಗಬಹುದೆಂದು ಭಾವಿಸಿ, ೨೦೨೧ರಲ್ಲಿ ‘ಡ್ರೀಮ್ ಚೇರ್ ಕ್ಲಬ್’ ಫೌಂಡೇಶನ್ ಹುಟ್ಟು ಹಾಕಿ ಲಕ್ಷಾಂತರ ಜನರಿಗೆ ಮೈಂಡ್ ಸೆಟ್ ಕೋಚ್ ಆಗಿ ದಾರಿ ತೋರಿಸುತ್ತಿದ್ದಾರೆ.”

 

 

Tags:
error: Content is protected !!