Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಅಪಾಯ : ಸಿಎಂ

Speculative journalism is a danger to society siddaramaiah

ಬೆಂಗಳೂರು : ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿ. ಇದು ಸಮಾಜಕ್ಕೂ ಅಪಾಯ. ಹೀಗಾಗಿ ಪತ್ರಕರ್ತರು ತನಿಖಾ ಪತ್ರಿಕೋದ್ಯಮದತ್ತ ಮುಖ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದರು.

ಸಾರ್ವಜನಿಕ ಸಂಪರ್ಕ ಹಾಗೂ ವಾರ್ತಾ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಪ್ರಜಾಪ್ರಭುತ್ವವಾದಿಯಾಗಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೇನೆ. ಆದರೆ ಊಹೆಯ ಪತ್ರಿಕೋದ್ಯಮ ಅಪಾಯಕಾರಿ ಎಂದರು.

ಪತ್ರಕರ್ತರು ತನಿಖೆ ಮಾಡಬೇಕು. ಆಗ ಸತ್ಯ ಗೊತ್ತಾಗುತ್ತದೆ. ಒಂದು ವೇಳೆ ಗೊತ್ತಾಗದೇ ಇದ್ದರೂ ಕನಿಷ್ಠ ಗಂಭೀರ ಪ್ರಯತ್ನ ನಡೆದಿರುವುದಾದರೂ ಗಮನಕ್ಕೆ ಬರುತ್ತದೆ. ಸತ್ಯ ಪತ್ತೆ ಹಚ್ಚುವ ಪ್ರಯತ್ನವನ್ನೇ ಮಾಡದೇ ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದು ಸರಿಯಲ್ಲ. ಅದು ಸತ್ಯ ಅಲ್ಲ ಎಂದು ಗೊತ್ತಾಗುತ್ತಿದ್ದಂತೆ ಏಕಾಏಕಿ ಅದನ್ನು ಬದಲಾವಣೆ ಮಾಡಲಾಗುತ್ತದೆ. ಇದು ಸಮಾಜಕ್ಕೆ ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಮಾಧ್ಯಮ ಸ್ವತಂತ್ರವಾಗಿ, ನಿರ್ಭೀತಿಯಿಂದ ಸುದ್ದಿ ಮಾಡಬೇಕು ಎನ್ನುವುದರಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು. ಜವಾಹರಲಾಲ್ ನೆಹರೂ ಅವರೂ ಇದನ್ನೇ ನಂಬಿದ್ದರು ಮತ್ತು ಪಾಲಿಸಿದ್ದರು. ಯಾವುದೇ ಚಾನಲ್ ಗಳು ನನ್ನ ಬಗ್ಗೆ ಎಷ್ಟು ಸುಳ್ಳು ಹೇಳಿದರೂ ನಾನು ಯಾರಿಗೂ ಫೋನ್ ಕೂಡ ಮಾಡುವುದಿಲ್ಲ ಎಂದರು.

ಜಾಗತಿಕವಾಗಿ 180 ರಾಷ್ಟ್ರಗಳಲ್ಲಿ ಭಾರತ ಪತ್ರಿಕಾ ಸ್ವಾತಂತ್ರ್ಯದಲ್ಲಿ 150ನೇ ಸ್ಥಾನದಲ್ಲಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸುಳ್ಳು ಸುದ್ದಿಗಳನ್ನು ಹತ್ತಿಕ್ಕಿ ನಿಜವಾದ ಸುದ್ದಿ ಸಮರ ಮುಂದುವರೆಯಬೇಕು ಎಂದು ಆಶಿಸಿದರು.

ಹಿರಿಯ ಪತ್ರಕರ್ತರಾದ ಪಿ.ಸಾಯಿನಾಥ್, ಸಾಹಿತಿ ರೆಹಮತ್ ತರೀಕರೆ, ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯಿಷಾ ಖಾನಂ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಪ್ರಭಾಕರ್, ವಾರ್ತಾ ಇಲಾಖೆಯ ಕಾರ್ಯದರ್ಶಿ ಕಾವೇರಿ, ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags:
error: Content is protected !!