ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲು ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗಳಿಗೆ ಬಳಸುವ ಮೂಲಕ ದಲಿತರಿಗೆ ವಿಶ್ವಾಸ ದ್ರೋಹ ಬಗೆಯುತ್ತಿದೆ ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಪದಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹದೇವಪ್ಪ ಮನೆಗೆ ಬುಧವಾರ ಮುತ್ತಿಗೆ ಹಾಕಿದರು.
ದಲಿತರನ್ನು ಆರ್ಥಿಕವಾಗಿ ಬಲಪಡಿಸುವ ಉದ್ದೇಶದಿಂದ ವಿಶೇಷವಾಗಿ ಮೀಸಲಿರಿಸಿರುವ ಹಣವನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬಳಸುವುದು ಸರ್ಕಾರದ ನಯವಂಚಕತನಕ್ಕೆ ಸಾಕ್ಷಿಯಾಗಿದೆ. ದಲಿತರ ಮೀಸಲು ಹಣ ದುರುಪಯೋಗವಾಗದಂತೆ ತಡೆಯಲು ಸರ್ಕಾರ ಕೂಡಲೆ 7 ಸಿ. ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದಸಂಸ ಹಿರಿಯ ಮುಖಂಡ ಇಂದೂಧರ ಹೊನ್ನಾಪುರ, ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಇರುವ ನಿಗಮಗಳಲ್ಲಿರುವ ದಲಿತರ ಮೀಸಲು ಹಣ ಕಾಯಲು ಕಾನೂನುಬದ್ದವಾದ ಕಾವಲು ಸಮಿತಿಗಳು ರಚನೆ ಆಗಬೇಕು, ಹೊರಗುತ್ತಿಗೆ ನೇಮಕಾತಿ ಮೀಸಲಾತಿಗೆ ವಿದಿಸಿರುವ ಅವೈಜ್ಞಾನಿಕ ನಿಯಮಗಳಿಗೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ದಸಂಸ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್ ಮಾತನಾಡಿ, ಸಂವಿಧಾನ ವಿರೋಧಿ ಮನಸ್ಥಿತಿಗಳನ್ನು ದೂರ ಇಡುವ ಕಾರಣದಿಂದ ಅನಿವಾರ್ಯವಾಗಿ ಕಾಂಗ್ರೆಸ್ ಬೆಂಬಲಿಸಿದ ದಲಿತರೆ ಇಂದು ಪಶ್ಚಾತ್ತಾಪ ಪಡುವಂತಾಗಿದೆ, ಕೂಡಲೆ ಮುಖ್ಯಮಂತ್ರಿಗಳು ಸರ್ಕಾರದಿಂದ ಆಗುತ್ತಿರುವ ಲೋಪಗಳನ್ನು ಸರಿಪಡಿಸಬೇಕು ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದು ಎಚ್ಚರಿಸಿದರು.
ಪಿ.ಟಿ.ಸಿ.ಎಲ್ ಕಾಯ್ದೆ ತೀರ್ಪಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿರುವುದು, ಪರಿಶಿಷ್ಟರ ಮಕ್ಕಳ ಮೆರಿಟ್ ಹಣ ಕಡಿತಗೊಳಿಸಿರುವುದು, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ದಲಿತ ವಿದ್ಯಾರ್ಥಿಗಳು ಸಂಶೋಧನಾ ಮಾಡಲು ಇದ್ದ ಪ್ರಬುದ್ಧ ಯೋಜನೆ ರದ್ದುಗೊಳಿಸಿರುವುದು, ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡದೇ ಇರುವುದು, ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡದಿರುವುದು, ಗ್ರಾಮ ಸಹಾಯಕರನ್ನು ಖಾಯಂ ಮಾಡದಿರುವುದು, ದಲಿತ ಹೋರಾಟಗಾರರ ಮೇಲಿನ ಪ್ರಕರಣ ವಜಾ ಆಗದಿರುವುದುನ್ನು ಪ್ರತಿಭಟನಾಕಾರರು ಖಂಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಎಚ್.ಸಿ ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಹೋರಾಟಗಾರರಾದ ಎನ್.ವೆಂಕಟೇಶ್, ವಿ.ನಾಗರಾಜ್, ಮರಿಯಪ್ಪಹಳ್ಳಿ, ಹುಲ್ಕೆರೆ ಮಹದೇವ್, ರಮೇಶ್ ಡಾಕುಳಕಿ, ಗಂಗನಂಜಯ್ಯ, ಬೆಟ್ಟಯ್ಯಕೋಟೆ, ಆಲಗೂಡುಶಿವಕುಮಾರ್, ಸಿ.ಜಿ.ಗಂಗಪ್ಪ, ಆನಂದ್, ಹಾರೋಹಳ್ಳಿ ರವಿ, ಬಾಲಕೃಷ್ಣ, ಯರಿಯೂರು ರಾಜಣ್ಣ, ಬಿ.ಡಿ.ಶಿವಬುದ್ದಿ, ನಂಜುಂಡಸ್ವಾಮಿ, ಶಂಭುಲಿಂಗ ಸ್ವಾಮಿ, ನಿಂಗರಾಜು, ಗದಗ್ ವೆಂಕಟೇಶಯ್ಯ, ಮರೆಪ್ಪ ಚಟೇರ್ಕರ್, ನಾಗರತ್ನ, ಜಯಂತಿ, ಜಯಮ್ಮ, ಕೃಷ್ಣಮೂರ್ತಿ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.