ಬೆಂಗಳೂರು: ಬೆಳಗಾವಿಯಲ್ಲಿ ಇಂದು ನಡೆಯುತ್ತಿರುವ ಸಮಾವೇಶವೂ 60 ಪರ್ಸೆಂಟ್ ವಸೂಲಿ ಮಾಡಿದ ನೆನಪಿನ ಜಾತ್ರೆಯೇ ಹೊರತು ಕಾಂಗ್ರೆಸ್ ಸಮಾವೇಶವಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಜನವರಿ.21) ಕಾಂಗ್ರೆಸ್ ಸಮಾವೇಶದ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಬೆಳಗಾವಿಯಲ್ಲಿ ಇಂದು ಮಹಾತ್ಮ ಗಾಂಧೀಜಿ ಹೆಸರಲ್ಲಿ ಕಾಂಗ್ರೆಸ್ ಸಮಾವೇಶ ಮಾಡಲಾಗಿದೆ. ಗಾಂಧೀಜಿ ಬಗ್ಗೆ ಅಷ್ಟೊಂದು ಪ್ರೀತಿ ಇದ್ದರೆ, ಕಾಂಗ್ರೆಸ್ ಭವನಕ್ಕೆ ಗಾಂಧೀಜಿ ಅಥವಾ ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರಿಡಬೇಕಿತ್ತು. ಆದರೆ ಅಂದಿನ ಸ್ವಾತಂತ್ರ್ಯ ಹೋರಾಟದಲ್ಲಿ ಸೋನಿಯಾ ಗಾಂಧಿಯಾಗಲೀ ಅಥವಾ ರಾಹುಲ್ ಗಾಂಧಿಯಾಗಲೀ ಭಾಗವಹಿಸಿಲ್ಲ. ಇನ್ನೂ ಕಾಂಗ್ರೆಸ್‌ನವರಿಗೆ ಗಾಂಧೀಜಿಯ ಹೆಸರು ಹೇಳುವ ನೈತಿಕತೆ ಇಲ್ಲ. ಹೀಗಾಗಿ ಇದು 60 ಪರ್ಸೆಂಟ್ ವಸೂಲಿ ಮಾಡುವ ನೆನಪಿನ ಜಾತ್ರೆಯೇ ಹೊರತು ಸಮಾವೇಶವಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಹಸುವಿನ ಕೆಚ್ಚಲು ಕತ್ತರಿಸಿದ್ದು, ಬ್ಯಾಂಕ್ ದರೋಡೆ ಮತ್ತು ಮಹಿಳೆ ಮೇಲಿನ ಅತ್ಯಾಚಾರ ಹೀಗೇ ಮೊದಲಾದ ಘಟನೆಗಳನ್ನು ಕಡೆಗಣಿಸಿ ಸರ್ಕಾರ ಸಮಾವೇಶ ಮಾಡಿದೆ. ಅಲ್ಲದೇ ಆಡಳಿತ ಸರ್ಕಾರವನ್ನು ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದರೆ, ಬಿಜೆಪಿ ಸರ್ಕಾರದ ಅವಧಿಗೆ ಹೋಲಿಸುತ್ತಾರೆ ಎಂದರೆ ಕಾಂಗ್ರೆಸ್ ಹೇಗೆ ಭಿನ್ನವಾಗುತ್ತದೆ? ಎಂದು ಪ್ರಶ್ನಿಸಿದರು.
ಇನ್ನೂ ಕಾಂಗ್ರೆಸ್ ಶಾಸಕರು ಸಹ ಅನುದಾನ ದೊರೆತಿಲ್ಲ ಎಂದು ಹೇಳುತ್ತಿದ್ದಾರೆ. ಗಾಂಧೀಜಿಯಂತೆ ಸರಳವಾಗಿರಬೇಕು ಎಂದು ಹೇಳಿದ್ದಾರೆ ಅಷ್ಟೇ. ಆದರೆ ಸಮಾವೇಶದ ಕಟೌಟ್‌ಗಳಲ್ಲಿ ಕಾಂಗ್ರೆಸ್‌ನ ವಿಜೃಂಭಣೆ ಕಂಡುಬಂದಿದೆ. ಇದು ನಕಲಿ ಗಾಂಧಿಗಳ ಸಮಾವೇಶ ಎಂದು ಕಿಡಿಕಾರಿದರು.
ವೀರ ಮಹಿಳೆ ಕಿತ್ತೂರು ಚೆನ್ನಮ್ಮಳಿಗೆ ಅಪಮಾನ: ಕಾಂಗ್ರೆಸ್ ಕ್ಷಮೆ ಕೋರಲಿ
ಕಿತ್ತೂರು ರಾಣಿ ಚೆನ್ನಮ್ಮ ಕರ್ನಾಟಕದ ವೀರ ಮಹಿಳೆ. ಅವರನ್ನು ಪ್ರಿಯಾಂಕಾ ವಾದ್ರಾಗೆ ಹೋಲಿಕೆ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಈ ಕೂಡಲೇ ಸಾರ್ವಜನಿಕರ ಕ್ಷಮೆ ಯಾಚಿಸಬೇಕು. ಇದರಿಂದ ಚೆನ್ನಮ್ಮಳಿಗೆ ಅಪಮಾನವಾಗಿದೆ. ಕಾಂಗ್ರೆಸ್ ಪಕ್ಷ ಕೂಡ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.