ಮೈಸೂರು: ಇಲ್ಲಿನ ಉದಯಗಿರಿ ಪೊಲೀಸ್ ಠಾಣೆಯ ಕಲ್ಲು ತೂರಾಟ ಪ್ರಕರಣವನ್ನು ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿ ಹೋಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ನಗರದ ಉದಯಗಿರಿ ಪೊಲೀಸ್ ಠಾಣೆಗೆ ಇಂದು(ಫೆಬ್ರವರಿ.11) ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಪೊಲೀಸ್ ಅಧಿಕಾರಿಗಳ ಬಗ್ಗೆ ಬಹಳ ಕೆಟ್ಟದಾಗಿ ಸಚಿವ ಕೆ.ಎನ್.ರಾಜಣ್ಣ ಅವರು ಮಾತನಾಡಿದ್ದಾರೆ. ರಾಜ್ಯದಲ್ಲಿ ಪೊಲೀಸ್ ಇಲಾಖೆಯೇ ಸರಿ ಇಲ್ಲ ಎನ್ನುವುದಾದರೆ ಪೊಲೀಸ್ ಠಾಣೆ ಮುಚ್ಚಿ ಬಿಡಿ. ಇಂತಹ ಘಟನೆಯೇ ಹುಬ್ಬಳ್ಳಿಯಲ್ಲಿಯೂ ನಡೆದಾಗ ಸಿಎಂ ಸಿದ್ದರಾಮಯ್ಯ ಅವರೇ ಆರೋಪಿಗಳಿಗೆ ಖುಲಾಸೆ ಮಾಡಿ ಎಂದು ಧೈರ್ಯ ತುಂಬಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಇದೇ ಸಾಕ್ಷಿ ಎಂದು ವಾಗ್ದಾಳಿ ನಡೆಸಿದರು.
ಪೊಲೀಸರು, ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆ ತರದೆ ಕಾಂಗ್ರೆಸ್ ಅವರ ಅಪ್ಪನ ಮನೆಗಳಿಗೆ ಕರೆದುಕೊಂಡು ಹೋಗಬೇಕಿತ್ತಾ? ಉದಯಗಿರಿ ಏನೂ ಪಾಕಿಸ್ತಾನದಲ್ಲಿ ಇದೆಯಾ? ಅಥವಾ ಉದಯಗಿರಿಗೇ ಬೇರೆ ಕಾನೂನು ಇದೆಯಾ? ಆ ಮಂತ್ರಿಗೇನು ಕಾಮನ್ ಸೆನ್ಸ್ ಇಲ್ವಾ? ಈ ಪ್ರಕರಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಾನೂನು ಉದಯಗಿರಿಗೆ ಅನ್ವಯ ಆಗಲ್ವಾ? ಸ್ವಲ್ಪ ಯಾಮಾರಿದ್ದರೆ ಪೊಲೀಸ್ ಠಾಣೆಯನ್ನೇ ಉಡೀಸ್ ಮಾಡಿ ಬಿಡುತ್ತಿದ್ದರು. ಈ ದೇಶದಲ್ಲಿ ಏನೇ ನಡೆದರು ಆರ್‌ಎಸ್‌ಎಸ್ ಕಾರಣನಾ? ಈ ಸರ್ಕಾರ ಬದುಕಿದೆಯಾ ಅಥವಾ ಸತ್ತು ಹೋಗಿದೆಯಾ ಗೊತ್ತಿಲ್ಲ ಎಂದು ಪ್ರಶ್ನಿಸಿದರು.
ಇನ್ನು ಗೃಹ ಸಚಿವರಿಗೆ ತಮ್ಮ ಇಲಾಖೆಯ ಬಗ್ಗೆಯೇ ಇಷ್ಟವಿಲ್ಲ. ಗೃಹ ಸಚಿವರಿಗೆ ಅವರದೇ ಇಲಾಖೆಯ ಮೇಲೆ ಆಸಕ್ತಿ ಇಲ್ಲ. ಒಟ್ಟಾರೆಯಾಗಿ ರಾಜ್ಯದಲ್ಲಿ ಸಂಪೂರ್ಣ ಕಾನೂನು ವ್ಯವಸ್ಥೆ ಹಾಳಾಗುರುವುದರಿಂದ ಈ ರಾಜ್ಯವನ್ನು ಆ ದೇವರೇ ಕಾಪಾಡಬೇಕು ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಉದಯಗಿರಿ ಪೊಲೀಸ್ ಠಾಣೆಯನ್ನು ಉಳಿಸುವ ಕೆಲಸ ಮಾಡಬೇಕು
ಸಿಎಂ ಸಿದ್ದರಾಮಯ್ಯ ಅವರು ಕೇವಲ ಆರು ತಿಂಗಳು ಮಾತ್ರ ಅಧಿಕಾರಲ್ಲಿರುತ್ತಾರೆ. ಆದರೆ ನಾನು ಈಗಾಗಲೇ ನವೆಂಬರ್ 15 ರವರೆಗೂ ಮಾತ್ರ ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎಂದು ಹೇಳಿದ್ದೀನಿ. ಇನ್ನು ಸಿಎಂ ಸಿದ್ದರಾಮಯ್ಯ ನಿದ್ದೆರಾಮಯ್ಯ ಆಗುವುದನ್ನು ಬಿಟ್ಟು ಈಗಲಾದರೂ ಆಡಳಿತದತ್ತ ಗಮನಹರಿಸಬೇಕು. ನಿಮಗಿರುವ ನವೆಂಬರ್‌ವರೆಗಿನ ಅವಧಿಯಲ್ಲಾದರೂ ಒಳ್ಳೆಯ ಕೆಲಸ ಮಾಡಬೇಕು. ಒಳಿತು ಮಾಡು ಮನುಷ್ಯ ನೀ ಇರೋದು ಮೂರೇ ದಿವಸ ಎನ್ನುವ ಹಾಗೇ ಉದಯಗಿರಿ ಪೊಲೀಸ್ ಠಾಣೆಯನ್ನು ಉಳಿಸುವ ಕೆಲಸ ಮಾಡಿ ಎಂದು ತಿಳಿಸಿದರು.