ವರ್ಷಕ್ಕೊಮ್ಮೆ ಎದುರುಗೊಳ್ಳುವ ಈ ಸುಂದರ ಕಾಲ ಹೊಸತೊಂದು ಯುಗದ ಆರಂಭಕ್ಕೆ ಭಾಷ್ಯ ಬರೆದಂತೆ ಭಾಸವಾಗುತ್ತದೆ. ಮಕ್ಕಳ ಹುಮ್ಮಸ್ಸನ್ನು ನೋಡುವುದೇ ಒಂದು ಸಂಭ್ರಮ. ನಮಗಿದು ವಸಂತಕಾಲ.
ಲೈಲಾ ಪರ್ವೀನ್
ಶಾಲೆಯಿರುವಾಗ ಶಾಲೆಯಾಯ್ತು ಮನೆಯಾಯ್ತು ಎಂಬಂತಿದ್ದು, ರಸ್ತೆ, ಪೇಟೆ, ಅಂಗಡಿ ಎಲ್ಲಿಯೂ ಕಾಣಸಿಗದ ಮಕ್ಕಳು ಈ ರಜಾ ದಿನಗಳಲ್ಲಿ ಬೆನ್ನಿಗೊಂದು ಬ್ಯಾಗು ಏರಿಸಿಕೊಂಡು ಆ ಬಸ್ಸು ಈ ಬಸ್ಸು ಹತ್ತಿ ಇಳಿದು ಅಜ್ಜಿ ಮನೆಗೋ, ಚಿಕ್ಕಮ್ಮನ ಮನೆಗೋ ಹೋಗಿಬರುವುದನ್ನು ನೋಡುವುದೊಂದು ಚಂದ. ಶಾಲೆ ಬ್ಯಾಗಿನಲ್ಲೇ ಬಟ್ಟೆ ತುರುಕಿಕೊಂಡು ರಜೆಯ ಸವಿಯನ್ನು ಸವಿಯ ಹೊರಟ ಪುಟಾಣಿಗಳೆಲ್ಲ ಈಗ ಹಿಂತಿರುಗಿ ಬಂದಿದ್ದಾರೆ. ರಜೆಯಲ್ಲಿ ಸಂಬಂಧಿಕರ ಮನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಖುಷಿ ಪಟ್ಟು, ಶಾಲಾ ದಿನಗಳ ಸಮಯ ಪಾಲನೆ, ಶಿಸ್ತು ಯಾವುದರ ಗೊಡವೆಯೂ ಇಲ್ಲದೆ ರಜೆ ಸವಿದದ್ದಾಯ್ತು. ಕೆಲವರಿಗೆ ಬೇಸಿಗೆ ಶಿಬಿರದ ಅನುಭವ ಸಿಕ್ಕಿತು. ಇನ್ನು ಕೆಲವರು ಈಜಾಟ, ಕ್ರಿಕೆಟ್ ಅಂತ ಒಂದಿಷ್ಟು ಹೊಸತನ್ನು ಕಲಿತದ್ದಾಯ್ತು. ಕೆಲವರು ದೂರದೂರುಗಳಿಗೆ ಪ್ರವಾಸ. ಎಲ್ಲ ಮುಗಿಯಿತೀಗ.
ಇನ್ನೇನು ಶಾಲೆ ಶುರು
ಹಾರಾಟ ಕುಣಿದಾಟ ಮುಗಿದು ಹಕ್ಕಿ ಮರಿಗಳೆಲ್ಲ ಗೂಡುಸೇರಿವೆ. ಹೊತ್ತು ಹೋದ ಬಟ್ಟೆ ಚೀಲವನ್ನು ರಜೆಯ ನೆನಪುಗಳ ಸಮೇತ ಕೆಳಗೆ ಕೊಡವಿ, ಆ ವಸ್ತುಗಳನ್ನೆಲ್ಲ ಜೋಡಿಸಿಟ್ಟಾಯ್ತು. ಅಮ್ಮ ಶಾಲೆ ಚೀಲವನ್ನು ತೊಳೆದಿಟ್ಟಾಯ್ತು. ಈ ವರ್ಷಕ್ಕೆ ಸಂಬಂಧಪಟ್ಟದ್ದನ್ನು ಚೀಲಕ್ಕೆ ತುಂಬಿಸಿಕೊಂಡು ಶಾಲೆಗೆ ಹೊರಡುವುದೊಂದೇ ಬಾಕಿ.
ಮಕ್ಕಳ ವಿಷಯ ಹೀಗೆ. ಶಿಕ್ಷಕರದ್ದೂ ಹೆಚ್ಚು ಕಡಿಮೆ ಮಕ್ಕಳದೇ ಮನಸ್ಥಿತಿ. ಸಮೀಕ್ಷೆಯಲ್ಲಿ ಕರಗಿ ನೀರಾಗಿ, ಅಗತ್ಯದ ಕಾರ್ಯಕ್ರಮಗಳಿಗೆಲ್ಲ ಹೋಗಿ ಮುಗಿಸಿ, ದಕ್ಕಿದ ಕೆಲವೇ ರಜಾದಿನಗಳಲ್ಲಿ ಮಾಡಬೇಕಿದ್ದ ಕೆಲಸಗಳನ್ನೆಲ್ಲ ಮಾಡಿಕೊಂಡು ಶಾಲೆ ಕಡೆ ಹೆಜ್ಜೆ ಹಾಕುತ್ತಿರುವ ಶಿಕ್ಷಕರಿಗೂ ಇಂದು ಹೊಸ ವರ್ಷದ ಮೊದಲ ದಿನವೆಂಬಂತಹ ಸಂಭ್ರಮ. ಶಾಲೆಗಳಿಗೆ ಜೂನ್‌ನಿಂದಲೇ ವರ್ಷಾರಂಭ. ಏಪ್ರಿಲ್ ತಿಂಗಳವರೆಗೆ ಮುಂದುವರಿಯುವ ಹೊಸತೊಂದು ವರ್ಷ ಈಗ ನಮ್ಮ ಕೈಗೆ ಬಂದಿದೆ. ಇಂದಿನಿಂದ ಇದೇ ನಮ್ಮನ್ನು ಮುನ್ನಡೆಸುತ್ತದೆ. ನಮ್ಮದೇ ಆದ ಸಂತಸ ಸಂಭ್ರಮಗಳೂ, ಚಿಂತೆಗಳೂ ಇಂದಿನಿಂದಲೇ ಪ್ರಾರಂಭ. ಇದು ಹೊಸ ಯುಗಾರಂಭ.
ಶಾಲೆಯಲ್ಲಿ ಪ್ರಾರಂಭೋತ್ಸವದ ಗಮ್ಮತ್ತು. ಮಾವಿನ ತೋರಣ ಕಟ್ಟುವ ಹುಮ್ಮಸ್ಸಿನಲ್ಲಿ ಮಕ್ಕಳು ಮನೆಯಿಂದ ಮಾವಿನ ಎಲೆಗಳನ್ನು ತಂದು ರಾಶಿಹಾಕಿ ಉದ್ದನೆಯ ಹಗ್ಗಕ್ಕೆ ಒಂದೊಂದೇ ಎಲೆ ಸಿಕ್ಕಿಸಿ ಹೆಣೆಯುತ್ತಿವೆ. ಮುಖ್ಯೋಪಾಧ್ಯಾಯರು ಶಾಲೆಯ ಸಕಲ ವ್ಯವಸ್ಥೆಗಳ ತಯಾರಿಯಲ್ಲಿ ತಲ್ಲೀನರು. ಶಾಲೆಯ ನೀರಿನ ಟ್ಯಾಂಕಿಗೆ ತಾನೇ ಹತ್ತಿ ಸ್ವಚ್ಛಗೊಳಿಸಿ ಇಟ್ಟಿದ್ದಾರೆ. ಮೊದಲ ದಿನ ಶಾಲೆಗೆ ಬರುವ ಮಕ್ಕಳಿಗೆ ಸಿಹಿ ಲಡ್ಡು ಹಂಚಲೋ, ಪಾಯಸ ಮಾಡಿಸಲೋ ಎಂಬ ಮಾತುಕತೆ ಶಿಕ್ಷಕರ ನಡುವೆ ನಡೆದಿದೆ. ಶಾಲೆಯ ಸುತ್ತಮುತ್ತಲಿನ ಕಸ ತೆಗೆಸಿ ಸ್ವಚ್ಛಗೊಳಿಸಿ, ಹೊಸ ಮಳೆಗೆ ಚಿಗುರಿ ಬಂದ ಹುಲ್ಲನ್ನು ಸವರಿ ಆ ಜಾಗವನ್ನು ಮಕ್ಕಳು ಆರಾಮವಾಗಿ ನಡೆದಾಡಲು ಅಣಿಗೊಳಿಸಿಯಾಗಿದೆ. ಸುತ್ತಮುತ್ತಲಿನ ವಿದ್ಯುತ್ ತಂತಿಗಳು ತುಂಡಾಗಿ ಜೋತುಬಿದ್ದಿವೆಯೋ, ಮರಗಳೇನಾದರೂ ವಾಲಿವೆಯೋ, ಕಾಂಪೌಂಡು ಗೋಡೆಯಲ್ಲಿ ಬಿರುಕಿದೆಯೋ, ಇಲಿಗಳೇನಾದರೂ ವಯರ್ ಕಚ್ಚಿ ಹರಿದು ಅಪಾಯಕ್ಕೆ ತಂದಿಟ್ಟಿವೆಯೋ, ಈ ಸಲ ಎಲ್ಲೆಲ್ಲಿ ಮಳೆನೀರು ನಿಂತು ಪಾಚಿಕಟ್ಟಿ ಮಕ್ಕಳು ಜಾರುವ ಸಂಭವವಿದೆ ಎಲ್ಲವನ್ನೂ ಪರೀಕ್ಷಿಸಿ ನೋಡಿಯಾಯ್ತು. ಅಗತ್ಯವಿರುವ ಪೇಪರು ಪುಸ್ತಕಗಳು, ವಹಿಗಳು, ಲೇಖನ ಸಾಮಗ್ರಿಗಳು, ಶಾಲಾ ಸ್ವಚ್ಛತೆಗೆ ಬೇಕಾದ ಪರಿಕರಗಳು, ಶೌಚಾಲಯಕ್ಕೆ ಹೊಸ ಮಗ್ಗು, ಬಕೇಟು ಎಲ್ಲ ತಂದಿಟ್ಟದ್ದಾಯ್ತು.
ಇನ್ನೇನು ಶಾಲೆ ಶುರುವೇ…
ಬೆಳಿಗ್ಗೆ ಒಂಬತ್ತು ಗಂಟೆಯೊಳಗೆ ಮಕ್ಕಳು ಶಾಲಾ ಆವರಣಕ್ಕೆ ಬಂದು ಸೇರಿಯೇಬಿಟ್ಟರು. ಶಾಲೆಯಿಂದ ದೂರವಿದ್ದು ವರ್ಷಗಳೇ ಕಳೆದಿವೆ ಎಂಬಂತೆ, ಆರಂಭಕ್ಕೆ ಕಾಯುತ್ತಿದ್ದರೋ ಎಂಬಂತೆ. ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಏನೇನು ಮಾಡಬೇಕೆಂದು ನಾವು ಹೇಳಬೇಕೆಂದಿಲ್ಲ. ಅದು ವರ್ಷವಿಡೀ ನಡೆಯುವ ಚಟುವಟಿಕೆಯಾದ್ದರಿಂದ ಮಕ್ಕಳು ಸದಾ ತಯಾರು. ನಾಡಗೀತೆ ಹಾಡಿ, ಸುದ್ದಿಪತ್ರಿಕೆ ಓದಿ, ಗಾದೆ ಮಾತು, ನುಡಿಮುತ್ತು, ಸಂವಿಧಾನದ ಪೀಠಿಕೆ ಎಲ್ಲವನ್ನೂ ಶಿಸ್ತುಬದ್ಧವಾಗಿ ಮುಗಿಸಿದರು. ಶಾಲೆಗೆ ರಜೆ ಸಿಕ್ಕಿಯೇ ಇರಲಿಲ್ಲವೆಂಬಂತೆ, ನಿತ್ಯವೂ ನಡೆಯುವಂತೆ ಬಹಳ ಸಹಜವಾಗಿ ಎಲ್ಲವೂ ನಡೆಯಿತು.
ಮಕ್ಕಳಿಗೆ ತಮಗೆ ದೊರೆತ ಹೊಸ ತರಗತಿ ಕೋಣೆಯನ್ನು ಸಿಂಗರಿಸುವ ಆಸೆ. ತಾವೇ ಬಣ್ಣದ ಕಾಗದ, ರಟ್ಟು, ಅಂಟು, ರಿಬ್ಬನ್ನು, ಹೊಳೆವ ಪುಡಿಗಳನ್ನೆಲ್ಲ ತಂದು ಏನೇನೋ ಆಕೃತಿ ಆಕಾರಗಳನ್ನು ಸೃಷ್ಟಿಸಿ ಕೋಣೆಯನ್ನು ಮನೆಯೆಂಬಂತೆ ಸಿಂಗರಿಸಹೊರಟಿದ್ದಾರೆ. ಇನ್ನಷ್ಟು ಮಂದಿ ಸುತ್ತಮುತ್ತ ದೊರೆವ ಹೂಗಳನ್ನೆಲ್ಲ ಹೆಕ್ಕಿ ತಂದು ಹೂವಿನ ರಂಗೋಲಿಯನ್ನು ಅರಳಿಸುತ್ತಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಕೆಲವರದ್ದು ಭಾಷಣ. ಇನ್ನು ಕೆಲವರದ್ದು ಹಾಡು. ಎಲ್ಲ ಬಗೆಯ ಪ್ರತಿಭೆಗಳು ಮೇಳೈಸಿರುವ ಶಾಲೆಯೆಂಬ ಮಹಾನ್ ರಂಗಸ್ಥಳದಲ್ಲಿ ಪುಟ್ಟ ಪುಟ್ಟ ಪ್ರತಿಭೆಗಳು ತಮ್ಮ ಅಸ್ಮಿತೆಯನ್ನು ಮೆರೆಯುತ್ತವೆ.
ಇಲ್ಲಿ ಕೆಲವರಿಗೆ ಈ ಸಲದ ಶಾಲಾ ಮಂತ್ರಿಮಂಡಲಕ್ಕೆ ತಾನೇ ನಾಯಕನಾಗುವ ಕನಸು. ಇನ್ನೊಂದಿಷ್ಟು ಮಂದಿಗೆ ತಾವು ಕ್ರೀಡಾಮಂತ್ರಿಯಾಗುವ ಮನಸು. ಉಳಿದೆಲ್ಲ ಮಂತ್ರಿ ಪದವಿಗಳ ಆಸಕ್ತಿ ಯಾರಿಗೂ ಇಲ್ಲ. ಆ ಸ್ವಚ್ಛತೆ, ಶಿಸ್ತು, ಆರೋಗ್ಯ, ಶಿಕ್ಷಣ, ಗೃಹ ಇಲಾಖೆಗಳೆಲ್ಲ ಯಾರಿಗೂ ಬೇಡವಂತೆ. ಅದನ್ನೆಲ್ಲ ಹಂಚಿಕೊಡುವ ಕೆಲಸ ಶಿಕ್ಷಕರಿಗೆ ಇದ್ದೇ ಇದೆ. ಕ್ರೀಡಾ ಇಲಾಖೆ ಮಾತ್ರವೇ ಎಲ್ಲರ ಮೇರು ಆಕರ್ಷಣೆ. ಆ ವಯಸ್ಸೇ ಹಾಗಲ್ಲವೇ? ಪಾಠವೂ ಆಟದಂತೆ ಬೇಕು ಅವರಿಗೆ.
ಕಳೆದ ವರ್ಷ ಒಂಬತ್ತನೇ ತರಗತಿಯಲ್ಲಿದ್ದವರು ಹತ್ತನೇ ತರಗತಿಗೆ ಪ್ರವೇಶಿಸಿದ್ದಾರೆ. ಈ ಸಲ ನಿಮಗೆ ಪಬ್ಲಿಕ್ಕೂ… ಗೊತ್ತಿದೆಯಲ್ಲಾ ಎಂದು ಶಿಕ್ಷಕರು ಹೇಳಿ ಮೆಲ್ಲಗೆ ಕಡಿವಾಣದ ಸೂಚನೆ ಕೊಟ್ಟಿದ್ದಾರೆ. ಬಿಚ್ಚಹೊರಟ ಬಾಲಗಳನ್ನೆಲ್ಲ ಅಲ್ಲಲ್ಲೇ ಮುದುರಿ ಕೂತಂತೆ ಕಂಡಾಗ ಕನಿಕರಗೊಂಡು ಬನ್ನೀ… ಇವತ್ತು ಶಾಲಾ ಪ್ರಾರಂಭೋತ್ಸವ… ಅಂತ ಮತ್ತೆ ಕರೆದಿದ್ದಾರೆ. ಕಳೆದ ವರ್ಷ ಇಡೀ ಶಾಲೆಯಲ್ಲಿ ಚಿಕ್ಕವರೆಂಬ ಕಾರಣಕ್ಕೆ ಹೆಚ್ಚು ಅಕ್ಕರೆ ಪ್ರೀತಿಗೆ ಪಾತ್ರರಾಗಿ, ಮಾಡಿದ ತಪ್ಪುಗಳನ್ನೆಲ್ಲ ಚಿಕ್ಕವರಲ್ವಾ ಎಂದು ಮನ್ನಿಸಲ್ಪಟ್ಟು ಬುದ್ಧಿ ಹೇಳಿಸಿಕೊಂಡು ಮತ್ತೆ ಆ ತಪ್ಪು ಮಾಡದೆ ಶಿಕ್ಷಕರ ಪ್ರೀತಿಯನ್ನು ಇನ್ನಷ್ಟು ಪಡೆದ ಎಂಟನೇ ತರಗತಿಯವರೆಲ್ಲ ಪಾಸಾಗಿ ಒಂಬತ್ತನೇ ತರಗತಿಗೆ ಬಂದು ಕೂತು ಸ್ವಲ್ಪ ದೊಡ್ಡವರೆನಿಸಿಕೊಂಡಿದ್ದಾರೆ.
ಈಗಿನ್ನೂ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಪ್ರವೇಶ ಪಡೆದಿರುವ ಎಂಟನೇ ತರಗತಿ ಪುಟಾಣಿಗಳು ಹೊಸ ಶಾಲೆ ಎಂಬ ಸಣ್ಣ ಭಯದ ಜೊತೆ ಶಿಕ್ಷಕರ ಕಡೆ ಓರೆನೋಟಬೀರುತ್ತಾ ನಡೆದಾಡುವುದು ಕಾಣುತ್ತಿದೆ. ಅರಳು ಕಂಗಳು, ತೇಜಸ್ವೀ ಮುಖಗಳು, ಆರಂಭದ ದಿನವೇ ಕಾಣುವ ಒಂದಿಷ್ಟು ತುಂಟಾಟಗಳಿಂದ ಉಲ್ಲಾಸದ ಕಣಜವೇ ಆಗಿದೆ ಆ ತರಗತಿ ಕೋಣೆ. ಮೆಲ್ಲಗೆ ಶಿಕ್ಷಕರ ಬಳಿ ಬಂದು ನಗು ಬೀರಿ ಮರೆಯಾಗುವ, ಪ್ರೀತಿ ಗಿಟ್ಟಿಸಿಕೊಳ್ಳಲು ಹೊಂಚುಹಾಕುವ ಸರದಾರರಿಗೇನೂ ಕೊರತೆಯಿಲ್ಲ. ಈಗಿನಿಂದಲೇ ಮುಗ್ಧ ತಯಾರಿ ಇವರದ್ದು. ಇನ್ನು ಮೂರು ವರ್ಷ ಇವರೇ ನಮ್ಮನ್ನು ಆಳುತ್ತಾರೆ. ಇವರೊಂದಿಗೆ ನಾವೆಷ್ಟೋ ಕಲಿಯುತ್ತೇವೆ. ವಯಸ್ಸನ್ನು ಮರೆತು ಮಕ್ಕಳಾಗುತ್ತೇವೆ.
lailaparveen0603@gmail.com




