ವರ್ಷವಿಡೀ ಪಾಠ ಮಾಡಿ ಸುಸ್ತಾದ ಶಿಕ್ಷಕರು ಬೇಸಿಗೆ ರಜಕ್ಕಾಗಿ ಎಷ್ಟೇ ಹಂಬಲಿಸಿದರೂ ಕೂಡ ರಜೆ ಮುಗಿಯುವ ಹೊತ್ತಿಗೆ ಬೇಸರವಾಗಿ ಎಷ್ಟು ಬೇಗ ಶಾಲೆ ಶುರುವಾಗುವುದು ಎನಿಸಿ ಬಿಡುವುದುಂಟು. ಆ ಮಕ್ಕಳ ಕಲರವ, ಮುಗ್ಧತೆ, ಕೀಟಲೆಗಳು, ಪಾಠ ಹೇಳಿಕೊಡುವ ಮಜಾ, ಶಾಲಾ ವಾತಾವರಣ ಎಲ್ಲವೂ ರಜೆಯಿಂದ ಶಾಲೆಗೆ ಜಗ್ಗುತ್ತಿರುತ್ತವೆ.
ಸ್ವಾಮಿ ಪೊನ್ನಾಚಿ
‘ಯಾರಲ್ಲಿ?’ ಎಂದರೆ ‘ಮಹಾಸ್ವಾಮಿ ಏನಪ್ಪಣೆ’ ಎನ್ನುತ್ತಾ ಒಬ್ಬ ಸೇವಕ ರಾಜನ ಮುಂದೆ ನಿಲ್ಲುತ್ತಿದ್ದ. ಸಾಮಾನ್ಯರಾದ ನಾವು ‘ಯಾರಲ್ಲಿ’ ಎಂದರೆ ‘ಯಾರೂ ಇಲ್ಲ ಇಲ್ಲಿ’ ಎನ್ನುವವರೇ ಹೆಚ್ಚು. ಪರಿಸ್ಥಿತಿ ಹೀಗಿರುವಾಗ ಯಾವತ್ತಿಗೂ ರಾಜರಂತೆ ಬದುಕುವವರೆಂದರೆ ಶಾಲಾ ಶಿಕ್ಷಕರೇ! ಯಾರೋ ಅಲ್ಲಿ ಎಂದರೆ ಒಬ್ಬರಲ್ಲ! ಹತ್ತಾರು ಮಂದಿ ಓಡಿಬಂದು “ಏನ್ ಸರ್” ಎಂದು ನಿಂತುಕೊಳ್ಳುತ್ತಾರೆ. ಮುಂದುವರಿದು ಮೇಷ್ಟ್ರು ಹಿಡಿದಿರುವ ಬ್ಯಾಗನ್ನು ಬಾಗಿಲಲ್ಲೇ ಕಿತ್ತುಕೊಂಡು ಆಫೀಸಿನ ತನಕ ಒಯ್ಯುತ್ತಾರೆ. ಮೇಸ್ಟರ ಒಂದು ಕೆಲಸ ಮಾಡಲು ಹತ್ತಾರು ವಿದ್ಯಾರ್ಥಿಗಳು ವಿಧೇಯರಾಗಿ ನಿಲ್ಲುತ್ತಾರೆ. ಇಂತಹ ವಿದ್ಯಾರ್ಥಿಗಳನ್ನು ಅನ್ನ ಕೊಡುವ ದೇವರೆಂದೇ ಅದೆಷ್ಟೋ ಶಿಕ್ಷಕರ ಭಾವಿಸಿದ್ದಾರೆ.
ಬೇಸಿಗೆ ರಜೆ ಬಂತೆಂದರೆ ಶಿಕ್ಷಕರಾದ ನಾವು ಸಿಂಹಾಸನದಿಂದ ಕೆಳಗಿಳಿದ ರಾಜರಂತೆ. ಕ್ಯಾರೆ ಎನ್ನುವವರಿಲ್ಲ. ಮನೆಯಲ್ಲಿ ನೀರು ಕೊಡೆ ಎಂದರೆ ತೆಗೆದುಕೊಂಡು ಕುಡಿಯಿರಿ ಎನ್ನುವ ಹೆಂಡತಿ, ಊಟ ಬಡಿಸಿ ಮಕ್ಕಳೇ ಎಂದರೆ, ಕೆಲಸ ಇದೆ. ನೀನೆ ಸ್ವಲ್ಪ ಬಡಿಸಿಕೊ ಅಪ್ಪ ಎನ್ನುವ ಮಕ್ಕಳು. ಆಗೆಲ್ಲ ಈ ಶಾಲೆಯ ಮಕ್ಕಳು ನೆನಪಾಗಿ ಬಿಡುತ್ತಾರೆ. ಜೂನ್ ತಿಂಗಳಲ್ಲಿ ಶಾಲೆ ಪ್ರಾರಂಭವಾಗುವ ಹೊತ್ತಿಗೆ ನಮ್ಮ ತಲೆ ಮೇಲೆ ಮತ್ತೊಮ್ಮೆ ಕಿರೀಟ ಏರಿಬಿಟ್ಟಿರುತ್ತದೆ.
ಅಂದಹಾಗೆ ವರ್ಷವಿಡೀ ಪಾಠ ಮಾಡಿ ಸುಸ್ತಾದ ಶಿಕ್ಷಕರು ಬೇಸಿಗೆ ರಜಕ್ಕಾಗಿ ಎಷ್ಟೇ ಹಂಬಲಿಸಿದರೂ ಕೂಡ ರಜೆ ಮುಗಿಯುವ ಹೊತ್ತಿಗೆ ಬೇಸರವಾಗಿ ಎಷ್ಟು ಬೇಗ ಶಾಲೆ ಶುರುವಾಗುವುದು ಎನಿಸಿ ಬಿಡುವುದುಂಟು. ಆ ಮಕ್ಕಳ ಕಲರವ, ಮುಗ್ಧತೆ, ಕೀಟಲೆಗಳು, ಪಾಠ ಹೇಳಿಕೊಡುವ ಮಜಾ, ಶಾಲಾ ವಾತಾವರಣ ಎಲ್ಲವೂ ರಜೆಯಿಂದ ಶಾಲೆಗೆ ಜಗ್ಗುತ್ತಿರುತ್ತವೆ. ಜೂನ್ ಬಂತು ಎಂದರೆ ನಮಗೆ ಸುಗ್ಗಿ ಕಾಲ. ರಜೆಯ ಆಯಾಸವೆಲ್ಲ ಕಳೆದು ಹೊಸದಾಗಿ ಹುರುಪುಗೊಂಡ ರಣ ಬೇಟೆಗಾರರಂತೆ ಸಜ್ಜಾಗಿಬಿಡುತ್ತೇವೆ ಪಾಠ ಮಾಡಲು.
ಮೊನ್ನೆ ಮೊದಲ ದಿನ ಶಾಲೆಗೆ ಹೋದಾಗ ಐಕಳು ಯಾರೂ ಬಂದಿರಲಿಲ್ಲ. ಅಡುಗೆಯವರಿಂದ ಕೀ ತರಿಸಿ ಗೇಟು ತೆರೆದು ಒಳಗೆ ಹೋಗಿದ್ದೇ ಮೇಷ್ಟ್ರು ಬಂದಿರುವ ಸುದ್ದಿ ಮ್ಯಾರಾಥಾನ್ ರೀತಿ ಸುದ್ದಿ ತಲುಪಿ ಅದ್ಯಾವ ಓಣಿಯಲ್ಲಿ ಯಾವ ಆಟ ಆಡಿಕೊಂಡು ನಿಂತಿದ್ದರೋ ಒಬ್ಬೊಬ್ಬರಾಗಿ ಶಾಲೆಯ ಒಳಗಡೆ ಬಂದರು. ಮೊದಲ ನೋಟಕ್ಕೆ ಈ ಐಕಳು ನಮ್ಮ ಶಾಲೆಯವ ಅಥವಾ ಬೇರೆಯವ ಎನ್ನುವಷ್ಟರ ಮಟ್ಟಿಗೆ ದಿಕ್ಕಾಪಾಲಾಗಿ ಕಾಣಿಸುವುದಕ್ಕೆ ಶುರು ಮಾಡಿದರು.
ಶಾಲೆ ಬಿಡುವ ಸಮಯದಲ್ಲಿ ನೀಲಿ ಯೂನಿಫಾರ್ಮ್ ಹಾಕೊಂಡು ಗುಲಾಬಿ ಬಣ್ಣದಿಂದ ಹೂಗಳಂತೆ ಕಂಗೊಳಿಸುತ್ತಿದ್ದ ಮಕ್ಕಳು, ಬೇಸಿಗೆಯಲ್ಲಿ ಮನೆಯಿಂದ ಹೊರಗೆ ತಿರುಗಿ ತಿರುಗಿ ಬಿಸಿಲಿಗೆ ಸುಟ್ಟ ಕಪ್ಪು ಇದ್ದಲಿನಂತೆ ಕರ್ರಗೆ ಆಗಿಬಿಟ್ಟಿದ್ದರು. ಅವರ ತಲೆ ಕೂದಲು ಜೇನುಗೂಡೇ! ಪೊದೆಯಂತೆ ಬೆಳೆದುಕೊಂಡು ತಲೆ ಮೇಲೆ ಗುಪ್ಪೆ ಹಾಕಿದಂತೆ ಕಾಣಿಸುತ್ತಿತ್ತು.
ಚಿತ್ರವಿಚಿತ್ರ ತರಹೇವಾರಿ ಬಟ್ಟೆ ಹಾಕಿಕೊಂಡು ಕಾಡುಸೋಲಿಗರಂತೆ ಕಾಣುತ್ತಿದ್ದರು. ಎರಡು ತಿಂಗಳು ರಜೆಯಲ್ಲಿ ಐಕಳು ಏನಾಗಿ ಬಿಟ್ಟಿರಪ್ಪ ಎನ್ನುವಷ್ಟು ಬದಲಾವಣೆ. ಹತ್ತಿರ ಬಂದು ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ‘ನಮಸ್ತೆ ಸಾರ್’ ಎಂದಾಗ ಮಾತ್ರ ಇವ ನಮ್ಮ ಶಾಲೆಯ ಮಗು ಎಂದು ಗುರುತು ಸಿಗುತಿತ್ತು. ಕ್ರಿಕೆಟ್ ಆಡುವಾಗ ಬಿದ್ದ ಮಂಡಿ ತರಚಿದ ಗಾಯಗಳು ಇನ್ನು ಮಾಗಿರಲಿಲ್ಲ. ಒಬ್ಬ ಹಣೆ ತೂತು ಮಾಡಿಕೊಂಡಿದ್ದ. ಬಾವಿಯಲ್ಲಿ ಫಿಶ್ ಡೈವ್ ಮಾಡುತ್ತೇನೆಂದು ಉಲ್ಟಾ ಪಲ್ಟಾ ನೆಗದು ಮೆಟ್ಟಿಲು ಕಲ್ಲಿಗೆ ತಲೆ ಕೊಟ್ಟು ಬುರುಡೆ ಸೀಳಿಕೊಂಡಿದ್ದ. ಥೂ, ಈ ಐಕಳಿಗೆ ರಜ ಕೊಟ್ಟರೆ ಏನೆಲ್ಲ ಅವಾಂತರಗಳನ್ನು ಮಾಡಿಕೊಳ್ಳುತ್ತವೆ ಎಂದು ಸೋಜಿಗವಾಯಿತು.
ಅಪರೂಪಕ್ಕೆ ರಜೆಯಲ್ಲಿ ಹೊಡೆದ ಎರಡು ಮಳೆಯಿಂದ ಶಾಲಾ ಅಂಗಳದ ನೀರು ತುಂಬಿ ತುಳುಕಿ, ಬಾಗಿಲು ಮೂಲಕ ನುಗ್ಗಿ ಇಡೀ ತರಗತಿ ಕೋಣೆಯನ್ನು ಕೆಸರುಮಯ ಮಾಡಿತ್ತು. ಶಿಕ್ಷಕರಿಗೆ ಇದೊಂದು ದೊಡ್ಡ ತಲೆನೋವು. ಈಗ ಮಕ್ಕಳಿಂದ ಕೆಲಸ ಮಾಡಿಸುವಂತಿಲ್ಲ ಎಂಬ ಕಾನೂನು ಯಾರಾದರೂ ಅಽಕಾರಿಗಳು ಬಂದು ಬಿಡುವರೇನೋ ಎಂಬ ಭಯದಿಂದಲೇ ಗೇಟ್‌ನಲ್ಲಿ ಒಬ್ಬನನ್ನು ನಿಲ್ಲಿಸಿ ಯಾರಾದರೂ ಬಂದರೆ, ಬಂದು ಹೇಳು ಎನ್ನುತ್ತಾ ಇರುವ ನಾಲ್ಕು ಮಕ್ಕಳನ್ನೇ ಕಟ್ಟಿಕೊಂಡು ತೊಳೆದು ಒರೆಸಿ ಎಲ್ಲಾ ವಸ್ತುಗಳನ್ನು ಸರಿ ಮಾಡಿ ಅಬ್ಬಾ ಸರಿ ಹೋಯಿತು ಅನ್ನುವಷ್ಟರಲ್ಲಿ ಅದೆಲ್ಲಿರುತ್ತಾನೋ ಎಸ್‌ಡಿಎಂಸಿ ಅಧ್ಯಕ್ಷ, ಎಲ್ಲ ಮುಗಿದ ಮೇಲೆ ‘ಏನು ಮೇಷ್ಟ್ರೇ ಒಂದು ಮಾತು ಹೇಳದೇ ಬಂದು ಬಿಟ್ಟಿದ್ದೀರಿ? ಎಂದು ತನ್ನ ಅಪ್ಪಣೆ ಪಡೆಯದೆ ಬಂದುದಕ್ಕೆ ವ್ಯಂಗ್ಯವಾಡುತ್ತಾನೆ. “ಇಲ್ಲಿ ನೋಡಿ ಅಧ್ಯಕ್ಷರೇ, ಆ ಮರ ಕಡಿಸಬೇಕಾಗಿತ್ತು. ಬನ್ನಿ ನಿಮಗೆ ಕಾಯುತ್ತಿದ್ದೆ” ಎನ್ನುತ್ತಾ ಮೇಷ್ಟರು ಹತ್ತಿರ ಹೋದರೆ ಬಂದೆ ಇರಿ ಎಂದು ಅಲ್ಲಿಂದ ಕಾಲ್ ಕಿತ್ತು ಬಿಡುತ್ತಾನೆ. ನನ್ನ ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ಪುಣ್ಯಕ್ಕೆ ಅಂತಹವನಲ್ಲ.
ಸರಿ, ಎಲ್ಲವನ್ನೂ ನೀಟು ಮಾಡುವ ಎಂದು ನಲ್ಲಿಗೆ ಹೋಸ್ಪ್ತ್ಯೈಪ್ ಜೋಡಿಸಿದರೆ ನಲ್ಲಿಯಲ್ಲಿ ಒಂದು ತೊಟ್ಟೂ ನೀರಿಲ್ಲ. ರಜೆಯಲ್ಲಿ ನಮ್ಮ ಶಾಲೆಯ ಮಕ್ಕಳ ಜೊತೆಗೆ ಬೇರೆ ಊರಿನಿಂದ ಬರುವ ಮಕ್ಕಳು ಸೇರಿಕೊಂಡು ಶಾಲಾ ಆವರಣದಲ್ಲಿ ಆಟವಾಡುವಾಗ ಯಾರೋ ಕಿಡಿಗೇಡಿ ಹುಡುಗರು ನಲ್ಲಿಯ ಪೈಪುಗಳನ್ನು ಮುರಿದು ಬಿಸಾಡಿದ್ದರು. ಇಕೋ ಕ್ಲಬ್ ಹಣದಿಂದ ತರಿಸಿ ಹಾಕಿದ್ದ ಗಿಡಗಳೆಲ್ಲ ಒಣಗಿದ್ದವು. ಒಬ್ಬೊಬ್ಬರಿಗೂ ಎರಡು ಗಿಡದಂತೆ ನೀರು ಹಾಕಲು ವಹಿಸಿ ಹೋಗಿದ್ದರೂ ನೀರು ಹಾಕುವುದಿರಲಿ ಆ ಗಿಡದ ಕಡೆ ತಿರುಗಿಯೂ ನೋಡಿರಲಿಲ್ಲ ಈ ಐಕಳು.
ಬನ್ನಿ ಬನ್ನಿ ಸ್ಕೂಲಿಗೆ, ನಿಮಗೆಲ್ಲಾ ಹಬ್ಬ ಮಾಡ್ತೀನಿ ಎಂದು ರೇಗುತ್ತಾ ಶೌಚಾಲಯದ ಕಡೆ ಹೋದರೆ ಕೆಎಸ್‌ಆರ್‌ಟಿಸಿ ಬಸ್ ಸ್ಟ್ತ್ಯ್ಯಾಂಡಿನಲ್ಲಿರುವ ಶೌಚಾಲಯವಾದರೂ ಸುಮಾರಾಗಿ ಇರುತ್ತದೆ. ಈ ಶೌಚಾಲಯದಲ್ಲಿ ನೀರಿಲ್ಲದೆ ಗೋಡೆಗೆ ಮೆತ್ತಿದ ಸಗಣಿ ಚಕ್ಕೆಗಳಂತೆ ಕಪ್ಪಗೆ ಚಕ್ಕೆ ಎದ್ದುಬಿಟ್ಟಿದ್ದವು. ತತ್ತರಿಕೆ ಶಾಲೆಯೇ ಬೇಕಾಗಿತ್ತಾ? ಶೌಚ ಮಾಡಲು ನೀರಾದ್ರೂ ಹಾಕಬಾರದ ಎಂದು ‘ಯಾವನ್ಲಾ ಇಲ್ಲಿ ಹೀಗೆ ಮಾಡಿರೋದು? ಗುಡ್ಡಗಣ್ಣು ಬಿಟ್ಟು ಗದರಿಸಿದರೆ ದೇವರಾಣೆ ನಾನಲ್ಲ ಸರ್, ಬೇರೆ ಸ್ಕೂಲ್ ಮಕ್ಕಳು ಹೇತು ಬಿಟ್ಟವರೇ ಎಂದು ಅಮಾಯಕರಾಗಿ ಹೇಳುವುದಕ್ಕಾದರೂ ನಾವು ಅವರನ್ನು ನಂಬಲೇಬೇಕಿತ್ತು.
ಈ ಮಕ್ಕಳ ಕಪಿಚೇಷ್ಟೆಗಳನ್ನು ಕಂಡಿರುವ ನಮಗೆ ಖಂಡಿತ ಗೊತ್ತಿರುತ್ತೆ, ಈ ಬೇಸಿಗೆಯಲ್ಲಿ ಶಾಲೆಯನ್ನು ಹೀಗೇ ಮಾಡಿರುತ್ತವೆ ಎಂದು. ಹಾಗಾಗಿ ಎಕ್ಸ್‌ಟ್ರಾ ಪೈಪು, ನಲ್ಲಿಗಳನ್ನು ತಂದು ಶಾಲೆಯಲ್ಲಿ ಇಟ್ಟುಕೊಂಡಿದ್ದರಿಂದ ಎಲ್ಲಾ ಕ್ಲೀನಿಂಗ್ ಕಾರ್ಯಗಳು ಸುಸೂತ್ರವಾಗಿ ನೆರೆದು ಕೈ ತೊಳೆಯುವಷ್ಟರಲ್ಲಿ ಎರಡು ಗಂಟೆ.
ಬಿಡಿ ಭಾಗಗಳನ್ನು ರಿಪೇರಿ ಮಾಡಿ ಜೋಡಿಸಿ ಕೊನೆಗೆ ಸ್ಟಾರ್ಟ್ ಮಾಡಿದಾಗ ಆ ಗಾಡಿ ಸ್ಟಾರ್ಟ್ ಆಗದಿದ್ದರೆ ಮೆಕ್ಯಾನಿಕ್‌ಗೆ ಇನ್ನಿಲ್ಲದ ತಲೆನೋವು ಬರುವಂತೆ ನಮಗೆ ಶಾಲೆಗೆ ಐಕಳು ಬರದಿದ್ದರೆ ಚಿಂತೆ ಶುರುವಾಗಿ ಬಿಡುತ್ತದೆ. ಎರಡನೆಯ ದಿನವೂ ಬಂದಿದ್ದು ಏಳೇ ಮಕ್ಕಳು. ಯೂನಿಫಾರ್ಮ್ ಪಠ್ಯಪುಸ್ತಕಗಳನ್ನು ರಜೆಯಲ್ಲಿ ತಂದು ಗುಡ್ಡೆ ಹಾಕಿಕೊಂಡಿದ್ದರೂ ಮಕ್ಕಳು ಪೂರಾ ಬರದಿದ್ದುದ್ದಕ್ಕೆ ಇನ್ನೂ ವಿತರಿಸಿರಲಿಲ್ಲ.
ಎರಡನೇ ದಿನ ಬಂದ ಮೇಲಧಿಕಾರಿ, “ಇನ್ನೂ ಯುನಿಫಾರ್ಮ್ ಬುಕ್ಸ್ ಕೊಟ್ಟಿಲ್ವೇನ್ರಿ ಪ್ರಾರಂಭೋತ್ಸವದ ದಿನ ಎಲ್ಲರ ಬಳಿ ಯೂನಿಫಾರ್ಮ್ ಬುಕ್ಸ್ ಇರಬೇಕೆಂದು ಗೊತ್ತಿಲ್ವ ನಿಮಗೆ” ಎಂದು ಬೈಯುವಾಗ ಶಾಲೆಗೆ ಬರದ ಈ ಮಕ್ಕಳ ಮೇಲೆ ಒಂದು ಬೇಸರವಾದರೆ, ಬಯೋಮೆಟ್ರಿಕ್‌ನಂತೆ ಫೇಸ್ ಅಟೆಂಡೆನ್ಸ್, ನೆಟ್‌ವರ್ಕ್ ಸಮಸ್ಯೆಯಿಂದ ಅಪ್‌ಡೇಟ್ ಆಗದೆ ಶಾಲೆಗೆ ಆಬ್ಸೆಂಟ್ ತೋರಿಸುವುದು ನೋಡಿ ಇನ್ನೂ ಖೇದವಾಗಿ ಸೋಮವಾರದಿಂದ ನೋಡಿಕೊಳ್ಳುವ ಅತ್ಲಾಗೆ ಎನ್ನುತ್ತಾ ಶಾಲೆಗೆ ಬೀಗ ಹಾಕಿಸಿ ಮನೆಗೆ ಬಂದರೆ ಕಾಮ್ಸ್ ನಲ್ಲಿ ರಿಜಿಸ್ಟರ್ ಆಗದ ಶಿಕ್ಷಕರು ತಕ್ಷಣವೇ ರಿಜಿಸ್ಟರ್ ಮಾಡಿಸಿಕೊಳ್ಳುವುದು, ಇಲ್ಲವಾದರೆ ಇಲಾಖೆ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎನ್ನುವ ಮೆಸೇಜು ಬಂದಿತ್ತು.
swamyponnachi123@gmail.com




