ಗದಗ: ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟ ಹಣವನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಸಚಿವ ಹಾಗೂ ನರಗುಂದ ಬಿಜೆಪಿ ಶಾಸಕ ಸಿ.ಸಿ ಪಾಟೀಲ್ ಆರೋಪಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಇಂದು (ಫೆ.27) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ದುರ್ಬಲ ವರ್ಗಗಳಿಗೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
2023-24 ರಲ್ಲಿ ಎಸ್‌ಸಿಪಿ, ಟಿಎಸ್‌ಪಿನಿಂದ ವಾಪಸ್ ತೆಗೆದುಕೊಂಡಿದ್ದ ಹಣ 11,144 ಕೋಟಿ ರೂ, 2024-25ರಲ್ಲಿ 14,488 ಕೋಟಿ ರೂ. ಹಣ ವಾಪಸ್ ತೆಗೆದುಕೊಂಡಿದ್ದಾರೆ. ಇಲ್ಲಿಯವರೆಗೆ ಸುಮಾರು 25,000 ಕೋಟಿ ರೂ. ಹಣ ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ. ಇದನ್ನು ಯಾವೊಬ್ಬ ದಲಿತ ಸಚಿವರು ಪ್ರಶ್ನಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಂಬರುವ ಬಜೆಟ್‌ನಲ್ಲಿಯೂ ಕೂಡಾ ಎಸ್‌ಸಿ, ಎಸ್‌ಟಿ ವರ್ಗಕ್ಕೆ ಮೀಸಲಿಟ್ಟ 15,000 ಕೋಟಿ ರೂ. ಹಣ ಗ್ಯಾರಂಟಿಗೆ ತೆಗೆದುಕೊಳ್ಳುವ ಸಿದ್ದತೆ ನಡೆಸಿದ್ದಾರೆ. ಇದನ್ನು ಕೈಬಿಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪರಿಷತ್ ಸದಸ್ಯ ಎಸ್.ವಿ.ಸುಂಕನೂರು ಮಾತನಾಡಿ, ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾನೂನು ಬಾಹಿರ ವರ್ಗಾವಣೆ ಮಾಡುತ್ತಿದೆ. ಇದಕ್ಕೆ ಹಿರಿಯ ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳೇ ಸಹಕಾರ ನೀಡುತ್ತಿದ್ದಾರೆ. ಇದಕ್ಕೆ ಯಾರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪ್ರಶ್ನಿಸಿದರು.
ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿ ಆಗಿದೆ. ಅದನ್ನು ತುಂಬಿಸಲು ಅನ್ಯ ಮಾರ್ಗ ಹಿಡಿಯುವ ಮೂಲಕ ಎಸ್‌ಸಿ, ಎಸ್‌ಟಿಗೆ ಮೀಸಲಿರಿಸಿದ್ದ ಅನುದಾನವನ್ನು ಸರ್ಕಾ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಎಸ್‌ಸಿ ಘಟಕದ ಅಧ್ಯಕ್ಷ ಮಂಜುನಾಥ ಹುಡಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಮಂಜುನಾಥ ಮುಳಗುಂದ, ಲಿಂಗರಾಜ ಪಾಟೀಲ, ಫಕ್ಕಿರೇಶ ರಟ್ಟಿಹಳ್ಳಿ, ರಾಮಣ್ಣ ಚವಾಣ್, ಸುರೇಶ್ ಛಲವಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.