Mysore
22
overcast clouds
Light
Dark

ಚಿರತೆ ಹತ್ಯೆ ಕುರಿತು ತನಿಖೆ ನಡೆಸಿ ಶೀಘ್ರದಲ್ಲೆ ವರದಿ ಸಲ್ಲಿಸುವಂತೆ ಸಚಿವ ಈಶ್ವರ್ ಖಂಡ್ರೆ ಖಡಕ್ ಸೂಚನೆ

ಬೆಂಗಳೂರು : ಕಮದಾಳು ಗ್ರಾಮದಲ್ಲಿ ಗ್ರಾಮಸ್ಥರು ಚಿರತೆಯನ್ನ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಟನೆಯ ಸಂಪೂರ್ಣ ವರದಿ ನೀಡುವಂತೆ ಸಚಿವ ಈಶ್ವರ್‌ ಖಂಡ್ರೆ ಅರಣ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿ ಕಮದಾಳು ಗ್ರಾಮದಲ್ಲಿ ಓರ್ವನ ಮೇಲೆ ಚಿರತೆ ದಾಳಿ ಮಾಡಿತ್ತು. ವಿಚಾರ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ವಲಯದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆದಿದ್ದರು. ಅಲ್ಲದೆ ಗ್ರಾಮಠಾಣದ ಪಕ್ಕದ ಕಲ್ಲು ಬಂಡೆ ಇರುವ ಗುಡ್ಡದಲ್ಲಿ ಚಿರತೆ ಇರುವ ಬಗ್ಗೆ ಖಾತರಿ ಪಡಿಸಿಕೊಂಡು ಚಿರತೆ ಸೆರೆಗೆ ಕಾರ್ಯಾಚರಣೆ ಶುರು ಮಾಡಿದರು. ಇನ್ನು ಚಿರತೆ ಇದೆ ಎಂದು ಗೊತ್ತಾಗುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಕೂಡ ಸ್ಥಳದಲ್ಲಿ ಜಮಾಯಿಸಿದರು.

ಈ ವೇಳೆ ಚಿರತೆ ಮೂರು ಜನರ ಮೇಲೆ ದಾಳಿ ಮಾಡಿತು. ತಕ್ಷಣ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸ್ಥಳಕ್ಕೆ ಶಾಸಕರು, ಪೊಲೀಸರು, ಸಿಪಿಐ ಮತ್ತು ಕಂದಾಯ ಇಲಾಖೆಯ ತಹಶೀಲ್ದಾರ್‌ ಸ್ಥಳಕ್ಕೆ ಭೇಟಿ ನೀಡಿದ್ದರು.  ಇನ್ನು ಪ್ರಕರಣದ ಎಲ್ಲಾ ಬೆಳವಣಿಗೆಗಳ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮಾಹಿತಿ ಪಡೆದಿದ್ದರು. ಚಿರತೆ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಉದ್ವೇಗಗೊಂಡ ಜನರು ಚಿರತೆ ಇರುವ ಸ್ಥಳಕ್ಕೆ ನುಗ್ಗಿ ಅದನ್ನ ಕೊಲೆ ಮಾಡಿದರು.

ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲೆ ಸಾರ್ವಜನಿಕರು ಚಿರತೆಯನ್ನು ಹತ್ಯೆ ಮಾಡಿದ್ದಾರೆ.  ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿದ ಚಿರತೆಯನ್ನು ಸೆರೆಹಿಡಿಯಲು ಹಾಗೂ ಹತ್ಯೆ ತಡೆಯಲು ವಿಫಲವಾದ ಕುರಿತು ಶೀಘ್ರವಾಗಿ ಇಲಾಖೆವತಿಯಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಶೀಘ್ರವಾಗಿ ವರದಿ ಸಲ್ಲಿಸುವಂತೆ ಸಚಿವ ಈಶ್ವರ್‌ ಖಂಡ್ರೆ ಖಡಕ್‌ ಸೂಚನೆ ಕೊಟ್ಟಿದ್ದಾರೆ.