ಬೆಂಗಳೂರು: ನಗರದಲ್ಲಿ ನೀರು ವ್ಯರ್ಥ ಮಾಡಿದ್ರೆ ಜಲಮಂಡಳಿ 5000 ರೂ ದಂಡ ವಿಧಿಸಲಿದೆ. ಬೇಸಿಗೆಗೆ ಮುನ್ನವೇ ಜಲಮಂಡಳಿ ಎಚ್ಚೆತ್ತುಕೊಂಡಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ನೀರು ವ್ಯರ್ಥ ಮಾಡಿದ್ರೆ ದಂಡ ವಿಧಿಸಲು ಮುಂದಾಗಿದೆ. ಈ ಕುರಿತು ಜಲಮಂಡಳಿ ಆದೇಶ ಹೊರಡಿಸಿದೆ.
ಕಳೆದ ಬಾರಿ ಉಂಟಾದ ನೀರಿನ ಅಭಾವ, ಈ ಬಾರಿ ಆಗದಂತೆ ಜಲಮಂಡಳಿ ನೀರು, ಉಳಿತಾಯಕ್ಕೆ ಮುಂದಾಗಿದೆ. ಈ ಬಾರಿಯೂ ನೀರು ಪೋಲು ಮಾಡಿದ್ರೆ ದಂಡಾಸ್ತ್ರಕ್ಕೆ ಮುಂದಾಗಿದೆ. ಕಾರು, ಬೈಕ್, ಮನೆಯಂಗಳ ಇತರೆ ಕೆಲಸಗಳಿಗೆ ನೀರು ವ್ಯರ್ಥ ಮಾಡಿದ್ರೆ ಆಯಾ ವಲಯದ ಜಲಮಂಡಳಿ ಇಂಜಿನಿಯರ್ಸ್ 5 ಸಾವಿರ ರೂ ದಂಡ ವಿಧಿಸಲಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಕುಡಿಯುವ ನೀರನ್ನು ಸ್ವಚ್ಛತೆಗೆ, ಕೈತೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನರಂಜನೆಯ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ ಹಾಗೂ ಸಿನಿಮಾ ಮಂದಿರ ಹಾಗೂ ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ ನಿಷೇಧಿಸಲಾಗಿದೆ. ಇದರ ಜೊತೆಗೆ ರಸ್ತೆ ನಿರ್ಮಾಣ ಹಾಗೂ ಸ್ವಚ್ಛತೆಗೆ ಕುಡಿಯುವ ನೀರನ್ನು ಬಳಕೆ ಮಾಡಿದ್ರೆ 5 ಸಾವಿರ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.