ಬೆಂಗಳೂರು: ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿನ ನಾಗರಕಟ್ಟೆಯ ಮೇಲಿದ್ದ ಗಣಪತಿ ಹಾಗೂ ಶೇಷನಾಗ ವಿಗ್ರಹಗಳನ್ನು ವಿರೂಪಗೊಳಿಸಿ ಕಾಲಿನಿಂದ ಒದ್ದು ಚರಂಡಿಗೆಸೆದಿರುವ ಕಿಡಿಗೇಡಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬದುಕಿದ್ದರೆ ತಕ್ಷಣವೇ ಈ ಕೃತ್ಯ ಎಸಗಿರುವ ಆರೋಪಿಗಳ ಮೇಲೆ ಒಂದು ಕ್ಷಣವೂ ಹಿಂದೆ ಮುಂದೆ ನೋಡದೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಸರ್ಕಾರ ಇನ್ನು ಏಕೆ ಮೀನಾಮೇಷ ಎಣಿಸುತ್ತಿದೆ ಎಂದು ಪ್ರಶ್ನೆ ಮಾಡಿದರು.
ಯಾವುದೇ ಕಾರಣಕ್ಕೂ ಇಂತಹ ಕೃತ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡುವುದು, ಇಲ್ಲವೇ ಅಗೌರವ ತೋರುವುದು ಸರಿಯಲ್ಲ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನು ಪ್ರಕಾರವೇ ಶಿಕ್ಷೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.