ಬೆಂಗಳೂರು: ಬಿಸಿಲ ಬೇಗೆಯಿಂದ ಬೆಂದಿ ಬೆಂಡಾಗಿದ್ದ ಭೂಮಿಗೆ ವರುಣ ಕೃಪೆ ತೋರಿದ್ದು, ಉತ್ತಮ ಮಳೆಯಾಗುತ್ತಿದೆ. ಅಡಿಕೆ ಹಾಗೂ ಮಾವು ಬೆಳೆ ಸೇರಿದಂತೆ ರೈತರಿಗೆ ಅನುಕೂಲವಾಗಿದೆ.
ನಿನ್ನೆ ರಾಜ್ಯದ ವಿವಿಧೆಡೆ ವರ್ಷದ ಮೊದಲ ಮಳೆಯಾಗಿದ್ದು, ರೈತರು ಮಂದಹಾಸ ಬೀರಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ. ಮಂಡ್ಯ , ಮೈಸೂರು, ಚಾಮರಾಜನಗರ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಜೋರು ಮತ್ತು ಸಾಧಾರಣ ಮಳೆಯಾಗಿದೆ. ಮಾವು ಹೆಚ್ಚಾಗಿ ಬೆಳೆಯುವ ಶ್ರೀನಿವಾಸಪುರದಲ್ಲಿ ಆಲಿಕಲ್ಲು ಮಳೆಯಾಗಿದೆ.
ದೇವನಹಳ್ಳಿ ತಾಲೂಕಿನಲ್ಲಿ ಸುಮಾರು ಆರ್ಧ ತಾಸು ಮಳೆ ಸುರಿದಿದ್ದು ನಾಗನಾಯಕನಹಳ್ಳಿ ಹಾಗೂ ವರದೇನಹಳ್ಳಿಯಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದ್ದರಿಂದ ಹಲವು ವಸ್ತುಗಳು ಹಾನಿಗೊಳಗಾಗಿವೆ. ಚಿಂತಾಮಣಿ ತಾಲ್ಲೂಕಿನ ಕಂಗಾಹಳ್ಳಿಯಲ್ಲಿ, ಆಲಿಕಲ್ಲು ಮಳೆಯಾಗಿದ್ದು ಕ್ಯಾಪ್ಸಿಕಂ ತೋಟದ ನೆಟ್‍ಹೌಸ್ ಮಳೆ ಗಾಳಿಗೆ ನಾಶವಾಗಿದೆ.
ರಾಮನಗರದಲ್ಲಿ ಸಂಜೆ ಗುಡುಗು ಸೀಡಿಲ ಆರ್ಭಟ ಜೋರಾಗಿದ್ದು ಅರ್ಧಗಂಟೆಗಳ ಕಾಲ ಮಳೆ ಸುರಿದಿದೆ. ಕೋಲಾರದಲ್ಲೂ ಸಹ ಉತ್ತಮ ಮಳೆಯಾಗಿದ್ದು ನೀರಾವರಿಯಲ್ಲಿ ಬೆಳೆಯುವ ತರಕಾರಿ ಬೆಳೆ ನಾಟಿಗೆ ಅನುಕೂಲವಾದಂತಿದೆ. ಕಳೆದರೆಡು ದಿನಗಳಿಂದ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಸುರಿಯುತ್ತಿರುವ ಮಳೆ, ಮಳೆಯಿಂದ ಜಾನುವಾರಗಳಿಗೆ ಕುಡಿಯುವ ನೀರು ಮತ್ತು ಮೇವುಗೆ ಸಿಗುವಂತಾಗಿದೆ. ಬೇತಮಂಗಲದ ಅನೇಕ ಭಾಗಗಳಲ್ಲಿ ಸುರಿದ ಮಳೆಯಿಂದ ಮನೆಗಳಿಗೆ ನೀರುನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇನ್ನೂ ಮಡಿಕೇರಿಯಲ್ಲೂ ಸಹ ಉತ್ತಮ ಮಳೆಯಾಗಿದೆ.