ಬೆಂಗಳೂರು: ನಮ್ಮ ಒಳಜಗಳಗಳಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಒಂದು ವೇಳೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿಗೆ 10 ಸೀಟೂ ಸಹ ಬರಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿನ ಬೆಳವಣಿಗೆ ನೋಡಿ ಜನ ಎಲ್ಲೆಂದರಲ್ಲಿ ಉಗೀತಿದ್ದಾರೆ. ಕಾರ್ಯಕರ್ತರಿಗೆ ತುಂಬಾ ನೋವಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಕಳೆದ ಮೂರ್ನಾಲ್ಕು ತಿಂಗಳಿನಿಂದ ನಾವು ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಯತ್ನಾಳ್ ತಂಡ ಭೇಟಿ ಮಾಡಿದ್ದೇವೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದೆ. ಅಮಿತ್ ಶಾ ಭೇಟಿಯಾದ ಫೋಟೋ ಕೊಡಿ ಅಂದರೆ ಇಲ್ಲಾ ತೆಗೀಬೇಡಿ ಎಂದಿದ್ದಾರೆ ಎಂದು ಹೇಳ್ತೀರಿ ಎಂದು ಯತ್ನಾಳ್ ಟೀಂ ವಿರುದ್ಧ ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ವಿಜಯೇಂದ್ರರನ್ನು ನೀವು ಕುಗ್ಗಿಸಲು ಆಗಲ್ಲ. ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿ ಪಕ್ಷ ಕಟ್ಟಿದ್ರು. ಅದೇ ರೀತಿ ವಿಜಯೇಂದ್ರ ನಾಡಿನ ಯುವಕರ ಕಣ್ಮಣಿ ಆಗಿದ್ದಾರೆ. ಪಕ್ಷ ಕಟ್ಟುವ ಶಕ್ತಿ ವಿಜಯೇಂದ್ರಗೆ ಮಾತ್ರ ಇದೆ ಅನ್ನೋದು ನಿಜ ಎಂದು ವಿಜಯೇಂದ್ರ ಪರ ಬ್ಯಾಟ್ ಮಾಡಿದರು.