ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ನವೆಂಬರ್ ಬಳಿಕ ಸಿಎಂ ಬದಲಾಗುತ್ತಾರೆಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಟೀಕಾತ್ಮಕವಾಗಿ ತೀರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಫೆಬ್ರವರಿ.3) ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಜ್ಯೋತಿಷ್ಯದ ಬಗ್ಗೆ ತಿಳಿದಿದೆ. ಆದರೆ ಅಶೋಕ್ ಅವರು ಯಾವಾಗ ಜ್ಯೋತಿಷ್ಯ ಬೋರ್ಡ್ ಹಾಕಿಕೊಂಡರೋ ಗೊತ್ತಿಲ್ಲ. ಹೀಗಾಗಿ ನಾನು ಶೀಘ್ರವೇ ವಿಪಕ್ಷ ನಾಯಕರ ಬಳಿ ಜ್ಯೋತಿಷ್ಯ ಕೇಳುತ್ತೇನೆ ಎಂದು ಟೀಕಿಸಿದರು.
ಇದೇ ಸಂದರ್ಭದಲ್ಲಿ ನಾಲ್ಕೈದು ಜೆಡಿಎಸ್ ಶಾಸಕರು ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದಾರೆಂಬ ಹೇಳಿಕೆಯ ಬಗ್ಗೆ ಮಾತನಾಡಿದ ಅವರು, ಇದೆಲ್ಲವೂ ಸುಳ್ಳು ಸುದ್ದಿಯಾಗಿದೆ. ನಾನು ಯಾವ ಜೆಡಿಎಸ್ ಶಾಸಕರನ್ನು ಸಂಪರ್ಕಿಸಿಲ್ಲ, ಅವರೊಂದಿಗೆ ಯಾವುದೇ ರೀತಿಯ ವಿಚಾರಗಳನ್ನು ಚರ್ಚಿಸಿಲ್ಲ. ಆದರೆ ಸ್ಥಳೀಯ ಮಟ್ಟದ ಕಾರ್ಯಕರ್ತರಿಗೆ ನೋವಿದೆ ಎಂದು ಗೊತ್ತು ಅಷ್ಟೇ. ಅವರು ಇನ್ನೂ ಎಷ್ಟೂ ದಿನ ಎಂದು ಕಾಯುತ್ತಾರೆ. ಜೆಡಿಎಸ್ ಕಾರ್ಯಕರ್ತರಿಗೆ ರಾಷ್ಟ್ರೀಯ ಪಕ್ಷಕ್ಕೆ ಸೇರಿಕೊಳ್ಳುವ ಆಸೆ ಇದೆ. ಹೀಗಾಗಿ ನಾನು ಪಕ್ಷಕ್ಕೆ ಬನ್ನಿ ಸೇರಿಸಿಕೊಳ್ಳುತ್ತೇವೆ ಎಂದಿದ್ದೇನೆ ಎಂದು ಹೇಳಿದರು.