ಕಲಬುರ್ಗಿ: ರಾಜ್ಯದಲ್ಲಿ ನಾಯಕತ್ವ ಗೊಂದಲವನ್ನು ಹೈಕಮಾಂಡ್ ಸೃಷ್ಟಿ ಮಾಡಿಲ್ಲ. ಲೋಕಲ್‌ನವರೇ ಮಾಡಿಕೊಂಡಿದ್ದಾರೆ. ಸ್ಥಳೀಯ ನಾಯಕರೇ ಇದನ್ನು ಬಗೆಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್ ಅಂದರೆ ಹೇಗೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಜ್ಯದಲ್ಲಿ ನಾಯಕತ್ವದ ಗೊಂದಲ ವಿಚಾರ ಕುರಿತು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಗೊಂದಲವನ್ನು ಹೈಕಮಾಂಡ್ ಮಾಡಿಲ್ಲ. ಇಲ್ಲಿನ ನಾಯಕರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸ್ಥಳೀಯ ನಾಯಕರೇ ಇದನ್ನು ಬಗೆಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್ ಎಂದು ಹೇಳಿದ್ರೆ ಹೇಗೆ ಎಂದು ಪ್ರಶ್ನೆ ಮಾಡಿದರು.
ಮುಂದುವರಿದು ಮಾತನಾಡಿದ ಅವರು, ಕಾಂಗ್ರೆಸ್ ಯಾರೋ ಒಬ್ಬ ನಾಯಕನಿಂದ ಬೆಳೆದಿದ್ದಲ್ಲ. ಹೀಗಾಗಿ ಯಾರೊಬ್ಬರೂ ನನ್ನಿಂದ ಅಧಿಕಾರಕ್ಕೆ ಬಂತು, ನಾನೇ ಪಕ್ಷ ಕಟ್ಟಿದ್ದೇನೆಂದು ಹೇಳಬಾರದು. ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದ ಕಟ್ಟಿದ ಪಕ್ಷ. ಪಕ್ಷ ಅಂದ ಮೇಲೆ ಎಲ್ಲರ ಪಾತ್ರವೂ ಇರುತ್ತದೆ. ಕೆಲ ಕಾರ್ಯಕರ್ತರು ಕೂಡ ಒಬ್ಬರಿಂದಲೇ ಪಕ್ಷ ಇದೆ ಎನ್ನಬಾರದು ಎಂದು ಹೇಳಿದರು.





