ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಸಂಬಂಧ ಕೇಂದ್ರ ಸಚಿವರು ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ ಕುಮಾರಸ್ವಾಮಿ ಭಾನುವಾರ(ಜು.7) ನಗರದ ತಮ್ಮ ನಿವಾಸದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಚನ್ನಪಟ್ಟಣ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಸೇರಿದಂತೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಒಮ್ಮತವಾಗಿ ಚುನಾವಣೆ ಎದುರಿಸುವ ಬಗ್ಗೆಯೂ ಸಹ ಚರ್ಚೆ ನಡೆಸಿದರು.
ಯಾರೇ ಅಭ್ಯರ್ಥಿಯಾದರೂ ಅವರು ಎನ್‌ಡಿಎ ಅಭ್ಯರ್ಥಿಯಾಗಿರುತ್ತಾರೆ. ಅಭ್ಯರ್ಥಿ ಯಾರು ಎನ್ನುವುದು ಮುಖ್ಯವಲ್ಲ. ಎಲ್ಲರೂ ಒಗ್ಗಟಾಗಿ ಕೆಲಸ ಮಾಡಬೇಕು. ಮೈತ್ರಿ ಅಭ್ಯರ್ಥಿ ಗೆಲ್ಲಬೇಕು ಎನ್ನವುದು ನಮ್ಮೆಲ್ಲರ ಗುರಿ ಆಗಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.
ಸಿ.ಪಿ ಯೋಗೇಶ್ವರ್ ಅವರನ್ನು ಮುಖಂಡರೆಲ್ಲ ಹೋಗಿ ಭೇಟಿ ಮಾಡಿ ಮುಕ್ತವಾಗಿ ಚರ್ಚಿಸಿ, ಎಲ್ಲಾ ಹಂತದಲ್ಲೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಜೊತೆಗೆ ಅವರ ಮಾರ್ಗದರ್ಶನ ಪಡೆಯಬೇಕು ಎಂದು ಮುಖಂಡರಿಗೆ ಕುಮಾರಸ್ವಾಮಿ ಸೂಚಿಸಿದರು.