ಮೈಸೂರು: ಜಿಲ್ಲಾಡಳಿತದ ವತಿಯಿಂದ ಈ ಬಾರಿಯ ಗಣರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ನೆರವೇರಿಸಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು(ಜನವರಿ.15) ಗಣರಾಜ್ಯೋತ್ಸವ ಆಚರಣೆಯ ಕುರಿತು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನವರಿ.26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಬೆಳಿಗ್ಗೆ 9 ಗಂಟೆಗೆ ಬನ್ನಿಮಂಪದಲ್ಲಿ ಪಂಜಿನ ಕವಾಯತು ಮೈದಾನದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಪಂಜಿನ ಕವಾಯತು ಮೈದಾನದ ಆವರಣದಲ್ಲಿ ಅಂದು ನಡೆಯುವ ಪರೇಡ್ ವ್ಯವಸ್ತೆಯನ್ನು ನಗರ ಪೊಲೀಸ್ ಇಲಾಖೆ ವಹಿಸಿಕೊಳ್ಳಬೇಕು. ಮೈಸೂರು ಮಹಾನಗರ ಪಾಲಿಕೆಯೂ ಡಯಾಸ್, ಧ್ವಜ ಸ್ತಂಭ ಹಾಗೂ ಸ್ವಚ್ಛತಾ ವ್ಯವಸ್ಥೆಯನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವ್ಯವಸ್ಥೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ನೋಡಿಕೊಳ್ಳಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಬೇಕು. ಜೊತೆಗೆ ಅಂದಿನ ದಿನ ಉತ್ತಮವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪರೇಡ್ ಮಾಡುವ ತಂಡಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.
ಇನ್ನೂ ಕಲಾ ಮಂದಿರದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕೆಎಸ್‌ಆರ್‌ಟಿಸಿ ವತಿಯಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ವಿವಿಧ ಭಾಗಗಳಿಂದ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಬೇಕು. ಸ್ವಾಗತ ಸಮಿತಿ ವತಿಯಿಂದ ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಗಣ್ಯರಿಗೆ, ಅಧಿಕಾರಿಗಳಿಗೆ ಹಾಗೂ ಎನ್‌ಜಿಓಗಳಿಗೆ ವಿತರಿಸಬೇಕು. ಅಲ್ಲದೇ ಮೈಸೂರು ಹಾಲು ಒಕ್ಕೂಟದ ವತಿಯಿಂದ ಭಾಗವಹಿಸುವ ಶಾಲಾ ವಿದ್ಯಾರ್ಥಿಗಳಿಗೆ ತಿಂಡಿ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ನಗರದಲ್ಲಿ ಪ್ಲಾಸ್ಟಿಕ್ ಧ್ವಜವನ್ನು ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್ ಧ್ವಜ ಮಾರಾಟ ಕಂಡು ಬಂದರೆ ಕಾನೂನು ರೀತಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಗಣರಾಜ್ಯೋತ್ಸವ ದಿನದಂದು ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚನೆ ನೀಡಿದರು.