ಬೆಂಗಳೂರು: ಶಿವಣ್ಣಗೆ ಆರು ಆಪರೇಷನ್, 190 ಹೊಲಿಗೆ ಹಾಕಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆರೋಗ್ಯದ ಬಗ್ಗೆ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಣ್ಣಗೆ ತಲೆಯಲ್ಲಿ ಒಂದು ಸ್ಟಂಟ್ ಇದೆ. ಹೃದಯದಲ್ಲೂ ಕೂಡ ಒಂದು ಸ್ಟಂಟ್ ಇದೆ. ಐದೂವರೆ ಗಂಟೆಗಳ ಕಾಲ ಆಪರೇಷನ್‌ಗೆ ಪ್ಲ್ಯಾನ್ ಮಾಡಿದ್ದರು. ಆದರೆ ನಾಲ್ಕು ಮುಕ್ಕಾಲು ಗಂಟೆಗೆ ಆಪರೇಷನ್ ಮುಗಿಯಿತು. ಮ್ಯಾನ್ಯುವೆಲ್ ಮೂಲಕವೇ ಆಪರೇಷನ್ ಸೂಕ್ತ ಎಂದು ವೈದ್ಯರು ಶಸ್ತ್ರಚಿಕಿತ್ಸೆ ನೆರವೇರಿಸಿದರು ಎಂದು ಮಾಹಿತಿ ನೀಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ನಟ ಶಿವಣ್ಣ ಈಗ ಕ್ಯಾನ್ಸರ್ ಮುಕ್ತ ಎಂದು ವೈದ್ಯರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಜನವರಿ.25ರಂದು ಬೆಂಗಳೂರಿಗೆ ಬರುತ್ತಾರೆ. ಶಿವಣ್ಣಗೆ ಈಗ 63 ವರ್ಷ ವಯಸ್ಸು, ಈಗ ವಾಪಸ್ ಬಂದಮೇಲೆ 36ರ ರೀತಿ ಕಾಣಿಸುತ್ತಾರೆ. ವೈದ್ಯರು ಕೂಡ ನಮ್ಮ ಕುಟುಂಬದ ಸದಸ್ಯರಂತೆ ಇದ್ದರು ಎಂದು ಮಾಹಿತಿ ನೀಡಿದರು.