ಬೆಂಗಳೂರು: ಗುತ್ತಿಗೆದಾರರೇ ನೀವೇನು ಭಿಕ್ಷುಕರಲ್ಲ. ದಯಾಮರಣಕ್ಕೆ ಯಾಕೆ ಕೇಳ್ತೀರಾ. ಒಂದು ವರ್ಷ ಕೆಲಸವನ್ನೇ ಮಾಡಬೇಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.
ಕಿಯೋನಿಕ್ಸ್ ವೆಂಡರ್ಸ್‌ಗಳಿಂದ ದಯಾ ಮರಣಕ್ಕೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ನಾನು ಈ ಮೊದಲು 60% ಕಮಿಷನ್ ಆರೋಪ ಮಾಡಿದಾಗ ಸರ್ಕಾರ ಹಾಗೂ ಸಿಎಂ ದಾಖಲೆ ಕೊಡಿ ಎಂದು ಹೇಳಿದ್ದರು. ಹಂಗಾಮಿ ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಅಧ್ಯಕ್ಷರು ಏನು ಹೇಳಿದ್ದಾರೆ. ಪರ್ಸೆಂಟೇಜ್ ಎಷ್ಟು ಇದೆ ಎಂದು ಅವರೇ ಹೇಳಿದ್ದಾರೆ. ಇದಕ್ಕಿಂತ ಸಿಎಂ ಸಿದ್ದರಾಮಯ್ಯ ಅವರಿಗೆ ದಾಖಲಾತಿ ಸಾಕ್ಷಿ ಬೇಕಾ ಎಂದು ಪ್ರಶ್ನೆ ಮಾಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಿ. ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡಗೆ ಹೇಳ್ತಿನಿ. ತಪ್ಪು ಮಾಡಿದವರ ಮೇಲೆ ಆಕ್ಷನ್ ತಗೊಳ್ಳಿ. 18 ತಿಂಗಳಲ್ಲಿ ಪೇಮೆಂಟ್ ಕೊಡದೇ ಹೋದರೆ ಅವರ ಬದುಕು ಏನಾಗಬೇಕು? ತಪ್ಪು ಮಾಡಿದವನಿಗೆ ಏನ್ ಬೇಕೋ ಕ್ರಮ ಮಾಡಿ. ಒಂದು ವೇಳೆ ಜನಪ್ರತಿನಿಧಿಗಳೇ ಅಕ್ರಮ ಮಾಡಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಇನ್ನು ಗುತ್ತಿಗೆದಾರರೇ ಒಂದು ವರ್ಷ ಕೆಲಸ ಮಾಡಬೇಡಿ. ಈ ಸರ್ಕಾರದಲ್ಲಿ ಸಾರ್ವಜನಿಕ ಹಣ ಲೂಟಿಯಾಗಿದೆ. ಗುತ್ತಿಗೆದಾರರು ಈ ರಾಜ್ಯ ಉಳಿಸಬೇಕು ಅಂತ ಇದ್ದರೆ, ಒಂದು ವರ್ಷ ಯಾವುದೇ ಕಾರಣಕ್ಕೂ ಕೆಲಸ ಮಾಡಬೇಡಿ. ರಾಜ್ಯದಲ್ಲಿ ಕೆಟ್ಟ ಆಡಳಿತ ನಡೆಯುತ್ತಿದೆ. ನಿಮ್ಮಲ್ಲಿ ಒಡಕು ಬಂದರೆ ನಿಮ್ಮನ್ನೇ ಉಪಯೋಗ ಮಾಡಿಕೊಳ್ಳುತ್ತಾರೆ ಎಂದರು.